ಇಂದು ಪುಣ್ಯಸ್ಮರಣೆ
ಜನರನಾಯಕ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ಜಯಪ್ರಕಾಶ್ ನಾರಾಯಣ ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯ ಹೋರಾಟಗಾರ, ಚಿಂತಕ, ದೇಶಪ್ರೇಮಿ, ರಾಜಕೀಯ ನಾಯಕ. ಅವರು ಅನ್ಯಾಯದ ವಿರುದ್ಧ ನಿರಂತರವಾಗಿ ಹೋರಾಡಿದವರು. ಅಷ್ಟೇ ಅಲ್ಲದೆ ಅವರು ಮಹಾತ್ಮ ಗಾಂಧೀಜಿ ಅವರ ತತ್ತ್ವಗಳಿಂದ ಪ್ರಭಾವಿತರಾದವರು. ಇಂದು ಅವರ ಪುಣ್ಯಸ್ಮರಣೆ.
ಪರಿಚಯ
ಜಯಪ್ರಕಾಶ್ ನಾರಾಯಣ ಅವರು 11 ಅಕ್ಟೋಬರ್ 1902ರಂದು ಬಿಹಾರದ ಸಿತಾಬ್ ದಿಯಾರಾದಲ್ಲಿ ಜನಿಸಿದರು. ಇವರ ತಂದೆ ಹರ್ಸು ದಯಾಲ್ ಹಾಗೂ ತಾಯಿ ರಾಣಿ ದೇವಿ. ಜಯಪ್ರಕಾಶ್ ನಾರಾಯಣ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನ ಹಳ್ಳಿಯಲ್ಲಿ ಮುಗಿಸಿದರು. ನಂತರ ಪ್ರೌಢಶಿಕ್ಷಣವನ್ನು ಪಾಟ್ನದ ಕೊಲಿಜಿಯೇಟ್ ಶಾಲೆಯಲ್ಲಿ ಮುಗಿಸಿ ಪಾಟ್ನದ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿ ಪಡೆದರು. ಅವರು ಓದುತ್ತಿರುವಾಗ ಗಾಂಧೀಜಿ ಅವರ ಅಸಹಕಾರ ಚಳವಳಿಯಿಂದ ಪ್ರಭಾವಿತಗೊಂಡು ಕಾಲೇಜನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೋರಾಟದಲ್ಲಿ ಭಾಗವಹಿಸಿದರು. ನಂತರ ಬಿಹಾರಕ್ಕೆ ಬಂದು ವಿದ್ಯಾಪೀಠಕ್ಕೆ ಸೇರಿಕೊಂಡರು.
ಅಮೇರಿಕದಿಂದ ಮರಳಿದ ಜಯಪ್ರಕಾಶ್ ನಾರಾಯಣರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಸ್ವಲ್ಪ ಸಮಯದ ನಂತರ ಅವರಿಗೆ ನೆಹರೂ ಅವರ ಪರಿಚಯವಾಗುತ್ತದೆ. ನೆಹರೂ ಸೂಚಿಸಿದಂತೆ ಕಾಂಗ್ರೆಸ್ಸಿನ ಕಾರ್ಮಿಕ ಶಾಖೆಯ ನೇತೃತ್ವ ವಹಿಸಲು ಒಪ್ಪಿಕೊಂಡರು. ಆಗ ಅವರಿಗೆ ಗಾಂಧೀಜಿಯವರೊಂದಿಗೆ ಸಂಪರ್ಕ ಹೆಚ್ಚಾಗ ತೊಡಗಿತ್ತು. ಆಚಾರ್ಯ ನರೇಂದ್ರದೇವರ ಸಹಕಾರ ಪಡೆದು ಜಯಪ್ರಕಾಶ್ ನಾರಾಯಣರು ಅಖಿಲ ಭಾರತೀಯ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು.
ಜಯಪ್ರಕಾಶ್ ನಾರಾಯಣ ಅವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ನಾಸಿಕ್ ಜೈಲಿನಲ್ಲಿ ಬಂಧಿಸಲಾಯಿತು. ಅಲ್ಲಿ ಅವರು ರಾಮಮನೋಹರ ಲೋಹಿಯಾ , ಮಿನೂ ಮಸಾನಿ , ಅಚ್ಯುತ್ ಪಟವರ್ಧನ್ , ಅಶೋಕ ಮೆಹ್ತಾ , ಬಸವನ್ ಸಿಂಗ್ , ಯೂಸುಫ್ ದೇಸಾಯಿ, ಸಿಕೆ ನಾರಾಯಣಸ್ವಾಮಿ ಮತ್ತು ಇತರ ರಾಷ್ಟ್ರೀಯ ನಾಯಕರನ್ನು ಭೇಟಿಯಾದರು. ಕೆಲ ಸಮಯದ ನಂತರ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಯಿತು. 1948ರಲ್ಲಿ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದರು ಮತ್ತು 1952ರಲ್ಲಿ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಅವರು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
ಸ್ವಾತಂತ್ರ್ಯ ಹೋರಾಟ
ಜಯಪ್ರಕಾಶ್ ನಾರಾಯಣ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಅವರು ನಾಗರಿಕ ಅಸಹಕಾರ ಚಳವಳಿ ಮತ್ತು ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಬ್ರಿಟಿಷ್ ಪರವಾಗಿ ಎರಡನೇ ಮಹಾಯದ್ಧದಲ್ಲಿ ಭಾರತೀಯರು ಭಾಗವಹಿಸುವಿಕೆಯನ್ನು ವಿರೋಧಿಸಿದ್ದಕ್ಕಾಗಿ ಅವರನ್ನು ಜೈಲಿನಲ್ಲಿರಿಸಲಾಯಿತು. ಅವರು ಹಲವಾರು ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ನಂತರ ಬಿಡುಗಡೆಗೊಳಿಸಲಾಯಿತು.
ತುರ್ತುಪರಿಸ್ಥಿತಿ
ಭಾರತ ಸ್ವಾತಂತ್ರ್ಯಪಡೆದ ನಂತರ ಕಾಂಗ್ರೆಸ್ ಸರ್ಕಾರದ ಏಕಾಧಿಕಾರದ ವಿರುದ್ದ ಇವರು ಹೋರಾಟ ಆರಂಭಿಸಿದರು. ರಾಜತಂತ್ರ ಪ್ರಬಲವಾಗಿ ಜನತಂತ್ರವನ್ನು ಕಡೆಗಣಿಸಿದ್ದುದನ್ನು ಇವರು ವಿರೋಧಿಸಿದರು. ಸಂಸತ್ತು, ನ್ಯಾಯಾಲಯ, ಆಡಳಿತ ಮೂರು ಸಂವಿಧಾನಬದ್ಧವಾಗಿ ಕೆಲಸಮಾಡುವಂಥ ವಾತಾವರಣ ದೇಶದಲ್ಲಿ ಸೃಷ್ಟಿಯಾಗಬೇಕೆಂದು ಇವರು ಬಯಸಿದರು. 1975ರಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರು ಘೋಷಿಸಿದ ತುರ್ತುಪರಿಸ್ಥಿತಿಯನ್ನು ವಿರೋಧಿಸಿದ ಪ್ರಮುಖ ವ್ಯಕ್ತಿ ಜಯಪ್ರಕಾಶ್ ನಾರಾಯಣ್. ಭಾರತದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವಾಗಿ ಹೊರಹೊಮ್ಮಿದ ಜನತಾ ಪಕ್ಷದ ರಚನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
ಪ್ರಶಸ್ತಿ
ಜಯಪ್ರಕಾಶ್ ನಾರಾಯಣ್ ಅವರಿಗೆ 1965ರಲ್ಲಿ ರೋಮನ್ ಮ್ಯಾಗ್ಸೇಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1999ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಜಯಪ್ರಕಾಶ್ ನಾರಾಯಣ್ ಅವರು ಅಕ್ಟೋಬರ್ 8, 1979 ರಂದು ತಮ್ಮ 76ನೇ ವಯಸ್ಸಿನಲ್ಲಿ ಅನಾರೋಗ್ಯದ ಸಮಸ್ಯೆಯಿಂದ ನಿಧನರಾದರು.