* ಶೈಲೇಶ್ ಕುಲಕರ್ಣಿ,ಸಾಫ್ಟ್‌ವೇರ್ ಉದ್ಯೋಗಿಗಳು

1947ರ ನಂತರ ಮತ್ತು 1948ರ ಮೊದಲಲ್ಲಿ ದೇಶದ ಮುಂದಿದ್ದ ಅತ್ಯಂತ ಗುರುತರ ಸವಾಲೆಂದರೆ ದೇಶದಲ್ಲೆಲ್ಲ ಹರಡಿದ್ದ 564 ಸ್ವತಂತ್ರ ಆಳ್ವಿಕೆಯ ಸಂಸ್ಥಾನಗಳನ್ನು ಭಾರತದೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ. ಅಂದಿಗೆ ವಿಶೇಷ ಪರಿಸ್ಥಿತಿಗಳಿಂದ ವಿಲೀನ ಪ್ರಕ್ರಿಯೆಯಿಂದ ಹೊರಗುಳಿದಿದ್ದು 3 ಪ್ರದೇಶಗಳು: ಜಮ್ಮು-ಕಾಶ್ಮೀರ, ಜುನಾಗಢ ಮತ್ತು ಹೈದರಾಬಾದ್. 

ಜಮ್ಮು-ಕಾಶ್ಮೀರದ ವಿಷಯವನ್ನು ಪಂಡಿತ್ ನೆಹರೂ ತಮ್ಮ ವಯುಕ್ತಿಕ ಪ್ರತಿಷ್ಥೆಯ ಸಂಗತಿಯಾಗಿಸಿಕೊಂಡು ಇತ್ತ ಸಮಸ್ಯೆಯನ್ನು ಬಗೆಹರಿಸಲೂ ತಿಳಿಯದೆ ಬೇರೆಯವರಿಗೆ ವಹಿಸುವ ಮನಸ್ಸೂ ಇಲ್ಲದೇ ಮಾಯದ ವೃಣವಾಗಿಸಿದ ಸಂಗತಿ ಸರ್ವವಿದಿತ.

ಸೌರಾಷ್ಟ್ರದ ಜುನಾಗಢದ ದಿವಾನನ ಪಾಕಿಸ್ತಾನ ಪ್ರೇಮ ಮತ್ತು ರಾಜ್ಯದ 90 ಪ್ರತಿಶತ ಹಿಂದು ಜನತೆಯ ಭಾರತದ ಪ್ರೀತಿಯ ಕುರಿತು ಸ್ಪಷ್ಟ ತಿಳಿವಳಿಕೆ ಹೊಂದಿದ್ದ ಸರ್ದಾರ್ ಪಟೇಲರು 1947 ಅಕ್ಟೋಬರ್-ನವೆಂಬರ್ ಸಮಯದಲ್ಲಿ ಭಾರತೀಯ ಸೇನೆಯನ್ನು ಸಂಸ್ಥಾನದ ಬಾಗಿಲಿಗೇ ಕಳಿಸಿದರು. ಆದರೆ ಸೇನೆಗೇಕೆ ಕಷ್ಟ ಎಂದು ದಿವಾನ ಗಂಟುಮೂಟೆ ಕಟ್ಟಿ ಹಿಂದಿನ ರಾತ್ರಿಯೇ ಪಾಕಿಸ್ತಾನಕ್ಕೆ ಓಡಿಹೋಗಿದ್ದ. 1948ರ  ಫೆಬ್ರುವರಿ 20 ರಂದು ನಡೆದ ವಿದ್ಯುಕ್ತ ಜನಾಭಿಪ್ರಾಯ ಸಂಗ್ರಹದಲ್ಲಿ ಅಭೂತಪೂರ್ವ ಬಹುಮತದೊಂದಿಗೆ ಜುನಾಗಢದ ಜನತೆ ಭಾರತದೊಡನೆ ವಿಲೀನವನ್ನು ಅನುಮೋದಿಸಿತು. ನಂತರ ಉಳಿದದ್ದೇ ಹೈದರಾಬಾದ್ನ ಪ್ರಶ್ನೆ.

ಆ ಹೊತ್ತಿಗೆ ಹೈದರಬಾದ್ 82 ,313 ಚದರಮೈಲಿ ವಿಸ್ತಾರದೊಂದಿಗೆ ದೇಶದಲ್ಲೇ ಅತಿದೊಡ್ಡ ಹಾಗು ಶ್ರೀಮಂತ ಸಂಸ್ಥಾನವಾಗಿತ್ತು. ಸ್ವಂತ ಸೇನೆ,ರೇಡಿಯೋ ಮತ್ತು ನಾಣ್ಯ ಚಲಾವಣೆ ಪದ್ಧತಿ, ಪೋಸ್ಟ್ ಸೇವೆ, ಖಾಸಗಿ ರಕ್ಷಕ ಪಡೆಗಳಂತಹ ವ್ಯವಸ್ಥೆಯನ್ನು ಹೊಂದಿದ್ದ ಏಕಮಾತ್ರ ರಾಜ್ಯವಾಗಿತ್ತು. ಭಾರತದ ಇತರೇ ಸಂಸ್ಥಾನಗಳ ರಾಜರು ಇಂಗ್ಲೆಂಡಿನ ರಾಜನ ಅಧೀನ ಸಾಮಂತರಂತಿದ್ದರೆ,  ಹೈದರಾಬಾದ್ ನಿಜಾಮ ಮೀರ್ ಓಸ್ಮಾನ್ ಅಲಿಖಾನನ ಅಂತಸ್ತು ಇಂಗ್ಲೆಂಡಿನ ಸಾಮ್ರಾಟನ ಮಿತ್ರನದಾಗಿತ್ತು. ಹಾಗಾಗಿಯೇ ಬ್ರಿಟಿಷರಿಗೆ ಮಿಕ್ಕ ಸಂಸ್ಥಾನಾಧಿಪತಿಗಳು His Highness ಗಳಾದರೆ ನವಾಬ ಮಾತ್ರ His Exalted Highness ಆಗಿದ್ದ. ಬ್ರಿಟಿಷ್ ಸಾಮ್ರಾಜ್ಯದ ನಂಬಿಕಸ್ಥ ಸ್ನೇಹಿತ (Faithful Ally) ಎಂಬ ಅಭಿದಾನ ಹೊಂದಿದ್ದ ಕಾರಣಕ್ಕೆ ಭಾರತಕ್ಕೆ ಬ್ರಿಟಿಷ್ ಸಾಮ್ರಾಜ್ಯದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬೆಟನ್ನನಿಗೆ  ನವಾಬನ ಹಿತಾಸಕ್ತಿಯ ವಿಷಯದಲ್ಲಿ ವಿಶೇಷ ಕಾಳಜಿಯಿತ್ತು. 

ವಿಲೀನಕ್ಕಾಗಿ ನಿಜಾಮನು ಸರಳಮಾರ್ಗದಲ್ಲಿ ಒಪ್ಪುವ ಸಂಭವ ಕಡಿಮೆಯೇ ಎಂದು ಮೊದಲೇ ಊಹಿಸಿದ್ದ ಪಟೇಲರು ಮೌಂಟ್ ಬೆಟನ್ನನ ಸಂತುಷ್ಟಿಗಾಗಿ ಹೈದ್ರಾಬಾದ್ ಸರ್ಕಾರದೊಂದಿಗೆ 29-11-1947 ರಂದು “ಯಥಾಸ್ಥಿತಿ ಒಪ್ಪಂದ”ಕ್ಕೆ ಸಮ್ಮತಿಸಿದರು. ಒಪ್ಪಂದದ ಪ್ರಕಾರ, ನಿಜಾಮನ ಆಂತರಿಕ ಆಡಳಿತದ ವಿಷಯಗಳ ಹೊರತಾಗಿ ಆತನ ವಿದೇಶವಾರ್ತೆಯನ್ನು ಮಾತ್ರ ಭಾರತ ಸರ್ಕಾರವು ವಹಿಸಿಕೊಳ್ಳುವದೆಂದೂ ಬದಲಿಗೆ ನಿಜಾಮನು ಪಾಕಿಸ್ತಾನವನ್ನು ಸೇರುವದಿಲ್ಲ ಎಂಬ ಆಶ್ವಾಸನೆಯನ್ನೂ ಪಡೆಯಲಾಯಿತು. ಒಪ್ಪಂದದ ಭಾಗವಾಗಿಯೇ ಭಾರತ ಸರ್ಕಾರದ ಏಜಂಟ್ ಜನರಲ್ರಾಗಿ ಕೆ.ಎಂ.ಮುನ್ಷಿಯವರು ಪಟೇಲರಿಂದ ನಿಯುಕ್ತಿಗೊಂಡು ಹೈದರಾಬಾದಿಗೆ ಬಂದಿಳಿದರು.

ಪಟೇಲರ ನಿರೀಕ್ಷೆಯಂತೆಯೇ ಯಥಾಸ್ಥಿತಿ ಒಪ್ಪಂದದ ಕರಾರುಗಳನ್ನು ನಿಜಾಮ್ ಸರ್ಕಾರ ನಿರಂತರ ಉಲ್ಲಂಘಿಸುತ್ತಲೇ ಬಂದಿತು. ವಿದೇಶಗಳಿಂದ ಶಸ್ತ್ರಾಸ್ತ್ರಗಳ ಸಂಗ್ರಹಣೆ, ಆಂತರಿಕ ಸೇನೆಯನ್ನು ಬಲಪಡಿಸುವದು, ಕರಾಚಿಯಲ್ಲಿ ತನ್ನ ಸಂಪರ್ಕಾಧಿಕಾರಿಯನ್ನು ಸ್ಥಾಪಿಸುವದು , ಭಾರತದ ನಾಣ್ಯಗಳನ್ನು ತನ್ನ ರಾಜ್ಯದಲ್ಲಿ ಪ್ರತಿಬಂಧಿಸುವಂತಹ ಅನೇಕ ಭಾರತ ವಿರೋಧಿ ಚಿತಾವಣೆಗಳು ಹೆಚ್ಚುತ್ತಲೇ ಇದ್ದವು. ಭಾರತದ ವಿರುದ್ಧ ಯುದ್ಧಹೂಡಲು ಪಾಕಿಸ್ತಾನಕ್ಕೆ 20 ಕೋಟಿ ರೂಪಾಯಿಗಳ ಸಹಾಯವನ್ನೂ ನಿಜಾಮ್ ನೀಡಿದ್ದ. ನಿಜಾಮನ ಮಹತ್ವಾಕಾಂಕ್ಷೆಗಳಿಗೆ ನೀರೆರೆಯಲು ಮೊಹಮ್ಮದ್ ಅಲಿ ಜಿನ್ನಾನ ಸಲಹೆಯ ಮೇರೆಗೆ ಹೈದರಾಬಾದಿನ ಪ್ರಧಾನಿಯಾಗಿ ನಿಯುಕ್ತಿಗೊಂಡಿದ್ದ ಲಯಿಕ್ ಅಲಿ ಮತ್ತು ರಜಾಕಾರ್ ರೆಂಬ ಮುಸ್ಲಿಂ ಖಾಸಗಿ ರಕ್ಷಣಾಪಡೆ ಹಾಗೂ ಇತ್ತೆಹಾದ್-ಉಲ್-ಮುಸಲ್ಮಿನ್  (ಈಗಿನ ಪ್ರಾದೇಶಿಕ ಪಕ್ಷ AIMIMನ ಮೂಲರೂಪ) ಎಂಬ ಸಂಘಟನೆಯ ಮುಖ್ಯಸ್ಥ ಕಾಸಿಂ ರಜ್ವಿಯ ಬೆಂಬಲವೂ ಇತ್ತು. ಇವರಿಬ್ಬರಿಂದ ಪ್ರೇರಿತನಾದ ನಿಜಾಮ್ ಪಾಕಿಸ್ತಾನದೊಂದಿಗೆ ವಿಲೀನಗೊಳ್ಳುವ ಕನಸುಕಾಣತೊಡಗಿದ್ದ. 

ಪಟೇಲರೊಡನೆ ನಡೆದ ಭೇಟಿಯ ಸಂದರ್ಭದಲ್ಲಿ “ಕಟ್ಟಕಡೆಯ ಮುಸ್ಲಿಮನಿರುವವರೆಗೆ ಭಾರತದ ಒಕ್ಕೂಟದ ವಿರುದ್ಧ ನಾವು ಯುದ್ಧ ಮಾಡುತ್ತೇವೆ” ಎಂಬ ಕಾಸಿಂರಜ್ವಿಯ ಎಚ್ಚರಿಕೆಗೆ ಅಷ್ಟೇ ಸಮಾಧಾನ ಚಿತ್ತರಾಗಿ ಪಟೇಲರು “ನೀವು ಆತ್ಮಹತ್ಯೆಗೇ ಸಂಕಲ್ಪ ಮಾಡಿರುವಾಗ ನಾನು ಹೇಗೆ ನಿವಾರಿಸಲಿ” ಎಂಬ ಪ್ರತ್ಯುತ್ತರದೊಂದಿಗೆ ಕಳುಹಿಸಿಕೊಟ್ಟಿದ್ದರು. 1948ರ ಜೂನ್ 13 ರಂದು ನಿಜಾಮನನ್ನು ರಕ್ಷಿಸುವ ತನ್ನ ಕೊನೆಯ ಪ್ರಯತ್ನವಾಗಿ ಮೌಂಟ್ ಬೆಟನ್, ಭಾರತಸರ್ಕಾರ ಅಪೇಕ್ಷಿಸಿದಲ್ಲಿ ರಕ್ಷಣೆ,ವಿದೇಶಾಂಗ ಮತ್ತು ಸಂಪರ್ಕ ವ್ಯವಸ್ಥೆಗೆ ಸಂಬಂಧಿಸಿದಂತೆ ಕೇಂದ್ರಸರ್ಕಾರ ಬಯಸಿದ ಕಾನೂನುಗಳನ್ನು ನಿಜಾಮ್ ಸರ್ಕಾರ ಜಾರಿಮಾಡಬೇಕು ಎಂಬ ತಾತ್ಪೂರ್ತಿಕ ಒಪ್ಪಂದವೊಂದನ್ನು ಹೈದರಾಬಾದಿಗೆ ಒಪ್ಪಿಸಿದ. ನಿರೀಕ್ಷೆಯಂತೆಯೇ ನಿಜಾಮ್ ಸರ್ಕಾರ ಈ ಕ್ರಮವನ್ನೂ ನಿರಾಕರಿಸುವದರೊಂದಿಗೆ ಮಿಲಿಟರಿ ಕಾರ್ಯಾಚರಣೆಯ ಸಾಧ್ಯತೆ ದಟ್ಟವಾಗತೊಡಗಿತ್ತು.

ಭಾರತದೊಂದಿಗೆ ವಿಲೀನವನ್ನು ವಿರೋಧಿಸಿ ನಿಜಾಮ ವಿಶ್ವಸಂಸ್ಥೆಗೆ ದೂರನ್ನೊಯ್ದ .ಅಮೇರಿಕಾದ ಅಂದಿನ ಅಧ್ಯಕ್ಷರಾಗಿದ್ದ ಹ್ಯಾರಿ ಟ್ರೂಮನ್ ರ ಮಧ್ಯಸ್ತಿಕೆ ಕೋರಿ ಪತ್ರವನ್ನೂ ಬರೆದಿದ್ದ. ಏತನ್ಮಧ್ಯೆ ಹೈದರಾಬಾದಿನ ಜನಜೀವನ ಪೂರ್ತಿ ಹಳಿತಪ್ಪಿತ್ತು.ನಡುರಾತ್ರಿಯಲ್ಲಿ ಪಾಕಿಸ್ತಾನದ ಯುದ್ಧವಿಮಾನಗಳು ಬೀದರ್,ವಾರಂಗಲ್ ಮುಂತಾದೆಡೆ ಇಳಿದು ಶಸ್ತ್ರಾಸ್ತ್ರಗಳನ್ನು,ಯುದ್ಧಸಾಮಗ್ರಿಗಳನ್ನು ರಜಾಕಾರ್ ಪಡೆಗಳಿಗೆ ಒದಗಿಸಿ ಮರಳುತ್ತಿದ್ದವು.ರಜಾಕಾರರು ಮತ್ತು ಕಮ್ಯೂನಿಸ್ಟರ ಮಧ್ಯೆ ದುಷ್ಟಕೂಟವೇರ್ಪಟ್ಟು ಹಿಂದುಗಳ ಮೇಲೆ ದಬ್ಬಾಳಿಕೆ, ಹಿಂಸೆಗಳ ಕಂಡರಿಯದ ಸರಣಿ ತಾಂಡವವಾಡತೊಡಗಿತು. 

ಇಷ್ಟೆಲ್ಲಾ ಘಟನೆಗಳು ನಡೆದಿದ್ದರೂ ಪ್ರಧಾನಿ ನೆಹರು ಮಾತ್ರ 1948 ರ  ಸೆಪ್ಟೆಂಬರ್ 8ರ ಸಂಪುಟ ಸಭೆಯಲ್ಲಿ ನಿಜಾಮ್ ಸರ್ಕಾರದ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ವಿರೋಧಿಸಿದರು ಮತ್ತು ಹಾಗೆ ವಿರೋಧಿಸಿದ ಅಂದಿನ ಸಭೆಯ ಏಕಮಾತ್ರ ಸದಸ್ಯ ಅವರಾಗಿದ್ದರು. ಬಂದ ಕಂಟಕಗಳನ್ನೆಲ್ಲ ಪಟೇಲ್ ಚಾಣಾಕ್ಷತನದಿಂದ ಪರಿಹರಿಸಿ ಸೆಪ್ಟೆಂಬರ್ 13ರ ಬೆಳಿಗ್ಗೆ ಕಾರ್ಯಾಚರಣೆ ಶುರುವಾಗುವಂತೆ ನೋಡಿಕೊಂಡರು. ದೆಹಲಿಯ ಕೆಂಪುಕೋಟೆಯ ಮೇಲೆ ಇಸ್ಲಾಮೀ ಧ್ವಜವನ್ನು ಹಾರಿಸುವ ಕನಸುಕಾಣುತ್ತಿದ್ದ  ರಜಾಕಾರರ ಪಡೆ ಭಾರತೀಯ ಸೈನ್ಯದೆದುರು 5  ದಿನಗಳಲ್ಲೇ ಪತನಕಾಣುವದರೊಂದಿಗೆ ವಿದ್ಯುಕ್ತವಾಗಿ ಸೆಪ್ಟೆಂಬರ್ 17 -1948 ರಲ್ಲಿ ಹೈದರಾಬಾದ್ ಭಾರತದ ಅವಿಭಾಜ್ಯ  ಅಂಗವಾಯಿತು.

ಇಂಥ ದೊಡ್ಡ ಮಟ್ಟದ ಹೋರಾಟ ತ್ಯಾಗ ಬಲಿದಾನಗಳಿಲ್ಲದೆ ಗುರಿಮುಟ್ಟಲು ಸಾಧ್ಯವಿರಲಿಲ್ಲ. ಈ ಗುರಿಯ ಸಾಕಾರಕ್ಕೆಂದೇ ಸ್ವಾತಂತ್ರ್ಯಪ್ರಿಯರು ಬಲಿವೇದಿಗೆ ಕೊರಳೊಡ್ಡಲು ಸಿದ್ಧರಾಗಿಯೂ ಇದ್ದರು . 

ಹುಮನಾಬಾದಿನ ಬಸವೇಶ್ವರರ  ಗುಡಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಮನೆಗೆ ಮರಳುತ್ತಿದ್ದ ಯುವತಿಯೊಬ್ಬಳು ಮತಾಂಧ ರಜಾಕಾರರ ಕೈಯಲ್ಲಿ ಸಿಕ್ಕು ನಡುಬೀದಿಯಲ್ಲೇ  ಮಾನಾಪಹರಣಕ್ಕೆ ಗುರಿಯಾಗುವವಳಿದ್ದಳು. ಅದೇ ಸಮಯಕ್ಕೆ ಆ ದಾರಿಯಲ್ಲಿ ತೆರಳುತ್ತಿದ್ದ ಯುವಕನೊಬ್ಬ ತನ್ನ ಪ್ರಾಣದ ಪಣವಿತ್ತು ಆಕೆಯ ಮಾನವನ್ನು ಕಾಪಾಡಿದ. ಮುಂದೆ ಈ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಬೀದರ್ ಲೋಕಸಭಾ ಸ್ಥಾನವನ್ನು ಪ್ರತಿನಿಧಿಸಿದ್ದ ರಾಮಚಂದ್ರ ವೀರಪ್ಪನವರೇ ಆ ಯುವಕ. 

ಇನ್ನು ಆ ಯುವಕನಿಗೆ ವಿದ್ಯಾದಾನ ಮಾಡಿದ ಗುರುಗಳಾಗಿದ್ದ ಚಿಟಗುಪ್ಪದ ಸಶಸ್ತ್ರ ಹೋರಾಟಗಾರ ಚಂದ್ರಶೇಖರ್ ಶಾಸ್ತ್ರಿಗಳ ಪ್ರಸಂಗವೂ  ಸ್ಮರಣೀಯ. ದೇಶ ಸ್ವಾತಂತ್ರ್ಯಗಳಿಸಿ  ಒಂದು ವರ್ಷತುಂಬಿ ಅದರ ಆಚರಣೆಯ ಸಂದರ್ಭ ಒದಗಿಬಂದು ಇಡೀ ದೇಶವೇ ಸಂಭ್ರಮಿಸುತ್ತಿದ್ದಾಗ ನಿಜಾಮನ ಪಾಶವೀ ಆಳ್ವಿಕೆಯಲ್ಲಿ ಈ ಭಾಗದ ಹಿಂದುಗಳು ಮಾತ್ರ ಸೂತಕದ ಮನೆಯವರಂತೆ ಮಂಕಾಗಿದ್ದರು. ೧೯೪೭ರ  ಮೊದಲ ವಾರದಲ್ಲೇ ನಿಜಾಮ್ ಸರ್ಕಾರ ತ್ರಿವರ್ಣ ಧ್ವಜವನ್ನು ನಿಷೇಧಿಸಿತ್ತು .  ಅಂದಿಗೆ ಜಿಲ್ಲಾ ಕೇಂದ್ರವಾಗಿದ್ದ ಚಿಟಗುಪ್ಪಿಯ ಊರ ಅಗಸಿಯ ಮೇಲೆರಿದ ಚಂದ್ರಶೇಖರ್ ರಜಾಕಾರರ ಕಣ್ತಪ್ಪಿಸಿ ತ್ರಿವರ್ಣ ಧ್ವಜ ಹಾರಿಸಿಯೇ ಬಿಟ್ಟರು.  40-45 ಅಡಿಗಳ  ಎತ್ತರದ ಅಗಸಿಯಿಂದ ಧುಮುಕಿ  ಬೆನ್ನಿಗೆ ಬಿದ್ದ ಸೈನಿಕರ ಕೈಗೆ ಸಿಗದೆ ಕಾಡುಮೇಡುಗಳಲ್ಲಿ ಓಡುತ್ತ  ಕತ್ತಲಲ್ಲಿ ಬೆಲ್ಲದಗಾಣವೊಂದರಲ್ಲಿ ಆಶ್ರಯ ಪಡೆದರು. ಬೆಲ್ಲಕ್ಕೆ ಮುತ್ತಿದ್ದ ಕಂಟಿರುವೆಗಳ ಹುಳಹುಪ್ಪಟೆಗಳ ಕಡಿತವನ್ನು ರಾತ್ರಿಯೆಲ್ಲ ಅವಡುಗಚ್ಚಿ ಸಹಿಸಿ ಬೆಳಕು ಹರಿಯುವುದರೊಳಗೆ ಮುಂದಿನ ಹೋರಾಟಕ್ಕೆ ಸಿದ್ಧರಾಗಿ ತನ್ನ ಆಶ್ರಯದಾತನಿಗೆ ಧನ್ಯವಾದ ತಿಳಿಸಿ ಹೊರಟರು. 

ಇಂಥದ್ದೇ  ಪ್ರಸಂಗಗಳಲ್ಲಿ  ಕನಕಗಿರಿಯಲ್ಲಿ ಜಯತೀರ್ಥ ರಾಜಪುರೋಹಿತ್ ಆಳಂದದ ಎ.ವಿ.ಪಾಟೀಲ್ , ಯಾದಗಿರಿಯ ಕೋಲೂರು ಮಲ್ಲಪ್ಪ, ಚಿತ್ತಾಪುರದ ಬಸಪ್ಪ ಸಜ್ಜನಶೆಟ್ಟಿಯವರಂಥ ಯುವ ಹೋರಾಟಗಾರರು ಸ್ವತಂತ್ರ್ಯ ಭಾರತದ ಧ್ವಜವನ್ನು ಹಾರಿಸುವುದರ ಮೂಲಕ ಹೋರಾಟದ ಕಿಚ್ಚನ್ನು  ಜೀವಂತವಾಗಿರಿಸಿದ್ದರು.  ಸ್ವಾತಂತ್ರ್ಯ ಹೋರಾಟಗಾರರಿಗೆ ಆಶ್ರಯ ಕೊಟ್ಟ ಕಾರಣಕ್ಕೆ ಬೀದರಿನ ಗೋರ್ಟಾಗ್ರಾಮದ 200 ಹಿಂದುಗಳನ್ನು ಒಟ್ಟುಗೂಡಿಸಿದ  ರಜಾಕಾರರು ಗ್ರಾಮದೇವತೆಯ ಸಮ್ಮುಖದಲ್ಲೇ ಸಜೀವ ದಹನ ಮಾಡಿದರು.

ಇಂಥ ಅನೇಕ ಅನಾಮಿಕ ತ್ಯಾಗಿಗಳ ಬಲಿದಾನಿಗಳ ತಪಸ್ಸಿನ ಫಲವಾಗಿ ಈ ಭಾಗ ಇಂದು ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. 

1 thought on “ಕಲ್ಯಾಣ ಕರ್ನಾಟಕ ಮುಕ್ತಿದಿನ – ಸೆಪ್ಟೆಂಬರ್ 17

  1. ವಿಜಾಮಶಾಹಿಯ ದರಾಡಳಿತದ ಕುರಿತಾಗಿ ಸಣ್ಣ ಲೇಖನದಲ್ಲಿಯೇ ಬಹಳಷ್ಟು ವಿಷಯಗಳು ತಿಳಿಸಿದ್ದಾರೆ . ಇಡೀ ದೇಶ ಸ್ವತಂತ್ರ ವಾದರು ನಿಜಾಮ ಆಡಳಿತಕ್ಕೆ ಒಳಪಟ್ಟ ನಾವು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ನಂತರ ಸ್ವಾತಂತ್ರ್ಯವನ್ನು ಪಡೆದೆವು. ಸರ್ದಾರ ಪಟೇಲರ ಲೋಹ ಸಂಕಲ್ಪಮತ್ತು ಇಲ್ಲಿಯ ಸಾವಿರಾರು ಜನ ಸ್ವಾತಂತ್ರ್ಯ ಯೋಧರ ಕಿಚ್ಚು ನಮಗೆ ಸ್ವಾತಂತ್ರ್ಯ ಒದಗಿಸಿತು .ಸಾವಿರಾರು ಅಮಾಯಕರ ನರಮೇಧ,ನುರಾರು ಸ್ವಾತಂತ್ರ್ಯ ಸೈನಿಕರ ಬಲಿದಾನ ವಾಯ್ತು .ಅದೇಷ್ಟೋ ಅನಾಮಧೇಯ ಸ್ವಾತಂತ್ರ ಸೈನಿಕರು ಇಂದಿಗೂ ಅನಾಮಧೇಯರಾಗಿಯೇ ಉಳಿದಿದ್ದಾರೆ ಮೇಲಿನ ಲೇಖನದಲ್ಲಿ ಉಲ್ಲೇಖಿಸಿದ ಶ್ರೀ ಚಂದ್ರಶೇಖರ ಇವರಿಗೆ ಚಂದ್ರಶೇಖರ ಆಝಾದ ಎಂದೇ ನಾಮಕರಣ ವಾಗಿತ್ತು . ಇವರ ಗುಂಪಿನಲ್ಲಿ ಸುಮಾರು ೨೦ ಜನ ಯುವಕರು ತನ್ನ ಪ್ರಾಣಕ್ಕೂ ಲೆಕ್ಕಿಸದೇ ದುರಹಂಕಾರಿ ನಿಜಾಮನಿಂದ ಹಾಗು ಅತ್ಯಂತ ಕ್ರೂರಿ ಯಾಗಿದ್ದ ಕಾಸಿಂರಿಜವಿ ಮತ್ತು ಅವನ ಹಿಂಬಾಲಕರಿಂದ ನಮಗೆ ರಕ್ಷಣೆ ಮಾಡಿ ಸ್ವಾತಂತ್ರ ಕೊಡಿಸಿದರು .
    ಮೇಲಿನ ಲೇಖನ ಅನೇಕ ವಿಷಯಗಳೊಂದಿಗೆ ಚೊಕ್ಕದಾಗಿದೆ

Leave a Reply

Your email address will not be published.

This site uses Akismet to reduce spam. Learn how your comment data is processed.