
ಇಂದು ಜಯಂತಿ
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರು ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ್ತಿ. ಇವರು 1857ರ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದವರು. ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ಧೀರ ಮಹಿಳೆ. ಅವರು ಭಾರತದ ಉತ್ತರ ಪ್ರದೇಶದ ಝಾನ್ಸಿಯ ರಾಣಿಯಾಗಿದ್ದರು. ಇಂದು ಅವರ ಜಯಂತಿ.
ಪರಿಚಯ
ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರು ನವೆಂಬರ್ 19, 1828 ರಂದು ವಾರಣಾಸಿಯಲ್ಲಿ ಜನಿಸಿದರು. ಇವರ ತಂದೆ ಮೋರೋಪಂತ್ ತಾಂಬೆ ಹಾಗೂ ತಾಯಿ ಭಾಗೀರಥಿ ಸಾಪ್ರೆ. ಇವರ ಬಾಲ್ಯದ ಹೆಸರು ಮಣಿಕರ್ಣಿಕ. ತಂದೆ ಮೊರೋಪಂತ್ ತಾಂಬೆಯವರು ಪೇಶ್ವೆಯವರ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಲಕ್ಷ್ಮೀಬಾಯಿ 4 ವರ್ಷದವರಾಗಿರುವಾಗ ಅವರ ತಾಯಿ ಮರಣಹೊಂದಿದರು. ಹೀಗಾಗಿ ಮಣಿಕರ್ಣಿಕ ಮನೆಯಲ್ಲಿಯೇ ಶಿಕ್ಷಣ ಕಲಿಯಬೇಕಾದ ಪರಿಸ್ಥಿತಿ ಎದುರಾಯಿತು. ಬಾಲ್ಯದಲ್ಲಿಯೇ ಅವರು ಕುದುರೆ ಸವಾರಿ, ಕತ್ತಿವರಸೆ ಮತ್ತು ಮಲ್ಲಕಂಬದ ತರಬೇತಿ ಪಡೆದಿದ್ದರು.
ಮಣಿಕರ್ಣಿಕಳಿಗೆ 14 ವರ್ಷವಿದ್ದಾಗ ಝಾನ್ಸಿಯ ಮಹಾರಾಜ ಬಾಲಗಂಗಾಧರ ರಾವ್ ಅವರನ್ನು ಮದುವೆಯಾದರು. ನಂತರ ಅವರ ಹೆಸರನ್ನು ಲಕ್ಷ್ಮೀಬಾಯಿ ಎಂದು ಬದಲಾಯಿತು. 1851ರಲ್ಲಿ ಲಕ್ಷ್ಮೀಬಾಯಿಯವರು ಗಂಡುಮಗುವಿಗೆ ಜನ್ಮ ನೀಡಿದರು. ಆದರೆ ಆ ಮಗು 4 ತಿಂಗಳು ಇವರುವಾಗಲೇ ನಿಧನಹೊಂದಿತ್ತು. ಆ ಮಗು ಮರಣದ ನಂತರ ಅವರು ದಾಮೋದರ ರಾವ್ ಅವರನ್ನು ದತ್ತು ಪಡೆದರು. ಆದರೆ ತನ್ನ ಮಗನ ಸಾವಿನ ದುಃಖದಿಂದ ಹೊರಬರಲಾರದ ಮಹಾರಾಜ ಬಾಲಗಂಗಾಧರ ರಾವ್ ನವೆಂಬರ್ 21, 1853ರಲ್ಲಿ ಹೃದಯಾಘಾತದಿಂದ ಸಾವಿಗೀಡಾದರು.
ದಾಮೋದರನ್ನು ದತ್ತು ಸ್ವೀಕರಿಸಿದ್ದ ಕಾರಣ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ಡಾಲ್ಹೌಸಿಯು ಅವರಿಗೆ ಪಟ್ಟಾಭಿಷೇಕ ಮಾಡಲು ಬಿಡಲಿಲ್ಲ. ಡಾಲ್ಹೌಸಿಯು ಝಾನ್ಸಿಯ ರಕ್ಷಣೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಜವಾಬ್ಡಾರಿಯೆಂದು ರಾಣಿ ಲಕ್ಷ್ಮೀಬಾಯಿಯವರಿಗೆ 60,000 ರೂ. ಪಿಂಚಣಿ ಹಣವನ್ನು ಕೊಟ್ಟು ಝಾನ್ಸಿಕೋಟೆಯನ್ನು ಬಿಟ್ಟು ಕೊಡಲು ಆಜ್ಞೆ ನೀಡಿದರು. ಆದರೆ ಲಕ್ಷ್ಮೀ ಬಾಯಿ ಇದನ್ನು ತಿರಸ್ಕರಿಸಿದ್ದು, ನಿಮಗೆ ಅಗತ್ಯವಿದ್ದರೆ ಯುದ್ಧಕ್ಕೆ ಸಿದ್ಧರಾಗಿ ಎಂದು ಹೇಳಿದ್ದರು. ಇದಕ್ಕೆ ಪೂರಕವಾಗಿ ತನ್ನ ಸೇನೆಯನ್ನೂ ಸಿದ್ಧಗೊಳಿಸಿಕೊಂಡಿದ್ದರು. ಲಕ್ಷ್ಮೀಬಾಯಿ ಅವರು ತಮ್ಮ ಸ್ನೇಹಿತೆಯರನ್ನು ಸೇರಿಸಿ ಚಿಕ್ಕ ಸೈನ್ಯವನ್ನೂ ಕಟ್ಟಿದರು. ನಂತರ 1857 ರ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಯಿತು.
1857 ರ ಹೋರಾಟ
ಮೇ 10, 1857ರಲ್ಲಿ ಆರಂಭವಾದ ಹೋರಾಟ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ನಡೆದ ರಾಷ್ಟ್ರವ್ಯಾಪಿ ಸಂಘಟಿತ ಹೋರಾಟ ಎಂದು ಹೇಳಬಹುದು. ಸಿಪಾಯಿಗಳು ಉಪಯೋಗಿಸುವ ಕಾಡತೂಸುಗಳಿಗೆ ದನದ ಅಥವಾ ಹಂದಿಯ ಕೊಬ್ಬನ್ನು ಸವರಿದ್ದಾರೆಯೆಂದು ತಿಳಿದು ಬಂದಿದ್ದು ಬ್ರಿಟಿಷರ ವಿರುದ್ಧದ ಹೋರಾಟ ನಡೆಯಲು ಮುಖ್ಯಕಾರಣವಾಯಿತು.
ಜನವರಿ 1858ರವರೆಗೆ ಝಾನ್ಸಿ ಲಕ್ಷ್ಮೀಬಾಯಿ ಆಳ್ವಿಕೆಯಲ್ಲಿ ಶಾಂತಿಯುತವಾಗಿ ನೆಲೆಸಿದರು. ಈ ನಡುವೆ ಲಕ್ಷ್ಮೀಬಾಯಿ ಅವರು ಕೋಟೆಯ ರಕ್ಷಣೆಗಾಗಿ ಬಳಸಲಾಗುವ ಫಿರಂಗಿಗಳನ್ನು ಬಿತ್ತರಿಸಲು ಒಂದು ಫೌಂಡ್ರಿಯನ್ನು ಸ್ಥಾಪಿಸಿದರು. ನಂತರ ಮಾರ್ಚ್ 1858ರಲ್ಲಿ ಸರ್ ಹುಘ್ ರೋಸ್ ಅವರ ನೇತೃತ್ವದ ಸೈನ್ಯವು ಝಾನ್ಸಿಯನ್ನು ಮುತ್ತಿಗೆ ಹಾಕಲು ಮುಂದಾಗಿದ್ದರಿಂದ ರಾಣಿಯವರಿಗೆ ಬ್ರಿಟಿಷರ ಬಗೆಗಿನ ನಿಲುವು ಬದಲಾಯಿತು. ರಾಣಿ ಲಕ್ಷ್ಮೀಬಾಯಿ ಹಾಗೂ ಅವರ ನಿಷ್ಠಾವಂತ ಸೈನಿಕರು ಶರಣಾಗಲು ಒಪ್ಪಲಿಲ್ಲ. 2 ವಾರಗಳವರೆಗೆ ಉಗ್ರ ಹೋರಾಟ ನಡೆಸಿದರು. ರಾಣಿಯು ತನ್ನ ಶಿಶುವನ್ನು ಬೆನ್ನಿನ ಮೇಲೆ ಕಟ್ಟಿಕೊಂಡು ಕುದುರೆ ಮೇಲೆ ಕುಳಿತು ಹೋರಾಡಿದಳು.ನಾಗರಿಕರನ್ನೂ ಬಳಸಿಕೊಂಡು ವೀರಾವೇಶದ ಹೋರಾಟ ನಡೆಸಿದರೂ ಈ ಯುದ್ಧದಲ್ಲಿ ಝಾನ್ಸಿ ಸೋತಿತು. ಇದರ ನಂತರ ಗ್ವಾಲಿಯರ್ ಕೋಟೆಯನ್ನು ರಾಣಿ, ತಾತ್ಯಾಟೋಪೆ ಮತ್ತು ಇತರ ಕೆಲವು ಸೈನಿಕರು ವಶಪಡಿಸಿಕೊಂಡರು. ನಂತರ ಝಾನ್ಸಿ ರಾಣಿಯು ಗ್ವಾಲಿಯರ್ ನ ಮೊರಾರ್ ಗೆ ಹೋದರು. ಜೂನ್ 17, 1858ರಂದು ಗ್ವಾಲಿಯರ್ ನ ಕೋಟಾ-ಕಿ-ಸೆರಾಯ್ ನಲ್ಲಿ ಕ್ಯಾಪ್ಟನ್ ಹೆನೇಜ್ ನೇತೃತ್ವದ ಬ್ರಿಟಿಷ್ ಸ್ಕ್ವಾಡ್ರನ್ ರಾಣಿ ನಿರ್ದೇಶಿಸಿದ ದೊಡ್ಡ ಭಾರತೀಯ ಪಡೆಯನ್ನು ಕಂಡುಹಿಡಿದರು. ನಂತರ ಬ್ರಿಟಿಷ್ ಮತ್ತು ಭಾರತೀಯ ಪಡೆಗಳ ನಡುವೆ ಭೀಕರ ಹೋರಾಟ ನಡೆಯಿತು. ಈ ವೇಳೆ ರಾಣಿಯು ಧೈರ್ಯದಿಂದ ಹೋರಾಡಿದಳು.ಈ ದಾಳಿಯಲ್ಲಿ ಸುಮಾರು 5000 ಭಾರತೀಯ ಸೈನಿಕರು ಕೊಲ್ಲಲ್ಪಟ್ಟರು. ರಾಣಿ ಲಕ್ಷ್ಮೀಬಾಯಿ ಜೂನ್ 18, 858ರಂದು ಗ್ವಾಲಿಯರ್ನಲ್ಲಿ ಯುದ್ಧ ಮಾಡುವಾಗ ತಮ್ಮ 23ನೇ ವಯಸ್ಸಿನಲ್ಲಿ ನಿಧನರಾದರು. ಗ್ವಾಲಿಯರ್ ಅನ್ನು ಬ್ರಿಟಿಷರು ವಶಪಡಿಸಿಕೊಂಡರು.