
ಮೈಸೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪ್ರೇರಣೆಗೊಂಡು ಪ್ರಾರಂಭವಾದ ಎಲ್ಲಾ ಸಂಘಟನೆಗಳ ಮುಖ್ಯ ಧ್ಯೇಯ ಸೇವೆ ಮತ್ತು ಸಾಂಸ್ಕೃತಿಕ ಜಾಗೃತಿ. ನಮ್ಮ ಪರಿವಾರ ಸಂಘಟನೆಗಳಲ್ಲಿನ ಸಂಸ್ಕೃತಿಯಲ್ಲಿ ಕಾರ್ಯಾಲಯ ಎನ್ನುವುದು ನಮ್ಮೆಲ್ಲರ ಕಾರ್ಯಗಳಿಗೆ ನಿರಂತರ ಪ್ರೇರಣೆ ನೀಡುವ ಕೇಂದ್ರವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಹೇಳಿದರು.

ಮೈಸೂರಿನಲ್ಲಿ ನಡೆದ ವನವಾಸಿ ಕಲ್ಯಾಣ ಆಶ್ರಮದ ಕರ್ನಾಟಕ ಪ್ರಾಂತ ಕಾರ್ಯಾಲಯ “ವನಶ್ರೀ” ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಲವಾರು ಮೂಲಭೂತ ಸೌಕರ್ಯಗಳಿಂದ ವನವಾಸಿ ಸಮುದಾಯ ಹಿಂದೆ ಉಳಿದಿತ್ತು. ಇದರ ಸಾಮುದಾಯಿಕ ಉನ್ನತಿಗಾಗಿ ವನವಾಸಿ ಕಲ್ಯಾಣ ಆಶ್ರಮದ ಸ್ಥಾಪನೆ ಆಯಿತು. ಕರ್ನಾಟಕದಲ್ಲಿ ಶೇಕಡಾ 7ರಷ್ಟು ಇರುವ ವನವಾಸಿಗಳ ಸಾಂಸ್ಕೃತಿಕ ಮತ್ತು ಜಾಗೃತಿಯ ದೃಷ್ಟಿಯಿಂದ ನಗರವಾಸಿ ಮತ್ತು ಗ್ರಾಮವಾಸಿಗಳೆಲ್ಲರು ಅವರೊಟ್ಟಿಗೆ ಕೈಜೋಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಸಮುದಾಯ ಕೊರತೆಗಳನ್ನು ನೀಗಿಸಲು ಅಧ್ಯಯನ ಕೇಂದ್ರಗಳ ಅವಶ್ಯಕತೆ ಇದೆ ಎಂದು ಉದ್ಘಾಟನೆಯಾದ ಕಾರ್ಯಾಲಯದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಿರುವುದಕ್ಕೆ ಶ್ಲಾಘಿಸಿದರು.

ವನವಾಸಿಗಳನ್ನು ಅನಿಮಿಸ್ಟ್ ಎನ್ನುವುದರ ಮೂಲಕ ಭಾರತದ ಸನಾತನ ಸಂಸ್ಕೃತಿಯಿಂದ ದೂರಗೊಳಿಸುವ ಕೆಲಸ ವಿಘಟನಕಾರಿ ಶಕ್ತಿಗಳಿಂದ ಆಗುತ್ತಿದೆ. ಸ್ವತಃ ಗಾಂಧೀಜಿಯೇ ಅನಿಮಿಸ್ಟ್ ಪದ ದುರುದ್ದೇಶದಿಂದ ಬಳಸಿದ ಪದ ಎಂದಿದ್ದರು. ವನವಾಸಿಗಳನ್ನು ಜನಗಣತಿಯಲ್ಲಿ ನಾವು ಹಿಂದೂಗಳಲ್ಲ ಎಂದು ಬರೆಸುವುದರ ಮೂಲಕ ವಿಘಟಿಸುವ ಕೆಲಸ ನಡೆಯುತ್ತಿದೆ. ನಮ್ಮ ದೇಶದ ಪುರಾಣಗಳ ಜೊತೆ ಏಕತೆಯನ್ನು ಹೊಂದಿರುವ ವನವಾಸಿಗಳನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸುವ ಕೆಲಸ ಅರ್ಬನ್ ನಕ್ಸಲ್ ಗಳಿಂದ ನಡೆಯುತ್ತಿದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಶ್ರೀಪಾದ ನಡೆಸಿಕೊಟ್ಟರು. ಕರ್ನಾಟಕ ವನವಾಸಿ ಕಲ್ಯಾಣ ಆಶ್ರಮದ ಅಧ್ಯಕ್ಷ ಮನು ಕಾವೇರಪ್ಪ ಚಕ್ಕೆರೆ, ವನವಾಸಿ ಕಲ್ಯಾಣಾಶ್ರಮದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ರಮೇಶ್ ಬಾಬು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಮತ್ತು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಉಪಸ್ಥಿತರಿದ್ದರು.
