ಬೆಂಗಳೂರು: ಜಾಗತಿಕವಾಗಿ ಅಮೇರಿಕಾ ಮತ್ತು ರಷ್ಯಾದಂತಹ ಎರಡು ಶಕ್ತಿಗಳು ಪ್ರಭಾವಿಯಾಗಿದ್ದ ಸಂದರ್ಭದಲ್ಲಿ ಅದರ ಬೆಂಬಲಕ್ಕೆ ನಿಲ್ಲಲೇಬೇಕಾದ ಪ್ರಭಾವಲಯದಿಂದ ತಪ್ಪಿಸಿಕೊಳ್ಳಲು ಅಂದಿನ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಮತ್ತು ಅಭಿವೃದ್ಧಿ ಹೊಂದದೆ ಇರುವಂತಹ ರಾಷ್ಟ್ರಗಳಿಗೆ ಬಹಳ ಕಠಿಣವಾಗಿತ್ತು. ಆದರೆ ಭಾರತ ಆ ಸಂದರ್ಭದಲ್ಲೂ ತನ್ನ ಸ್ಪಷ್ಟವಾದ ತಟಸ್ಥ ನಿಲುವನ್ನು ತಿಳಿಸುವಲ್ಲಿ ಯಶಸ್ವಿಯಾಯಿತು. ತನ್ನ ವಿಶ್ವಪರ ನಿಲುವುಗಳಿಂದ ಜಗತ್ತಿನ ವಿಶ್ವಾಸಾರ್ಹ ಸ್ನೇಹಿತನಾಗಿ ಮುನ್ನುಗ್ಗುತ್ತಿರುವ ಭಾರತ ತನ್ನ ವಿದೇಶಾಂಗ ನೀತಿಯಲ್ಲಿ ಯಾವುದೇ ಹಸ್ತಕ್ಷೇಪಗಳಿಗೆ ಒಳಗಾಗದೆ ಸೂಪರ್ ಪವರ್ ರಾಷ್ಟ್ರವಾಗುವತ್ತ ಮುನ್ನುಗ್ಗುತ್ತಿದೆ ಎಂದು ಲೇಖಕಿ ಹಾಗೂ ಚಿಂತಕಿ ಸೌಮ್ಯ ಚತುರ್ವೇದಿ ಹೇಳಿದರು.

ದಿಶಾಭಾರತ್ ಸಂಸ್ಥೆಯು ‘ನನ್ನ ಭಾರತ’ ಅಭಿಯಾನದ ಅಂಗವಾಗಿ ಆಯೋಜಿಸಲಾದ ತಜ್ಞರಿಂದ ಆನ್‌ಲೈನ್ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಹತ್ತನೇ ದಿನ ‘Indian Strategic Leadership in a Changing World Order’ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ತನ್ನ ಸ್ವಂತ ಬಲದಿಂದ ಜಾಗತಿಕವಾಗಿ ಮುನ್ನೆಲೆಗೆ ಬಂದಿರುವ ಭಾರತ ಜಾಗತಿಕ ನಾಯಕನಾಗಿ, ಸ್ವಾಯತ್ತತೆಯನ್ನು ಪಡೆಯುವಲ್ಲಿ ಮತ್ತು ತನ್ನ ಸಾಮರ್ಥ್ಯವನ್ನು ಜವಾಬ್ದಾರಿಯುತವಾಗಿ ಬಳಸುವ ನಿಟ್ಟಿನಲ್ಲಿ ವಿಶ್ವದ ಗಮನಸೆಳೆಯುತ್ತಿದೆ. ಜಾಗತಿಕ ದಕ್ಷಿಣ (ಗೋಬಲ್ ಸೌತ್) ದ ನಾಯಕತ್ವವನ್ನು ಭಾರತ ವಹಿಸಬೇಕು ಎನ್ನುವ ಅಪೇಕ್ಷೆಗಳಿವೆ.  ಸುಸ್ಥಿರ ಅಭಿವೃದ್ಧಿಯಲ್ಲಿ ಇತರೆ ದೇಶಗಳ ಜೊತೆಗೆ ಭಾರತ ಕೈಜೋಡಿಸಿ ಮಹತ್ತರದ ಕೊಡುಗೆ ನೀಡುತ್ತಿದೆ. ತಂತ್ರಜ್ಞಾನದ ಬಳಕೆ ಮತ್ತು ಡಿಜಿಟಲ್ ಪಬ್ಲಿಕ್ ಇನ್ ಫ್ರಾಸ್ಟ್ರಕ್ಚರ್ ನಲ್ಲಿ ವಿಶ್ವ ನಿಬ್ಬೆರಗಾಗುವಂತೆ ಭಾರತ ಮೋಡಿಯನ್ನು ಮಾಡುತ್ತಿದೆ. ಇವುಗಳ ಜೊತೆಗೆ ಜಿ.20ಯಂತಹ ವಿಶ್ವದ ಪ್ರಭಾವಿ ಒಕ್ಕೂಟಗಳ ನೇತೃತ್ವವನ್ನು ವಹಿಸುವಷ್ಟು ಭಾರತ ಸಮರ್ಥವಾಗುತ್ತಿದೆ. ಭಾರತದ ಈ ಎಲ್ಲಾ ಬೆಳವಣಿಗೆಗಳು ಜಾಗತಿಕ ವೇದಿಕೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದ ರಾಷ್ಟ್ರಗಳ ಧ್ವನಿಯಾಗುವಲ್ಲಿ ಸಹಕರಿಸುತ್ತಿದೆ. ಈ ರಾಷ್ಟ್ರಗಳ ನಾಯಕತ್ವದ ಜೊತೆಗೆ ಬಲಿಷ್ಠ ರಾಷ್ಟ್ರಗಳ ಕಾರಣಕ್ಕಾಗಿ ಉದ್ಭವಗೊಂಡ ವಿದ್ಯಮಾನಗಳ ಪರಿಹಾರಕ್ಕೆ ಜಗತ್ತು ಭಾರತದತ್ತ ಮುಖಮಾಡುವಂತೆ ಮಾಡುತ್ತಿದೆ ಎಂದು ತಿಳಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.