ಸುಲಕ್ಷಣಾ ಶರ್ಮಾ, ಪತ್ರಿಕೋದ್ಯಮ ವಿದ್ಯಾರ್ಥಿನಿ, ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು.

ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಶತಮಾನಗಳ ಇತಿಹಾಸವಿದೆ. ಈ ಸಮರಯಜ್ಞದ ಇತಿಹಾಸದಲ್ಲಿ ಸಮಿಧೆಯಾಗಿ ಉರಿದ ಅನೇಕರು ಚರಿತ್ರೆಯ ಪುಟಗಳಲ್ಲಿ ದಾಖಲಾಗದಿದ್ದರೂ, ಅವರ ಬಲಿದಾನ, ಸ್ವಾತಂತ್ರ್ಯಕ್ಕಾಗಿ ಬದುಕು ಸವೆಸಿದ ರೀತಿ ಸ್ಮರಣಾರ್ಹ.  ಪರಕೀಯರ ಆಡಳಿತದಲ್ಲಿ ಜನಜೀವನ ಅತಂತ್ರವಾದಾಗ ಸ್ವಾತಂತ್ರ್ಯ ಸಮರ ಸೇನಾನಿಗಳು ತಮ್ಮ ನರನಾಡಿಗಳಲ್ಲಿ ಹರಿಯುತ್ತಿದ್ದ ಕ್ಷಾತ್ರ ಧರ್ಮದ ರಕ್ತವನ್ನು ತಾಯಿ ಭಾರತಿಗೆ ಅರ್ಪಣೆ ಮಾಡುತ್ತಾರೆ. ಅಂತಹ ವೀರರಲ್ಲಿ ಬಿರ್ಸಾ ಮುಂಡಾ ಕೂಡಾ ಒಬ್ಬರು.

ಅದು ಬಂಗಾಳ ಪ್ರಾಂತ್ಯದ (ಇಂದಿನ ಜಾರ್ಖಂಡ್) ಛೋಟಾ ನಾಗ್ಪುರ ಪ್ರದೇಶದಲ್ಲಿ ಪ್ರಕೃತಿಯ ಮಡಿಲ ಮಕ್ಕಳಂತೆ ಬದುಕುತ್ತಿದ್ದ
ಮುಂಡಾ ಬುಡಕಟ್ಟು ಸಮುದಾಯ ! ತಮ್ಮದೇ ಸಂಸ್ಕೃತಿಯ ಅನುಗುಣವಾಗಿ ಅರಣ್ಯ ಪ್ರದೇಶದಲ್ಲಿ ಸ್ವಚ್ಛಂದವಾಗಿ ಜೀವನ ನಡೆಸುತ್ತಿದ್ದ ಅವರ ಜೀವನದಲ್ಲಿ ಹಸ್ತಕ್ಷೇಪ ಮಾಡಿ ಮೂಲಭೂತ ಹಕ್ಕುಗಳನ್ನು ಕಸಿಯುವ ಕೆಲಸಕ್ಕೆ ಆಂಗ್ಲರು ಕೈ ಹಾಕಿದ್ದು , ಅವರನ್ನು ಶಸ್ತ್ರಸಜ್ಜಿತರಾಗಿ ಆಂಗ್ಲರ ವಿರುದ್ಧ ಹೋರಾಟ ಮಾಡುವಂತೆ ಪ್ರೇರೇಪಿಸಿತು.

‘ಸ್ವಾತಂತ್ರ್ಯವು ಪ್ರತಿಯೊಬ್ಬನ ಹಕ್ಕು’ ಎಂಬುದನ್ನು ತಮ್ಮ ಜೊತೆಗಿರುವವರಿಗೆ ಮನವರಿಕೆ ಮಾಡಿ, ಬ್ರಿಟಿಷರ ವಿರುದ್ಧ ಬುಡಕಟ್ಟು ಸಮುದಾಯವನ್ನು ಸಜ್ಜುಗೊಳಿಸುವಲ್ಲಿ ಮತ್ತು ಆದಿವಾಸಿಗಳ ಭೂಮಿಯ ಹಕ್ಕುಗಳನ್ನು ರಕ್ಷಿಸುವ ಕಾನೂನುಗಳು ಬರುವಂತೆ ವಸಾಹತುಶಾಹಿ ಆಡಳಿತದ ಮೇಲೆ ಒತ್ತಡ ತರುವಲ್ಲಿ ಬಿರ್ಸಾ ಪಾತ್ರ ಬಹುದೊಡ್ಡದು.

ಅಂದು ಭಾರತದಲ್ಲಿ ಮತೀಯ ಶಿಕ್ಷಣವನ್ನು ನೀಡಿ ಭಾರತೀಯರನ್ನು ಬೌದ್ಧಿಕ ದಾಸ್ಯರನ್ನಾಗಿ ಮಾಡುವ ಕೆಲಸವನ್ನು ಅದಾಗಲೇ ಕ್ರೈಸ್ತ ಮಿಷನರಿಗಳು ಆರಂಭಿಸಿ ಆಗಿತ್ತು. ಮುಂಡಾ  ಜನರಿಗೆ ಶಿಕ್ಷಣ ನೀಡುವ ನೆಪದಲ್ಲಿ ಮತಾಂತರ ಮಾಡಲಾಗಿತ್ತು. ಆರಂಭದಲ್ಲಿ ಶಿಕ್ಷಣವನ್ನು ಪಡೆಯುವ ಆಸೆಯಿಂದ ಬಿರ್ಸಾ ಕೂಡಾ ಜರ್ಮನ್ ಮಿಷನರಿ ಶಾಲೆಗೆ ಸೇರಿದ್ದಲ್ಲದೆ ಮತಾಂತರ ಆಗಿದ್ದನು. ಶಾಲೆಗೆ ಹೋಗಲು ಶುರು ಮಾಡಿದ ಮೇಲೆ ಬಿರ್ಸಾ ಮುಂಡಾ ಹೆಸರು ಬಿಸ್ರಾ ಡೇವಿಡ್ ಎಂದು ಬದಲಾಯಿತು. ನಂತರದ ದಿನಗಳಲ್ಲಿ ಅದು ಬಿಸ್ರಾ ಡೌಡ್ ಎಂದಾಯಿತು.

ಅದೇ ಸಂದರ್ಭದಲ್ಲಿ ಅರಣ್ಯ ಭೂಮಿಗಳ ಮೇಲೆ ನಿಯಂತ್ರಣ ಸ್ಥಾಪಿಸಿ ಬಳಸಿಕೊಳ್ಳುವುದಕ್ಕೆ ಮುಂದಾದ ಆಂಗ್ಲರು, ಸ್ಥಳೀಯ ಜಮೀನ್ದಾರರೊಂದಿಗೆ ಮೈತ್ರಿ ಮಾಡಿಕೊಂಡು ತಮ್ಮ ಕೆಲಸ ಸಾಧಿಸತೊಡಗಿದ್ದರು. ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದ ಮುಂಡಾ ಜನರಿಗೆ ಆಂಗ್ಲರ ಹಸ್ತಕ್ಷೇಪ ಕಿರಿಕಿರಿ ಉಂಟು ಮಾಡಿತು.

ಬ್ರಿಟಿಷರು ಕ್ರೈಸ್ತ ಮಿಷನರಿಗಳನ್ನು ಬಳಸಿ ಬುಡಕಟ್ಟು ಜನರನ್ನು ಮತಾಂತರ ಮಾಡುತ್ತಿರುವುದು ಬಿರ್ಸಾ ಮುಂಡಾಗೆ ಬಹಳ ಬೇಗ ಅರಿವಿಗೆ ಬರುತ್ತದೆ. ಮತ್ತೆ ಕ್ರೈಸ್ತ ಮತವನ್ನು ತೊರೆದು , ತಮ್ಮ ಸಾಂಪ್ರದಾಯಿಕ ಸಂಸ್ಕೃತಿಗೆ ಮರಳುತ್ತಾರೆ.

ಮರಳಿ ಗೂಡಿಗೆ ಬಂದ ಬಿರ್ಸಾ ‘ಬಿರ್ಸಾಯತ್’ ಎಂಬ ಪಂಥದ ಮೂಲಕ ಬುಡಕಟ್ಟು ಜನರನ್ನು ಒಗ್ಗೂಡಿಸತೊಡುತ್ತಾರೆ. ಅದೂ ಅಲ್ಲದೆ  ವಸಾಹತುಶಾಹಿ ಆಳ್ವಿಕೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಆಂಗ್ಲರು ಮತ್ತು ಜಮೀನ್ದಾರರು ಅಮಾಯಕ ಜನರ ಮೇಲೆ ತೆರಿಗೆ ಹೇರುತ್ತಿದ್ದುದು ಬಿರ್ಸಾ ಮುಂಡಾರನ್ನು ಹೋರಾಟಕ್ಕೆ ಇಳಿಯುವಂತೆ ಮಾಡಿತು.


‘ಅಬುವಾ ರಾಜ್ ಸೆಟರ್ ಜಾನಾ, ಮಹಾರಾಣಿ ರಾಜ್ ತುಂಟು ಜಾನಾ’ (ಮೊದಲು ರಾಣಿ ಆಳ್ವಿಕೆ ನಿಲ್ಲಲಿ, ನಮ್ಮ ಆಳ್ವಿಕೆ ಬರಲಿ) ಎಂಬ ಘೋಷಣೆಯೊಂದಿಗೆ  ಬಿರ್ಸಾ ಮುಂಡಾ ಪರಕೀಯರ ವಿರುದ್ಧ ಹೋರಾಟ ಮಾಡುತ್ತಾರೆ.


     ಆರಂಭದಲ್ಲಿ ಚಿಕ್ಕ ಸೇನೆಯನ್ನು ಕಟ್ಟಿ ಗೆರಿಲ್ಲಾ ಮಾದರಿಯಲ್ಲಿ ಆಂಗ್ಲ ವ್ಯಾಪಾರಿಗಳ ಮೇಲೆ, ಪೋಲೀಸ್ ಠಾಣೆಗಳ ಮೇಲೆ ದಾಳಿ ಮಾಡಿ ಆಂಗ್ಲ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾದ ಬಿರ್ಸಾ ಮುಂಡಾ 1899ರ ಉಲ್ಗುಲನ್ ಚಳುವಳಿಯು ಮೂಲಕ ಸ್ಥಳೀಯ ಜಮೀನ್ದಾರರಿಗೆ  ಕಡಿಮೆಯಾಗದ ತಲೆನೋವಾಗಿ ಉಳಿದು ಬಿಡುತ್ತಾರೆ. ಮುಂಡಾ ಜನರು ತಮ್ಮ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಕೆಲಸ ಮಾಡಿದ ಬಿರ್ಸಾ ಮುಂಡಾರನ್ನು ‘ಧರತೀ ಅಬಾ’ (ಭೂಮಿಯ ತಂದೆ) ಎಂದು ಕರೆದು ಕೊಂಡಾಡಿದರು.


1900ರ ಹೊತ್ತಿಗೆ ಮುಂಡಾ ಜನರ ಹೋರಾಟದ ಗಂಭೀರತೆಯನ್ನರಿತ ಬ್ರಿಟಿಷ್ ಸರ್ಕಾರ ಬಿರ್ಸಾ ಮುಂಡಾರನ್ನು ಬಂಧಿಸಬೇಕು ಎಂದು ನಿರ್ಧರಿಸುತ್ತದೆ.  ಸತತ ಕಾರ್ಯಾಚರಣೆಗಳ ಮೂಲಕ ಬಿರ್ಸಾ ಮುಂಡಾರನ್ನು ಬಂಧಿಸಿದ ಸರ್ಕಾರ ಕೆಲದಿನಗಳಲ್ಲೇ ಅವರು ಜೈಲಿನಲ್ಲಿ ಸಾವನ್ನಪ್ಪುತ್ತಾರೆ. ಅಂದು ಬಿರ್ಸಾ ವಯಸ್ಸು ಬರೀ 25 ವರ್ಷಗಳು! ಕಾಯಿಲೆಯೇ ಸಾವಿಗೆ ಕಾರಣ ಎಂದು ಬ್ರಿಟಿಷರು ಹೇಳಿದರಾದರೂ, ಇಂದಿಗೂ ಅದನ್ನು  ಮುಂಡಾ ಜನಾಂಗ ಒಪ್ಪಿಕೊಳ್ಳುವುದಿಲ್ಲ. ಹೇಗೂ ಸುಳ್ಳುಗಳನ್ನು ಹೇಳಿ ಆಡಳಿತವನ್ನು ಸ್ವಾಧೀನಪಡಿಸಿದ ಬಿಳಿ ಮೂತಿಯ ಮೋಸಗಾರರು! ಅಂದು ಕೋರ್ಟ್ ಕಟಕಟೆಯಲ್ಲಿ ನಿಂತು ಕೇಳಿದರೂ ನ್ಯಾಯ ಸಿಗುವ ಅವಕಾಶವೇ ಇರಲಿಲ್ಲ, ಯಾಕೆಂದರೆ ನ್ಯಾಯ ಒದಗಿಸಬೇಕಾದವರು ತಮಗೆ ಬೇಕಾದಂತೆ ಕಾನೂನುಗಳನ್ನು ಬದಲಿಸಿ, ಜನರ ಜೀವನದ ಜೊತೆ ಆಟವಾಡಿ ಮಜಾ ತೆಗೆದುಕೊಳ್ಳುತ್ತಿದ್ದರು. ಯಾವುದೇ ಕ್ರೌರ್ಯ ಮಾಡಲು ಹೇಸದವರ ಕೈಯಲ್ಲಿ ಅಂದು ರಾಜಕೀಯ ಮತ್ತು ನ್ಯಾಯಿಕ ಬಲವಿತ್ತು. ಅಧಿಕಾರದ ದುರುಪಯೋಗದ ಪರಮಾವಧಿ ಅಂದಿನ ಭಾರತ ಕಂಡಿತ್ತು ಎಂದರೆ ಉತ್ಪ್ರೇಕ್ಷೆಯಾಗದು.


     ತಮ್ಮ ಅಸ್ಮಿತೆಯನ್ನು ಎತ್ತಿ ಹಿಡಿದು  ತಮ್ಮ ಜನರ ಹಕ್ಕುಗಳಿಗಾಗಿ ಹೋರಾಡಿದ ಬಿರ್ಸಾ ಮುಂಡಾ, ಇವತ್ತಿಗೂ ಮುಂಡಾ ಜನರ
ಸಾಂಸ್ಕೃತಿಕ ಕಥನಗಳಲ್ಲಿ ‘ಧರತೀ ಅಬಾ’ ಆಗಿ ಉಳಿದಿದ್ದಾರೆ. ಭಾರತೀಯ ಸಂಸ್ಕೃತಿಗೆ ಬುಡಕಟ್ಟು ಸಮುದಾಯಗಳ ಕೊಡುಗೆಗಳನ್ನು ಸ್ಮರಿಸುವ ದಿನವಾಗಿ ಬಿರ್ಸಾ ಮುಂಡಾ ಜನ್ಮದಿನವನ್ನು (ನವೆಂಬರ್ 15) ಕೇಂದ್ರ ಸರ್ಕಾರವು ‘ಜನಜಾತೀಯ ಗೌರವ್ ದಿವಸ್’ ಎಂದು ಆಚರಿಸುತ್ತದೆ.


     ಮಿಷನರಿ ಶಾಲೆಯಲ್ಲಿ ಶಿಕ್ಷಣವನ್ನು ಪಡೆದು ಬ್ರಿಟಿಷರು ತೋಡಿದ ಖೆಡ್ಡಾದಲ್ಲಿ ಬೀಳದೆ, ಸ್ವಾಭಿಮಾನಿಯಾಗಿ ತಮ್ಮ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ ಬಿರ್ಸಾ ಮುಂಡಾ ಅವರನ್ನು ಸ್ಮರಿಸಿದರೆ , ಆ ಕ್ಷಾತ್ರ ಚೇತನದ ಬಲಿದಾನಕ್ಕೆ ಅಲ್ಪವಾದರೂ ನ್ಯಾಯ ಒದಗಿಸಿದಂತಾಗುವುದು.

Leave a Reply

Your email address will not be published.

This site uses Akismet to reduce spam. Learn how your comment data is processed.