ಇಂದು ಜಯಂತಿ
ಜಿ.ಪಿ ರಾಜರತ್ನಂ ಅವರು ಕನ್ನಡದ ಲೇಖಕ, ಗೀತೆರಚನಾಕಾರ ಹಾಗೂ ಪ್ರಸಿದ್ಧ ಕವಿ. ಅವರು ಮಕ್ಕಳಿಗಾಗಿ ಕವಿತೆಗಳನ್ನು ರಚಿಸುವಲ್ಲಿ ಹೆಸರುವಾಸಿಯಾಗಿದ್ದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಜಿ.ಪಿ ರಾಜರತ್ನಂ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯ. ಇವರು ನಾಡಿನಾದ್ಯಂತ ಸಾಹಿತ್ಯದ ಕಂಪು ಬೀರಿದವರು. ರಾಜರತ್ನಂ ಇಂಗ್ಲಿಷ್, ಹಿಂದಿ, ಸಂಸ್ಕೃತ, ತೆಲುಗು, ಪಾಳಿ ಭಾಷೆಗಳಲ್ಲಿಯೂ ಪಾಂಡಿತ್ಯ ಪಡೆದಿದ್ದರು.ಇಂದು ಅವರ ಜಯಂತಿ.


ಪರಿಚಯ
ಜಿ.ಪಿ ರಾಜರತ್ನಂ ಅವರು ಡಿಸೆಂಬರ್ 5, 1909 ರಂದು ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಜನಿಸಿದರು. ಅವರ ಪೂರ್ವಜರು ತಮಿಳುನಾಡಿನ ನಾಗಾ ನಗರದ ತಿರುಕ್ಕನಪುರ ಅಗ್ರಹಾರಕ್ಕೆ ಸೇರಿದವರು. ಅವರು 1906 ರಲ್ಲಿ ಕರ್ನಾಟಕದ ಮೈಸೂರಿಗೆ ಬಂದು ನೆಲೆಸಿದರು.


ಜಿ.ಪಿ ರಾಜರತ್ನಂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನ ಹುಟ್ಟೂರಿನಲ್ಲಿ ಮುಗಿಸಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿ ಪಡೆದು, ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಪಡೆದರು. ಮೈಸೂರಿನ ‘ಶಿಶುವಿಹಾರ’ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಅವರ ತಂದೆಯ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಅವರು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಕಡೆ ಒಲವು ಹೊಂದಿದ್ದು, ಸಣ್ಣ ಪುಟ್ಟ ಗೀತೆಗಳನ್ನು ಬರೆಯಲು ಪ್ರಾರಂಭಿಸಿದರು.


ಜಿ.ಪಿ ರಾಜರತ್ನಂ ಅವರು ಮಕ್ಕಳಿಗಾಗಿ ತುತ್ತೂರಿ ಎಂಬ ಗೀತೆಯನ್ನು ರಚಿಸಿದರು. ಅವರು ಬೆಂಗಳೂರಿನಿಂದ ಹೈದರಾಬಾದ್‌ ಗೆ ಕೆಲಸವನ್ನು ಹುಡುಕಿಕೊಂಡು ಹೋಗಿದ್ದರು. ಆದರೆ ಅವರಿಗೆ ಅಲ್ಲಿ ಸಿಕ್ಕ ಕೆಲಸಕ್ಕೆ ತೃಪ್ತಿ ಸಿಗದ ಕಾರಣ ಮತ್ತೆ ಬೆಂಗಳೂರಿಗೆ ವಾಪಸ್‌ ಆಗಿ ಜನಗಣತಿ ವಿಭಾಗದಲ್ಲಿ ಕೆಲಸ ಶುರು ಮಾಡಿದ್ದರು. ನಂತರ ಅವರನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರು ಭೇಟಿ ಮಾಡಿದರು. ಈ ವೇಳೆ ರಾಜರತ್ನಂ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರಿಸುವಂತೆ ಸಲಹೆ ನೀಡಿದ್ದರು.


ಸಾಹಿತ್ಯ ಕ್ಷೇತ್ರ
ಜಿ.ಪಿ ರಾಜರತ್ನಂ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ತೋರಿದ್ದರು. ಚೀನಾದೇಶದ ಬೌದ್ಧ ಯಾತ್ರಿಕರು’, ‘ಧರ್ಮದಾನಿ ಬುದ್ಧ’, ‘ಬುದ್ಧನ ಜಾತಕಗಳು’ ಮುಂತಾದ ಬೌದ್ಧಕೃತಿಗಳನ್ನು ರಚಿಸಿದರು. ‘ಭಗವಾನ್ ಮಹಾವೀರ’, ‘ಶ್ರೀ ಗೋಮಟೇಶ್ವರ ‘, ‘ಮಹಾವೀರರ ಮಾತುಕತೆ’, ‘ಭಗವಾನ್ ಪಾರ್ಶ್ವನಾಥ’, ‘ಜೈನರ ಅರವತ್ತು ಮೂವರು’ ಮೊದಲಾದ ಜೈನ ಸಾಹಿತ್ಯವನ್ನೂ ರಚಿಸಿದರು. ಅಷ್ಟೇ ಅಲ್ಲದೆ ಹನಿಗಳು, ಶಾಂತಿ, ಶ್ರೀ ಗೊಮ್ಮಟೇಶ್ವರ, ಹತ್ತು ವರುಷ, ಶಂಕರನ ಸಾರೋಟು, ನಮ್ಮ ಒಡೆಯರ ಕಥೆಗಳು ಹಾಗೂ ಕಲ್ಲುಸಕ್ಕರೆ, ನೂರು ಪುಟಾಣಿ ಸೇರಿದಂತೆ ಅನೇಕ ಕಥಾಸಂಕಲನಗಳನ್ನು ಬರೆದಿದ್ದಾರೆ. ‘ರತ್ನನ್ ಪದಗಳು’ ಇವರ ಪ್ರಸಿದ್ಧ ಕೃತಿ.

ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಇವರು ರಚಿಸಿದಂತಹ ಕೃತಿಗಳು ಹೆಚ್ಚು ಪ್ರಚಾರಗೊಂಡಿದ್ದವು. ‘ನಮ್ಮ ನಮ್ಮವರು’, ‘ವಿದ್ಯಾರ್ಥಿ ವಿಚಾರ ವಿಲಾಸ’, ‘ಗಂಧದ ಹುಡಿ’, ‘ನಮ್ಮ ಬೇಂದ್ರೆಯವರು’, ‘ಬಾಲ ಸರಸ್ವತಿ’, ‘ಹೂವಿನ ಪೂಜೆ’ ಇತ್ಯಾದಿಗಳು ಇವರ ಕೃತಿಗಳು ಬರವಣಿಗೆ ಮಾತ್ರವಲ್ಲದೆ ಹಳ್ಳಿಹಳ್ಳಿಗೂ ತೆರಳಿ ಭಾಷಣದ ಮೂಲಕ ಸಾಹಿತ್ಯ, ಧರ್ಮ, ನೀತಿ ಇತ್ಯಾದಿಗಳ ಬಗ್ಗೆ ಜನರಿಗೆ ತಿಳಿಸಿಕೊಡುತ್ತಿದ್ದರು. ಜಿ.ಪಿ.ರಾಜರತ್ನಂ, 1976ರಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. 1978ರಲ್ಲಿ ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1979ರಲ್ಲಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.


ಪ್ರಶಸ್ತಿ
ಜಿ.ಪಿ ರಾಜರತ್ನಂ ಅವರ ಸಾಧನೆಗೆ ಅನೇಕ ಪ್ರಶಸ್ತಿಗಳು ಬಂದಿವೆ. 1969ರಲ್ಲೇ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. 1977ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದರು. ರಾಜರತ್ನಂ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


ಜಿ.ಪಿ ರಾಜರತ್ನಂ ಅವರು ಮಾರ್ಚ್ 13‌, 1979 ರಂದು ಹೃದಯಘಾತದಿಂದ ತಮ್ಮ 70ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.