ಬೆಂಗಳೂರು ಮಾರ್ಚ್ ೦೯: ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಕಳೆದ ಮಾರ್ಚ್ ೭ರಿಂದ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾದ ತೃತೀಯ ದಿವಸ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಮಾನನೀಯ ಸುರೇಶ ಜೋಷಿಯವರು ಮಾಧ್ಯಮದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.
ಕಳೆದ ವರ್ಷ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ದೇಶದಾದ್ಯಂತ ಕಾರ್ಯಕ್ರಮಗಳು ಸಫಲವಾಗಿ ನಡೆದವು. ಅದರಲ್ಲಿ ಹಿಂದುತ್ವ ವಿಚಾರ ಮತ್ತ ಭಾರತೀಯ ಚಿಂತನೆಗಳನ್ನು ಸ್ವೀಕರಿಸುವ ಬೌದ್ಧಿಕ ಜಗತ್ತಿನ ಬಹುದೊಡ್ಡ ವರ್ಗವು ಈ ಎಲ್ಲ ವಿಚಾರಗಳೊಂದಿಗೆ ಪೂರ್ಣ ಸಹಮತದಲ್ಲಿರುವುದು ನಮ್ಮ ಅನುಭವಕ್ಕೆ ಬಂದಿದೆ. ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಅನೇಕ ಪ್ರಕಾರದ ವಿಚಾರಸಂಕೀರ್ಣಗಳು ಸೆಮಿನಾರುಗಳಲ್ಲಿ ಸಮಾಜದ ಬಹುದೊಡ್ಡ ಬುದ್ಧಿಜೀವಿಗಳ ವರ್ಗ ಪಾಲ್ಗೊಂಡಿತು. ಧಾರ್ಮಿಕ ಕ್ಷೇತ್ರದಲ್ಲಿ ಕೆಲಸಮಾಡುವ ಹೆಸರಾಂತ ಸಂಸ್ಥೆಗಳು, ಸಂತರು, ಮಠಗಳು ಈ ಕಾರ್ಯಗಳಲ್ಲಿ ಹೆಚ್ಚಿನ ಯೋಗದಾನ ನೀಡಿದವು. ವಿಶೇಷವಾಗಿ ಉಲ್ಲೇಖಿಸಬೇಕೆಂದರೆ ಕಾರ್ಯದಲ್ಲಿ ರಾಮಕೃಷ್ಣ ಮಿಶನ್ ಹಿರಿದಾದ ಪಾತ್ರ ವಹಿಸಿತು ಮತು ಮಿಶನ್ನಿನ ಜ್ಯೇಷ್ಠ ಸನ್ಯಾಸಿಗಳು ಅನೇಕ ಸಮಾಜ ಪ್ರಭೋದನ ವಿಷಯಗಳನ್ನು ಮುಂದಿಟ್ಟರು. ಆರೆಸ್ಸೆಸ್ ಕೂಡ ವಿವೇಕಾನಂದರ ಸಾರ್ಧಶತಿ ಜನ್ಮವರ್ಷಾಚರಣಾ ಸಮಿತಿಯನ್ನು ಘಟಿಸಿ ದೇಶದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಿತು, ಅದರಲ್ಲಿ ದೇಶದ ಬಹುದೊಡ್ಡ ವರ್ಗ ಪಾಲ್ಗೊಂಡಿತು. ಎಂದು ಅವರು ನುಡಿದರು.
ಕಳೆದ ಕೆಲವು ವರ್ಷಗಳಲ್ಲಿ ನಾವು ಎರಡು ಮಹತ್ವದ ಕ್ಷೇತ್ರಗಳಲ್ಲಿ ಕೆಲಸವನ್ನು ಪ್ರಾರಂಬಿಸಿದ್ದೇವೆ. ಒಂದು ಗೋಸಂರಕ್ಷಣೆ ಇನ್ನೊಂದು ಗ್ರಾಮವಿಕಾಸ. ಭಾರತದ ಆರ್ಥಿಕ ವಿಕಾಸ, ಕೃಷಿ ಮತ್ತು ಪರಿಸರ ಸಂರಕ್ಷಣೆಗೆ ಸಂಭಂಧಿಸಿದಂತೆ ಒಂದು ಮೂಲಭೂತ ಅವಶ್ಯಕತೆಯೆಂದರೆ ಗೋವಂಶದ ರಕ್ಷಣೆ. ಆದ್ದರಿಂದ ಕೇವಲ ಧಾರ್ಮಿಕ ವಿಷಯಗಳಿಗಾಗಿ ಮಾತ್ರವಲ್ಲ ದೇಶದ ಸಮಗ್ರ ವಿಕಾಸದಲ್ಲಿ ಗೋವಂಶದ ಮಹತ್ವದ ಬಗ್ಗೆ ಸಮಾಜವನ್ನು ಜಾಗೃತಗೊಳಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಮ್ಮ ಈ ಕಾರ್ಯದಲ್ಲಿ ಅನೇಕ ಸಂಘ ಸಂಸ್ಥೆಗಳು ಜೋಡಿಕೊಂಡಿವೆ. ಈ ಎಲ್ಲ ಪ್ರಯತ್ನಗಳ ಪರಿಣಾಮವಾಗಿ ಕಳೆದ ಎರಡು ವರ್ಷ ಗಳಲ್ಲಿ ಸಾವಿರಕ್ಕೂ ಹೆಚ್ಚು ಗೋಶಾಲೆಗಳು ನಿರ್ಮಾಣಗೊಂಡಿವೆ. ಎಂದು ಅವರು ಹೇಳಿದರು.
ಎರಡನೆಯದಾಗಿ ಗ್ರಾಮವಿಕಾಸದ ಕಾರ್ಯವನ್ನು ನಾವು ಆರಿಸಿಕೊಂಡಿದ್ದೇವೆ. ಭಾರತದ ಮೂಲ ಪೃಕೃತಿ ಗ್ರಾಮಗಳಲ್ಲಿ ಕಂಡುಬರುತ್ತದೆ. ಕೇವಲ ಕೃಷಿಯಾಧಾರಿತ ದೃಷ್ಟಿಯಿಂದಲ್ಲ ಇಲ್ಲಿನ ಸಂಸ್ಕೃತಿ, ಪರಂಪರೆ, ಪಾರಿವಾರಿಕ ಜೀವನಶೈಲಿ ಗ್ರಾಮಗಳಲ್ಲಿ ಕಂಡು ಬರುತ್ತದೆ. ಆದರೆ ೧೯೪೮ರ ನಂತರ ಗ್ರಾಮಜೀವನದ ಹೆಜ್ಜೆಗಳು ಮತ್ತು ನಾವು ತೆಗೆದುಕೊಂಡ ನೀತಿಗಳಿಂದಾಗಿ ಗ್ರಾಮಗಳು ಉಪೇಕ್ಷೆಗೆ ಒಳಗಾದವು. ಕೇವಲ ಸವಲತ್ತುಗಳಿಂದ ವಂಚಿತವಾದದ್ದಷ್ಟೇ ಅಲ್ಲ, ಗ್ರಾಮಗಳ ಸ್ವರೂಪದಲ್ಲೂ ಬದಲಾವಣೆಗಳಾದವು. ಗ್ರಾಮಗಳು ಸವಲತ್ತುಗಳನ್ನು ಹೊಂದುವುದಷ್ಟೇ ಅಲ್ಲದೇ ಅವುಗಳ ಈಗಿರುವ ಸಾಮಾಜಿಕ ಚೌಕಟ್ಟು ಬಲವಾಗಬೇಕು ಎಂದು ನಾವು ಬಯಸುತ್ತೇವೆ. ಗ್ರಾಮದ ಎಲ್ಲರೂ ಸೇರಿ ತಮ್ಮ ಗ್ರಾಮದ ಬಗ್ಗೆ ಚಿಂತಿಸುವ ವಾತಾವರಣವನ್ನು ನಿರ್ಮಿಸುವ ಸಂದೇಶವನ್ನು ತಲುಪಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಸಾಮಾನ್ಯವಾಗಿ ಸರ್ಕಾರವೇ ಗ್ರಾಮ ಅಭಿವೃದ್ಧಿಯ ಕೆಲಸ ಮಾಡಬೇಕು ಎನ್ನುವ ಭಾವ ಇಂದು ಇದೆ, ನಾವು ಇದನ್ನು ಬದಲಾಯಿಸಿ ನಾವು ನಮ್ಮ ವಿಕಾಸದ ಕೆಲಸವನ್ನು ಮಾಡಬೇಕು ಎನ್ನುವ ಭಾವವನ್ನು ಬೆಳೆಸುವ ಪ್ರಯತ್ನ ಮಾಡಿದ್ದೇವೆ. ಇಂದು ದೇಶದ ಸುಮಾರು ೨೦೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ಈ ವಿಷಯದಲ್ಲಿ ಕೆಲಸ ನಡೆಯತ್ತಿದೆ. ಎಂದು ಅವರು ತಿಳಿಸಿದರು.
ಗ್ರಾಮಗಳು ನಮ್ಮ ವಿಶೇಷತೆಯಾದಂತೆ ಭಾರತೀಯ ಕುಟುಂಬ ವ್ಯವಸ್ಥೆಗೆ ವಿಶ್ವದಲ್ಲೆ ವಿಶಿಷ್ಟವಾದ ಸ್ಥಾನವಿದೆ. ಭಾವಾತ್ಮಕವಾಗಿ ಜೋಡಿಕೊಂಡಿರುವ ಉತ್ಕೃಷ್ಟ ಪರಿವಾರ ವ್ಯವಸ್ಥೆ ನಮ್ಮಲ್ಲಿ ವಿಕಸಿತವಾಗಿದೆ. ಆದರೆ ಇತ್ತೀಚೆಗೆ ಆರ್ಥಿಕ ಮತ್ತು ಔದ್ಯೋಗಿಕ ಪ್ರಗತಿ ಮೊದಲಾದ ಕಾರಣಗಳಿಂದಾಗಿ ನಮ್ಮ ಪರಿವಾರ ವ್ಯವಸ್ಥೆಗಳಲ್ಲಿ ಅನೇಕ ತೊಡಕುಗಳು ಇಂದು ನಿರ್ಮಾಣವಾಗಿವೆ. ಸಾಮಾನ್ಯವಾಗಿ ಆತ್ಮಕೇಂದ್ರಿತ ಚಿಂತನೆಯಿಂದ ಹೊರಗೆ ಬರುವಲ್ಲಿ ಪರಿವಾರದ ಪಾತ್ರ ಮಹತ್ವದ್ದಾಗಿದೆ, ತದನಂತರ ಸಮಾಜ ಜೀವನದೊಂದಿಗೆ ಆತ ಸೇರುತ್ತಾನೆ. ಆದ್ದರಿಂದ ಸ್ವಸ್ಥ ಹಾಗೂ ಸಧೃಢ ಸಮಾಜ ನಿರ್ಮಾಣವಾಗಬೇಕೆಂದರೆ ಕುಟುಂಬ ಜೀವನ ಸಬಲವಾಗಬೇಕಾದ ಅಗತ್ಯವಿದೆ. ಕುಟುಂಬ ವ್ಯವಸ್ಥೆಯನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಕುಟುಂಬ ಪ್ರಬೋಧನದ ಅಡಿಯಲ್ಲಿ ಕಾರ್ಯಗಳು ನಡೆದಿವೆ. ಇದರಲ್ಲಿ ಸಾವಿರಾರು ಪರಿವಾರಗಳು ಸಮ್ಮಿಲಿತಗೊಂಡಿವೆ. ಎಂದು ಅವರು ತಿಳಿಸಿದರು.
ಈಗಾಗಲೇ ತಮಗೆಲ್ಲ ನೀಡಿರುವ ವರದಿಯಲ್ಲಿ ತಿಳಿಸಿರುವಂತೆ ಸಂಘದ ಶಾಖೆಗಳ ಸಂಖ್ಯೆಯಲ್ಲಿ ಸತತ ವೃದ್ಧಿಯಾಗುತ್ತಿದೆ. ಪ್ರಸ್ತುತ ೫೫ಕ್ಕೂ ಸಾವಿರಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಂಘದ ಗತಿವಿಧಿಗಳು ನಡೆಯತ್ತಿವೆ. ಸಂಘಪ್ರೇರಿತ ವ್ಯಕ್ತಿಗಳು ಮತ್ತು ವಿವಿಧ ಸಂಘಟನೆಗಳನ್ನು ಸೇರಿಸಿದರೆ ಒಂದು ಲಕ್ಷಕ್ಕೂ ಹೆಚ್ಚು ಪ್ರದೇಶಗಳಲ್ಲಿ ಹಿಂದೂ ವಿಚಾಧಾರೆಯ ಆಧಾರದಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತಿವೆ. ಸಮಘದ ೮೭ ವರ್ಷಗಳ ಕೆಲಸದಿಂದಾಗಿ ಸಮಾಜ ಸರಿಯಾದ ದಿಕ್ಕಿನಲ್ಲಿ ನಡೆಯತ್ತಿರುವುದನ್ನು ನಾವು ಕಾಣಬಹುದು. ಸಮಾಜದ ಸಂಘಟಿತ ಶಕ್ತಿಯಿಂದ ಸಮಾಜದ ಕಾರ್ಯವು ಬೆಳೆಯುವುದೆಂಬ ವಿಶ್ವಾಸವಿದೆ ಎಂದು ಶ್ರೀ ಜೋಷಿ ನುಡಿದರು.
ಪತ್ರಕರ್ತರ ಪ್ರಶ್ನೆಗಳಿಗೆ ಸರಕಾರ್ಯವಾಹರ ಉತ್ತರ:
ಪ್ರ: ಪ್ರತಿನಿಧಿ ಸಭೆಯಲ್ಲಿ ಸಲಿಂಗಕಾಮ ಮತ್ತು ತತ್ಸಂಭಂಧಿತ ಕಾನೂನಗಳ ಬಗ್ಗೆ ಚರ್ಚೆಯಾಗಿದೆಯೇ? ಈ ವಿಷಯದಲ್ಲಿ ಸಂಘದ ನಿಲುವೇನು:
ಉ: ಈ ವಿಷಯದ ಕುರಿತು ಯಾವುದೇ ಚರ್ಚೆಯಾಗಿಲ್ಲ. ಆದರೆ ಸಲಿಂಗಕಾಮ ಮತ್ತು ವಿವಾಹ ಬಾಹ್ಯ ಸಂಭಂಧದ ಕಾನೂನುಗಳ ವಿಷಯದಲ್ಲಿ ಈಗಾಗಲೇ ನಮ್ಮ ನಿಲುವನ್ನು ವ್ಯಕ್ತಪಡಿಸಿದ್ದೇವೆ. ಮೌಲ್ಯ ಮತ್ತು ಪರಂಪರೆ ಆಧಾರದ ಮೇಲೆ ನಡೆಯುವ ಭಾರತೀಯ ಜೀವನಶೈಲಿಯಲ್ಲಿ ಇವುಗಳಿಗೆ ಯಾವ ಸ್ಥಾನವೂ ಇಲ್ಲ. ಇವು ಸ್ವಸ್ಥ ಸಮಾಜಕ್ಕೆ ಸ್ವೀಕಾಂiiವಲ್ಲ. ಆದ್ದರಿಂದ ಸಮಾಜ ಜೀವನಕ್ಕೆ ಹಾನಿಕಾರಕವಾಗಿರುವ ಕಾನೂನು ಮಾಡುವ ಮೊದಲು ಎಲ್ಲ ಧಾರ್ಮಿಕ ಸಾಮಾಜಿಕ ಮುಖಂಡರ ಅಭಿಪ್ರಾಯವನ್ನು ಪರಿಗಣಿಸಿ ವಿಚಾರಮಾಡಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ.
ಪ್ರ: ಬಿಜೆಪಿಯ ಆಯ್ಕೆಯ ಪ್ರಕ್ರಿಯೆ ಸಂಧಿಗ್ಧವಾದ ಸಂದರ್ಭದಲ್ಲಿ ಸಂಘ ಭಾಗವಹಿಸುವುದೇ?
ಉ: ಇದೊಂದು ರಾಜಕೀಯ ಪಕ್ಷದ ಆಂತರಿಕ ನಿರ್ಣಯ ಪ್ರಕ್ರಿಯೆಯಾಗಿದ್ದು ಬಿಜೆಪಿ ಅದರಲ್ಲಿ ಸಕ್ಷಮವಾಗಿದೆ. ಸಂಘ ಅದರಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ. ನಿರ್ಣಯವಾದ ಮೇಲೆ ಸಾಮೂಹಿಕವಾಗಿ ಒಪ್ಪಿಗೆಯಿಂದ ನಡೆಯುವುದು ನಮ್ಮ ಅನುಭವ ಹೇಳುತ್ತದೆ.ಸ
ಪ್ರ. ದೇಶದಲ್ಲಿ ಪರಿವರ್ತನೆಯ ಅಲೆಯಿದೆ ಎಂದು ಹೇಳುತ್ತೀರಿ, ನಿಮ್ಮ ನಿರ್ದೇಶನ ರಾಜಕೀಯದ ಬಗ್ಗೆ ಇದೆಯೇ?
ಉ: ನಾವೆನ್ನವುದೆಂದರೆ ದೇಶ ಪರಿವರ್ತನೆಯನ್ನು ಬಯಸುತ್ತಿದೆ. ಪ್ರಸ್ತುತ ಸರ್ಕಾರ ತೊಲಗಬೇಕು.
ಪ್ರ: ದಲೈಲಾಮಾ ಸಂಘದೊಂದಿಗೆ ಒಳ್ಳೆಯ ಸಂಭಂಧ ಹೊಂದಿದ್ದಾರೆ. ಅವರು ಸಲಿಂಗಕಾಮದ ಪರವಾಗಿ ಮಾತನಾಡಿದ್ದಾರೆ. ಇದರ ಬಗ್ಗೆ ನೀವೆನನ್ನುತ್ತೀರಿ?
ಉ: ದಲೈಲಾಮರವರು ವ್ಯಕ್ತಪಡಿಸಿದ್ದು ಅವರ ವೈಯಕ್ತಿಕ ಅಭಿಪ್ರಾಯ. ಭಾರತೀಯ ಸಮಾಜ ಸಂಸ್ಕೃತಿಯ ಆಧಾರದ ಮೇಲೆ ನಮ್ಮ ಅಭಿಪ್ರಾಯವನ್ನು ನಾವು ವ್ಯಕ್ತಪಡಿಸಿದ್ದೇವೆ. ಈ ವಿಷಯದಲ್ಲಿ ದಲೈ ಲಾಮಾರೊಡನೆ ಮಾತುಕತೆಯಾಗಬಹುದು. ವಿಶ್ವದಲ್ಲಿ ದೇಶದಲ್ಲಿ ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಅವರಿಗಿದೆ.
ಪ್ರ: ಪ್ರತಿನಿಧಿ ಸಭೆಯಲ್ಲಿ ಯಾವ ನಿರ್ಣಯಗಳನ್ನು ಸ್ವೀಕರಿಸಲಾಗಿದೆ?
ಉ:ಇಲ್ಲ, ಆದರೆ ಎರಡು ವಿಷಯಗಳ ಬಗ್ಗೆ ಹೇಳಿಕೆಗಳನ್ನು ನೀಡಲಾಗಿದೆ. ಒಂದು ಮಾತಾ ಅಮೃತಾನಂದಮಯಿಯವರ ಆಶ್ರಮವನ್ನು ಕುರಿತು ಓರ್ವ ವಿದೇಶಿ ಲೇಖಕಿಯು ಬರೆದ ಪುಸ್ತಕದಲ್ಲಿ ಅಮ್ಮ ಮತ್ತು ಅವರ ಆಶ್ರಮವನ್ನು ಅವಹೇಳನ ಮಾಡುವಂತೆ ಮಿಥ್ಯಾರೋಪಗಳನ್ನು ಉಲ್ಲೇಖಿಸಲಾಗಿದೆ. ಅದನ್ನು ಕುರಿತು ದೇಶದ ಧಾರ್ಮಿಕ ಕ್ಷೇತ್ರಗಳು ಮತ್ತು ಶ್ರದ್ಧಾಕೇಂದ್ರಗಳನ್ನು ಅವಹೇಳನ ಮಾಡುವ ಕೆಲಸಗಳನ್ನು ಖಂಡಿಸಲಾಗಿದೆ. ಇನ್ನೊಂದು ಮಣಿಪುರದ ಸ್ವಾತಂತ್ರ್ಯ ಸೇನಾನಿ ರಾಣಿ, ಪದ್ಮಶ್ರೀ ಪ್ರಶಸ್ತಿಯಿಂದ ಸನ್ಮಾನಿತರಾದ ಗಾಡಿನ್‌ಲಿಯುವರ ಜನ್ಮ ಶತಮಾನವನ್ನು ವನವಾಸಿ ಕಲ್ಯಾಣ ಆಶ್ರಮದ ಆಶ್ರಯದ ಅಡಿಯಲ್ಲಿ ಆಚರಿಸಲಾಗುತ್ತಿದೆ. ಇಂತಹ ಶ್ರೇಷ್ಟ ವ್ಯಕ್ತಿಯ ಜನ್ಮಶತಮಾನೋತ್ಸವ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಎಲ್ಲರನ್ನೂ ಆಹ್ವಾನಿಸಿ ಹೇಳಿಕೆ ನೀಡಲಾಗಿದೆ.
ಪ್ರ: ನವ ಪೀಳಿಗೆಗೆ ಅವಕಾಶ ಕೊಡುವ ಬಗ್ಗೆ ಆರೆಸ್ಸೆಸ್ ಬಿಜೆಪಿಗೆ ಆದೇಶ ನೀಡಿದೆಯೆ?
ಉ: ಸಂಘ ಆದೇಶ ನೀಡುವುದಿಲ್ಲ, ಸಂಕೇತ ರೂಪದಲ್ಲಿ ಹೇಳಿದೆ. ನವಪೀಳಿಗೆಯು ಎಲ್ಲ ಪ್ರಕಾರದ ಸಾಮಾಜಿಕ ರಂಗಗಳಲ್ಲಿ ಅವಕಾಶ ಪಡೆಯುವ ಪರಂಪರೆಯನ್ನು ಸ್ಥಾಪಿಸಲು ಬಯಸುತ್ತದೆ. ಆದರೆ ಹೇಗೆ ಕುಟುಂಬದಲ್ಲಿ ಹಿರಿಯರ ಮಾರ್ಗದರ್ಶನ ಅಗತ್ಯವೋ ಹಾಗೇ ಸಮಾಜಜೀವನದಲ್ಲೂ ಹಿರಿಯರ ಅನುಭವದ ಮಾಗದರ್ಶನದ ಅಗತ್ಯವಿದೆ. ಜೊತೆಗೆ ರಾಜಕೀಯದಲ್ಲಿ ಅದರದೇ ಆದ ಅನಿವಾರ್ಯತೆಗಳಿರುತ್ತವೆ. ಆದರೂ ನಾವು ಎಲ್ಲರಿಗೂ ಹೇಳುವುದು ಒಂದು ಆಯವಿನ ನಂತರ ಕಿರಿಯರಿಗೆ ಅವಕಾಶ ಮಾಡುಕೊಡುವಂತೆ ನಾವು ಎಲ್ಲರಿಗೂ ಹೇಳುತ್ತೇವೆ.
ಪ್ರ; ಬ್ರಷ್ಟಾಚಾರದ ವಿಷಯದಲ್ಲಿ ಇಲ್ಲಿ ಚರ್ಚೆಯಾಗಿದೆಯೇ?
ಉ: ಇಲ್ಲಿನ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿಲ್ಲ. ಆದರೆ ಹಿಂದಿನೆ ಎರಡು ಸಭೆಗಳಲ್ಲಿ ಈ ಬಗ್ಗೆ ಸ್ಪಷ್ಟಪಡಿಸಲಾಗಿದೆ. ಬ್ರಷ್ಟಾಚಾರದ ವಿರುದ್ಧದ ಎಲ್ಲ ಹೋರಾಟಗಳಲ್ಲಿ ದೇಶದ ನಾಗರಿಕರಾಗಿ ಸಂಘದ ಸ್ವಯಂಸೇವಕರು ಪಾಲ್ಗೊಂಡಿದ್ದಾರೆ. ಜೊತೆಗೆ ಅಭಾವಿಪ, ಭಾರತೀಯ ಮಜ್ದೂರ್ ಸಂಘ, ಭಾರತೀಯ ಕಿಸಾನ ಸಂಘ ಮೊದಲಾದ ಸಂಘಟನೆಗಳು ಆಂದೋಲನದಲ್ಲಿ ಪಾಲ್ಗೊಂಡಿವೆ. ಇವುಗಳಲ್ಲಿ ಸಂಘದ ಸ್ವಯಂಸೇವಕರು ಸಮಾಜದ ಭಾಗವಾಗಿ ಪಾಲ್ಗೊಂಡಿದ್ದಾರೆ. ಸಮಾಜ ಎಲ್ಲ ಶಕ್ತಿಗಳೂ ಸಂಘಟಿತವಾಗಿ ಇವುಗಳ ವಿರುದ್ಧ ಹೋರಾಟ ಮಾಡಬೇಕಾದ ಅಗತ್ಯವಿದೆ, ಆಗ ಮಾತ್ರ ಕಾರ್ಯ ಸಫಲವಾಗಬಹುದು.
ಪ್ರ: ಆಪ್ AAP ಪಕ್ಷವನ್ನು ಸಂಘ ಯಾವ ರೀತಿ ನೊಡುತ್ತದೆ.
ಉ: ನೀವು ನೋಡಿದ ದೃಷ್ಟಿಯಲ್ಲೇ ನಾವೂ ನೋಡುತ್ತೇವೆ. ರಾಜನೀತಿಕ ಪಕ್ಷಗಳು ಬರುತ್ತವೆ ಹೋಗಿತ್ತವೆ. ಆದರೆ ಸಮಗ್ರ ವಿಚಾರಗಳ ಆಧಾರದ ಮೇಲೆ ಕಾರ್ಯನಿರ್ವಹಿಸುವ ಪಕ್ಷಗಳು ಮಾತ್ರ ದೇಶಕ್ಕೆ ಹಿತವುಂಟುಮಾಡಬಲ್ಲವು. ಬ್ರಷ್ಟಾಚಾರದ ವಿರುದ್ಧ ಹೋರಾಡುವಲ್ಲಿ ಆಪ್ ಪಕ್ಷವು ಸಕ್ಷಮವಾದರೆ ಸಮಾಜ ಅವರನ್ನು ಬೆಂಬಲಿಸುತ್ತದೆ.
ಪ್ರ: ಜೈನರಿಗೆ ಅಲ್ಪಸಂಖ್ಯಾತ ಸ್ಥಾನದ ಬಗ್ಗೆ ಸಂಗದ ನಿಲುವು? ರಾಹುಲ್ ಗಾಂಧಿ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉ: ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಎಂದು ಸಮಾಜವನ್ನು ವಿಂಗಡಿಸುವುದನ್ನು ಸಂಘ ಸದಾ ವಿರೋಧಿಸುತ್ತದೆ. ಜೈನ ಸಮಾಜವು ಪರಂಪರೆ, ಇತಿಹಾಸ ಮತ್ತು ಸಂಸ್ಕೃತಿಯಿಂದ ಹಿಂದೂ ಸಮಾಜದ ಭಾಗವೇ ಆಗಿದೆ.
ರಾಹುಲ ಗಾಂಧಿಯವರ ಹೇಳಿಕೆಯನ್ನು ವಿರೋಧಿಸಿ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದ್ದು ಅವರು ಸರಿಯಾದ ನಿರ್ಣಯ ತೆಗೆದುಕೊಳ್ಳುವರೆಂಬ ವಿಶ್ವಾಸವಿದೆ.
ಮಾಧ್ಯಮ ಸಂವಾದದಲ್ಲಿ ಅಖಿಲ ಭಾರತೀಯ ಪ್ರಚಾರ ಪ್ರಮುಖ ಡಾ. ಮನಮೋಹನ ವೈದ್ಯ, ದಕ್ಷಿಣ ಮಧ್ಯ ಕ್ಷೇತ್ರ ಬೌದ್ಧಿಕ ಪ್ರಮುಖ ವಿ ನಾಗರಾಜ ಉಪಸ್ಥಿತರಿದ್ದರು. ಶ್ರೀ ರಾಧಾಕೃಷ್ಣ ಹೊಳ್ಳ- ಸಾಫ್ಟವೇರ್ ತಂತ್ರಜ್ಞ ಮತ್ತು ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ ಕರ್ನಾಟಕದ ಸಂಯೋಜಕ, ಸ್ವಾಗತಿಸಿದರು.