ಕಲ್ಲಡ್ಕ, ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಂಚಕೋಶಾತ್ಮಕ ವಿಕಾಸದ ಕುರಿತು ಯೋಚಿಸಲಾಗಿದೆ. ಮನುಷ್ಯ ಕೇವಲ ಶರೀರವಲ್ಲ. ಅವನಿಗೆ ಶರೀರ, ಬುದ್ಧಿ, ಆತ್ಮವಿದೆ. ಹಾಗಾಗಿ ಈ ಎಲ್ಲದರ ವಿಕಾಸವಾದರೆ, ಸಮಗ್ರ ವಿಕಾಸ ಎಂದು ಕರೆಸಿಕೊಳ್ಳುತ್ತದೆ. ಇದನ್ನು ಈಗ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಜೋಡಿಸಲಾಗಿದೆ. ಆದರೆ ಹಲವು ವರ್ಷಗಳಿಂದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಇದರ ಪ್ರಯತ್ನವಾಗುತ್ತಿದೆ. ನಿಮ್ಮ ಸೌಭಾಗ್ಯ ಸರಿಯಾದ ಶಿಕ್ಷಣ ನಿಮಗೆ ದೊರೆಯುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.
ಅವರು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕೇವಲ ಹೊಟ್ಟೆಪಾಡಿಗಾಗಿಯಲ್ಲ. ಕೇವಲ ಜೀವನೋಪಾಯಕ್ಕೆ ಶಿಕ್ಷಣದ ಅಗತ್ಯವೂ ಇಲ್ಲ. ಶಿಕ್ಷಣ ಬೇಕು ಆದರೆ ಅದರ ಉದ್ದೇಶ ಹೊಟ್ಟೆಪಾಡು ಮಾತ್ರವಲ್ಲ. ಶಿಕ್ಷಣ ಎಷ್ಟು ಸಮರ್ಥವಾಗಿರಬೇಕೆಂದರೆ ಒಬ್ಬ ಶಿಕ್ಷಿತ ವ್ಯಕ್ತಿಯ ಹೊಟ್ಟೆ ತುಂಬಿಸುವುದರ ಜೊತೆಗೆ, ಆತನ ಕುಟುಂಬ ಪಾಲನೆ, ಪೋಷಣೆ ಮಾಡುವಷ್ಟಿರಬೇಕು. ಅಂತಹ ಶಿಕ್ಷಣ ನಿಮಗೆ ಇಲ್ಲಿ ಲಭಿಸುತ್ತಿದೆ. ಕೇವಲ ಪುಸ್ತಕದ ಜ್ಞಾನವಷ್ಟೇ ಅಲ್ಲದೇ ವ್ಯವಹಾರ ಜ್ಞಾನವೂ ಲಭಿಸುತ್ತಿದೆ.ಊಟ ಹೇಗೆ ಮಾಡುವುದಿಂದ ಹಿಡಿದು ಎಲ್ಲವನ್ನೂ ಇಲ್ಲಿ ಕಲಿಸಲಾಗುತ್ತಿದೆ. ಇನ್ಯಾವುದೇ ವಿದ್ಯಾಲಯಗಳಲ್ಲಿ ಇದೆಲ್ಲವನ್ನೂ ಕಲಿಸುವುದಿಲ್ಲ. ಪಂಚಕೋಶಾತ್ಮಕ ವಿಕಾಸಕ್ಕೆ ಬೇಕಾದ ಶಿಕ್ಷಣವನ್ನು ಕೊಡುವ ಸಂಸ್ಥೆಗಳಲ್ಲಿ ನಿಮ್ಮದು ಒಂದು. ಶಿಕ್ಷಣದ ಜೊತೆಗೆ ವಿವೇಕ ಬೇಕು. ಇಲ್ಲಿ ಅದರ ಉಪಯೋಗವಾಗುತ್ತಿದೆ ಎಂದು ನುಡಿದರು.
ವಿದ್ಯೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಬುದ್ಧಿ ಬೇಕು. ಅದಕ್ಕಾಗಿ ಸಂಸ್ಕಾರವಿರಬೇಕು. ವಿದ್ಯಾವಂತ ಮನುಷ್ಯ ಅತಿ ಚತುರನಾಗಿರುತ್ತಾನೆ. ಆದರೆ ಪುಸ್ತಕವನ್ನು ಓದಿದವನು ನಿಜವಾದ ವಿದ್ವಾಂಸನಾಗುವುದಿಲ್ಲ. ಯಾರಿಗೆ ಇಡೀ ಜಗತ್ತನ್ನು ಸ್ನೇಹಮಯಗೊಳಿಸಬಲ್ಲ ವ್ಯಕ್ತಿತ್ವವಜರುತ್ತದೆಯೋ ಅವನು ನಿಜವಾದ ವಿದ್ವಾಂಸ. ವಸುಧೈವ ಕುಟುಂಬಕಂ ಎಂದು ತಿಳಿಸಿದ ನಮ್ಮ ಪರಂಪರೆ ಶಿಕ್ಷಣದ ಕುರಿತು ಇದನ್ನು ತಿಳಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.
ಎಲ್ಲರನ್ನೂ ನಮ್ಮವರೆಂದು ಭಾವಿಸಬೇಕು. ಉಪದ್ರವವನ್ನು ನೀಡುವವರಿಂದ ಬಚಾವಾಗುವುದನ್ನೂ ಕಲಿಯಬೇಕು. ಯಾರ ಬಳಿ ಬಲವಿದೆಯೋ ಅವರಿಗೆ ಗೌರವ ಲಭಿಸುತ್ತದೆ. ಎಲ್ಲರಿಗೂ ಕ್ಷಮೆಯನ್ನು ನೀಡುವವರಾಗಬೇಕು. ಅದರ ಜೊತೆಗೆ ಕ್ಷಮೆಯನ್ನು ನೀಡುವುದು ವೀರರ ಭೂಷಣ ಎನ್ನುವುದನ್ನು ಅರಿತಿರಬೇಕು. ಬಲವಂತರಾಗಬೇಕು. ಆದರೆ ಆ ಬಲದ ಉಪಯೋಗ ದುರ್ಬಲರನ್ನು ರಕ್ಷಿಸುವುದಕ್ಕಾಗಿ ಇರಬೇಕು. ಧನವನ್ನು ಸಂಪಾದಿಸಬೇಕು. ಅದರ ಉಪಯೋಗ ದಾನದಿಂದ ಮಾಡಬೇಕು. ನಮ್ಮ ಅವಶ್ಯಕತೆಗೆ ಎಷ್ಟು ಬೇಕೋ ಅಷ್ಟನ್ನು ಉಳಿಸಿಕೊಂಡು ನಾವು ಯಾವ ಪ್ರಕೃತಿಯಿಂದ, ದೇಶದಿಂದ ಪಡೆದಿದ್ದೆವೋ ಅದಕ್ಕೆ ಮರಳಿಸಬೇಕು. ಅವರನ್ನು ವಿದ್ಯಾವಂತ ಎಂದು ಕರೆಯುತ್ತಾರೆ ಎಂದರು.
ನಾವು ಅಂತಹ ವಿದ್ಯಾವಂತರಾಗಬೇಕು. ಅಂತಹ ಶಿಕ್ಷಣ ಇಲ್ಲಿ ಸಿಗುತ್ತಿದೆ. ನಮ್ಮ ಗುರುವೃಂದ ವಿಚಾರಪೂರ್ವಕ ಉತ್ತಮ ವ್ಯಕ್ತಿಗಳನ್ನು ನಿರ್ಮಿಸುವುದಕ್ಕೆ ಶ್ರಮಿಸುತ್ತಿದ್ದಾರೆ. ಗುರು ಆದವರಿಗೆ ಅವರು ಕಲಿಸಿದ ಶಿಕ್ಷಣವನ್ನು ಅವರ ವಿದ್ಯಾರ್ಥಿಗಳು ಇತರರಿಗೆ ನೀವು ತಿಳಿಸುವುದೇ ಗುರುದಕ್ಷಿಣೆಯಾಗಿರುತ್ತದೆ. ನಾವು ಈ ವಿದ್ಯಾಲಯದಲ್ಲಿ ಓದಿದ್ದೇವೆ. ಒಳ್ಳೆಯ, ಉತ್ತಮ, ಪ್ರವೀಣ ಮನುಷ್ಯರಾಗಬೇಕು. ಇಂದು ನೀವು ನೀಡಿದ ಪ್ರದರ್ಶನದ ಉತ್ಕೃಷ್ಟತೆಯಂತೆ ನಿಮ್ಮ ಜ್ಞಾನವೂ ಉತ್ಕೃಷ್ಟಗೊಳ್ಳಲಿ. ಅದಕ್ಕಾಗಿ ಪ್ರಯತ್ನವನ್ನು ನೀವು ಮಾಡಬೇಕು. ನಿಮ್ಮ ಜ್ಞಾನದ ಉಪಯೋಗವನ್ನು ಸ್ವಾರ್ಥಕ್ಕಾಗಿ ಮಾಡಬಾರದು. ವಿಶ್ವಕ್ಕೆ ಒಳ್ಳೆಯದನ್ನು ಮಾಡುವ ಸಲುವಾಗಿ, ಭಾರತವನ್ನು ಪರಮವೈಭವ ಮಾಡುವುದಕ್ಕಾಗಿ ಶಕ್ತಿಸಂಪನ್ನರಾಗಿ ದೇಶ, ಸಮಾಜ, ಧರ್ಮ, ಸಂಸ್ಕೃತಿಯನ್ನು ರಕ್ಷಿಸುವುದಕ್ಕಾಗಿ, ದುರ್ಬಲರನ್ನು ರಕ್ಷಿಸುವುದಕ್ಕಾಗಿ ಶಿಕ್ಷಣವನ್ನು ಪಡೆಯುತ್ತೇನೆ ಎಂಬ ಧ್ಯೇಯದೊಂದಿಗೆ ಶಿಕ್ಷಣವನ್ನು ಪಡೆಯಬೇಕು ಎಂದು ನಿರ್ಧರಿಸಿದರೆ ನಿಮ್ಮ ವಿದ್ಯಾಲಯದ ಕೀರ್ತಿಯನ್ನು ಅಜರಾಮರ ಗೊಳಿಸುತ್ತೀರಿ. ನಿಮ್ಮ ಗುರುಗಳಿಗೆ ಗುರುದಕ್ಷಿಣೆಯ ಈ ಮೂಲಕ ನೀಡಿ ತೃಪ್ತರನ್ನಾಗಿಸುತ್ತೀರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್, ಆರ್ ಎಸ್ ಎಸ್ ಸಹಸರಕಾರ್ಯವಾಹ ಸಿ.ಆರ್. ಮುಕುಂದ, ಕ್ಷೇತ್ರೀಯ ಸಂಘಚಾಲಕ ಡಾ. ಪಿ. ವಾಮನ್ ಶೆಣೈ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.