ಮೈಸೂರಿನಲ್ಲಿ ಆರಂಭಗೊಂಡ ಐದನೇ ಐಸಿಸಿಎಸ್ ಸಮ್ಮೇಳನ
ಮೈಸೂರು ಫೆಬ್ರುವರಿ 01, 2015: ವೈಶ್ವಿಕ ಯೋಗಕ್ಷೇಮ – ಪೃಕೃತಿ, ಸಂಸ್ಕೃತಿ ಮತ್ತು ಸಮುದಾಯಗಳನ್ನು ಉಳಿಸುವುದು (5th International Conference of Elders of Worlds Ancient Cultures and Traditions ) ಎನ್ನುವ ಘೋಷವಾಕ್ಯದೊಂದಿಗೆ ವಿಶ್ವದ ಪ್ರಾಚೀನ ಸಂಪ್ರದಾಯಗಳ ಐದನೇ ಸಮ್ಮೇಳನ ಮತ್ತು ಪ್ರಾಚೀನ ಸಮುದಾಯಗಳ ಹಿರಿಯರ ಕೂಟಕ್ಕೆ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು. ಮೂವತ್ತೈದು ದೇಶಗಳ ವಿವಿಧ ಪ್ರಾಚೀನ ಸಂಸ್ಕೃತಿಗಳ ಇನ್ನೂರೈವತ್ತೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿರುವ ಈ ಸಮ್ಮೇಳನವನ್ನು ಆರೆಸ್ಸೆಸ್‌ನಿಂದ ಪ್ರೇರಣೆ ಪಡೆದ ಸಂಘಟನೆ ಅಂತರಾಷ್ಟ್ರೀಯ ಸಂಸ್ಕೃತಿಗಳ ಅಧ್ಯಯನ ಸಂಸ್ಥೆ (International Centre for Cultural Studies) ಆಯೋಜಿಸಿದೆ.
ವೇದಿಕೆಯಲ್ಲಿದ್ದ ಇಪ್ಪತ್ತಮೂರು ಪ್ರಾಚೀನ ಸಂಸ್ಕೃತಿಗಳ ಹಿರಿಯರು ತಮ್ಮ ಸಂಸ್ಕೃತಿಯ ವಿಶೇಷತೆಯನ್ನು ಪರಿಚಯಿಸಿ ವೈಶ್ವಿಕ ಶಾಂತಿಯನ್ನು ಕೋರಿ ತಮ್ಮ ತಮ್ಮ ಸಂಸ್ಕೃತಿಯ ಪ್ರಾರ್ಥನೆಯನ್ನು ಸಲ್ಲಿಸಿದಿರು. ಪ್ರಾರ್ಥನೆ ಸಲ್ಲಿಸಿದವರಲ್ಲಿ ಗ್ವಾಟಿಮಾಳಾದ ಮಾಯಾ ಸಂಸ್ಕೃತಿಯ ಗ್ರಾಂಡ್‌ಮದರ್ ಎಲಿಜಬೆತ್ ಅರೌಜು, ಲಿಥುಯಾನಿಯಾದ ರೋಮುವಾ ಸಂಸ್ಕೃತಿಯ ಹಿರಿಯ ಇನಿಜಾ ಟ್ರಿಂಕುನಿಯೆನೆ, ಹಂಗೇರಿಯಾ ಪ್ರಾಚೀನ ಸಂಸ್ಕೃತಿಯ ಇಮ್ರೆ ಬರ್ನಾಬಾಸ್ ಕೊವಾಕ್ಸ, ಜರ್ಮನಿಯ ಕ್ರಿಶ್ಚಿಯನ್ ಪೂರ್ವ ಅಸಾತ್ರು ಸಂಸ್ಕೃತಿಯ ಟಾಬ್ಬಿ, ಅಮೆರಿಕದ ಚೆರೊಕೆ ಸಂಪ್ರದಾಯದ ಯಂಗ್ ವುಲ್ಫ್, ಕಿರ್ಗಿಸ್ತಾನದ ಐಗನ್ ಸಂಪ್ರದಾಯದ ಪ್ರತಿನಿಧಿಗಳು, ಇಂಗ್ಲೆಂಡಿನ ಡ್ರುಯ್ಡ್ ಸಂಪ್ರದಾಯದ ಕೀಥ್ ಸೌಥ್‌ವೆಲ್, ಹಂಗೇರಿಯದ ಪ್ರಾಚೀನ ಸಂಸ್ಕೃತಿಯ ಪ್ರತಿನಿಧಿಗಳು, ಇರಾಕಿನ ಯೆಜಿದಿ ಸಂಪ್ರದಾಯದ ಪ್ರತಿನಿಧಿಗಳು, ಜಪಾನಿನ ರಿಕಾ ಹಿಗೇ, ಚತ್ತೀಸ್‌ಗಢದ ಗೊಂಡ ಸಂಪ್ರದಾಯದ ಬುದ್ರಿ ತತಿ, ನೇಪಾಲದ ಡಾ. ಭೋಲಾನಾಥ್ ಯೋಗಿ, ಅರುಣಾಚಲ ಪ್ರದೇಶದ ಇಸ್ಟು ಪುಲು ಮೊದಲಾದವರು ಪ್ರಮುಖರು. ಪ್ರಾರ್ಥನೆ ಸಲ್ಲಿಸಿದ ವಿವಿಧ ಸಂಪ್ರದಾಯಗಳ ಹಿರಿಯರ ಮಾತಿನಲ್ಲಿ ವಿಶ್ವದ ಸಂಸ್ಕೃತಿಗಳ ಜನರು ಭಾರತವನ್ನು ತಾಯಿಯ ಸ್ಥಾನದಲ್ಲಿ ಕಾಣುತ್ತಿರುವ ಭಾವನೆ ವ್ಯಕ್ತವಾಯಿತು. ಇದೇ ಸಂದರ್ಭದಲ್ಲಿ ತಮ್ಮದೇ ನೆಲದಲ್ಲಿ ದೌರ್ಜನ್ಯಕ್ಕೊಳಗಾಗಿರುವ ಯೆಜಿದಿ ಸಂಪ್ರದಾಯದ ಜನರಿಗೆ ಸಂಪೂರ್ಣ ಸಮರ್ಥನೆಯ ನೀಡುವ ಭರವಸೆಯನ್ನು ಐಸಿಸಿಎಸ್ ನೀಡಿತು.
ಸಮ್ಮೇಳನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಇಲ್ಲಿ ವಿವಿಧ ಸಂಸ್ಕೃತಿಗಳವರು ಪ್ರಾರ್ಥನೆಯನ್ನು ಮಾಡಿದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಅವರ ಭಾಷೆ, ಪ್ರಾರ್ಥನೆ ಮತ್ತು ವೇಷಭೂಷಗಳನ್ನು ನೋಡುವುದು ಒಂದು ಒಳ್ಳೆಯ ಅನುಭವ. ಸಾಮಾನ್ಯವಾಗಿ ಬೇರೆ ದೇಶಗಳಿಗೆ ಪ್ರವಾಸ ಮಾಡುವಾಗ ಅಲ್ಲಿನ ಮ್ಯೂಸಿಯಮ್, ಝೂ ಮತ್ತಿತರ ಪ್ರವಾಸಿ ಪ್ರದೇಶಗಳನ್ನು ನೋಡುತ್ತೇವೆ. ಆದರೆ ಸ್ಥಳೀಯ ಜನರ ಆಚರಣೆಗಳು, ಪದ್ಧತಿಗಳು, ಸಂಪ್ರದಾಯಗಳನ್ನು ತಿಳಿಯವ ಪ್ರಯತ್ನ ಮಾಡಬೇಕು ಎಂದು ಅವರು ನುಡಿದರು.
ವಿವಿಧ ಸಂಪ್ರದಾಯದವರು ತಮ್ಮ ಪದ್ಧತಿಯಂತೆ ಅವರವರ ಭಾಷೆಯಲ್ಲಿ ಪ್ರಾರ್ಥನೆ ಮಾಡಿದ್ದಾರೆ, ಅವರು ತಮ್ಮ ಭಾಷೆಯಲ್ಲಿ ಮಾಡಿದ ಪ್ರಾರ್ಥನೆ ನಮಗೆ ಅರ್ಥವಾಗದೇ ಇರಬಹುದು, ಆದರೆ ದೇವರಿಗೆ ಖಂಡಿತಾ ಕೇಳಿಸುತ್ತದೆ. ಅವರು ಆಯಾ ದೇಶದಲ್ಲಿ ಹುಟ್ಟಿದ್ದರಿಂದ ಅಲ್ಲಿನ ಪದ್ಧತಿಯಂತೆ ದೇವರನ್ನು ಆರಾಧಿಸುತ್ತಾರೆ. ಅವರು ತಮ್ಮ ಪದ್ಧಿತಯನ್ನೇ ಅನುಸರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂಜನೀಯ ಸರಸಂಘಚಾಲಕ ಮೋಹನ ಭಾಗವತರವರು ದಿಕ್ಸೂಚಿ ಭಾಷಣ ಮಾಡಿದರು;
ಶ್ರೀ ಮೋಹನ ಭಾಗವತರವರ ಭಾಷಣದ ಸಾರಾಂಶ:
ವೈಶ್ವಿಕ ಯೋಗಕ್ಷೇಮ – ಪ್ರಕೃತಿ, ಸಂಸ್ಕೃತಿ ಮತ್ತು ಸಮುದಾಯಗಳನ್ನು ಉಳಿಸಿಕೊಳ್ಳುವುದು ಇಂದಿನ ಸಮ್ಮೇಳನದ ಮುಖ್ಯ ವಿಷಯ. ಇವು ವಿಶ್ವದಲ್ಲೆಡೆ ಪ್ರಚಲಿತವಿರುವ ಮತ್ತು ಎಲ್ಲರೂ ಒಪ್ಪಿಕೊಳ್ಳುವ ವಿಚಾರ. ಆದರೆ ವೈಶ್ವಿಕ ವ್ಯಾಪ್ತಿ ಪಡೆಯದ ಹೊರತು ಯಾವುದೇ ಅನ್ಯ ಮಾರ್ಗವಿಲ್ಲ ಎಂದು ಪ್ರಪಂಚ ಇನ್ನೂ ಕಂಡುಕೊಳ್ಳಬೇಕಿದೆ. ವಿಶ್ವದ ಎಲ್ಲ ವಿಷಯಗಳ ನಡುವೆ ಅಂತರ್-ಸಂಬಂಧವಿದೆ. ಒಂದು ಇನ್ನೊಂದರ ಮೇಲೆ ಪ್ರಭಾವ ಬೀರುತ್ತವೆ. ಪ್ರಾಚೀನ ಸಂಪ್ರದಾಯಗಳು ಗುರುತಿಸಿದ್ದ ಈ ಗುಣವನ್ನು ಆಧುನಿಕ ವಿಜ್ಞಾನ ದೃಢಪಡಿಸಿದೆ. ವಿಶ್ವದ ಒಂದು ಪ್ರದೇಶದಲ್ಲಿ ನಡೆಯುವ ಘಟನೆ ದೂರದ ಇನ್ನೊಂದು ಪ್ರದೇಶದಲ್ಲಿ ಪರಿಣಾಮ ತೊರಿಸುತ್ತದೆ. ವಿಶ್ವದಲ್ಲಿರುವ ವಿವಿಧತೆಯನ್ನು ನಾವು ಒಪ್ಪಿಕೊಳ್ಳಬೇಕು ಏಕೆಂದರೆ ವೈವಿಧ್ಯತೆಯು ಜೀವಂತವಾಗಿರುವುದು ಬೇಡಿಕೆ ಲಾಭ ಮುಂತಾದ ವ್ಯವಹಾರಿಕ ಕಾರಣದಿಂದಾಗಲ್ಲ. ವಿಶ್ವವು ನಿಂತಿರುವುದು ಈ ಜೀವಂತ ಸಂಬಂಧವನ್ನು ಗುರುತಿಸುವ ಕಾರಣದಿಂದ ಮಾತ್ರ. ಇಲ್ಲಿ ಏಕವು ಅನೇಕವಾಗಿ ಪ್ರಕಟಗೊಂಡಿದೆ.
ಸಹಿಷ್ಣುತೆ ಎನ್ನುವುದು ಆಧುನಿಕ ಜಗತ್ತಿನ ಹಕ್ಕಿನ ಕಲ್ಪನೆಯ ತತ್ವ. ಆದರೆ ಪ್ರಾಚೀನ ಸಂಪ್ರದಾಯಗಳು ನಮಗೆ ಕೇವಲ ಸಹಿಷ್ಣುತೆಯನ್ನಷ್ಟೇ ಅಲ್ಲ ಇನ್ನೊಬ್ಬರ ಸಂಪ್ರದಾಯವನ್ನು ಒಪ್ಪಿಕೊಳ್ಳಬೇಕೆಂಬ ತತ್ವವನ್ನೂ ಕಲಿಸುತ್ತವೆ.
ವೈಷ್ಣೋದೇವಿ ದರ್ಶನಕ್ಕೆ ಕಿರಿದಾದ ಗುಹೆಗಳ ಮೂಲಕ ದಾಟಿ ಹೋಗುವಾಗ ಇಡೀ ಶರೀರವನ್ನು ನುಸುಳಿ ದಾಟಿಸಿಕೊಂಡು ಹೋಗಬೇಕಾಗುತ್ತದೆ, ಒಂದೊಂದು ಭಾಗವನ್ನು ಮಾತ್ರ ದಾಟಿಸಿಕೊಂಡು ಹೋಗಲಾಗುವುದಿಲ್ಲ. ಹಾಗೆಯೇ ವಿಶ್ವವೂ ಕೂಡ ಒಂದು ಘಟಕವಾಗಿದೆ, ಆದ್ದರಿಂದ ವಿಶ್ವದ ಒಳಿತಿಗಾಗಿ ಎಲ್ಲರೂ ಒಂದಾಗಿ ಸಹಬಾಳ್ವೆ ನಡೆಸಬೇಕಾದ ಅಗತ್ಯವಿದೆ. ವಿವಿಧತೆಯನ್ನು ಪೋಷಿಸಬೇಕೆ ಹೊರತು ವಿರೋಧಿಸಬಾರದು. ವಿವಿಧ ಉಡುಗೆ ತೊಡುಗೆ, ಸಂಪ್ರದಾಯ ಅಥವಾ ಪೂಜಾ ಪದ್ಧತಿಯ ಕಾರಣದಿಂದ ಯಾರನ್ನೂ ದೌರ್ಜನ್ಯಕ್ಕೊಳಪಡಿಸಬಾರದು.
“ಈ ಸಮ್ಮೇಳನವು ಯಾವುದೋ ತಾತ್ಕಾಲಿಕ ಉತ್ಸಾಹದ ಕಾರಣದಿಂದ ಆರಂಭವಾದದ್ದಲ್ಲ. ಇದು ಪ್ರಾಚೀನ ಸಂಪ್ರದಾಯಗಳನ್ನು ಮತ್ತು ಜೀವನಪದ್ಧತಿಗಳನ್ನು ಉಳಿಸಿಕೊಳ್ಳಬಯಸುವ ಜನರು ಒಟ್ಟಿಗೆ ಬರುವ ಕಾರಣದಿಂದ ಬೆಳೆಯುತ್ತಿದೆ. ಇದು ಐದನೇ ಸಮ್ಮೇಳನ. ಇದರಲ್ಲಿ ಭಾಗವಹಿಸುವವರು ಸಂಖ್ಯೆ ಮತ್ತು ಸಂಪರ್ಕ ಬೆಳೆಯುತ್ತಿದೆ. ಪಾಲ್ಗೊಳ್ಳುವಿಕೆ ಹೆಚ್ಚಿದಂತೆ ಪ್ರಾಚೀನ ಸಂಸ್ಕೃತಿಗಳ ಮಹತ್ವ ಮತ್ತು ಅವುಗಳನ್ನು ಉಳಿಸಿಕೊಳ್ಳಬೇಕಾದ ವಿಷಯದಲ್ಲಿ ಜಾಗೃತಿ ಬೆಳೆಯುತ್ತಿದೆ. ವಿವಿಧ ಸಂಪ್ರದಾಯಗಳು ಒಟ್ಟಿಗೆ ಬರುವುದು ವಿಶ್ವದ ಒಳಿತಿನ ಕಾರ್ಯಕ್ಕೆ ಮೂಲವಾಗಬಲ್ಲದು. ಇಲ್ಲಿ ಆರಂಭಗೊಂಡಿರುವ ಹಿರಿಯರ ಸಭೆಯು ವಿಶ್ವದ ಒಳಿತಿನ್ನು ಸಾಧಿಸುವ ವಿಚಾರವನ್ನು ಕಾರ್ಯಗತಗೊಳಿಸುವತ್ತ ಮುನ್ನಡೆಯಲಿ”
ಐಸಿಸಿಎಸ್ ಅಮೇರಿಕದ ಅಧ್ಯಕ್ಷ ಶ್ರೀ ಶೇಖರ್ ಪಟೆಲ್ ಸ್ವಾಗತಿಸಿದರು, ಆರೆಸ್ಸೆಸ್ ಮೈಸೂರು ನಗರ ಸಂಪರ್ಕ ಪ್ರಮುಖ ಶ್ರೀ ಪ್ರದ್ಯುಮ್ನ ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀ ದತ್ತ ವಿಜಯೇಂದ್ರ ಸ್ವಾಮೀಜಿ, ಸ್ವಾಗತ ಸಮಿತಿಯ ಉಪಾಧ್ಯಕ್ಷ ಜಸ್ಟೀಸ್ ಪದ್ಮರಾಜ್, ವಿಶ್ವವಿಭಾಗದ ರವಿ ಐಯ್ಯರ, ಆರೆಸ್ಸೆಸ್ ಹಿರಿಯ ಪ್ರಚಾರಕ ಮೈ ಚ ಜಯದೇವ, ಚಂದ್ರಶೇಖರ ಬಂಡಾರಿ, ದಕ್ಷಿಣ ಪ್ರಾಂತ ಸಂಘಚಾಲಕ ವೆಂಕಟರಾಮು, ಪ್ರಾಂತ ಪ್ರಚಾರಕ ಮುಕುಂದ ಮೊದಲಾದವರು ಪಾಲ್ಗೊಂಡರು. ಶ್ರೀಮತಿ ಪರಿಮಳ ವೆಂಕಟೇಶಮೂರ್ತಿ ನಿರ್ವಹಿಸಿದರು.
ಉದ್ಘಾಟನಾ ಸಮಾರಂಭದ ಮೊದಲು ಮೈಸೂರಿನ ರಸ್ತೆಯಲ್ಲಿ ಪ್ರಾಚೀನ ಸಂಸ್ಕೃತಿಯ ವೈಶಿಷ್ಟ್ಯವನ್ನು ಬಿಂಬಿಸುವ ವರ್ಣಮಯ ಶೋಭಾಯಾತ್ರೆಯಲ್ಲಿ ಪ್ರತಿನಿಧಿಗಳು ಪಾಲ್ಗೊಂಡರು.
ಇಂದು ಉದ್ಘಾಟನೆಗೊಂಡು ಫೆಬ್ರುವರಿ ಐದರವರೆಗೆ ನಡೆಯವ ಸಮ್ಮೇಳನದಲ್ಲಿ ವೈಶ್ವೀಕರಣ , ತಂತ್ರಜ್ಞಾನ ಮತ್ತು ನೇತೃತ್ವ ಎನ್ನುವ ವಿಷಯಗಳ ಮೇಲೆ ಸಂವಾದಗಳು ನಡೆಯಲಿವೆ.