ರಾಷ್ಟ್ರೀಯ ಸ್ವಯಂಸೇವಕ ಸಂಘ
ಅಖಿಲ ಭಾರತೀಯ ಪ್ರತಿನಿಧಿ ಸಭಾ, ಬೆಂಗಳೂರು
ಫಾಲ್ಗುಣ ಶುಕ್ಲ ೭-೯, ಯುಗಾಬ್ಧ ೫೧೧೫
(ಮಾರ್ಚ್ ೭, ೮ ಮತ್ತು ೯, ೨೦೧೪)
ಮಹಾನ್ ಸ್ವಾತಂತ್ರ್ಯ ಸೇನಾನಿ ರಾಣಿ ಮಾತಾ ಗಾಡಿನ್‌ಲಿಯುವರ ಜನ್ಮ ಶತಮಾನದ ಸಂದರ್ಭದಲ್ಲಿಸರಕಾರ್ಯವಾಹ ಶ್ರೀ ಸುರೇಶ (ಭಯ್ಯಾಜಿ) ಜೋಷಿಯವರ ಪತ್ರಿಕಾ ಹೇಳಿಕೆ.
ನಮ್ಮ ದೇಶದ ಪೂರ್ವೋತ್ತರ ಪ್ರದೇಶದಲ್ಲಿರುವ ಮಣಿಪುರದ ರಮ್ಯ ಹಿಮಾಲಯ ಶ್ರೇಣಿಗಳ ನಡುವಿನ ಒಂದು ಗ್ರಾಮ ಲಂಗ್‌ಕಾವೋ. ಇಂದಿನಿಂದ ನೂರು ವರ್ಷಗಳ ಹಿಂದೆ (ಜನವರಿ ೨೬ ೧೯೧೫) ರಲ್ಲಿ ಇದೇ ಗ್ರಾಮದಲ್ಲಿ ರಾಣಿ ಮಾತಾ ಗಾಡಿನ್‌ಲಿಯು ಜನಿಸಿದರು. ದಿವ್ಯ ಆಧ್ಯಾತ್ಮಿಕ ಶಕ್ತಿ ಸಂಪನ್ನರಾಗಿದ್ದ ಅವರು ಆಂಗ್ಲ ಸಾಮ್ರಾಜ್ಯ ಮತ್ತು ಕ್ರೈಸ್ತ ಮಿಶನರಿಗಳಿಂದ ಭಾರತೀಯ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಂಪರೆಗಳಿಗೆ ಬಂದೊದಗಿದ ಆಪತ್ತನ್ನು ಆ ಸಮಯದಲ್ಲೇ ಕಂಡುಕೊಂಡಿದ್ದರು. ರಾಣಿ ಮಾತೆ ಮತ್ತು ಆಕೆಯ ಸಹೋದರ ಜಾದೋನಾಂಗ್ ೧೯೨೮ರಲ್ಲಿ ಗುವಾಹಾಟಿಯಲ್ಲಿ ಮಹಾತ್ಮಾ ಗಾಂಧಿಯವರೊಡನೆ ಗಂಭೀರವಾಗಿ ಚರ್ಚಿಸಿದರು. ತದನಂತರ ಕೇವಲ ೧೩ ವರ್ಷ ವಯಸ್ಸಿನಲ್ಲೇ ತನ್ನ ಸಹೋದರ ಹೇಪಾಉ ಜಾದೋನಾಂಗ್‌ರೊಂದಿಗೆ ಸೇರಿ ಆಂಗ್ಲರ ವಿರುದ್ಧ ಸಶಸ್ತ್ರ ಸಂಘರ್ಷವನ್ನೇ ಪ್ರಾರಂಭಿಸಿದಳು. ಜಾದೋನಾಂಗ್‌ರು ತಮ್ಮ ಸಾವಿರಾರು ಸಹವರ್ತಿಗಳನ್ನು ಸೇರಿಸಿಕೊಂಡು ತಮ್ಮ ಸ್ವಾಧಿನತೆಗಾಗಿ ಆಂಗ್ಲರ ವಿರುದ್ಧ ಹೋರಾಡಿದರು. ಕೊನೆಯಲ್ಲಿ ೨೯ ಅಗಸ್ಟ ೧೯೩೧ರಂದು ಬ್ರಿಟಿಷರ ಸೆರೆಸಿಕ್ಕ ಜಾದೋನಾಂಗ್‌ರನ್ನು ಮಿಥ್ಯಾ ಆರೋಪಗಳನ್ನು ಹೊರಿಸಿ ಗಲ್ಲಿಗೇರಿಸಲಾಯಿತು. ಜಾದೋನಾಂಗ್‌ರ ಮೃತ್ಯುವಿನ ನಂತರ ಈ ಸಂಘರ್ಷದ ಜವಾಬ್ದಾರಿಯು ರಾಣಿ ಮಾತಾ ಗಾಡಿನ್‌ಲಿಯುವರ ಭುಜದ ಮೇಲೆ ಬಿದ್ದಿತು. ಮಣಿಪುರದ ಸ್ಥಾನೀಯ ಸಮಾಜದ ಜನರನ್ನು ಸಂಘಟಿಸಿದ ರಾಣಿ ಮಾತೆ ಆಂಗ್ಲರೊಂದಿಗಿನ ಸಂಘರ್ಷವನ್ನು ಮುಂದುವರಿಸಿದರು. ಆದರೆ ದೌರ್ಭಾಗ್ಯವಶಾತ್ ರಾಣಿ ಮಾತಾ ಸೆರೆಹಿಡಿಯಲ್ಪಟ್ಟರು. ಆ ಸಮಯದಲ್ಲಿ ರಾಣಿ ಮಾತೆ ಕೇವಲ ೧೬ ವರ್ಷ ವಯಸ್ಸಿನವರಾಗಿದ್ದರು. ಆಂಗ್ಲರು ರಾಣಿಗೆ ಆಜೀವನ ಕಾರಾವಾಸದ ಶಿಕ್ಷೆಯನ್ನು ಘೋಷಿಸಿದರು.
ಶ್ರೀ ಜವಾಹರ ಲಾಲ್ ನೆಹರುರವರು ೧೯೩೭ರಲ್ಲಿ ಶಿಲಾಂಗ್ ಜೈಲಿನಲ್ಲಿ ಸ್ವಯಂ ಭೇಟಿಯಾಗಿ ಅವರನ್ನು ಉತ್ತರ-ಪೂರ್ವಾಂಚಲ ಪರ್ವತೀಯ ಕ್ಷೇತ್ರದ ’ರಾಣಿ’ಯೆಂದು ಸನ್ಮಾನಿಸಿದರು. ೧೯೪೭ರಲ್ಲಿ ದೇಶ ಸ್ವತಂತ್ರಗೊಂಡ ನಂತರ ಜೈಲಿನಿಂದ ಮುಕ್ತರಾದ ರಾಣಿ ಗಾಡಿನ್‌ಲಿಯು ’ರಾಣಿ ಮಾ’ ಎನ್ನುವ ಹೆಸರಿನಿಂದ ವಿಖ್ಯಾತರಾದರು. ಹದಿನೈದು ವರ್ಷಗಳ ಕಾಲ ಕಠೋರ ಜೈಲುವಾಸ ಅನುಭವಿಸಿದ್ದರೂ ಜೈಲಿನಿಂದ ಮುಕ್ತರಾದ ನಂತರ ಅವರು ವಿಶ್ರಾಂತರಾಗರಿಲ್ಲ. ಉತ್ತರ-ಪೂರ್ವಾಂಚಲ ಗುಡ್ಡಗಾಡು ಪ್ರದೇಶಗಳಲ್ಲಿ ನಡೆಯತ್ತಿದ್ದ ಮತಾಂತರ ಮತ್ತು ನಾಗಾ ನ್ಯಾಶನಲ್ ಕೌನ್ಸಿಲ್‌ನ (ಓಓಅ) ಅರಾಷ್ಟ್ರೀಯ ಆಂದೋಲನದ ವಿರುದ್ಧ ಸತತ ಸಂಘರ್ಷ ನಡೆಸಿದರು. ಈ ಕಾರಣದಿಂದ ಮತ್ತೊಮ್ಮೆ (೧೯೫೯ ರಿಂದ ೧೯೬೬ರ ವರೆಗೆ) ಅವರು ತಲೆಮರೆಸಿಕೊಂಡಿರಬೇಕಾಯಿತು. ನಿರಂತರ ಸಂಘರ್ಷ ಮಾಡುತ್ತ ೧೯ ಫೆಬ್ರುವರಿ ೧೯೯೩ರಂದು ಅವರು ಕೊನೆಯಸಿರೆಳೆದರು.
ಸ್ವಾತಂತ್ರ್ಯ ಹೋರಾಟ ಹಾಗೂ ಪೂರ್ವಾಂಚಲ ಗುಡ್ಡಗಾಡುಗಳ ಸಮಾಜ ರಕ್ಷಣೆಯಲ್ಲಿ ಅವರ ಅಪ್ರತಿಮ ಸೇವೆಯನ್ನು ಸ್ಮರಿಸಿ ಭಾರತ ಸರ್ಕಾರವು ಅವರನ್ನು ಪದ್ಮಭೂಷಣ ಪ್ರಶಸ್ತಿಯೊಂದಿಗೆ ಗೌರವಿಸಿತಲ್ಲದೇ ಅವರ ಪುಣ್ಯ ಸ್ಮೃತಿಯಲ್ಲಿ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿತು.
’ವನವಾಸಿ ಕಲ್ಯಾಣ ಆಶ್ರಮ’ದ ಕಾರ್ಯಕರ್ತರು ತಮ್ಮ ಪ್ರಯತ್ನದಿಂದ ರಾಣಿ ಮಾತೆಯ ಸಂಘರ್ಷ ಬಲಿದಾನದ ಕಥೆಯನ್ನು ದೇಶದಾದ್ಯಂತ ತಲುಪಿಸುವ ಕಾರ್ಯವನ್ನು ಕೈಗೊಂಡಿದ್ದು ನಮಗೆಲ್ಲರಿಗೂ ಸಂತಸದ ವಿಷಯವಾಗಿದೆ. ರಾಣಿ ಮಾತೆಯ ಅನುಯಾಯಿಗಳು ’ಜೋಲಿಯಾಂಗ್ ರಾಂಗ್ ಹರಕ್ಕಾ ಅಸೋಸಿಯೇಶನ್’ ಹೆಸರಿನಲ್ಲಿ ರಾಣಿ ಮಾತೆಯ ಪಾವನ ಸ್ಮೃತಿಯನ್ನು ಚಿರಸ್ಥಾಯಿಗೊಳಿಸುವ ದೃಷ್ಟಿಯಿಂದ (೨೬ ಜನವರಿ ೨೦೧೪ ರಿಂದ ೨೬ ಜನವರಿ ೨೦೧೫ರವರೆಗೆ) ರಾಣಿ ಮಾತೆಯ ಜನ್ಮಶತಾಬ್ದಿ ವರ್ಷವನ್ನು ಆಚರಿಸಲು ನಿಶ್ಚಯಿಸಿದೆ. ’ಅಖಿಲ ಭಾರತೀಯ ಕಲ್ಯಾಣ’ ಆಶ್ರಮದ ಕಾರ್ಯಕರ್ತರೂ ಈ ಆಯೋಜನೆಯನ್ನು ಸಫಲಗೊಳಿಸುವಲ್ಲಿ ಕಾರ್ಯರತರಾಗಿದ್ದಾರೆ.
’ಜೋಲಿಯಾಂಗ್ ರಾಂಗ್ ಅಸೋಸಿಯೇಸನ್’ ಮತ್ತು ’ವನವಾಸಿ ಕಲ್ಯಾಣ ಆಶ್ರಮ’ದ ಈ ಪ್ರಶಂಸನೀಯ ಪ್ರಯತ್ನಗಳನ್ನು ನಾವು ಅಭಿನಂದಿಸುತ್ತೇವೆ ಮತ್ತು ಉತ್ತರ-ಪೂರ್ವಾಂಚಲದ ಮಹಾಪುರುಷರು ಮತ್ತು ಸ್ವಾತಂತ್ರ್ಯ ಸೇನಾನಿಗಳ ಪ್ರೇರಣಾದಾಯಿ ಜೀವನ ಪ್ರಸಂಗಗಳನ್ನು ದೇಶದಾದ್ಯಂತ ತಲುಪಿಸುವ ಈ ಪ್ರಯತ್ನಗಳನ್ನು ಸ್ವಾಗತಿಸುತ್ತೇವೆ. ಉತ್ತರ-ಪೂರ್ವಾಂಚಲದಲ್ಲಿ ಜನ್ಮವೆತ್ತಿ ರಾಷ್ಟ್ರೀಯ ಹಿತಕ್ಕಾಗಿ ಸಂಘರ್ಷ ನಡೆಸಿದ ಇಂತಹ ಮಹಾಪುರುಷರ ಪ್ರೇರಕ ಜೀವನ ಪ್ರಸಂಗಗಳನ್ನು ದೇಶದ ಜನತೆಗೆ ತಲುಪಿಸುವುದು ನಮ್ಮೆಲ್ಲರ ರಾಷ್ಟ್ರೀಯ ಕರ್ತವ್ಯವಾಗಿದೆ. ರಾಣಿ ಮಾತೆಯ ತೇಜಸ್ವೀ ಮತ್ತು ಪ್ರೇರಣಾದಾಯಿ ಜೀವನ ಚರಿತ್ರೆಗೆ ರಾಷ್ಟ್ರೀಯ ಗೌರವ ಪ್ರಾಪ್ತವಾಗಲಿ ಎನ್ನುವ ದೃಷ್ಟಿಯಿಂದ ಶತಮಾನೋತ್ಸವ ವರ್ಷದ ಕಾರ್ಯಕ್ರಮಗಳನ್ನು ಸಫಲಗೊಳಿಸಲು ಎಲ್ಲ ರೀತಿಯ ಸಹಯೋಗ ನೀಡುವಂತೆ ಎಲ್ಲ ದೇಶಭಕ್ತ ನಾಗರಿಕರಿಗೆ ಈ ಮೂಲಕ ಕರೆನೀಡುತ್ತೇವೆ.