ಪ್ರತಿಯೊಬ್ಬ ವ್ಯಕ್ತಿಗೂ ತಾನು ಏನೇ ಕೆಲಸ ಮಾಡಬೇಕೆಂದರೂ ಅಗತ್ಯವಾಗಿ ಬೇಕಾಗಿದ್ದು ಉತ್ತಮ ಆರೋಗ್ಯ. ಇತ್ತೀಚೆಗಿನ ದಿನಗಳಲ್ಲಿ ಜನರು ತಮ್ಮ ಬದಲಾದ ಜೀವನಶೈಲಿಗಳಿಂದ ನಾನಾ ರೀತಿಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನೇಕ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳು ನಮಗೆ ಸಹಕಾರಿ. ಅವುಗಳಲ್ಲಿ ಯೋಗವೂ ಪ್ರಮುಖವಾದ ಸ್ಥಾನವನ್ನು ಪಡೆಯುತ್ತದೆ.

ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ‌ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದಕ್ಕೆ ಸಾಧ್ಯ. ಯೋಗಾಭ್ಯಾಸ ಜೀವನಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ. ಯೋಗದ ಅಭ್ಯಾಸ ಪ್ರಕೃತಿಯ ಜೊತೆಗೆ ಆತ್ಮೀಯ ಸಂಪರ್ಕವನ್ನು ಕಲ್ಪಿಸುತ್ತದೆ. ಹೀಗಾಗಿ ಸಾರ್ವಜನಿಕರಿಗೆ ಯೋಗದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್‌ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. 


ಪಂತಜಲಿ ಮಹರ್ಷಿ
ಪತಂಜಲಿ ಮಹರ್ಷಿ ಅವರು ಸಾಮಾನ್ಯ ಶಕವರ್ಷ ಪೂರ್ವ 2 ನೇ ಶತಮಾನ ಮತ್ತು ಸಾಮಾನ್ಯ ಶಕ ವರ್ಷ 4 ನೇ ಶತಮಾನದ ಒಬ್ಬ  ಪ್ರಖ್ಯಾತ ಋಷಿ. ಯೋಗಕ್ಕೆ ಪತಂಜಲಿ ಮಹರ್ಷಿಗಳ ಕೊಡುಗೆ ಅಪಾರ.  ಪತಂಜಲಿ ಮಹರ್ಷಿಗಳು ಪ್ರಾಚೀನ ಕಾಲದಿಂದಲೂ ಭಾರತೀಯ ಜನಜೀವನದ ಭಾಗವಾಗಿದ್ದ ಯೋಗವನ್ನು ‘ಯೋಗಸೂತ್ರ’ ಗ್ರಂಥದ ಮೂಲಕ ಅಚ್ಚುಕಟ್ಟಾಗಿ ಪ್ರಪಂಚಕ್ಕೆ ಪರಿಚಯಿಸಿದವರು. ಪತಂಜಲಿಯ ಯೋಗ ಸೂತ್ರಗಳು ನೈತಿಕ ಮಾರ್ಗಸೂಚಿ, ಧ್ಯಾನ ಮತ್ತು ಆಧ್ಯಾತ್ಮಿಕ ಗುರಿಗಳನ್ನು ಒಳಗೊಂಡಿದೆ. ಪತಂಜಲಿ ಮಹರ್ಷಿಯ ಈ ಕಾರ್ಯವು ಭಾರತದ ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಅಭ್ಯಾಸಗಳ ಮೇಲೆ ಮಹತ್ವದ ಪ್ರಭಾವ ಬೀರಿದೆ.


ಅಷ್ಟಾಂಗಗಳು ಯೋಗ
ಈ ಅಷ್ಟಾಂಗ ಯೋಗವು ಪತಂಜಲಿ ಮಹರ್ಷಿ ಯೋಗ ಸೂತ್ರದಲ್ಲಿ ಬರುತ್ತದೆ. ಅಷ್ಟಾಂಗ ಯೋಗವು ಯಮ, ನಿಯಮ, ಆಸನ, ಪ್ರಾಣಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಈ ಎಂಟು ಅಂಗಗಳನ್ನು ಹೊಂದಿದೆ.


ಜೂನ್‌ 21ಕ್ಕೆ ಯೋಗ ಆಚರಣೆ ಮಾಡುವುದೇಕೆ?
ಈ ದಿನ ಯೋಗ ದಿನವನ್ನು ಆಚರಿಸುವುದಕ್ಕೆ ವಿಶೇಷ ಕಾರಣವಿದೆ. ಜೂನ್‌ 21ರಂದು ದೀರ್ಘವಾದಿ ದಿನವೆಂದು ಪರಿಗಣಿಸಲಾಗಿದೆ. ಈ ದಿನವು ಉತ್ತರ ಗೋಳಾರ್ಧದಲ್ಲಿ ಸೂರ್ಯನ ಬೆಳಕು ಅತ್ಯಂತ ದೀರ್ಘಕಾಲ ಇರುತ್ತದೆ. ನಂತರ ಸೂರ್ಯನು ದಕ್ಷಿಣಾಯಣವನ್ನು ಪ್ರವೇಶಿಸುತ್ತಾನೆ. ಈ ಕಾರಣಕ್ಕಾಗಿ ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ.


ಯೋಗ ಎಂದರೇನು?
ಯೋಗವೆಂದರೆ ಬರಿ ಆಸನಗಳನ್ನು ಮಾಡುವುದು ಅಷ್ಟೇ ಅಲ್ಲ, ಅದು ದೇಹ, ಮನಸ್ಸಿನ ಆತ್ಮ ಮತ್ತು ಪರಮಾತ್ಮಗಳ ಸೇರುವಿಕೆಯಾಗಿದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ಯೋಗ ಎಂಬುದು ಸಂಸ್ಕೃತ ಭಾಷೆಯ ‘ಯುಜ್ ಎಂಬ ಪದದಿಂದ ಬಂದಿದೆ. ಇದರರ್ಥ ಐಕ್ಯವಾಗು, ಸೇರು, ಒಟ್ಟುಗೂಡು ಎಂಬುದಾಗಿದೆ.


ಇತಿಹಾಸ
ಸೆಪ್ಟೆಂಬರ್ 27, 2014 ರಂದು ಯುನೈಟೆಡ್‌ ನೇಷನ್ಸ್‌ ಅಸೆಂಬ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನದ ಕುರಿತು ಪ್ರಸ್ತಾಪ ಮಾಡಿದರು. ಈ ಪ್ರಸ್ತಾವನೆಗೆ 175 ಸದಸ್ಯ ರಾಷ್ಟ್ರಗಳಿಂದಲೂ ಅನುಮೋದನೆ ಸಿಕ್ಕಿತು. ಇದನ್ನು ಡಿಸೆಂಬರ್ 11, 2014 ರಂದು ವಿಶ್ವಸಂಸ್ಥೆಯು ಅಂಗೀಕರಿಸಿತು. ಬಳಿಕ ಜೂನ್ 21, 2015 ರಂದು ಮೊದಲ ಬಾರಿಗೆ ಅಧಿಕೃತವಾಗಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಇದರಲ್ಲಿ 190 ಕ್ಕೂ ಹೆಚ್ಚು ದೇಶಗಳು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಅಂದಿನಿಂದ ಪ್ರತಿ ವರ್ಷ ಜೂನ್ 21 ರಂದು ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸಿಕೊಂಡು ಬರಲಾಗಿದೆ.

ಮಹತ್ವ
• ಯೋಗದ ಬಗ್ಗೆ ಜನರಿಗೆ ಈ ದಿನದ ಮೂಲಕ ಜಾಗೃತಿ ಮೂಡಿಸಲು ಸಹಾಯಕವಾಗಿದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಲಾಗುತ್ತದೆ.
• ಯೋಗವು ಸಾರ್ವತ್ರಿಕ ಅಭ್ಯಾಸವಾಗಿದ್ದು, ಇದನ್ನು ಎಲ್ಲಾ ವಯಸ್ಸಿನ ಮತ್ತು ಸಾಮರ್ಥ್ಯಗಳ ಜನರು ಕೂಡ ಮಾಡಬಹುದಾಗಿದೆ. ಪ್ರತಿಯೊಬ್ಬರ ಯೋಗಕ್ಷೇಮಕ್ಕಾಗಿ ಯೋಗದ ಹಲವಾರು ಪ್ರಯೋಜನಗಳನ್ನು ತಿಳಿಸಲು ಸೂಕ್ತವಾಗಿದೆ.
• ಯೋಗ ಅಭ್ಯಾಸ ಮಾಡುವುದರಿಂದ ಜನರು ತಮ್ಮ ಜೀವನವನ್ನು ಸುಧಾರಿಸುವ ಸಾಮರ್ಥ್ಯವನ್ನು ಅನ್ವೇಷಿಸಲು ಈ ದಿನ ಪ್ರೋತ್ಸಾಹಿಸಲಾಗುತ್ತದೆ.
• ಅಂತಾರಾಷ್ಟ್ರೀಯ ಯೋಗ ದಿನವು ಜಾಗತಿಕ ಏಕತೆ ಮತ್ತು ಸಾಂಸ್ಕೃತಿಕ ವಿನಿಮಯದ ಪ್ರಜ್ಞೆಯನ್ನು ಬೆಳೆಸುತ್ತದೆ. ವಿವಿಧ ರಾಷ್ಟ್ರಗಳ ಜನರು ಯೋಗವನ್ನು ಆಚರಿಸುವ ಸಲುವಾಗಿ ಒಟ್ಟುಗೂಡ ಈ ದಿನ ಸೂಕ್ತವಾಗಿದೆ.
• ಅಂತಾರಾಷ್ಟ್ರೀಯ ಯೋಗ ದಿನವು ಜಾಗತಿಕ ಸ್ವಾಸ್ಥ್ಯವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ.
• ಈ ಸಂಪ್ರದಾಯವನ್ನು ಗೌರವಿಸುವ ಮತ್ತು ಅದನ್ನು ವಿಶ್ವದೊಂದಿಗೆ ಹಂಚಿಕೊಳ್ಳಲು ಈ ದಿನವು ಸಹಾಯವಾಗಿದೆ.
• ನಮ್ಮ ಜೀವನದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಂಡುಕೊಳ್ಳಲು ನಮಗೆ ಸಹಾಯ ಮಾಡುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.