ಬೆಂಗಳೂರು: ಕನ್ನಡವನ್ನು ಬೇರೆಬೇರೆ ಸ್ವರೂಪದಲ್ಲಿ ನೆನಪು ಮಾಡುವುದಕ್ಕೆ ಅವಕಾಶವಿದೆ. ಕನ್ನಡ ಪುಸ್ತಕ ಹಬ್ಬ ಎಂಬ ಆಯೋಜಿಸುತ್ತಿರುವುದರಲ್ಲಿ ಕನ್ನಡದ ಹಿತವಿದೆ. ಇದಕ್ಕೆ ನಾವು ಎಷ್ಟು ಬೆಲೆ ಕೊಟ್ಟರೂ ಸಾಲದು ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ನಾಡೋಜ ಡಾ.ಚಂದ್ರಶೇಖರ ಕಂಬಾರ ಹೇಳಿದರು.
ರಾಷ್ಟ್ರೋತ್ಥಾನ ಸಾಹಿತ್ಯ ಚಾಮರಾಜಪೇಟೆಯ ಕೇಶವಶಿಲ್ಪದಲ್ಲಿ ಅಕ್ಟೋಬರ್ 26, 2024 ರಿಂದ ಡಿಸೆಂಬರ್ 1, 2024 ರವರೆಗೆ ಆಯೋಜಿಸಲಾಗಿರುವ 37 ದಿನಗಳ ‘ಕನ್ನಡ ಪುಸ್ತಕ ಹಬ್ಬ’ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ಕನ್ನಡವನ್ನು ಆಧರಿಸಿ ಬರೆದಿದ್ದೇನೆ. ರಷ್ಯಾ, ಜಪಾನ್, ಶಿಕಾಗೋ ಮುಂತಾದೆಡೆ ಭಾಷಣ ಮಾಡಿದ್ದೇನೆ, ಪಾಠ ಮಾಡಿದ್ದೇನೆ. ಅದು ನನ್ನ ಕರ್ತವ್ಯ. ನಮ್ಮ ಭಾಷೆಯ ಬಗೆಗೆ ನನಗೆ ಪ್ರೀತಿ ಇದೆ. ನಾನು ಆಡಿ, ಬೆಳೆದು ಪ್ರಪಂಚದ ವಿವಿಧ ದೇಶಗಳನ್ನು ಕಾಣಲು ನೆರವಾದ ನನ್ನ ಪ್ರೀತಿಯ ಭಾಷೆಗೆ ನೀವು ಕನ್ನಡ ಸಾಹಿತ್ಯ ಹಬ್ಬದ ಮೂಲಕ ಸನ್ಮಾನ ಮಾಡುತ್ತಿದ್ದೀರಿ ಎಂದರು.
ಕಾರ್ಯಕ್ರಮದಲ್ಲಿ ನಾಡೋಜ ಡಾ. ಮಹೇಶ ಜೋಶಿ ಅವರು ಮಾತನಾಡಿ ಕನ್ನಡದಲ್ಲಿ ಪುಸ್ತಕ ಎಂದ ತಕ್ಷಣ ನೆನಪಿಗೆ ಬರುವುದು ಕನ್ನಡ ಕಾದಂಬರಿಯ ಪಿತಾಮಹ ಗಳಗನಾಥರು. ಪುಸ್ತಕವನ್ನು ಹೆಗಲಮೇಲೆ ಹೊತ್ತುಕಂಡು ಹೋಗಿ ಮಾರಾಟ ಮಾಡಿದ ಅವರಿಗೆ ಕೊನೆಕೊನೆಯಲ್ಲಿ ಹೆಗಲ ಭಾಗದಲ್ಲಿ ಸ್ಪರ್ಶಜ್ಞಾನವೇ ಇಲ್ಲದಂತಾಗಿತ್ತು. ಎತ್ತಿನಬಂಡಿಯಲ್ಲಿ ಪುಸ್ತಕ ಹೊತ್ತುಕೊಂಡು ಹೋಗಿ, ಪೋಸ್ಟಾಫೀಸಿನಲ್ಲಿ ಇಟ್ಟು, 26 ಜಿಲ್ಲೆಗಳಲ್ಲಿ 130 ಸಬ್ ಪೋಸ್ಟ್ ಮುಖಾಂತರ 1200 ಹಳ್ಳಿಗಳಿಗೆ ಸದ್ಬೋಧಚಂದ್ರಿಕೆ ಪತ್ರಿಕೆಯನ್ನು ಮುಟ್ಟಿಸಿದ ಏಕೈಕ ವ್ಯಕ್ತಿ ಚಂದಾ ಹಣದ ಮೂಲಕವೇ ಪತ್ರಿಕೆಯನ್ನು ನಡೆಸಿದರು. ಕನ್ನಡ ಪುಸ್ತಕ ಹಬ್ಬದ ಸಂದರ್ಭದಲ್ಲಿ ಬೇಂದ್ರೆ, ಕುವೆಂಪು ಮುಂತಾದವರೆಲ್ಲರ ಜೊತೆಗೆ ಗಳಗನಾಥರನ್ನೂ ನೆನಯಬೇಕಾದದ್ದು ಅತ್ಯಂತ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿಯ ಪೂಜ್ಯ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ವಿಶ್ವಭ್ರಾತೃತ್ವವನ್ನು ಹೊತ್ತಂತಹ ನಾವು ಜಾಗತೀಕರಣ, ಖಾಸಗೀಕರಣ ಇವೆಲ್ಲವುಗಳ ನಡುವೆ ಸಿಕ್ಕಿಹಾಕಿಕೊಂಡಿದ್ದೇವೆ. ನಮ್ಮ ನೆಲಕ್ಕೆ ಒಂದು ಶಕ್ತಿ, ಜ್ಞಾನವಿದೆ. ಅದನ್ನು ಕಳೆದುಕೊಂಡರೆ ನಮ್ಮತನವನ್ನು ಕಳೆದುಕೊಂಡಂತೆ ಎಂದರು.
ಇಂಗ್ಲಿಷ್ ವ್ಯಾಮೋಹಕ್ಕೆ ಸಿಲುಕಿ ನಮ್ಮ ಅಮ್ಮನನ್ನು ಮರೆಯುವುದು ಬೇಡ. ನಮ್ಮ ಹಿತವನ್ನು, ಸಮಾಜದ ಹಿತವನ್ನು ಕಾಪಾಡುವುದು ಸಾಹಿತ್ಯ. ಸಾಹಿತ್ಯದಿಂದ ಆಗಬಹುದಾದ ಆತ್ಯಂತಿಕ ಉದ್ದೇಶ ನಮ್ಮೊಳಗಿನ ಪ್ರಜ್ಞೆ ಜಾಗೃತವಾಗುವುದು. ಸಾಹಿತ್ಯದ ಹೆಸರಿನ ಎಲ್ಲವನ್ನೂ ಓದಿದರೆ ನಾವು ಮೇಲೇಳಲು ಆಗುವುದಿಲ್ಲ. ನಮ್ಮ ಪ್ರಜ್ಞೆಯನ್ನು ಎತ್ತರಿಸಲು ಎಲ್ಲ ಕೃತಿಗಳನ್ನೂ ಓದಬಾರದು. ಅಗಾಧವಾದ ಪ್ರಜ್ಞೆಯುಳ್ಳವರು ಬರೆದ ಕೃತಿಗಳನ್ನು ಓದಬೇಕು. ಕೆಲವು ಕೃತಿಗಳನ್ನು ಕೈಮನಸ್ಸು ಎಲ್ಲವನ್ನೂ ತೊಳೆದುಕೊಂಡು ಓದಬೇಕು. ಕೆಲವು ಕೃತಿಗಳನ್ನು ಓದಿದ ಬಳಿಕ ಕೈಮನಸ್ಸು ಎಲ್ಲವನ್ನೂ ತೊಳೆದುಕೊಳ್ಳಬೇಕು ಎನಿಸುತ್ತದೆ ಎಂದರು.
ನಮ್ಮ ಸಮಸ್ಯೆಗೆ ನಮ್ಮಲ್ಲಿರುವಷ್ಟೇ ಪ್ರಜ್ಞೆಯಿಂದ ಉತ್ತರ ಸಿಗುವುದಿಲ್ಲ. ನಮ್ಮ ಪ್ರಜ್ಞೆಯನ್ನು ಎತ್ತರಿಸಿಕೊಂಡರೆ ಮಾತ್ರ ಸಮಸ್ಯೆಗೆ ಉತ್ತರ ದೊರಕುವುದು. ಒಳ್ಳೆಯ ಸಾಹಿತ್ಯ ಓದಿದರೆ ನಮ್ಮ ಬುದ್ದಿ, ಮನಸ್ಸು ಬೆಳೆಯುತ್ತದೆ. ಜ್ಞಾನವಿಲ್ಲದಿದ್ದರೆ ನಾವು ಎಲ್ಲಿಂದ ಬಂದಿದ್ದೇವೋ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಜ್ಞಾನವಿಲ್ಲದೇ ಮುಕ್ತಿ ಸಾಧ್ಯವಿಲ್ಲ. ಜ್ಞಾನಕ್ಕೆ ಪುಸ್ತಕವೂ ಸಾಧನ. ನಮ್ಮ ಮಕ್ಕಳಿಗೆ ಒಳ್ಳೆಯ ಪುಸ್ತಕ ಓದಿಸಿ ಕಲಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಎಂ ಪಿ ಕುಮಾರ್ ಮಾತನಾಡಿ ಕನ್ನಡದ ಸೇವೆಯನ್ನು, ಕರ್ತವ್ಯವನ್ನು ರಾಷ್ಟ್ರೋತ್ಥಾನ ಪರಿಷತ್ ಇದುವರೆಗೂ ಮಾಡಿಕೊಂಡೇ ಬಂದಿದೆ. ಭಾಷೆಗೂ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಭಾಷೆ ಇಲ್ಲದಿದ್ದರೆ ಸಂಸ್ಕೃತಿ ಇಲ್ಲ. ಸಂಸ್ಕೃತಿಯ ಅವಿಭಾಜ್ಯ ಅಂಗ ಭಾಷೆ. ಕನ್ನಡ ಭಾಷೆ ಸುಂದರ ಮಾತ್ರವಲ್ಲ ಭವ್ಯ ಇತಿಹಾಸವಿರುವ ಭಾಷೆ ಕೂಡ. ಒಂದು ಸಮಾಜ, ಸಮುದಾಯದ ಅಳಿವು, ಉಳಿವು, ಕಾಣ್ಕೆಗಳನ್ನು ದಾಖಲೆ ಮಾಡುವುದಕ್ಕೆ ತನ್ನದೇ ಭಾಷೆ ಇದ್ದರೆ, ತನ್ನದೇ ಪದಗಳು, ನುಡಿಗಟ್ಟುಗಳು, ಗಾದೆಗಳ ಮೂಲಕ ಅನುಭವವನ್ನು ಹೇಳುವುದಕ್ಕೆ ಸಾಧ್ಯವಾಗುತ್ತದೆ. ಭಾಷೆ ಇಲ್ಲದಿದ್ದರೆ ಈ ನಮ್ಮೆಲ್ಲ ಅನುಭವಗಳು ಸರಿಯಾಗಿ ಅಭಿವ್ಯಕ್ತವಾಗಲಿಕ್ಕೆ ಸಾಧ್ಯವಾಗುವುದಿಲ್ಲ. ಅಂತಹ ಭಾಷೆಯನ್ನು ಉಳಿಸುವಂತಹ ಬೆಳೆಸುವಂತಹ ಅಗತ್ಯವಾದ ಕೆಲಸ ಈ ಹೊತ್ತು ಆಗಲೇಬೇಕಿದೆ ಎಂದು ನುಡಿದರು.
ಆಧುನಿಕತೆಯ ಹೆಸರಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಲ್ಲಿ ಆರ್ಥಿಕಮೂಲದ ಸಮಾಜವಾದದ ನೆಲೆಯಲ್ಲಿ ಭಾಷೆಯನ್ನು ಹಾಗೂ ಅದರ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ವಸಾಹತುಶಾಹಿ ಪ್ರಜ್ಞೆಯಿಂದ ದಾಸ್ಯಮನೋಭಾವದಿಂದ ಕನ್ನಡಕ್ಕಿಂತ ಇಂಗ್ಲಿಷ್ ಭಾಷೆಯೇ ಪ್ರಮುಖವಾಗತ್ತಿದೆ. ನಮ್ಮ ಭಾಷೆಯನ್ನು ಈ ಮಟ್ಟಿಗೆ ಕಡೆಗಣಿಸುವ ಪರಿಸ್ಥಿತಿ ಬರಬಾರದು. ಕನ್ನಡದ ಬಗ್ಗೆ ಅಭಿಮಾನವಿರಬೇಕು, ಮಾತನಾಡಬೇಕು, ಓದಬೇಕು, ಬರೆಯಬೇಕು ಎಂದು ಅಭಿಪ್ರಾಯಪಟ್ಟರು.
ಹೊಸ ತಲೆಮಾರಿಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣದಿಂದಾಗಿ ಕನ್ನಡವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಕನ್ನಡದಲ್ಲಿ ಓದದೇ ಇರುವುದರಿಂದ ಕನ್ನಡ ಸಾಹಿತ್ಯ, ಕಾವ್ಯವನ್ನು ಓದುವುದಿಲ್ಲ. ಇಂತಹವರ ಸಂಖ್ಯೆ ಹೆಚ್ಚುತ್ತಿದೆ. ಕನ್ನಡ ಓದುವ, ಬರೆಯುವ, ಮಾತನಾಡುವವರ ಸಂಖ್ಯೆ ಹೆಚ್ಚಾಗುವಂತಹ ವಾತಾವರಣವನ್ನು ನಿರ್ಮಿಸಬೇಕು. ಎಲ್ಲೆಲ್ಲೂ ತಂತ್ರಜ್ಞಾನವೇ ಆವರಿಸುತ್ತಿದ್ದು, ಕೃತಕ ಬುದ್ಧಿಮತ್ತೆ, ಚಾಟ್ ಜಿಪಿಟಿ ಇವೆಲ್ಲ ಜ್ಞಾನದ ಮೂಲಗಳಾಗಿವೆ. ಇಲ್ಲೆಲ್ಲ ಕನ್ನಡದ ಮೂಲಕವೇ ಜ್ಞಾನವನ್ನು ಪಡೆಯುವಂತಾಗಬೇಕು ಎಂದು ಹೇಳಿದರು.
ಇದಕ್ಕೂ ಪೂರ್ವದಲ್ಲಿ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಪ್ರಾಂಗಣದಲ್ಲಿ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆಗೆ ನಾಡೋಜ ಡಾ. ಮಹೇಶ ಜೋಶಿ ಹಾಗೂ ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆಯವರು ಚಾಲನೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಷ್ಟ್ರೋತ್ಥಾನ ಪರಿಷತ್ನವರೆಗೆ ಹರ್ಷೋದ್ಗಾರ, ಪುಷ್ಪವೃಷ್ಟಿ, ಡೊಳ್ಳು-ವೀರಗಾಸೆ ನೃತ್ಯಗಳೊಂದಿಗೆ ಶೋಭಾಯಾತ್ರೆ ಭವ್ಯವಾಗಿ ಸಾಗಿಬಂತು.
ಪುಸ್ತಕ ಹಬ್ಬವು ಇಂದಿನಿಂದ ಪ್ರಾರಂಭಿಸಿ, ಡಿಸೆಂಬರ್ 1ರ ವರೆಗೆ 37 ದಿನಗಳ ಕಾಲ ರಾಷ್ಟ್ರೋತ್ಥಾನ ಪರಿಷತ್ನಲ್ಲಿ ನಡೆಯಲಿದೆ. ಹಬ್ಬದಲ್ಲಿ ಪುಸ್ತಕ ಪ್ರದರ್ಶನ, ಮಾರಾಟ, ಹೊಸ ಪುಸ್ತಕಗಳ ಲೋಕಾರ್ಪಣೆ, ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆ – ಕಾರ್ಯಾಗಾರಗಳು, ಪ್ರತಿ ಸಂಜೆ ಸಂಗೀತ, ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಪುಸ್ತಕಗಳಿಗೆ 50% ವರೆಗೂ ರಿಯಾಯಿತಿ ಇರುತ್ತದೆ.