ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ 5ನೇ ಕನ್ನಡ ಪುಸ್ತಕ ಹಬ್ಬದ ಅಂಗವಾಗಿ ಪ್ರತಿದಿನ ಸಂಜೆ ಸಂಸ್ಕಾರ ಭಾರತೀ ಬೆಂಗಳೂರು ಸಹಯೋಗದಲ್ಲಿ ಕೆಂಪೇಗೌಡ ನಗರದ ಕೇಶವಶಿಲ್ಪ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಇಲ್ಲಿ ಪುಸ್ತಕ ಪ್ರದರ್ಶನ–ಮಾರಾಟದ ಜೊತೆಗೆ ಕಲಾ–ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ.

ಪುಸ್ತಕ ಹಬ್ಬದ 5ನೇ ದಿನ (ನವೆಂಬರ್‌ 5) ಸಂಜೆ 6 ರಿಂದ ಕವಿ ಕೆ.ಎಸ್‌. ನರಸಿಂಹಸ್ವಾಮಿ ಅವರ ಕವನಗಳನ್ನು ಆಧರಿಸಿದ ಜನಪ್ರಿಯ ನಾಟಕ ‘ಮೈಸೂರು ಮಲ್ಲಿಗೆ’ ಪ್ರದರ್ಶನಗೊಳ್ಳಲಿದೆ. ಕವಿಯ ಜೀವನಪಯಣ, ಅವರ ಕವಿತೆಗಳ ತತ್ತ್ವಭಾವ, ಕಷ್ಟ–ಸುಖಗಳ ಮಿಶ್ರಣವನ್ನು ವೇದಿಕೆಗೆ ತರಲಿರುವ ಈ ನಾಟಕದಲ್ಲಿ ಸಂಗೀತ, ನೃತ್ಯ ಮತ್ತು ನಾಟಕೀಯ ಅಂಶಗಳ ಸಂಯೋಜನೆ ವಿಶೇಷ ಆಕರ್ಷಣೆಯಾಗಲಿದೆ.

ಕಲಾಗಂಗೋತ್ರಿ ತಂಡದಿಂದ ಡಾ. ಬಿ.ವಿ. ರಾಜಾರಾಂ ಅವರ ನಿರ್ದೇಶನದ ಈ ನಾಟಕವು ಈಗಾಗಲೇ 350ಕ್ಕೂ ಹೆಚ್ಚು ಬಾರಿ ರಾಷ್ಟ್ರ–ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. 1971ರಲ್ಲಿ ಕಲಾ ಗಂಗೋತ್ರಿ ಸ್ಥಾಪನೆಯಾದ ನಂತರ, ಸುಮಾರು 54 ವರ್ಷಗಳಿಂದ ಈ ನಾಟಕ ನಿರಂತರವಾಗಿ ಪ್ರದರ್ಶನಗೊಳ್ಳುತ್ತಿದ್ದು, ಕನ್ನಡ ನಾಡಿನ ಪರಿಮಳವನ್ನು ದೇಶ–ವಿದೇಶಗಳಿಗೂ ತಲುಪಿಸಿದೆ. ನಿರ್ದೇಶಕ ಡಾ. ರಾಜಾರಾಂ ಅವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಮೂಲದವರು.
ಕವಿ ಕೆ.ಎಸ್‌. ನರಸಿಂಹಸ್ವಾಮಿ ಅವರ ಕವನಗಳನ್ನು ಆಧರಿಸಿ ರಚನೆಯಾದ ‘ಮೈಸೂರು ಮಲ್ಲಿಗೆ’ ಕಾವ್ಯ–ರಸಿಕರ ಮನಗೆದ್ದ ಕೃತಿಯಾಗಿದೆ. ಪ್ರೇಮಕವಿಯಾಗಿ ಖ್ಯಾತಿ ಪಡೆದ ಕವಿ ಕೆಎಸ್‌ ನರಸಿಂಹಸ್ವಾಮಿ ಅವರ ಕವಿತೆಗಳ ತಾತ್ವಿಕ ಸಂವೇದನೆ ಈ ನಾಟಕದ ಮೂಲಕ ಮತ್ತೊಮ್ಮೆ ಜೀವಂತವಾಗಲಿದೆ.

ನಾಟಕವು ಬೆಂಗಳೂರು ಕೆಂಪೇಗೌಡ ನಗರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ನ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯಲಿದ್ದು, ಪ್ರೇಕ್ಷಕರಿಗೆ ಉಚಿತ ಪ್ರವೇಶವಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.