
ಬೆಂಗಳೂರು: ಹಿಂದುಗಳು ಜಗತ್ತಿನ ಯಾವುದೇ ಭಾಗದಲ್ಲಿ ತೊಂದರೆಗೆ ಒಳಗಾದರೂ ಅವರ ಕಷ್ಟಕ್ಕೆ ಜೊತೆ ನಿಲ್ಲಲು ಭಾರತದ ಹಿಂದುಗಳಿದ್ದಾರೆ ಎನ್ನುವುದನ್ನು ಬಾಂಗ್ಲಾ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ತೊಂದರೆಗೆ ಒಳಗಾದ ಹಿಂದುಗಳ ಕುರಿತು ನಾವು ವ್ಯಕ್ತಪಡಿಸುತ್ತಿರುವ ಕಾಳಜಿಯೇ ಸಾಕ್ಷಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ, ಡಾ.ರಾಮ್ ಮಾಧವ್ ಹೇಳಿದರು.

ಜಯನಗರದ ಆರ್.ವಿ.ಟೀಚರ್ಸ್ ಕಾಲೇಜಿನ ಸಭಾಂಗಣದಲ್ಲಿ ಮಂಥನ ಬೆಂಗಳೂರು ವತಿಯಿಂದ ಆಯೋಜಿಸಲಾದ ‘ಭಾರತದ ನೆರೆಹೊರೆಯಲ್ಲಿನ ಬೆಳವಣಿಗೆಗಳು: ಬಾಂಗ್ಲಾದೇಶ ಮತ್ತು ಇತರರು’ ಎಂಬ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಎಂದಿಗೂ ಯಾವುದೇ ಸಂದರ್ಭದಲ್ಲಿಯೂ ತನ್ನ ಸ್ನೇಹಿತರನ್ನು ಬಿಟ್ಟುಕೊಟ್ಟಿಲ್ಲ. ಅದರಲ್ಲೂ ಜಗತ್ತಿನ ಯಾವ ದೇಶವೂ ಪಶ್ಚಿಮ ಪಾಕಿಸ್ತಾನದಿಂದ ಶೋಷಣೆಗೆ ಒಳಗಾಗುತ್ತಿದ್ದ ಬಾಂಗ್ಲಾದೇಶದ ಪರ ನಿಲ್ಲದ ಸಂದರ್ಭದಲ್ಲಿ ಅದರ ಉಗಮಕ್ಕೆ ಸಹಾಯಹಸ್ತವನ್ನು ಚಾಚಿದ ಜಗತ್ತಿನ ಏಕೈಕರಾಷ್ಟ್ರ ಭಾರತ. ಒಂದು ಅದ್ಭುತ ನಾಗರೀಕತೆಯ ಭಾಗವಾಗಿಯೂ ನಮ್ಮೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವ ಮಿತ್ರರಾಷ್ಟ್ರ ಬಾಂಗ್ಲಾದೇಶಕ್ಕೆ ನಮ್ಮ ಕಾಳಜಿ ಇರಬೇಕು ಎಂದು ಅವರು ನುಡಿದರು.

ಸುಮಾರು 1.4 ಕೋಟಿ ಹಿಂದುಗಳು ಬಾಂಗ್ಲದೇಶದಲ್ಲಿದ್ದಾರೆ. ಹಿಂದುಗಳ ಜೊತೆಗೆ ಅಲ್ಪಸಂಖ್ಯಾತರಾಗಿರುವ ಅಲ್ಲಿನ ಬೌದ್ಧರು ಮತ್ತು ಕ್ರೈಸ್ತರೂ ಕೂಡ ಇಸ್ಲಾಂ ಮೂಲಭೂತವಾದಿಗಳಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಯಾವುದೇ ಸರ್ಕಾರವಿದ್ದರೂ ಮೂಲಭೂತವಾದಿಗಳಿಂದ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಪ್ರಯತ್ನಗಳಾಗುವುದು ಸಹಜ. ಬಾಂಗ್ಲದೇಶದ ಸರ್ಕಾರ ಹಿಂದೂಗಳ ರಕ್ಷಣೆಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ನುಡಿದರು.


ಕಾರ್ಯಕ್ರಮದಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು, ಶಿಕ್ಷಣತಜ್ಞರು, ಚಿಂತಕರು, ವಿದ್ಯಾರ್ಥಿಗಳು ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.



