
ಬೆಂಗಳೂರು: ರಾಷ್ಟ್ರೀಯ ಸೇವಾ ಭಾರತಿಯ ಆಶ್ರಯದಲ್ಲಿ ಪ್ರಶಿಕ್ಷಣ ಪ್ರಮುಖರ ಅಭ್ಯಾಸ ವರ್ಗದ ಉದ್ಘಾಟನೆ ಬೆಂಗಳೂರಿನ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆಯಿತು. ರಾಷ್ಟ್ರೀಯ ಸೇವಾ ಭಾರತಿಯ ಕಾರ್ಯದರ್ಶಿ ರೇಣು ಪಾಠಕ್ ಹಾಗೂ ಜೇಷ್ಠ ಪ್ರಚಾರಕ ಶ್ರೀಧರ ಸಾಗರ್ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉದ್ಘಾಟನೆಯ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಭಾರತೀಯ ಸಂಘಟನಾ ಮಂತ್ರಿಯಾಗಿರುವ ಸುಧೀರ್ ಅವರು ರಾಷ್ಟ್ರೀಯ ಸೇವಾ ಭಾರತಿಗೆ ಸಂಲಗ್ನವಾಗಿರುವ 950 ಸಂಸ್ಥೆಗಳ ಕಾರ್ಯ ಕುಶಲತೆ ಹಾಗೂ ಕ್ಷಮತೆ ಹೆಚ್ಚಿಸುವುದು ಹಾಗೂ ಪರಸ್ಪರ ಸಹಯೋಗಕ್ಕೆ ಒಂದು ವೇದಿಕೆಯನ್ನು ಕೊಡುವುದು ಸಂಘಟನೆಯ ಮುಖ್ಯ ಉದ್ದೇಶವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಔರಂಗಬಾದ್ ನ ಸಾವಿತ್ರಿಬಾಯಿ ಫುಲೆ ಫೌಂಡೇಶನ್ ನ ನಿರ್ದೇಶಕ ಡಾಕ್ಟರ್ ಪ್ರಸನ್ನ ಪಾಟೀಲ್ ಅವರು ಮಾತನಾಡಿ ಸೇವಾ ಸಂಸ್ಥೆಗಳ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ನಮ್ಮ ಮುಂದಿರುವ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು.

ವರ್ಗದ ಮೊದಲ ದಿನದ ವರ್ಗದಲ್ಲಿ ಅನೇಕ ರೀತಿಯ ಪ್ರಶಿಕ್ಷಣ ವಿಧಾನಗಳು, ಪ್ರಭಾವಿ ಸೇವಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಸಾಧಕರೊಡನೆ ಸಂವಾದ ನಡೆಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸೇವಾ ಪ್ರಮುಖ್ ಪರಾಗ್ ಅಭ್ಯಂಕರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಂವಾದದಲ್ಲಿ ಭಾಗಿಯಾದರು. ದೇಶದ ಎಲ್ಲಾ ರಾಜ್ಯಗಳಿಂದ 120 ಮಂದಿ ಪ್ರಶಿಕ್ಷಣ ಪ್ರಮುಖರು ಭಾಗವಹಿಸಿದ್ದರು.

 
                                                         
                                                         
                                                         
                                                         
                                                        