ಬೆಂಗಳೂರು: ನಾಡೆನ್ನುವುದು ಗಡಿ, ಬಾವುಟಕ್ಕೆ ಸೀಮಿತವಾದದ್ದಲ್ಲ. ಅದಕ್ಕೊಂದು ಸಂಸ್ಕೃತಿ ಇದೆ. ಸಂಸ್ಕೃತಿಯ ಪ್ರತೀಕವಾದ ಅಕ್ಷರ ನಾಶವಾಗದ್ದು. ಸಾಹಿತ್ಯ ಎಂದರೆ ಹಿತವಾದದ್ದು. ಅಂತಹ ನಾಶವಾಗದ, ಹಿತವಾದ, ರಾಷ್ಟ್ರಕಟ್ಟುವ ಮೌಲ್ಯಾಧಾರಿತ ಸಾಹಿತ್ಯ ರಚನೆ ಆಗಬೇಕು ಎಂದು ಖ್ಯಾತ ನಟ ಸುಚೇಂದ್ರ ಪ್ರಸಾದ್ ಹೇಳಿದರು.
ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ನವೆಂಬರ್ 1 ರಿಂದ ಡಿಸೆಂಬರ್ 3ರವರೆಗೆ ಚಾಮರಾಜಪೇಟೆಯ ಕೇಶವಶಿಲ್ಪದಲ್ಲಿ ನಡೆಯಲಿರುವ ಕನ್ನಡ ಪುಸ್ತಕ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.
ಓದುವುದರಿಂದ ಜನರು ವಿನಾಯಿತಿಯನ್ನು ಪಡೆದುಕೊಂಡಕಾರಣ ಪುಸ್ತಕಗಳಿಗೆ ರಿಯಾಯಿತಿ ನೀಡುವ ಸಂದರ್ಭ ಒದಗಿದೆ. ನಾವು ಅಧ್ಯಯನ ಮಾಡದೆ ಅಧ್ಯಾಪನ ಮಾಡುವುದು ಸರಿಯಲ್ಲ. ಈ ಕಾಲಘಟ್ಟದಲ್ಲಿ ಸರ್ವರೂ ಆತ್ಮೋತ್ಥಾನಕ್ಕಾಗಿ ಪ್ರಯತ್ನ ಪಡುವಾಗ ರಾಷ್ಟ್ರದ ಉತ್ಥಾನಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್ ಇಂತಹ ಕಾರ್ಯಕ್ರಮಗಳ ಮೂಲಕ ಪ್ರಯತ್ನ ಪಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಹ ಸಂಯೋಜಕ ರಘುನಂದನ ಮಾತನಾಡಿ ಪುಸ್ತಕದ ಕೆಲಸ, ನಿತ್ಯದ ಕೆಲಸ, ಜೀವನದ ಕೆಲಸ. ಓದುಗರಲ್ಲಿ ದೊಡ್ಡವರು ಚಿಕ್ಕವರು ಎನ್ನುವುದಿಲ್ಲ.ಸಾಹಿತ್ಯದ ಆನಂದವನ್ನು ವ್ಯಕ್ತಿಗತವಾಗಿ ಅನುಭವಿಸಬೇಕಾದದ್ದೇ ವಿನಃ ಸಮಾಜೋದ್ಧಾರಕ್ಕಲ್ಲ ಎಂದು ನುಡಿದರು.
ಇಂದು ಮಾರಾಟದ ಗೊಡವೆಗೆ ಹೋಗದೆ ಪುಸ್ತಕಗಳ ಪ್ರಕಟಣೆ ಆಗಬೇಕು. ಅದು ಸದಾ ನಡೆಯುತ್ತಿರಬೇಕಾದ ತಪಸ್ಸು. ಇಂತಹ ಸೃಜನಾತ್ಮಕ ಕೆಲಸ ದೊಡ್ಡದಾಗಿರಬೇಕೆಂದೇನಿಲ್ಲ. ಆದರೆ ಸದಾ ಇರಬೇಕು, ಶುದ್ಧವಾಗಿರಬೇಕು.ಭಾಷೆಯ ಬಳಕೆ ಮತ್ತು ಅಧ್ಯಯನದಲ್ಲಿ ನಾನೇನು ಮಾಡಿಕೊಳ್ಳುತ್ತಿದ್ದೇನೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವಾದರೆ ಸಾಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ ಅವರು ಮಾತನಾಡಿ ಪುಸ್ತಕದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ರವಾನಿಸಬೇಕು. ಪುಸ್ತಕದ ಅಧ್ಯಯನ ನೆಮ್ಮದಿಯನ್ನು ನೀಡುತ್ತದೆ. ಪುಸ್ತಕ ಖರೀದಿಸುವುದು ಮಾತ್ರ ಮಾಡದೆ ಓದುವುದಕ್ಕೂ ಗಮನಕೊಡಬೇಕು. ನಿಮ್ಮ ಸ್ನೇಹಿತರು, ಮಕ್ಕಳಿಗೆ ಪುಸ್ತಕವನ್ನೇ ನೆನಪಿನ ಕಾಣಿಕೆಯ ರೂಪದಲ್ಲಿ ನೀಡುವುದು ಉತ್ತಮ ಎಂದು ಹೇಳಿದರು.
ಈ ಪುಸ್ತಕ ಹಬ್ಬ ಡಿಸೆಂಬರ್ 3 ರವರೆಗೂ 33 ದಿನಗಳ ಕಾಲ ನಡೆಯಲಿದ್ದು ಒಟ್ಟು 53 ವಿವಿಧ ಕಾರ್ಯಕ್ರಮಗಳು ನಡೆಯಲಿವೆ.