ಇಂದು 25ನೇ ವರ್ಷದ ಸಂಭ್ರಮಾಚರಣೆ
ಜುಲೈ 26 – ಈ ದಿನ ಪ್ರತಿಯೊಬ್ಬ ಭಾರತೀಯನೂ ಮರೆಯಬಾರದ ದಿನ. ನಮ್ಮ ಸೈನಿಕರ ಪರಿಶ್ರಮ ಮತ್ತು ಸಹಾಸದಿಂದ ಸಿಕ್ಕಂತಹ ವಿಜಯದ ಸಂಸ್ಮರಣಾ ದಿನ. ಪಾಕಿಸ್ತಾನದ ಸೇನೆಯನ್ನು ಸೆದೆಬಡಿದು ಜುಲೈ 26ರಂದು ದೇಶಾದ್ಯಾಂತ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತದೆ. 1999ರಲ್ಲಿ ಪಾಕಿಸ್ತಾನದ ನಡುವೆ ನಡೆದ ಈ ಯುದ್ಧದಲ್ಲಿ ಭಾರತ ಜಯ ಸಾಧಿಸಿದ ನೆನಪಿಗಾಗಿ ಈ ದಿನವನ್ನು ಆಚರಿಸುತ್ತೇವೆ. ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯಪತಾಕೆಯನ್ನು ಹಾರಿಸಿ ಹುತಾತ್ಮರಾದ ಸೈನಿಕರನ್ನು ಸ್ಮರಿಸಲಾಗುತ್ತದೆ.
ಕಾರ್ಗಿಲ್ ಯುದ್ಧ ಇತಿಹಾಸ:
ಕಾಶ್ಮೀರದಲ್ಲಿರುವ ಕಾರ್ಗಿಲ್ ಹಿಮಾಲಯದ ಬೆಟ್ಟಗುಡ್ಡಗಳಿಂದ ಆವೃತವಾದ ಪ್ರದೇಶ. ಕಾರ್ಗಿಲ್ ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 205 ಕಿ.ಮೀ.ದೂರದಲ್ಲಿದೆ. ಈ ಹೆದ್ದಾರಿಯು ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧ ಭೂಮಿ ಸಿಯಾಚಿನ್ ಗೂ ಸಂಪರ್ಕ ಕಲ್ಪಿಸುತ್ತದೆ.
1948ರಲ್ಲಿ ನಮ್ಮ ರಾಜಕೀಯ ನೇತಾರರ ದೂರದೃಷ್ಟಿಯ ಕೊರತೆಯಿಂದ ಇಂದು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯಲ್ಪಡುವ ಭಾರತದ ಭೂಭಾಗವನ್ನು ಕಳೆದುಕೊಂಡೆವು. ಅಷ್ಟೇಯಲ್ಲದೆ ಇದರ ಪರಿಣಾಮವಾಗಿ line of control (LOC) ರಚನೆಗೊಂಡಿದ್ದರಿಂದ ಇಡೀ ಜಮ್ಮುಕಾಶ್ಮೀರದ ಭೌಗೋಳಿಕ ನಕ್ಷೆಯ ಹೃದಯ ಸ್ಥಾನದಲ್ಲಿರುವ, ಪಾಕಿಸ್ತಾನದಿಂದ ಸುಮಾರು 100 ಕಿ.ಮೀ. ದೂರದಲ್ಲಿದ್ದ ಕಾರ್ಗಿಲ್ 10 ಕಿ.ಮೀ ದೂರದಲ್ಲಿ ಪಾಕಿಸ್ತಾನಿ ಸೈನಿಕರನ್ನು ಎದುರಿಸುವಂತಾಯಿತು. ಇದರ ಪರಿಣಾಮ ನಾನಾ ಯುದ್ಧಗಳನ್ನು ಆಕ್ರಮಣಗಳನ್ನು ಕಾರ್ಗಿಲ್ ಸೇರಿದಂತೆ LOC ಸುತ್ತಮುತ್ತಲಿನ ಭೂಭಾಗ ಎದುರಿಸಬೇಕಾಯಿತು.
1948, 1965, 1971ರಲ್ಲಿ ನೇರಯುದ್ಧದಲ್ಲಿ ಭಾರತದ ಸೇನೆ ಕಲಿಸಿದ ಪಾಠವನ್ನು 1999ರ ಹೊತ್ತಿಗೆ ಮರೆತಿದ್ದ ಪಾಕಿಸ್ತಾನ ಸೇನೆ ಈ ಬಾರಿ ಛದ್ಮ ಯುದ್ಧಕ್ಕೆ ಮುಂದಾಯ್ತು. ಚಳಿ ಹೆಚ್ಚಿರುವ ಸಮಯದಲ್ಲಿ ಎರಡೂ ದೇಶದ ಸೈನಿಕರು LOCನ ಗುಡ್ಡಗಳಿಂದ ಕೆಳಗಿಳಿದು , ಚಳಿಯ ಪ್ರಮಾಣ ಕಡಿಮೆ ಆಗುವವರೆಗೆ ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿ ಗಸ್ತು ನಿಂತಿರಬೇಕು ಎಂದಿದ್ದ ಅಲಿಖಿತ ಜೆಂಟಲ್ಸ್ ಮ್ಯಾನ್ ಒಪ್ಪಂದವನ್ನು ಪಾಕಿಸ್ತಾನಿಯರು ಮುರಿದು ಸಮಯ ಮುಗಿಯವ ಮೊದಲೇ ಕಾರ್ಗಿಲ್ ಗುಡ್ಡಗಳನ್ನು ವಶಪಡಿಸಿಕೊಂಡಿದ್ದರು. ಆಗಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಚಾಚಿದ ಸ್ನೇಹಹಸ್ತವನ್ನು ಎರಡೂ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗಾಗಿ ಕೈಗೊಂಡ ಕ್ರಮಗಳನ್ನು ಗಾಳಿಗೆ ತೂರಿ ದ್ವೇಷ ಕಾರುತ್ತಾ ಸಂಚು ರೂಪಿಸಿತು.
1999 ರಲ್ಲಿ ಭಯೋತ್ಪಾದಕರ ವೇಷದಲ್ಲಿ ಪಾಕ್ ಸೈನಿಕರು ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಯುದ್ಧ ಆರಂಭದಲ್ಲಿ ಪಾಕಿಸ್ತಾದ ವಿಶೇಷ ದಳವಾದ ಸ್ಪೆಷಲ್ ಸರ್ವಿಸಸ್ ಗ್ರೂಪ್ ಮತ್ತು ನಾರ್ದನ್ ಲೈಟ್ ಇನ್ಫೆಂಟ್ರಿಯ 4-6 ದಂಡು ಭಾರತದ ಒಳಗೆ ಗುಪ್ತವಾಗಿ ನುಸುಳಿದ್ದರು. ಒಪ್ಪಂದದಂತೆ ಬೆಟ್ಟಗಳ ತಪ್ಪಲಿಗೆ ಇಳಿದಿದ್ದ ಭಾರತೀಯರಿಗೆ ಇದರ ಬಗ್ಗೆ ಮಾಹಿತಿ ತಿಳಿಯಲಿಲ್ಲ. ಹೀಗಾಗಿ ಪಾಕಿಸ್ತಾನ ಸೈನಿಕರನ್ನು ನೋಡಿದ ಕಾಶ್ಮೀರದ ಕೆಲವು ಕುರಿಗಾಹಿಗಳು ಈ ಬಗ್ಗೆ ಭಾರತೀಯ ಸೈನಿಕರಿಗೆ ಸುದ್ದಿ ತಿಳಿಸಿದರು. ತಕ್ಷಣವೇ ಭಾರತೀಯ ಸೇನಾಧಿಕಾರಿಗಳು ಗಸ್ತುವಿಗಾಗಿ ಮೇ 16 ರಂದು ಯೋಧರನ್ನು ಕಳುಹಿಸಿಕೊಟ್ಟಿದ್ದರು. ಈ ವೇಳೆ ಪಾಕ್ ಸೈನಿಕರು ಈ ಯೋಧರನ್ನು ಆಕ್ರಮಿಸಿಕೊಂಡು ಚಿತ್ರಹಿಂಸೆಯಿಂದ ಕೊಂದರು. ಇದನ್ನು ಮನಗೊಂಡ ಭಾರತೀಯ ಸೇನಾಧಿಕಾರಿಗಳು ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲು ಸಜ್ಜಾದರು. ಈ ಕಾರಣಕ್ಕಾಗಿ ಸೇನೆಯನ್ನು ಸಿದ್ಧಗೊಳಿಸಿತು.
ವಾಯು ಸೇನೆ, ಭೂ ಸೇನೆ, ನೌಕಾ ಸೇನೆಯ ಸಂಘಟನಾ ಶಕ್ತಿ
ಮೇ 3 ರಿಂದ ‘ಆಪರೇಷನ್ ವಿಜಯ್’ ಹೆಸರಿನಲ್ಲಿ ಕಾರ್ಯಾಚರಣೆ ಶುರು ಮಾಡಿತು. ಈ ಆಪರೇಷನ್ ವಿಜಯದಲ್ಲಿ ಸುಮಾರು 30 ಸಾವಿರ ಸೈನಿಕರು ಹೋರಾಡಿದರು. ಅದರಂತೆ ಪಾಕಿಸ್ತಾನ ಕೂಡ ಭಾರತದ ಮೇಲೆ ದಾಳಿ ನಡೆಸಲು 5,000 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿತ್ತು. ಭಾರತಕ್ಕೆ ಬೋಫೋರ್ಸ್ ಫಿರಂಗಿ, ವಾಯುಪಡೆಯ ಮಿಗ್-27, ಮಿಗ್-29 ಯುದ್ಧ ವಿಮಾನಗಳು ಸಾಥ್ ನೀಡಿದ್ದು, ಭಾರತಕ್ಕೆ ಮತ್ತಷ್ಟು ಬಲ ಸಿಕ್ಕಂತೆ ಆಗಿತ್ತು.
‘ಆಪರೇಷನ್ ಸಫೇದ್ ಸಾಗರ್’ ಅನ್ನು ಪ್ರಾರಂಭಿಸಿದ ಭಾರತೀಯ ಸೇನೆ ಪಾಕ್ ಶತ್ರುಗಳನ್ನು ನಿರ್ಮೂಲನೆ ಮಾಡಲು ವಾಯುಸೇನೆಯ ಯೋಧರು ಸಿದ್ಧರಾದರು. 800ಕ್ಕೂ ಹೆಚ್ಚು ನೆಲಬಾಂಬ್ ಹುಡುಕಿ ತೆಗೆಯಲಾಯಿತು. ಗುಡ್ಡಗಾಡು ಪ್ರದೇಶಕ್ಕೆ ತಕ್ಕಂತೆ ವಿಶೇಷ ವ್ಯೂಹಗಳನ್ನು ಮಾಡುತ್ತಾ ಕಾರ್ಯಾಚರಣೆ ನಡೆಸಲಾಯಿತು.
ಭಾರತೀಯ ಸೇನೆಗೆ ಪೂರಕವಾಗಿ ಭಾರತೀಯ ನೌಕಾಪಡೆ ‘ಆಪರೇಷನ್ ತಲ್ವಾರ್’ ಅನ್ನು ಪ್ರಾರಂಭಿಸಿತು. ಸಮುದ್ರ ಮಾರ್ಗದ ಮೂಲಕ ಪಾಕಿಸ್ತಾನಕ್ಕೆ ಒದಗಬಹುದಾದ ಸಹಾಯವನ್ನು ತಪ್ಪಿಸಲು ಭಾರತೀಯ ನೌಕಪಡೆಯು ಕೆಲಸ ಮಾಡಿತು. ಸಮುದ್ರ ಮಾರ್ಗದಿಂದ ಯಾವುದೇ ವಸ್ತುಗಳು ಸರಬರಾಜಾಗದ ಹಾಗೆ ನಿರ್ಬಂಧ ಹೇರಲಾಯಿತು. ತೈಲದ ಸರಬರಾಜು ಸಂಪೂರ್ಣ ನಿಂತು ಹೋಯಿತು.
ಕಾರ್ಗಿಲ್ ಪ್ರದೇಶವನ್ನು ಶತ್ರುಗಳಿಂದ ಮುಕ್ತಗೊಳಿಸಲು ಭೂಸೇನೆ, ವಾಯುಪಡೆ ಮತ್ತು ನೌಕಪಡೆಗಳ ಮಧ್ಯೆ ಸಂಯೋಜಿತ ಪ್ರಯತ್ನಗಳ ಫಲವಾಗಿ ಜೂನ್ 20ರಂದು 17,000 ಅಡಿ ಎತ್ತರದ ತೋಲೋಲಿಂಗ್ ಪರ್ವತ ಶತ್ರುಗಳಿಂದ ಮುಕ್ತಿ ಪಡೆಯಿತು. ಜುಲೈ 1 ರಂದು ದ್ರಾಸ್ ಸೆಕ್ಟರ್ ನನ್ನು ಮರುವಶಕ್ಕೆ ಪಡೆದರು. ಜುಲೈ3ರ ಹೋರಾಟ ನಿರ್ಣಾಯಕವಾಗಿತ್ತು. ಟೈಗರ್ ಹಿಲ್ಸ್ ಮೇಲೆ ಮತ್ತೊಮ್ಮೆ ತ್ರಿವರ್ಣ ಧ್ವಜ ರಾರಾಜಿಸಿತು. ಜುಲೈ 16 ರಂದು ಸಂಪೂರ್ಣ ಪ್ರದೇಶ ಭಾರತೀಯರ ಸೈನ್ಯಕ್ಕೆ ಸಿಕ್ಕಿತ್ತು. ಹೀಗೆ ಮೇ8 ರಿಂದ ಜುಲೈವರೆಗೆ 74 ದಿನಗಳ ಕಾಲ ಯುದ್ಧ ನಡೆಯಿತು. ಅಂತಿಮವಾಗಿ ಪಾಕಿಸ್ತಾನೀಯರ ಸೇನೆಯನ್ನು ಸೆದೆಬಡಿಯುವಲ್ಲಿ ಭಾರತ ಯಶಸ್ವಿಯಾಗಿತ್ತು. ಜುಲೈ 26ರಂದು ಈ ಯುದ್ಧದಲ್ಲಿ ಭಾರತವು ಜಯ ಸಾಧಿಸಿತ್ತು. ಅದರ ಸ್ಮರಣೆಗಾಗಿ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಣೆ ಮಾಡಲಾಗುತ್ತಿದೆ.
ರಾಜಕೀಯ ಬೆಂಬಲ
ಪಾಕಿಸ್ತಾನವನ್ನು ಮೂಲೆಗುಂಪು ಮಾಡುವ ಸಲುವಾಗಿ ಹೋರಾಡುತ್ತಿದ್ದ ಭಾರತೀಯ ಸೈನಿಕರಿಗೆ ರಾಜಕೀಯ ನಾಯಕರು ಮುಕ್ತ ಬೆಂಬಲ ಸೂಚಿಸಿದ್ದರು. ಆಗಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಕೂಡ ಜೂನ್ 13ರಂದು ಭೇಟಿ ನೀಡಿ ಇಡೀ ದೇಶ ನಿಮ್ಮೊಂದಿಗಿದೆ ಎಂದು ಹೇಳುವ ಮೂಲಕ ಭಾರತೀಯ ಸೈನಿಕರಿಗೆ ಪ್ರೋತ್ಸಾಹಿಸಿದ್ದರು. ಯುದ್ಧದ ವಿಷಯದಲ್ಲಿ ಎದುರಾದ ಎಲ್ಲಾ ಅಂತರಾಷ್ಟ್ರೀಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಆ ದೇಶಗಳ ಒತ್ತಡಕ್ಕೆ ಮಣಿಯದೇ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು, ಸಹಕಾರವನ್ನು ನೀಡಲಾಯಿತು.
ಪರಮವೀರ ಚಕ್ರ ಪ್ರಶಸ್ತಿ
ಭಾರತಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿದವರ ಸ್ಮರಣೆಯನ್ನು ಗೌರವಿಸುವ ಸಲುವಾಗಿ ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಶೌರ್ಯವನ್ನು ಮೆರೆದ ನಾಲ್ಕು ವೀರರಿಗೆ ಸೇನೆಯ ಅತ್ಯುನ್ನತ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ನೀಡಿ ಗೌರವಿಸಲಾಗಿದೆ. ಕ್ಯಾಪ್ಟನ್ ವಿಕ್ರಮ್ ಬಾತ್ರಾ, ರೈಫಲ್‌ಮ್ಯಾನ್ ಸಂಜಯ್ ಕುಮಾರ್, ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಅವರಿಗೆ ಪರಮವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಕ್ಯಾಪ್ಟನ್ ವಿಕ್ರಮ್ ಬಾತ್ರಾ :
ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರು ಭಾರತೀಯ ವಾಯುಪಡೆಯ 13ನೇ ಬೆಟಾಲಿಯನ್ ನಲ್ಲಿದ್ದರು. ಅಷ್ಟೇ ಅಲ್ಲದೆ ಜಮ್ಮು-ಕಾಶ್ಮೀರದ ರೈಫಲ್ಸ್ ನಲ್ಲಿ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ವಿಕ್ರಮ್ ಬಾತ್ರಾ ಅವರು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದ್ರಾಸ್ ಸೆಕ್ಟರ್ ನಲ್ಲಿ ಪಾಯಿಂಟ್ 5140 ಅನ್ನು ಮರು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿಕ್ರಮ್ ಬಾತ್ರಾ ಅವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಪ್ರದರ್ಶಿಸಿದ ಶೌರ್ಯ ಅಜರಾಮರ. ಅವರು ಯುದ್ಧದ ಸಮಯದಲ್ಲಿ ಹೇಳಿದ ಮಾತು ಇಂದಿಗೂ ಅಚ್ಚಳಿಯದೆ ಉಳಿದಿದೆ. “ಯೇ ದಿಲ್ ಮಾಂಗೆ ಮೋರ್”, ಈ ಮನಸ್ಸು ಇನ್ನೂ ಬಯಸುತ್ತದೆ ಎಂಬ ಅವರ ಹೇಳಿಕೆ ಇಂದಿಗೂ ಅನೇಕರನ್ನು ಪ್ರೇರೇಪಿಸಿದೆ.
ಕಾರ್ಗಿಲ್ ಯುದ್ಧಕ್ಕೆ ಹೋಗುವ ಮುನ್ನ “ಒಂದೋ ನಾನು ತ್ರಿವರ್ಣ ಧ್ವಜವನ್ನು ಹಾರಿಸಿ ಬರುತ್ತೇನೆ ಅಥವಾ ನನ್ನನ್ನು ತ್ರಿವರ್ಣ ಧ್ವಜದಲ್ಲಿ ಸುತ್ತಿ ತರಲಾಗುವುದು ಆದರೆ ನಾನು ಖಂಡಿತವಾಗಿ ಬಂದೇ ಬರುತ್ತೇನೆ” ಎಂಬ ಹೇಳಿಕೆಯನ್ನು ನೀಡಿದ್ದರು.
ರೈಫಲ್‌ಮ್ಯಾನ್ ಸಂಜಯ್ ಕುಮಾರ್: ಸಂಜಯ್ ಕುಮಾರ್ ಅವರು ಜಮ್ಮು-ಕಾಶ್ಮೀರದ ರೈಫಲ್ಸ್ ನ 13ನೇ ಬೆಟಾಲಿಯನ್ ನ ಸದಸ್ಯರಾಗಿದ್ದರು. ಈ ಕಾರಣಕ್ಕಾಗಿ ಅವರು ರೈಫಲ್ಸ್ ಮ್ಯಾನ್ ಸಂಜಯ್ ಕುಮಾರ್ ಎಂದೇ ಅವರು ಪ್ರಸಿದ್ಧರಾಗಿದ್ದರು. ಇವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಆಯಕಟ್ಟಿನ ಶತ್ರುಗಳನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು.
ಶತ್ರುಗಳ ಗುಂಡಿನ ದಾಳಿಯನ್ನು ಲೆಕ್ಕಿಸದೆ ಧೈರ್ಯದಿಂದ ಎದುರಿಸಿದರು. ಅವರು ಮೆರೆದ ಶೌರ್ಯದಿಂದ 16,000 ಅಡಿ ಎತ್ತರದಲ್ಲಿರುವ ನಿರ್ಣಾಯಕ ಸ್ಥಳವನ್ನು ಪುನಃ ವಶಪಡಿಸಿಕೊಳ್ಳಲು ಕಾರಣವಾಯಿತು. ಅವರು ಮಾಡಿರುವ ಸಾಧನೆಗೆ ಪರಮವೀರ ಚಕ್ರ ನೀಡಿ ಗೌರವಿಸಲಾಗಿದೆ.
ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ : ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಅವರು ಕಾರ್ಗಿಲ್ ಯುದ್ಧದ ಸಮಯದಲ್ಲಿ ಟೈಗರ್ ಹಿಲ್ ಅನ್ನು ವಶಪಡಿಸಿಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿದರು. ಈ ವೇಳೆ ಅವರಿಗೆ ಹಲವು ಬಾರಿ ಗಾಯವಾಗಿದ್ದರೂ ಸಹ ಅದನ್ನು ಲೆಕ್ಕಿಸದೆ ಅಸಾಧಾರಣ ಶೌರ್ಯ ಪ್ರದರ್ಶಿಸಿದರು. ಅವರು ಮೆರೆದ ಸಾಹಸವನ್ನು ಗುರುತಿಸಿ ಪರಮವೀರಚಕ್ರ ಗೌರವವನ್ನು ನೀಡಲಾಯಿತು.
ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ:ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ 1/11 ಗೂರ್ಖಾ ರೈಫಲ್ಸ್‌ನಲ್ಲಿ ಅಧಿಕಾರಿಯಾಗಿದ್ದರು. ಬಟಾಲಿಕ್ ವಲಯದಲ್ಲಿ ಖಲುಬರ್ ಕದನದ ಸಮಯದಲ್ಲಿ ಅವರು ಅಸಾಧಾರಣ ಧೈರ್ಯವನ್ನು ಪ್ರದರ್ಶಿಸಿದರು. ಯುದ್ಧದ ಸಮಯದಲ್ಲಿ ತಮ್ಮ ಪ್ರಾಣವನ್ನು ರಾಷ್ಟ್ರಕ್ಕಾಗಿ ಅರ್ಪಿಸಿದರು. ಅವರ ಶೌರ್ಯವು ಅವರಿಗೆ ಮರಣೋತ್ತರವಾಗಿ ಪರಮವೀರಚಕ್ರ ಗೌರವವನ್ನು ತಂದುಕೊಟ್ಟಿತು. ಕಾರ್ಗಿಲ್ ಯುದ್ಧಕ್ಕೂ ಹೋಗುವ ಮುನ್ನ ಅವರು ಹೇಳಿದ ಮಾತು “ಒಂದು ವೇಳೆ ನನ್ನ ಗುರಿ ಮುಟ್ಟುವ ಮುನ್ನ ಸಾವು ಅಪ್ಪಳಿಸಿದರೆ, ಆ ಸಾವನ್ನೇ ನಾನು ಕೊಲ್ಲುತ್ತೇನೆ” ಸದಾ ಪ್ರೇರಣೀಯ.
25ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್
1999ರಲ್ಲಿ ನಡೆದ ಪಾಕಿಸ್ತಾನ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿ ಇಂದಿಗೆ 25 ವರ್ಷಗಳಾಗಿವೆ. ನಮ್ಮ ರಾಷ್ಟ್ರದ ರಲ್ಷಣೆಗಾಗಿ, ಸಾರ್ವಭೌಮತೆಯ ಗೌರವಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರಯೋಧರರನ್ನು ಈ ಸಮಯದಲ್ಲಿ ನೆನೆದು ಅವರಿಗೆ ನಾವೆಲ್ಲರೂ ಕೃತಜ್ಞತೆಯನ್ನು ಅರ್ಪಿಸಬೇಕಾಗಿರುವುದು ನಮ್ಮ ಜವಾಬ್ದಾರಿ. ಭಾರತಮಾತೆಯ ಸೇವೆ ಮಾಡಿ ವೀರಮರಣವನ್ನಪ್ಪಿದ ರಾಷ್ಟ್ರರಕ್ಷಕರಿಗೆ ಗೌರವ ಸಲ್ಲಿಸೋಣ. ಸೈನಿಕರ ತ್ಯಾಗ, ಬಲಿದಾನ, ಶೌರ್ಯ, ಸಾಹಸ, ದೇಶಭಕ್ತಿ, ನಿಸ್ವಾರ್ಥತೆ ಎಲ್ಲವೂ, ಯುವಕರಿಗೆ ಆದರ್ಶವಾಗಲಿ.