ದೇಶದ ಕೃಷಿ ಮಾರುಕಟ್ಟೆಯಲ್ಲಿ ಬ್ರಿಟಿಷರ ಕಾಲದಿಂದಲೂ ಜಾರಿಯಲ್ಲಿದ್ದ ಹಳೆಯ ಹಾಗೂ ಅಪ್ರಸ್ತುತ ಮತ್ತು ಈಗಿನ ಸಮೃದ್ಧ ಉತ್ಪಾದನೆಯ ಕಾಲಕ್ಕೆ ಸೂಕ್ತವಲ್ಲದ ಕಾಯಿದೆಗಳನ್ನು ಬದಲಿಸಿ, ಕೃಷಿ ಮಾರುಕಟ್ಟೆಯ ಚಾರಿತ್ರಿಕ ಸುಧಾರೆಣೆಗೆ ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯಿದೆಗಳು ಸಂಚಲನ ಸೃಷ್ಟಿಸಿವೆ. ಇವುಗಳ ಪರ-ವಿರೋಧ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಹಾಗಾದರೆ ಕಾಯಿದೆಯಲ್ಲಿ ಏನಿದೆ? ಇದರ ಪ್ರಯೋಜನವೇನು? ಇಲ್ಲಿದೆ ವಿವರ.
===================
ಲೇಖಕರು: ಕೇಶವ ಪ್ರಸಾದ್ ಬಿ., ಪತ್ರಕರ್ತರು
ಹಾಲಿಗೆ ಕನಿಷ್ಠ ಬೆಂಬಲ ಬೆಲೆ ಇಲ್ಲ, ಆದರೂ ಅದರ ಅವಲಂಬನೆ ಬಯಸದೆ ಜಗತ್ತಿನಲ್ಲೇ ಭಾರತ ನಂ. 1 ಕ್ಷೀರೋತ್ಪಾದಕ ರಾಷ್ಟ್ರವಾಗಿದ್ದು ಹೇಗೆ?! ಕುಕ್ಕುಟೋದ್ಯಮಕ್ಕೂ (ಪೌಲ್ಟ್ರಿ) ಎಂಎಸ್‌ಪಿ ಇಲ್ಲ, ಆದರೂ ಬೆಳವಣಿಗೆ ದಾಖಲಿಸಿದ್ದು ಹೇಗೆ? ಎಂಎಸ್‌ಪಿ ಅಡಿಯಲ್ಲಿ ಧಾನ್ಯ ಖರೀದಿಗೆ ಆಹಾರ ನಿಗಮ ಪಡೆದ ಸಾಲ 3 ಲಕ್ಷ ಕೋಟಿ ರೂ.ಗಳ ಸನಿಹಕ್ಕೇರಿದ್ದು ಗಮನಿಸಬೇಡವೇ? ಹೊಸ ಕೃಷಿ ಕಾಯಿದೆಗಳ ಪರಿಣಾಮ ಮುಂದಿನ 3-5 ವರ್ಷಗಳಲ್ಲಿ ಏನಾಗಬಹುದು? – ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಕೃಷಿ ಮಾರುಕಟ್ಟೆ ಸಂಶೋಧಕ ಅಶೋಕ್ ಗುಲಾಟಿ. ಕಳೆದ ಹಲವು ದಶಕಗಳಿಂದಲೂ ಅವರು ದೇಶದ ಕೃಷಿ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ನಿರಂತರ ಸಂಶೋಧನೆ ಮಾಡಿದ್ದಾರೆ.
“ಎಂಎಸ್‌ಪಿ ಆಧರಿತ ವ್ಯವಸ್ಥೆ ಅಥವಾ ಉದಾರೀಕರಣಗೊಂಡ ಮಾರುಕಟ್ಟೆ ಎರಡೂ ಪರಿಪೂರ್ಣವಲ್ಲ, ಆದರೆ ಎಂಎಸ್‌ಪಿ ದುಬಾರಿ ಮತ್ತು ದಕ್ಷತೆ ಕಡಿಮೆ ಇರುವಂಥದ್ದು” ಎನ್ನುವ ಅಶೋಕ್ ಗುಲಾಟಿ ಅವರ ಸಂಶೋಧನಾತ್ಮಕ ಲೇಖನ ಹಲವು ಆಯಾಮಗಳನ್ನು ವಿವರಿಸುತ್ತದೆ.
ಕಳೆದ ಕೆಲ ದಶಕಗಳಿಂದ ಎಂಎಸ್‌ಪಿ ವ್ಯವಹಾರವನ್ನು ವಿಶ್ಲೇಷಣೆ ಮಾಡಿರುವುದರಿಂದ ಹೇಳ ಬಯಸುತ್ತೇನೆ. ಖಂಡಿತವಾಗಿಯೂ ಇದು ಆಹಾರ ಧಾನ್ಯಗಳಿಗೆ ಕೊರತೆ ಇದ್ದ 1960ರ ಮಧ್ಯ ಭಾಗದ ಪದ್ಧತಿ. ಅಂದಿನಿಂದ ಭಾರತ ಆಹಾರೋತ್ಪಾದನೆಯಲ್ಲಿ ಕೊರತೆಯಿಂದ ಹೆಚ್ಚುವರಿ ಉತ್ಪಾದನೆಯ ರಾಷ್ಟ್ರವಾಗಿ ಬದಲಾಗಿದೆ ಎನ್ನುತ್ತಾರೆ ಗುಲಾಟಿ.
“ಆಹಾರ ಧಾನ್ಯಗಳ ಕೊರತೆ ಇದ್ದಾಗ ಸರಕಾರಗಳು ಪಾಲಿಸುವ ನಿರ್ವಹಣೆಯ ನೀತಿಗೂ, ಸಮೃದ್ಧಿಯಾಗಿದ್ದಾಗ ಅಗತ್ಯವಿರುವ ನೀತಿಗೂ ವ್ಯತ್ಯಾಸ ಇರುತ್ತವೆ. ಉತ್ಪಾದನೆ ಸಮೃದ್ಧವಾದಾಗ ಮಾರುಕಟ್ಟೆಗೆ ಹೆಚ್ಚಿನ ಪಾತ್ರವನ್ನು ನೀಡಬೇಕಾಗುತ್ತದೆ. ಕೃಷಿಯನ್ನು ಬೇಡಿಕೆ ಆಧಾರಿತವಾಗಿಸಬೇಕಾಗುತ್ತದೆ. ಇಲ್ಲದಿದ್ದರೆ ಕೇವಲ ಎಂಎಸ್‌ಪಿ ಮಾರ್ಗವೊಂದೇ ಇದ್ದರೆ, ಅದು ಆರ್ಥಿಕ ವಿಪತ್ತಿಗೆ ದಾರಿ ಮಾಡಿಕೊಡುತ್ತದೆ” ಎಂದು ಎಚ್ಚರಿಸುತ್ತಾರೆ ಗುಲಾಟಿ.
“ಇದು ಸರಕಾರ ಎಷ್ಟು ಬೆಂಬಲ ಬೆಲೆ ನೀಡಬೇಕು ಹಾಗೂ ಮಾರುಕಟ್ಟೆ ಆಧಾರಿತ ದರ ಎಷ್ಟಿರಬೇಕು” ಎಂಬುದರ ಪರಿಷ್ಕರಣೆ. ಹೊಸ ಕೃಷಿ ಕಾಯಿದೆಯು ಈಗಿನ ಎಂಎಸ್‌ಪಿ ವ್ಯವಸ್ಥೆಯನ್ನು ಬದಲಿಸದೆಯೇ, ಮಾರುಕಟ್ಟೆಯ ಪಾತ್ರವನ್ನು ಹೆಚ್ಚಿಸಲು ಯತ್ನಿಸುತ್ತಿದೆ. ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ಸದ್ಯಕ್ಕೆ ಯಾವುದೇ ವ್ಯವಸ್ಥೆ ಪರಿಪೂರ್ಣವಲ್ಲ. ಅದು ಎಂಎಸ್‌ಪಿ ಆಗಿರಬಹುದು, ಮಾರುಕಟ್ಟೆ ಆಧಾರಿತವಾಗಿರಬಹುದು. ಆದರೆ ಎಂಎಸ್‌ಪಿ ವ್ಯವಸ್ಥೆ ಬಹಳ ದುಬಾರಿ ಮತ್ತು ಅದಕ್ಷತೆಯದ್ದು. ಮಾರುಕಟ್ಟೆ ಆಧಾರಿತವಾಗಿರುವಂಥದ್ದು ಹೆಚ್ಚು ಸ್ಥಿರವಾದದ್ದು” ಎನ್ನುತ್ತಾರೆ ಅವರು.
ಎಂಎಸ್‌ಪಿಯ ಒಳನೋಟ:
ಎಂಎಸ್‌ಪಿ ಮುಖ್ಯವಾಗಿ ಭತ್ತ ಮತ್ತು ಗೋಧಿಗೆ ಲಭ್ಯವಿದೆ. ಇತೀಚೆಗೆ ಇತರ ಹಲವು ಬೇಳೆಕಾಳುಗಳನ್ನೂ ಎಂಎಸ್‌ಪಿ ಅಡಿಯಲ್ಲಿ ಖರೀದಿಸುತ್ತಿದೆ. ಒಟ್ಟು 23 ಬೆಳೆಗಳಿಗೆ ವಿಸ್ತರಿಸಲಾಗಿದೆ. ಹೀಗಿದ್ದರೂ ಈಗಲೂ ಎಂಎಸ್‌ಪಿ ಬಹುಪಾಲು ಅಕ್ಕಿ ಮತ್ತು ಗೋಧಿ ಖರೀದಿಯದ್ದೇ ಪ್ರಾಬಲ್ಯವಿದೆ. ಸರಕಾರದ ಕಾಪು ದಸ್ತಾನಿನ ಅಂಕಿ ಅಂಶಗಳು ಇದನ್ನು ಬಿಂಬಿಸುತ್ತಿವೆ.
ಸರಕಾರಕ್ಕೆ ಎಂಎಸ್‌ಪಿ ಅಡಿಯಲ್ಲಿ ಖರೀದಿಸುವ ಅಕ್ಕಿಗೆ ಪ್ರತಿ ಕೆ.ಜಿಗೆ ಸುಮಾರು 37 ರೂ. ಹಾಗೂ ಗೋಧಿಗೆ ಪ್ರತಿ ಕೆ.ಜಿಗೆ 27 ರೂ. ವೆಚ್ಚವಾಗುತ್ತದೆ. ಭಾರತೀಯ ಆಹಾರ ನಿಗಮಕ್ಕೆ (ಎಂಎಸ್‌ಪಿ) ಕಾರ್ಮಿಕರ ಸಲುವಾಗಿ ತಗಲುವ ವೆಚ್ಚವು ಮಾರುಕಟ್ಟೆಯಲ್ಲಿನ ಗುತ್ತಿಗೆ ಆಧಾರಿತ ಕಾರ್ಮಿಕರಿಗಿಂತ ೬ ಪಟ್ಟು ಹೆಚ್ಚು. ಎಂಎಸ್‌ಪಿಗೆ ಅಕ್ಕಿ ಮತ್ತು ಗೋಧಿ ಖರೀದಿಗೆ ತಗಲುವ ಆರ್ಥಿಕ ವೆಚ್ಚಕ್ಕಿಂತಲೂ ಮಾರುಕಟ್ಟೆಯ ದರಗಳು ಕಡಿಮೆಯಾಗಿರುವುದರಲ್ಲಿ ಅಚ್ಚರಿ ಇಲ್ಲ. ಉದಾಹರಣೆಗೆ ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ ರಿಟೇಲ್ ಮಾರುಕಟೆಯಲ್ಲಿನ ಅಕ್ಕಿಯ ದರ ಕೆ.ಜಿಗೆ 23-25 ರೂ. ಗಳಾಗಿರುತ್ತದೆ. ಹೀಗಾಗಿ ಎಂಎಸ್‌ಪಿಗೆ ತಾನು ಸಂಗ್ರಹಿಸುವ ಹೆಚ್ಚುವರಿ ಧಾನ್ಯಗಳನ್ನು ರಫ್ತು ಮಾಡಬೇಕಿದ್ದರೆ ಸಬ್ಸಿಡಿಯ ನೆರವು ಇಲ್ಲದೆ ಸಾಧ್ಯವೇ ಇಲ್ಲ. ಹಾಗೆ ಸಬ್ಸಿಡಿ ಕೊಟ್ಟರೆ ಅದಕ್ಕೆ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಆಕ್ಷೇಪಿಸುತ್ತದೆ.
ಆಹಾರ ನಿಗಮದ ಸಾಲದ ಹೊರೆ 3 ಲಕ್ಷ ಕೋಟಿ ರೂ.ಗಳ ಸನಿಹ:
ಆಹಾರ ಸಬ್ಸಿಡಿ ಸಲುವಾಗಿ ಸರಕಾರಕ್ಕೆ ತಗಲುವ ನಿಜವಾದ ವೆಚ್ಚ ಕೇಂದ್ರ ಬಜೆಟ್‌ನಲ್ಲಿ ಗೊತ್ತಾಗುವುದಿಲ್ಲ. ಏಕೆಂದರೆ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಎ) ಹೆಚ್ಚೆಚ್ಚು ಸಾಲ ಮಾಡುವಂತೆ ತಿಳಿಸಲಾಗಿದೆ. ಹೀಗಾಗಿ ಎಎಫ್‌ಸಿಎಯ ಸಾಲದ ಹೊರೆ ೩ ಲಕ್ಷ ಕೋಟಿ ರೂ.ಗಳ ಸನಿಹದಲ್ಲಿದೆ. ಇದರ ಪರಿಣಾಮ ಆಹಾರ ನಿರ್ವಹಣೆಯ ವ್ಯವಸ್ಥೆಯಲ್ಲಿ ಹಣಕಾಸು ಬಿಕ್ಕಟ್ಟನ್ನು ಮುಂದೂಡಲಾಗುತ್ತಿದೆ. ಆದರೆ ಬಡವರ ಹೆಸರಿನಲ್ಲಿಪೂರ್ವಾಗ್ರಹಪೀಡಿತ ವಾದ ನಡೆಯುವಾಗ ದಕ್ಷತೆ, ಆರ್ಥಿಕ ವೆಚ್ಚ, ವಿಪತ್ತಿನ ಬಗ್ಗೆ ಲಕ್ಷಿಸುವವರು ಯಾರು?
ಕೆಲವರು ಕಬ್ಬಿನ ದರ ಮತ್ತು ಹಾಲಿನ ದರ ನಿರ್ಣಯವೂ ಎಂಎಸ್‌ಪಿಯೂ ಸಮಾನ ಎನ್ನುತ್ತಾರೆ. ಆದರೆ ತಾಂತ್ರಿಕವಾಗಿ ಭಿನ್ನ. ಎಂಎಸ್‌ಪಿ ಎನ್ನುವುದು ಸರಕಾರ ರೈತರಿಗೆ ನೀಡುವ ಭರವಸೆ. ಕಾನೂನಾತ್ಮಕ ಬದ್ಧತೆಯಲ್ಲ. ಮಾರುಕಟ್ಟೆಯಲ್ಲಿ ನಿರ್ದಿಷ್ಟ ಮೊತ್ತಕ್ಕಿಂತ ಕಡಿಮೆ ಮಟ್ಟಕ್ಕೆ ಬೆಲೆ ಕುಸಿದರೆ ತಾನು ಖರೀದಿಸುತ್ತೇನೆ ಎಂದು ನೀಡುವ ಭರವಸೆ. ಕಬ್ಬಿನ ವಿಚಾರದಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಕಬ್ಬಿನ ದರದ ಬಗ್ಗೆ ಫೇರ್ ಆಂಡ್ ರೆಮ್ಯುನರೇಟಿವ್ ಪ್ರೈಸ್ (ಎಂಎಸ್‌ಪಿ) ನಿರ್ಣಯಿಸುತ್ತದೆ. ಉತ್ತರಪ್ರದೇಶ ಕಬ್ಬಿನ ದರ ನಿರ್ಣಯಕ್ಕೆ ತನ್ನದೇ ಸ್ಟೇಟ್ ಅಡ್ವೈಸ್ಡ್ ಪ್ರೈಸ್ (ಎಸ್‌ಎಪಿ) ಅನ್ನು ಹೊಂದಿದೆ. ಸಕ್ಕರೆ ವಲಯದಲ್ಲಾಗಿರುವ ಗೊಂದಲ ನೋಡಿ. ಪ್ರತಿ ವರ್ಷ ರೈತರಿಗೆ ಸಕ್ಕರೆ ಕಾರ್ಖಾನೆಗಳು ನೀಡಬೇಕಿರುವ ಬಾಕಿ ಸಾವಿರಾರು ಕೋಟಿ ರೂ.ಗೂ ಹೆಚ್ಚು ಇರುತ್ತದೆ. ಭಾರಿ ಪ್ರಮಾಣದ ಸಕ್ಕರೆಯನ್ನು ರಫ್ತು ಮಾಡಲೂ ಆಗುತ್ತಿಲ್ಲ. ಏಕೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ದರ ಇನ್ನೂ ಕೆಳಮಟ್ಟದಲ್ಲಿದೆ. ಅಲ್ಲಿ ಸ್ಪರ್ಧೆ ನೀಡಲು ಭಾರತದ ಕಾರ್ಖಾನೆಗಳಿಗೆ ಆಗುತ್ತಿಲ್ಲ.
ಹಾಲಿಗೆ ಎಂಎಎಸ್ಪಿ ಇಲ್ಲ!
ಹಾಲಿನ ದರ ನಿರ್ಣಯದಲ್ಲಿ ಗಮನಿಸಿ. ಇದರ ಮೌಲ್ಯವು ಅಕ್ಕಿ, ಗೋಧಿ, ಸಕ್ಕರೆಗಿಂತಲೂ ಹೆಚ್ಚು. ಹಾಲಿನ ಕೋ-ಆಪರೇಟಿವ್ ವ್ಯವಸ್ಥೆಯಲ್ಲಿ ಕಂಪನಿ ಮತ್ತು ಹಾಲಿನ ಒಕ್ಕೂಟ ದರವನ್ನು ನಿರ್ಧರಿಸುತ್ತವೆ. ಸರಕಾರ ನಿರ್ಧರಿಸುವುದಿಲ್ಲ. ಇದು ಗುತ್ತಿಗೆ ದರವನ್ನು ಹೋಲುತ್ತದೆ.
“ಹಾಲಿಗೆ ಯಾವುದೇ ಎಂಎಸ್‌ಪಿ ಇಲ್ಲ. ಭಾರತದ ಕ್ಷೀರ ವಲಯವು ಖಾಸಗಿ ಕಂಪನಿಗಳ ಜತೆ ಪೈಪೋಟಿ ನಡೆಸುತ್ತಿದೆ. ಅದು ನೆಸ್ಲೆ, ಹ್ಯಾಟ್ಸನ್ ಅಥವಾ ಶ್ರೈಬರ್ ಡೈನಾಮಿಕ್ಸ್ ಇರಬಹುದು, ಕ್ಷೀರೋದ್ಯಮ ಅಕ್ಕಿ, ಗೋಧಿ, ಕಬ್ಬಿಗಿಂತ ವಾರ್ಷಿಕ ಸರಾಸರಿ 2-3 ಪರ್ಸೆಂಟ್ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದೆ.
ಭಾರತ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರ. ವಾರ್ಷಿಕ 18.7 ಕೋಟಿ ಟನ್ ಹಾಲು ಉತ್ಪಾದಿಸಲಾಗುತ್ತಿದೆ.
ಹೊಸ ಕೃಷಿ ಕಾಯಿದೆಗಳ ಪರಿಣಾಮ ಮುಂದಿನ ೩-೫ ವರ್ಷಗಳಲ್ಲಿ ಸಾವಿರಾರು ಕಂಪನಿಗಳು ಕೃಷಿ ಉತ್ಪನ್ನಗಳ ಪೂರೈಕೆಯ ವ್ಯವಸ್ಥೆಯನ್ನು ಬಲಪಡಿಸಲು ಉತ್ತೇಜನ ಸಿಗಲಿದೆ. ಕ್ಷೀರೋದ್ಯಮದಲ್ಲಿ ಆದಂತೆ ಕೃಷಿ ಉತ್ಪನ್ನ ಮಾರಾಟ ವಲಯದಕ್ಕೂ ಸುಧಾರಣೆಯಾಗಲಿದೆ. ರೈತರ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಅಭಿವೃದ್ಧಿಯಾಗಲಿವೆ. ಅವುಗಳಲ್ಲಿ ಹಲವು ವಿಫಲವಾಗಬಹುದು. ಆದರೆ ಹಲವು ಯಶಸ್ವಿಯೂ ಆಗಬಹುದು. ಇದು ಉತ್ಪಾದಕೆಯನ್ನು ಹೆಚ್ಚಿಸಲಿದೆ. ಕುಕ್ಕುಟೋದ್ಯಮ ಮತ್ತು ಹೈನುಗಾರಿಕೆಯಂತೆ ಕೃಷಿ ಉತ್ಪನ್ನ ಮಾರಾಟದಲ್ಲೂ ವಿಕಾಸದ ಸಾಧ್ಯತೆ ಇದೆ. ಹಾಲು ಮತ್ತು ಕುಕ್ಕುಟೋದ್ಯಮದಲ್ಲಿ ರೈತರು ಎಂಎಸ್‌ಪಿ ಪಡೆಯುವುದಿಲ್ಲ. ಮಂಡಿಗಳಿಗೆ ಹೋಗಬೇಕಿಲ್ಲ, ಮಂಡಿ ಶುಲ್ಕ, ಸೆಸ್ ನೀಡಬೇಕಿಲ್ಲ.
ನಾನಂತೂ ಹೇಳುವುದೇನೆಂದರೆ, ಎಂಎಸ್‌ಪಿ ಆಧರಿತ ದರ ನಿರ್ಣಯ ವ್ಯವಸ್ಥೆಗೆ (ಪ್ರೈಸಿಂಗ್ ಸಿಸ್ಟಮ್) ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತನ್ನದೇ ಇತಿ ಮಿತಿಗಳಿವೆ. ಇದಕ್ಕೆ ಪರಿಹಾರ ಏನೆಂದರೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ವೈವಿಧ್ಯಮಯಗೊಳಿಸುವುದು, ಹೆಚ್ಚು ಮೌಲ್ಯಯುತ ಬೆಳೆಗಳನ್ನೂ ಬೆಳೆಯುವುದು, ರೈತ ಸಮುದಾಯದಲ್ಲಿ ಬಹಳಷ್ಟು ಮಂದಿಯನ್ನು ಹೆಚ್ಚು ಆದಾಯ ಇರುವ ಬೇರೆ ಕ್ಷೇತ್ರಗಳಿಗೆ ಸ್ಥಳಾಂತರಿಸುವುದು. ಆದರೆ ಈ ಸಂದರ್ಭ ಇದರ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ.
ಈ ದೇಶದಲ್ಲಿ ರೈತರಿಗೆ ತಾವು ಉತ್ಪಾದಿಸುವ ನಾನಾ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ಆದಾಯ ಗಳಿಸಲು ಮಾರುಕಟ್ಟೆ ವಿಸ್ತಾರವಾಗಬೇಕು. ಈ ನಿಟ್ಟಿನಲ್ಲಿ ಹೊಸ ಕೃಷಿ ಕಾಯಿದೆಗಳು ಅಗತ್ಯ. ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಸಾವಿರಾರು ಕಂಪನಿಗಳು ಕೃಷಿ ಉತ್ಪನ್ನಗಳ ಪೂರೈಕೆಯ ವಹಿವಾಟಿನಲ್ಲಿ ಕಾರ್ಯಪ್ರವೃತ್ತವಾಗಲು ಉತ್ತೇಜನ ಸಿಗಲಿದೆ. ಇದರ ಪ್ರಯೋಜನ ರೈತರಿಗೆ ದೊರೆಯುವ ನಿರೀಕ್ಷೆ ಇದೆ.
ನೂತನ ಕೃಷಿ ಕಾಯಿದೆಗೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಯ ಅಲೆಗಳಲ್ಲಿ ಭಾರತೀಯ ಪ್ರಜಾಪ್ರಭುತ್ವದ ಪೂರ್ಣ ಪ್ರಮಾಣದ ಪಾತ್ರವನ್ನು ಗಮನಿಸಬಹುದು. ಸರಕಾರ ಇದನ್ನು ಐತಿಹಾಸಿಕ ಕಾಯಿದೆ ಎಂದು ಕರೆದರೆ, ಪ್ರತಿಪಕ್ಷಗಳು “ರೈತರ ಪಾಲಿಗೆ ಕರಾಳ ಅಧ್ಯಾಯ’ ಎಂದು ಬಣ್ಣಿಸಿವೆ. ಮತ್ತೆ ಕೆಲವರು ಕಾರ್ಪೊರೇಟ್ ಕುಳಗಳಿಗೆ ಕೃಷಿ ಮಾರುಕಟ್ಟೆಯ ಮಾರಾಟ ಎಂದಿದ್ದಾರೆ. ಹಠಾತ್ತನೆ ಎಲ್ಲರ ಹೃದಯ ರೈತರಗೋಸ್ಕರ ಮಿಡಿಯುತ್ತಿರುವುದು ಹೇಗೆ ಎಂಬುದೇ ಸೋಜಿಗ.
ಹೀಗಿದ್ದರೂ, ಉಭಯ ರಾಜಕೀಯ ಬಣಗಳಲ್ಲಿರೈತರ ಆದಾಯ ಹೆಚ್ಚಬೇಕು ಎಂಬುದಕ್ಕೆ ಭಿನ್ನಮತವಿಲ್ಲ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಪ್ರತಿಪಕ್ಷಗಳು ವಾದಿಸುತ್ತಿವೆ. ಸರಕಾರವು ರೈತರಿಗೆ ಈಗಿನ ಎಂಎಸ್‌ಪಿ ವ್ಯವಸ್ಥೆಯನ್ನು ಇಟ್ಟುಕೊಂಡೇ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆಗಳನ್ನು ನೀಡಲು ಕಾಯಿದೆ ನೆರವಾಗಲಿದೆ ಎನ್ನುತ್ತಿದೆ. ಹೀಗಿದ್ದರೂ, ಯಾವುದು ಯುಕ್ತ ಎಂಬ ಸಮಾಲೋಚನೆ ಮುಖ್ಯ. ಇಲ್ಲಿ ಗುಲಾಟಿಯವರು ಹಾಲನ್ನು ಸಾಂಕೇತಿಕವಾಗಿ ಉದಾಹರಣೆಗೆ ಹೇಳಿದ್ದಾರೆ. ಒಟ್ಟಾರೆಯಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯ ವಿಸ್ತರಣೆ, ಅದಕ್ಕಿರುವ ಕಾಯಿದೆಗಳ ತೊಡಕು ನಿವಾರಣೆ, ಪೂರಕ ಪರಿಸರ ನಿರ್ಮಾಣದ ಅಗತ್ಯವನ್ನು ವಿವರಿಸಿದ್ದಾರೆ ಎಂಬುದು ಮುಖ್ಯ.
ನೂತನ ಕೃಷಿ ಕಾಯಿದೆಗಳ ಬಗ್ಗೆ ಮಣಿಪಾಲ್ ಗ್ಲೋಬಲ್ ಎಜ್ಯುಕೇಷನ್ ಸಂಸ್ಥೆಯ ಅಧ್ಯಕ್ಷ ಟಿ.ವಿ ಮೋಹನ್ ದಾಸ್ ಪೈ ಅವರು ಹೇಳುವ ಅಂಶಗಳು ಮಾಹಿತಿಪೂರ್ಣ. ಅವರು ಹೀಗೆನ್ನುತ್ತಾರೆ-
ಕೃಷಿ ಕ್ಷೇತ್ರದಲ್ಲಿ ಒಟ್ಟಾರೆಯಾಗಿ ನಿವ್ವಳ ಮೌಲ್ಯ ವರ್ಧನೆ (ಜಿವಿಎ) ತ್ವರಿತವಾಗಿ ಬದಲಾಗುತ್ತಿರುವ ಹೊತ್ತಿನಲ್ಲಿ ಉದಾರೀರಣದ ಭಾಗವಾಗಿ ಹೊಸ ಕೃಷಿ ಕಾಯಿದೆಗಳು ಬಂದಿವೆ. ಕೃಷಿ ವಲಯದಲ್ಲಿ ಈ ಹಿಂದೆ ದವಸ ಧಾನ್ಯಗಳ ಬೆಳೆಗಳೇ ಪ್ರಾಧಾನ್ಯತೆ ಗಳಿಸಿದ್ದವು. ಆಹಾರೋತ್ಪನ್ನಗಳ ಸಂಗ್ರಹ, ವಿತರಣೆ ಮತ್ತು ಪೂರೈಕೆಗೆ ಹಲವು ಕಟ್ಟುಪಾಡುಗಳು ಇದ್ದಂಥ ಕಾಲದಿಂದ ಉದಾರೀಕರಣಕ್ಕೆ ಕಾಯಿದೆಗಳು ಹಾದಿ ಸುಗಮಗೊಳಿಸಿವೆ.
ಆಹಾರ ಧಾನ್ಯಗಳ ವಲಯದಲ್ಲಿ ಬೇಡಿಕೆ ಮತ್ತು ಪೂರೈಕೆಯಲ್ಲಾಗುವ ವ್ಯತ್ಯಯಗಳ ಏರಿಳಿತಗಳಿಂದ ರೈತರಿಗೆ ರಕ್ಷಣೆ ನೀಡಲು ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ರೈತರು ಮತ್ತು ಕೃಷಿ ಉತ್ಪಾದಕರು ವೈವಿಧ್ಯಮಯ ಉತ್ಪನ್ನಗಳನ್ನು ಬೆಳೆಯುತ್ತಿದ್ದಾರೆ. ಕೇವಲ ದವಸ ಧಾನ್ಯಗಳಿಗೆ ಅವರು ಸೀಮಿತರಾಗಿಲ್ಲ. ಹಳೆಯ ನಿಯಂತ್ರಕ ವ್ಯವಸ್ಥೆ ಅಪ್ರಸ್ತುತವಾಗಿವೆ.
ರೈತರು ನೇರವಾಗಿ ಮಾರುಕಟ್ಟೆಯ ಸಂಪರ್ಕ ಗಳಿಸುವುದರಿಂದ ಅವರ ಕನಿಷ್ಠ ೨೦-೩೦ ಪರ್ಸೆಂಟ್ ಆದಾಯ ವೃದ್ಧಿಸುತ್ತದೆ. ಕಳೆದ 5-7 ವರ್ಷಗಳಲ್ಲಿ 600ಕ್ಕೂ ಹೆಚ್ಚು ಅಗ್ರಿಟೆಕ್ ಕಂಪನಿಗಳ ಅಧ್ಯಯನದಲ್ಲಿ ಇದು ತಿಳಿದುಬಂದಿದೆ. ಆದರೆ ಈ ಪ್ರಯೋಜನ ವ್ಯಾಪಕವಾಗಿ ರೈತ ಸಮುದಾಯಕ್ಕೆ ಸಿಗಬೇಕಿದ್ದರೆ ಪೂರಕವಾದ ಕೃಷಿ ಕಾಯಿದೆ ಬೇಕು.
ಭಾರತದಲ್ಲಿ ಕಳೆದೊಂದು ದಶಕದಲ್ಲಿ ಕೃಷಿ ವಯಲದಲ್ಲಿ ಮಹತ್ತರ ಬದಲಾವಣೆ ಸಂಭವಿಸಿದೆ. 2001-12 ರಿಂದ 2008-19ರ ಅವಧಿಯಲ್ಲಿ ಕೃಷಿಯ ಮೌಲ್ಯ ವರ್ಧನೆಯಲ್ಲಿ ದವಸ ಧಾನ್ಯಗಳ ಪಾಲು ಶೇ. 65.4ರಿಂದ ಶೇ. 55.3ಕ್ಕೆ ಇಳಿಕೆಯಾಗಿದೆ. 2024-25ರ ವೇಳೆಗೆ ಇದು ಶೇ. 45.6ಕ್ಕೆ ತಗ್ಗುವ ನಿರೀಖ್ಷೆ ಇದೆ. ಬೆಳೆಗಳಲ್ಲಿ ದವಸ ಧಾನ್ಯ÷ಗಳಿಗೆ ಮಾತ್ರ ಎಂಎಸ್‌ಪಿ ಸಿಗುತ್ತಿದೆ. ಇದೇ ಅವಧಿಯಲ್ಲಿ ಪಶು ಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಕುಕ್ಕುಟೋದ್ಯಮ ಇತ್ಯಾದಿಗಳ ಪಾಲು ಹೆಚ್ಚುತ್ತಿದೆ. ಕೃಷಿಯಲ್ಲಿ ಉಪ ಕಸುಬುಗಳಂತಿದ್ದ ತೋಟಗಾರಿಕೆ, ಹಾಲು, ಮಾಂಸೋತ್ಪಾದನೆಯ ವಲಯದ ಮೌಲ್ಯ ಗಮನಾರ್ಹ ಏರುತ್ತಿದೆ. ಇದು ಕೃಷಿ ವಲಯದ ವೈವಿಧ್ಯತೆ ಹಾಗೂ ರೈತರ ಆದಾಯ ವೃದ್ಧಿಗೆ ಪೂರಕ ಬೆಳವಣಿಗೆಗಳಾಗುತ್ತಿವೆ.
ವೈವಿಧ್ಯವಾದ ಕೃಷಿ ಉತ್ಪಾದನಾ ಕಾರ್ಯತಂತ್ರ, ದವಸ ಧಾನ್ಯಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ರೈತರ ಆದಾಯ ವೃದ್ಧಿಯ ದೃಷ್ಟಿಯಿಂದ ನಿರ್ಣಾಯಕವಾಗಿದೆ. ತಮ್ಮ ಉತ್ಪನ್ನಗಳಲ್ಲಿ ವೈವಿಧ್ಯತೆಯೊಂದಿಗೆ ಏಕ ಬೆಳೆಯ ಮೇಲಿನ ಅವಲಂಬನೆಯ ರಿಸ್ಕ್ ಅನ್ನು ರೈತರು ಇನ್ನಿಲ್ಲವಾಗಿಸುತ್ತಿದ್ದಾರೆ.
ಇತ್ತೀಚಿನ ಮೂರೂ ಕೃಷಿ ಕಾಯಿದೆಗಳು ರೈತರನ್ನು ಹೆಚ್ಚು ಸ್ವಂತAತ್ರಗೊಳಿಸುತ್ತವೆ. ಅವರ ಆದಾಯ ಗಳಿಕೆಯ ಸಾಮರ್ಥ್ಯವನ್ನು ವೃದ್ಧಿಸುತ್ತವೆ. ಒಂದೇ ಬೆಳೆಯ ಮೇಲಿನ ಅವಲಂಬನೆಯ ಅಪಾಯಗಳನ್ನು ದೂರ ಮಾಡುತ್ತವೆ. ಎಲ್ಲಿ ಉತ್ತಮ ದರ ಸಿಗುತ್ತದೆಯೋ ಅಲ್ಲಿ ಅವರು ಮಾರುವ ಸ್ವಾತಂತ್ರ್ಯ ಸಿಗುತ್ತದೆ.
ಗುತಿಗೆ ಆಧಾರಿತ ಕೃಷಿ ಪದ್ಧತಿ ಈಗ ಮತ್ತಷ್ಟು ಸುಧಾರಿತವಾಗುತ್ತಿದೆ. ರೈತರು ಗುತ್ತಿಗೆಯ ಮೂಲಕ ವೈವಿಧ್ಯಮಯ ಉತ್ಪನ್ನಗಳನ್ನು ಬೆಳೆಯಬಹುದು. ಖರೀದಿಯ ಖಾತರಿಯೂ ಗುತ್ತಿಗೆಯಿಂದ ಲಭಿಸುತ್ತದೆ. ಆಹಾರ ಸಂಸ್ಕರಣೆ ಉದ್ದಿಮೆಯ ಬೆಳವಣಿಗೆಗೂ ಇದು ಪೂರಕ. ಇದೇ ವೇಳೆ ಸರಕಾರದ ಎಂಎಸ್‌ಪಿ ಕೂಡ ಇರುತ್ತದೆ. ಸರಕಾರ ೨೦೨೦ರ ಸೆಪ್ಟೆಂಬರ್ ವೇಳೆಗೆ ೧,೦೮೨ ಕೋಟಿ ರೂ. ವೆಚ್ಚದಲ್ಲಿ 5.73 ಲಕ್ಷ ಟನ್ ಭತ್ತವನ್ನು ಎಂಎಸ್‌ಪಿ ಅಡಿಯಲ್ಲಿ ಖರೀದಿಸಿತ್ತು.
ಭಾರತೀಯ ರೈತರ ಜೀವನೋಪಾಯ ಸುಧಾರಣೆಗೆ ಕೃಷಿ ವ್ಯವಸ್ಥೆಯ ಸುಧಾರಣೆ ಅವಶ್ಯಕ. ಅವರನ್ನು ಸಬ್ಸಿಡಿ ಮತ್ತು ಎಪಿಎಂಸಿ ಹಾಗೂ ಅಗತ್ಯ ವಸ್ತುಗಳ ಕಾಯಿದೆಗಳಂಥ ಕಾಯಿದೆಗಳ ಕಟ್ಟುಪಾಡಿಗೆ ಒಳಗಾಗಿಸುವುದು ಅವರ ಹಾಗೂ ದೇಶದ ದೀರ್ಘಕಾಲೀನ ಹಿತದೃಷ್ಟಿಯಿಂದ ಉಚಿತವಲ್ಲ. ಇದನ್ನು ಮನಗಂಡು ಮೋದಿ ಸರಕಾರ ಅಗತ್ಯವಾಗಿರುವ ಬದಲಾವಣೆಗಳನ್ನು ತರುತ್ತಿದೆ.
ಸುಧಾರಣೆಯ ಪ್ರಕ್ರಿಯೆಗಳು ಕೃಷಿ ಉತ್ಪನ್ನಗಳಿಗೆ ಆನ್‌ಲೈನ್ ಟ್ರೇಡಿಂಗ್ ಕಲ್ಪಿಸುವುದರೊಂದಿಗೆ ಆರಂಭವಾಗಿತ್ತು. ಕೃಷಿ ಉತ್ಪಬನ್ನಗಳ ಮಾರಾಟಕ್ಕೆ ನ್ಯಾಶನಲ್ ಅಗ್ರಿಕಲ್ಚರ್ ಮಾರ್ಕೆಟ್ (ಇ-ನ್ಯಾಮ್) ಸ್ಥಾಪಿಸಲಾಯಿತು. ನಂತರ ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ೯ ಕೋಟಿ ರೈತರಿಗೆ ವಾರ್ಷಿಕ 6,000ರೂ. ಪ್ರಾಥಮಿಕ ನೆರವು ನೀಡುವ ಯೋಜನೆಗೆ ಚಾಲನೆ ನೀಡಲಾಯಿತು. ಎಂಎಸ್‌ಪಿಯಿಂದ ಪ್ರಯೋಜನ ಪಡೆಯದಿರುವ ರೈತರಗೆ ಈ ನೆರವು ವಿತರಿಸಲಾಯಿತು. ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಪ್ರಯೋಜನ ಪಡೆಯುತ್ತಿರುವ ರೈತರು ಕೇವಲ 6 ಪರ್ಸೆಂಟ್ ಮಾತ್ರ. ಅದೂ ಮುಖ್ಯವಾಗಿ ಪಂಜಾಬ್ ಹಾಗೂ ಹರಿಯಾಣದ ರೈತರಿಗೆ ಮಾತ್ರ. ಹೀಗಾಗಿ ಕೋವಿಡ್ ಬಿಕ್ಕಟ್ಟಿನ ಸಂದರ್ಭ ರೈತರ ಹಿತದೃಷ್ಟಿಯಿಂದ ಯೋಜನೆನಿರ್ಣಾಯಕವಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದ ರೈತರ ಬೆಂಬಲಕ್ಕೆ ಕೆಲ ಮಹತ್ವದ ಯೋಜನೆಗಳು ಬಂದಿವೆ. ಮುಖ್ಯವಾಗಿ ಒಟ್ಟು ೨ ಲಕ್ಷ ಕೋಟಿ ರೂ. ಸಾಲ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ. ಬೆಳೆಗಳ ಕೊಯ್ಲಿನ ಸಂದರ್ಭ ಒದಗುವ ಕಾರ್ಮಿಕ ವೆಚ್ಚಗಳಿಗೆ ಇದು ಆಸರೆಯಾಗಿದೆ. ಈ ಸಾಲ ಸೌಲಭ್ಯಕ್ಕೆ ಆಧಾರ್ ಅನ್ನು ಸಂಪರ್ಕಿಸುವುದರಿಂದ ಕ್ರೆಡಿಟ್ ಹಿಸ್ಟರಿ ಸೃಷ್ಟಿಯಾಗುತ್ತದೆ ಹಾಗೂ ಅದರ ಆಧಾರದಲ್ಲಿ ಸಾಲ ವಿಸ್ತರಣೆಯೂ ಸುಗಮವಾಗುತ್ತದೆ.
ಆತ್ಮನಿರ್ಭರ್ ಭಾರತ್ ಯೋಜನೆಯಡಿಯಲ್ಲಿ 1 ಲಕ್ಷ ಕೋಟಿ ರೂ.ಗಳ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪಿಸಲಾಗಿದೆ. ಇದು ಬಹಳ ಮಹತ್ವಪೂರ್ಣ. ಇದರಿಂದ ರೈತರ ಕೃಷಿ ಸಹಕಾರ ಸೊಸೈಟಿ, ರೈತರ ಉತ್ಪಾದಕ ಸಂಸ್ಥೆಗಳು (ಎಫ್ ಪಿಒ), ಕೃಷಿ ಉದ್ಯಮಿಗಳು, ಸ್ಟಾರ್ಟಪ್‌ಗಳ ಅಭಿವೃದ್ಧಿಗೆ ನೆರವು ಸಿಗಲಿದೆ. ಕೊಯ್ಲಿನ ನಂತರದ ನಿರ್ವಹಣೆ, ಶೀಥಲೀಕರಣ ಘಟಕ ಸ್ಥಾಪನೆ, ಗೋದಾಮುಗಳ ಸ್ಥಾಪನೆ, ಕಿರು ಆಹಾರ ಸಂಸ್ಕರಣೆ ಘಟಕಗಳ ಸ್ಥಾಪನೆಗೆ ಸಹಾಯಕವಾಗಲಿದೆ.
ಕೃಷಿ ಕಾಯಿದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಮತ್ತು ಸ್ಥಾಪಿತ ಹಿತಾಸಕ್ತಿಗಳ ಮುಖವಾಡಗಳನ್ನು ಬಯಲುಗೊಳಿಸಿವೆ. ಕೃಷಿ ಕಾಯಿದೆಗಳ ನಂತರವೂ ಸರಕಾರ ಎಂಎಸ್‌ಪಿ ಮೂಲಕ ಧಾನ್ಯ÷ಗಳನ್ನು ಖರೀದಿಸಿದೆ. ಪಿಎಂ ಕಿಸಾನ್ ಸಮ್ಮಾನ್ ಮೂಲಕ ಹಣಕಾಸು ನೆರವು ವಿತರಿಸಿದೆ. ಸಬ್ಸಿಡಿ ಯೋಜನೆಗಳನ್ನು ಮುಂದುವರಿಸಿದೆ.
ಸದ್ಯಕ್ಕೆ ಭಾರತದ ಜಿಡಿಪಿಯಲ್ಲಿ (ಆರ್ಥಿಕ ಬೆಳವಣಿಗೆ) ಕೃಷಿಯ ಪಾಲು ಶೇ.೧೭ರಷ್ಟಿದೆ. ಕಾಲಾಂತರದಲ್ಲಿ ಈ ಸರಕಾರಿ ಬೆಂಬಲಿತ ಮಾದರಿಗಳ ಅವಲಂಬನೆಯಿAದ ಸ್ವತಂತ್ರವಾದಾಗ ರೈತರ ಆದಾಯ ವೃದ್ಧಿಯಾಗಲಿದೆ. ಜಿಡಿಪಿಗೆ ಕೃಷಿ ವಲಯದ ಪಾಲೂ ಹೆಚ್ಚಲಿದೆ. ಸದ್ಯ ದೇಶದ ದುಡಿಯುವ ವಗ್ದಲ್ಲಿ ೪೩ ಪರ್ಸೆಂಟ್ ಮಂದಿ ಕೃಷಿ ಮತ್ತು ಸಂಬAಧಿತ ವಲಯದಗಳನ್ನು ಅವಲಂಬಿಸಿದ್ದಾರೆ. ಅವರಿಗೂ ಈ ಉದಾರೀಕರಣದ ಪ್ರಯೋಜನ ಸಿಗಲಿದೆ.
(ಮುಂದುವರಿಯುವುದು)
ಲೇಖಕರ ಫೇಸ್ ಬುಕ್ ಬರಹವನ್ನು ಇಲ್ಲಿ ಬಳಸಲಾಗಿದೆ.