ವಿಚಾರಗೋಷ್ಠಿ – ೧ : ಕನ್ನಡ ಎಂದರೆ ಬರಿ ನುಡಿಯಲ್ಲ
ಕನ್ನಡ ನಮ್ಮ ಸಂಸ್ಕೃತಿಯನ್ನು ಅರ್ಥೈಸುವ ಭಾಷೆ: ಚಕ್ರವರ್ತಿ ಸೂಲಿಬೆಲೆ
ಮಂಗಳೂರು: ಭಾರತ ಜನ್ಯವಾದ ಎಲ್ಲಾ ಭಾಷೆಗಳು ನೂರು ಪ್ರತಿಶತ ವೈಜ್ಞಾನಿಕವಾಗಿವೆ. ನಮಗೆಲ್ಲರಿಗೂ ಬರೆದಂತೆಯೇ ಓದುವ ಸಾಮರ್ಥ್ಯ ನೀಡಿದ್ದು ನಮ್ಮ ಭಾಷೆ. ಅಕ್ಷರಗಳ ಜನನವೂ ವ್ಯವಸ್ಥಿತವಾಗಿರುವ ವಿಶಿಷ್ಠ ಭಾಷೆ ನಮ್ಮದು ಎಂದು ಖ್ಯಾತ ವಾಗ್ಮಿ ಹಾಗೂ ಯುವಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ‘ಕನ್ನಡ ಎಂದರೆ ಬರಿ ನುಡಿಯಲ್ಲ’ ಎಂಬ ವಿಷಯದ ಕುರಿತು ಅವರು ಭಾನುವಾರ ಮಾತನಾಡಿದರು.
ಇಂಗ್ಲೀಷ್ ಒಂದು ಭಾಷೆ, ಕನ್ನಡ ಒಂದು ಸಂಸ್ಕೃತಿ. ಹಾಗಾಗಿ ಕನ್ನಡದಲ್ಲಿ ಕಲಿತ ಸಂಗತಿ ಹೆಚ್ಚು ಮನದಟ್ಟಾಗುತ್ತದೆ. ಇಂಗ್ಲೀಷ್ ಗೊಂದಲದ ಗೂಡಾಗಿದೆ. ಚಿಕ್ಕಂದಿನಿಂದಲೇ ಮಗು ಇಂಗ್ಲೀಷ್ ಮಾತಾಡಬೇಕು ಎನ್ನುವ ಪೋಷಕರು ಮಕ್ಕಳು ಸಂಸ್ಕೃತಿ ಮರೆಯುತ್ತಾರೆ ಎನ್ನುವುದನ್ನು ಗಮನಿಸುವುದು ಅಗತ್ಯವೆಂದು ಅಭಿಪ್ರಾಯಪಟ್ಟರು.
ವಿಚಾರಗೋಷ್ಠಿ – ೨ : ಕನ್ನಡ ಶಾಲೆ ಯಶೋಗಾಥೆ ಕಾರ್ಯಕ್ರಮ
ಮಂಗಳೂರು: ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದ ಎರಡನೇ ದಿನದ ಎರಡನೇ ಗೋಷ್ಠಿಯಲ್ಲಿ ಕನ್ನಡ ಶಾಲಾ ಯಶೋಗಾಥೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಸುಳ್ಯದ ಸ್ನೇಹ ವಿದ್ಯಾ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಮುಖ್ಯ ಅತಿಥಿಯರಾಗಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಭಾರತೀಯತೆಯ ತಳಹದಿಯ ಮೇಲೆ ಸಂಸ್ಕಾರಭರಿತ ವಿದ್ಯಾರ್ಥಿ ಸಮೂಹದ ನಿರ್ಮಾಣಕ್ಕಾಗಿ ಕಲ್ಲಡ್ಕದ ಶ್ರೀರಾಮ ಶಾಲೆಯನ್ನು ಪ್ರಾರಂಭಿಸಲಾಯಿತು. ಅನೇಕ ವಿರೋಧಗಳು ವ್ಯಕ್ತವಾದರೂ ರಾಷ್ಟ್ರೀಯತೆಯ ಆಧಾರದ ಮೇಲೆಯೇ ಶಾಲೆಯನ್ನು ನಡೆಸುತ್ತಿದ್ದೇವೆ. ವಿದ್ಯಾರ್ಥಿ ಮತ್ತು ಶಿಕ್ಷಕರ ಬಾಂಧವ್ಯ ವೃದ್ಧಿಯ ಮೂಲಕ ವಿದ್ಯಾರ್ಥಿಗಳಿಗೆ ಸಂಸ್ಕೃತಿಯನ್ನು ಪರಿಚಯಿಸಲಾಗುತ್ತದೆ ಎಂದು ಹೇಳಿದರು.
ಶಿಕ್ಷಣದಿಂದ ಸ್ವಾಭಿಮಾನಿ ವಿದ್ಯಾರ್ಥಿಗಳು ನಿರ್ಮಾಣವಾಗಬೇಕು. ಸ್ವಾಭಿಮಾನ ಮರೆತಾಗ ಸಮಾಜದಲ್ಲಿ ಹಲವು ಅನರ್ಥಗಳಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳಿಗೆ ನಮ್ಮ ನೆಲದ ಸತ್ವವನ್ನು ಪರಿಚಯಿಸುವ ಪ್ರೇರಣಾದಾಯಿ ಕಾರ್ಯಕ್ರಮಗಳು ಶಾಲೆಗಳಲ್ಲಾಗಬೇಕು. ಅಂತಹ ಕಾರ್ಯಕ್ರಮಗಳು ಶಿಕ್ಷಕರು, ವಿದ್ಯಾರ್ಥಿ ವೃಂದ ಮತ್ತು ಹೆತ್ತವರನ್ನು ಬೆಸೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ದಾಮ್ಲೆ ಮಾತನಾಡಿ ಗುಲಾಮಿ ಮನಸ್ಥಿತಿಯಿಂದ ಹೊರಬರುವ ಉದ್ಧೇಶದಿಂದ ನಿರ್ಮಾಣಗೊಂಡ ವಿದ್ಯಾಲಯ ನಮ್ಮದು. ಶಾಲೆ ಕಟ್ಟುವಾಗ ಹೂದೋಟ ಎನ್ನುವ ಭಾವನೆ ಹೊಂದಿದ್ದೆನು. ಹಾಗಾಗಿ ಕೆಲವು ಸ್ನೇಹಿತರು ಸೇರಿ ಸ್ನೇಹ ಶಾಲೆಯನ್ನು ಪ್ರಾರಂಭಿಸಿದೆವು. ಆದರೆ ಶಾಲೆಯನ್ನು ನಿರ್ಮಾಣ ಮಾಡಿದ ನಂತರ ಹಲವು ಸಮಸ್ಯೆಗಳು ಎದುರಾದವು ಎಂದರು.
ಕೇವಲ ಬಾಯ್ಪಾಠ ಮಾಡಿ ತೇರ್ಗಡೆಯಾಗುವ ವಿದ್ಯಾರ್ಥಿ ವೃಂದದ ನಿರ್ಮಾಣದಿಂದ ಹಲವು ಸಮಸ್ಯೆಗಳಾಗುತ್ತಿದ್ದವು. ಆದ್ದರಿಂದ ಶಿಕ್ಷಣ ಮತ್ತು ಪ್ರಕೃತಿಗಿರುವ ನಿಕಟ ಸಂಬಂಧವನ್ನು ಅರಿತು ಹಲವು ಪ್ರಯೋಗಗಳ ಮೂಲಕ ನಮ್ಮ ಶಾಲೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಕನ್ನಡ ಕಲಿತರೆ ಹಿನ್ನಡೆಯಿಲ್ಲ ಎನ್ನುವ ಸಂದೇಶವನ್ನು ರವಾನಿಸಿ ಕನ್ನಡ ಮಾಧ್ಯಮಕ್ಕೆ ಸರಿಯಾದ ಮಾನ್ಯತೆ ಸಿಗುವಂತೆ ಮಾಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ.ಪಿ.ಎಲ್.ಧರ್ಮ ಸಮನ್ವಯಕಾರರಾಗಿದ್ದರು.
ವಿಚಾರಗೋಷ್ಠಿ – ೩
ಸಂಸ್ಕಾರ ನೀಡುವುದೇ ಶಿಕ್ಷಣ: ಪ್ರಕಾಶ್ ಮಲ್ಪೆ
ಮಂಗಳೂರು: ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಎರಡನೇ ದಿನದ ತೃತೀಯ ಗೋಷ್ಠಿ ‘ನವದಂಪತಿಗಳ ಸಮಾವೇಶ’ ಶಿವರಾಮ ಕಾರಂತ ವೇದಿಕೆಯಲ್ಲಿ ನಡೆಯಿತು. ಗೋಷ್ಠಿಯಲ್ಲಿ ಖ್ಯಾತ ವಾಗ್ಮಿ ಪ್ರಕಾಶ್ ಮಲ್ಪೆ ನವದಂಪತಿಗಳ ಸಮಾವೇಶದಲ್ಲಿ ಉಪನ್ಯಾಸ ನೀಡಿದರು. ಭಾಷೆ ಎನ್ನುವುದು ಸಂವಹನ ಮಾಧ್ಯಮವಾಗಿರದೆ ಅದೊಂದು ಸಂಸ್ಕೃತಿಯಾಗಿದೆ. ಸಂಸ್ಕಾರವನ್ನು ಕೊಡುವುದೇ ಶಿಕ್ಷಣವಾದ್ದರಿಂದ ಸಂಸ್ಕೃತಿಯನ್ನು ಪರಿಚಯಿಸುವ ನಮ್ಮ ಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡಬೇಕು. ಮಾತೃ ಭಾಷೆಯಲ್ಲಿ ಕಲಿತ ಮಕ್ಕಳು ಹೆಚ್ಚು ವಿಷಯಾಸಕ್ತಿಯನ್ನು ಹೊಂದುವುದರಿಂದ ಮಕ್ಕಳನ್ನು ಮಾತೃಭಾಷೆಯಲ್ಲಿ ಶಿಕ್ಷಣ ಸಿಗುವ ಮಾಧ್ಯಮಕ್ಕೆ ಸೇರಿಸುವ ಜವಾಬ್ದಾರಿ ಪೋಷಕರಲ್ಲಿದೆ ಎನ್ನುವುದನ್ನು ತಿಳಿಸಿದರು.
ವಿಚಾರಗೋಷ್ಠಿ-೪: ಜೀವನ ಮೌಲ್ಯ
ಮಂಗಳೂರು: ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಎರಡನೇ ದಿನದ ಚತುರ್ಥ ಗೋಷ್ಠಿ ‘ಜೀವನ ಮೌಲ್ಯ’ ಎಂಬ ವಿಷಯದ ಕುರಿತು ಶಿವರಾಮ ಕಾರಂತ ವೇದಿಕೆಯಲ್ಲಿ ನಡೆಯಿತು. ಗೋಷ್ಠಿಯಲ್ಲಿ ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಉಪನ್ಯಾಸ ನೀಡಿದರು. ಪ್ರತಿ ವ್ಯಕ್ತಿಗೂ ರಾಷ್ಟ್ರೀಯ ಮೌಲ್ಯ, ಸಾಮಾಜಿಕ ಮೌಲ್ಯ ಮತ್ತು ವೈಯಕ್ತಿಕ ಮೌಲ್ಯಗಳಿರುತ್ತವೆ. ಈ ಎಲ್ಲಾ ಮೌಲ್ಯಗಳು ಜೀವನ ಪ್ರೀತಿಯನ್ನು ಆಧರಿಸಿದ್ದಾಗಿದೆ. ಅವುಗಳೆಲ್ಲವನ್ನೂ ಪಾಲಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ನುಡಿದರು. ವೇದಿಕೆಯಲ್ಲಿ ಸಮನ್ವಯಕಾರರಾಗಿ ಡಾ.ಮೀನಾಕ್ಷಿ ರಾಮಚಂದ್ರ ಉಪಸ್ಥಿತರಿದ್ದರು
ಸಮಾರೋಪ ಸಮಾರಂಭ
ಕನ್ನಡ ನಾಡಿನ ಸಾಧಕರಲ್ಲಿ ಕ್ರಿಯಾಶೀಲತೆಯನ್ನು ಬೆಳೆಸಿದ್ದೇ ಕನ್ನಡ ಮಾಧ್ಯಮ ಶಾಲೆಗಳು: ವಿಶ್ವೇಶ್ವರ ಹೆಗಡೆ ಕಾಗೇರಿ
ಮಂಗಳೂರು: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಕಡಿಮೆ ಇರಬಹುದು. ಆದರೆ ಗುಣಮಟ್ಟ ಇಂದಿಗೂ ಚೆನ್ನಾಗಿಯೇ ಇದೆ. ಕನ್ನಡ ಶಾಲೆಗಳ ಕುರಿತಾದ ಕೀಳರಿಮೆ ಮತ್ತು ಆಂಗ್ಲ ಭಾಷೆಯೆಂದರೆ ಪ್ರತಿಷ್ಠೆಯೆಂಬ ಭ್ರಮೆಯಿಂದ ಜನತೆ ಹೊರಬರಬೇಕು. ಏಕೆಂದರೆ ಕನ್ನಡ ನಾಡಿನ ಬಹುತೇಕ ಸಾಧಕರಲ್ಲಿ ಕ್ರಿಯಾಶೀಲತೆಯನ್ನು ಬೆಳೆಸಿದ್ದೇ ಕನ್ನಡ ಮಾಧ್ಯಮ ಶಾಲೆಗಳು ಎಂದು ಕರ್ನಾಟಕದ ವಿಧಾನಸಭೆಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಭಾನುವಾರ ಮಾತನಾಡಿದರು.
ಆಡು ಭಾಷೆ, ಮಾತೃಭಾಷೆ ಮತ್ತು ರಾಷ್ಟ್ರಭಾಷೆಗೆ ಸರಿಸಮವಾಗಿ ಗೌರವಕೊಡಬೇಕು. ಮಾತೃಭಾಷೆ ಕೇವಲ ಪಠ್ಯದ ವಿಷಯವಾಗಿರದೆ ಸಂಸ್ಕಾರ ನೀಡುವ, ಸಂಸ್ಕೃತಿಯನ್ನು ಪರಿಚಯಿಸುವ ಶಕ್ತಿಯನ್ನು ಹೊಂದಿದೆ. ಭಾಷೆಯ ಅಭಿವೃದ್ಧಿಯ ದೃಷ್ಟಿಯಿಂದ ಇಂತಹ ಕನ್ನಡ ಶಾಲಾ ಮಕ್ಕಳ ಹಬ್ಬ ಎಂಬ ಚಟುವಟಿಕೆಯುಕ್ತ ಕಾರ್ಯಕ್ರಮ ಉದಾತ್ತ ಪರಿಕಲ್ಪನೆಗಳನ್ನೊಳಗೊಂಡ ಪರಿವರ್ತನಾಶೀಲ ಮಾದರಿಯನ್ನು ನಾಡಿನ ಎದುರಿಗಿರಿಸಿದೆ ಎಂದು ನುಡಿದರು.
ಹೆತ್ತವರು ತಮ್ಮ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೊರಿಸಬಾರದು. ವಿದ್ಯಾರ್ಥಿಗಳು ಹಣ ಗಳಿಸುವುದಕ್ಕಿರುವ ಯಂತ್ರಗಳಲ್ಲ. ಅವರಲ್ಲಿ ಸಾಧಿಸುವ ಅಪಾರವಾದ ಶಕ್ತಿ ಇದೆ. ಮಕ್ಕಳ ಸಾಮರ್ಥ್ಯವನ್ನು ಗುರುತಿಸುವ ಕೆಲಸ ಶಾಲೆ ಮತ್ತು ಮನೆಗಳ ಮೂಲಕ ಆಗಬೇಕು. ವಿದ್ಯಾರ್ಥಿಗಳ ಆಸಕ್ತಿಗನುಸಾರವಾಗಿ ಪ್ರೋತ್ಸಾಹ ನೀಡಬೇಕು. ಹಾಗಾದಾಗ ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ನ ವ್ಯವಸ್ಥಾಪನಾ ನಿರ್ದೇಶಕ ಮಹಾಬಲೇಶ್ವರ ರಾವ್ ಮಾತನಾಡಿ ಭಾರತ ವಿವಿಧ ಭಾಷೆಗಳ ಹೂದೋಟ. ಯಾವುದೇ ಭಾಷೆಯನ್ನು ಅವಗಣಿಸದೆ ಕನ್ನಡದ ಮನಸ್ಸು ಬೆಳೆಸಿಕೊಳ್ಳುವುದು ಮುಖ್ಯ. ಮಕ್ಕಳಿಗೆ ಆರಂಭದ ವಿದ್ಯಾಭ್ಯಾಸ ಕನ್ನಡದಲ್ಲೇ ಸಿಗುವಂತಹ ಪ್ರಯತ್ನಗಳಾಗಬೇಕು. ನಮ್ಮತನವನ್ನು ಗಟ್ಟಿಗೊಳಿಸುವುದಕ್ಕೆ ಇಂತಹ ಕ್ರಿಯಾಶೀಲ ಕಾರ್ಯಕ್ರಮಗಳು ಸಹಕಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಮಾತನಾಡಿ ಅಂಕಗಳು ಜೀವನ ನಡೆಸುವ ಮಾನದಂಡವಲ್ಲ. ಸಾಮರ್ಥ್ಯ, ಇಚ್ಛಾಶಕ್ತಿ, ಕೌಶಲ, ಅಭ್ಯಾಸ, ನೈತಿಕ ಮೌಲ್ಯ ಎಂಬ ಐದು ಅಂಶಗಳ ಸಮ್ಮಿಶ್ರಣ ವಿದ್ಯಾರ್ಥಿಗಳಿಗೆ ಲಭಿಸಿದರೆ ಅವರ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸಿ, ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಳ್ಳುವ ಮನೋಧರ್ಮದ ರಚನೆಗೆ ಇಂತಹ ಕಾರ್ಯಕ್ರಮಗಳು ಉಪಯುಕ್ತ ಎಂದು ಹೇಳಿದರು.
ವೇದಿಕೆಯಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.)ಯ ಅಧ್ಯಕ್ಷ ವಾಮನ ಶೆಣೈ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಕೇಶವ ಬಂಗೇರ ಸ್ವಾಗತಿಸಿ, ಉಪನ್ಯಾಸಕಿ ಸ್ಮಿತಾ ವಂದಿಸಿದರು. ಗೋವಿಂದದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.