ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮಮಂದಿರದ ಗರ್ಭಗುಡಿಯಲ್ಲಿರುವ ರಾಮನ ಮೂರ್ತಿಗೆ ಕರ್ನಾಟಕದ ಕಾರ್ಕಳದ ನೆಲ್ಲಿಕಾರಿನಿಂದ ಹೋಗಿದ್ದ ಕೃಷ್ಣಶಿಲೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಚಿತಪಡಿಸಿದೆ. ಮುಂದಿನ ವರ್ಷ ಮಕರ ಸಂಕ್ರಾಂತಿಯಂದು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಮೂಲ ಗರ್ಭಗುಡಿಯಲ್ಲಿ ರಾಮ ಲಲ್ಲಾನ ಹೊಸ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ.
ನಿರ್ಮಾಣಗೊಳ್ಳಲಿರುವ ವಿಗ್ರಹ 5 ವರ್ಷದ ರಾಮಲಲ್ಲಾ ಬಿಲ್ಲು ಬಾಣವನ್ನು ಹಿಡಿದು ನಿಂತು ಕೊಂಡ ಭಂಗಿಯಲ್ಲಿ ಇರಲಿದ್ದು ಐದು ಫೀಟ್ ಎತ್ತರ ಇರಲಿದೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮಿ ಹೇಳಿದ್ದಾರೆ. ಶ್ರೀರಾಮನ ವಿಗ್ರಹದ ಕುರಿತಾದ ನಿರ್ಧಾರವನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ 2 ದಿನಗಳ ಪ್ರಮುಖ ಸಭೆಯ ಬಳಿಕ ಮಾಡಲಾಗಿದ್ದು, ಕಾರ್ಕಳದ ನೆಲ್ಲಿಕಾರು ಗ್ರಾಮದಿಂದ ಕಳುಹಿಸಿಕೊಡಲಾದ ಬೃಹತ್ ಕೃಷ್ಣಶಿಲೆಯಲ್ಲಿಯೇ ಶ್ರೀರಾಮನ ವಿಗ್ರಹ ಕೆತ್ತನೆಯಾಗಲಿದೆ ಎಂದು ನಿರ್ಧರಿಸಲಾಗಿದೆ.
ರಾಮನ ವಿಗ್ರಹವನ್ನು ನಿರ್ಮಿಸುವ ಶಿಲ್ಪಿಯೂ ಕರ್ನಾಟಕದವರು!
ಕೇದಾರನಾಥದಲ್ಲಿ 12 ಫೀಟ್ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ, ಇಂಡಿಯಾ ಗೇಟ್‌ನಲ್ಲಿ ನಿರ್ಮಾಣವಾಗಿರುವ 28 ಫೀಟ್ ಎತ್ತರದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಕಪ್ಪು ಗ್ರ‍್ಯಾನೈಟ್‌ನ ಪ್ರತಿಮೆಯನ್ನು ನಿರ್ಮಿಸಿದ್ದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರೇ 5 ಅಡಿ ಎತ್ತರದ ರಾಮಲಲ್ಲನ ವಿಗ್ರಹವನ್ನು ನಿರ್ಮಿಸಲಿದ್ದಾರೆ. ಮೈಸೂರು ಅರಮನೆಯ ವಿನ್ಯಾಸಗಾರರ ಕುಟುಂಬದಿಂದ ಬಂದವರಾದ ಅರುಣ್ ಅವರ ತಂದೆ ಯೋಗಿರಾಜ್ ಅವರು ಕೂಡ ಪ್ರಖ್ಯಾತ ಶಿಲ್ಪಿಯಾಗಿ ಹೆಸರು ಮಾಡಿದ್ದಾರೆ.