
ನಾಗ್ಪುರ, 18 ನವೆಂಬರ್: ರಾಷ್ಟ್ರೀಯ ಸ್ವಯಂಸೇವಕ ಸಂಘದ 25 ದಿನಗಳ ಕಾರ್ಯಕರ್ತ ವಿಕಾಸ್ ವರ್ಗ ದ್ವಿತೀಯ (ವಿಶೇಷ) ರೇಶಿಂಬಾಗ್ನಲ್ಲಿರುವ ಡಾ. ಹೆಡ್ಗೇವಾರ್ ಸ್ಮೃತಿ ಮಂದಿರದ ಸಂಕೀರ್ಣದ ಮಹರ್ಷಿ ವ್ಯಾಸ ಸಭಾಂಗಣದಲ್ಲಿ ಪ್ರಾರಂಭಗೊಂಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಡಾ.ಕೃಷ್ಣಗೋಪಾಲ್ ಅವರು ವರ್ಗವನ್ನು ಉದ್ಘಾಟಿಸಿದರು.
ಈ ಸಂದರ್ಭ ಅಖಿಲ ಭಾರತೀಯ ಸಹ ಸೇವಾಪ್ರಮುಖ್ ಮತ್ತು ವರ್ಗದ ಪಾಲಕ್ ಅಧಿಕಾರಿ ರಾಜಕುಮಾರ್ ಮಟಾಲೆ ಮತ್ತು ಜೋಧ್ಪುರ ಪ್ರಾಂತದ ಸಂಘಚಾಲಕ ಹರದಯಾಳ್ ವರ್ಮಾ, ಸಹಸರಕಾರ್ಯವಾಹರುಗಳಾದ ಮುಕುಂದ ಸಿ ಆರ್, ರಾಮದತ್ತ್ ಅವರು ಉಪಸ್ಥಿತರಿದ್ದರು. ದೇಶಾದ್ಯಾಂತದಿಂದ 40 ವರ್ಷ ಮೇಲ್ಪಟ್ಟ 868 ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ವರ್ಗವು ಡಿಸೆಂಬರ್ 12, 2024 ರಂದು ಕೊನೆಗೊಳ್ಳುತ್ತದೆ. ವರ್ಗದಲ್ಲಿ ಸಾಮಾಜಿಕ ಜಾಗರೂಕತೆ ಮತ್ತು ಸಾಮಾಜಿಕ ಪರಿವರ್ತನೆಯ ಕುರಿತು ಪ್ರಶಿಕ್ಷಣ ನೀಡಲಾಗುತ್ತದೆ.

ವರ್ಗಕ್ಕೆ ಆಗಮಿಸಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವರ್ಗದ ಪಾಲಕ್ ಅಧಿಕಾರಿ ರಾಜಕುಮಾರ್ ಮಟಾಲೆ ಅವರು ಡಾ.ಹೆಡಗೇವಾರ್ ಮತ್ತು ಶ್ರೀ ಗುರೂಜಿ ಅವರ ತಪೋಭೂಮಿಯಲ್ಲಿ ಆರಂಭಗೊಂಡ ಈ ವರ್ಗ ಐತಿಹಾಸಿಕವಾದದ್ದು. ಸಂಘ ಶಿಕ್ಷಾ ವರ್ಗದ ನೂತನ ಸಂರಚನೆಯ ಅನುಸಾರ ಈ ವಿಶೇಷ ವರ್ಗವನ್ನು ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ. ಈ ವರ್ಗವು ರಾಷ್ಟ್ರೀಯ ಏಕತೆ ಮತ್ತು ಸಹಜೀವನದ ಭಾವನೆಯನ್ನು ಮೂಡಿಸುತ್ತದೆ ಎಂದರು.
ಸಂಘ ಪ್ರಣಾಳಿಕೆಯಲ್ಲಿ ಪ್ರಶಿಕ್ಷಣ ವರ್ಗ ಅತ್ಯಂತ ಮಹತ್ವಪೂರ್ಣದ್ದಾಗಿದೆ. ಆದ್ದರಿಂದ ಸಂಘಕಾರ್ಯ ಬೆಳೆದಂತೆ ವಿವಿಧ ಪ್ರಾಂತಗಳಲ್ಲಿ ಪ್ರಶಿಕ್ಷಣ ವರ್ಗಗಳನ್ನು ಪ್ರಾರಂಭಿಸಲಾಯಿತು. ಸಂಘವನ್ನು 1925ರಲ್ಲಿ ಸ್ಥಾಪಿಸಲಾಯಿತು ಮತ್ತು 1927ರಲ್ಲಿ ಪ್ರಶಿಕ್ಷಣ ವರ್ಗಗಳನ್ನು ಪ್ರಾರಂಭಿಸಲಾಯಿತು. ಆಗ 17 ವಿದ್ಯಾರ್ಥಿಗಳು ತರಬೇತಿ ಪಡೆದಿದ್ದರು. ತುರ್ತು ಪರಿಸ್ಥಿತಿಯ ಅವಧಿ ಮತ್ತು ಕರೋನಾ ಅವಧಿಯನ್ನು ಹೊರತುಪಡಿಸಿ ಪ್ರತಿ ವರ್ಷ ಸಂಘದ ಪ್ರಶಿಕ್ಷಣ ವರ್ಗಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಕಾಲಾನಂತರದಲ್ಲಿ ಪ್ರಶಿಕ್ಷಣ ವರ್ಗಗಳ ಅವಧಿ ಮತ್ತು ಪಠ್ಯಕ್ರಮವನ್ನು ಅದಕ್ಕೆ ಅನುಗುಣವಾಗಿ ಬದಲಾಯಿಸಲಾಯಿತು. ಇಂದಿನ ದೃಷ್ಟಿಕೋನದಲ್ಲಿ ಕಾರ್ಯಕರ್ತರ ವಿಚಾರಧಾರೆ, ಭೂಮಿಕೆ, ಕಾರ್ಯಪದ್ಧತಿಯ ಸ್ಪಷ್ಟತೆ, ಬದ್ಧತೆ, ತನ್ನ ಮುಂದೆ ಬರುವ ಸವಾಲುಗಳನ್ನು ಹೇಗೆ ಸ್ವೀಕರಿಸಬೇಕು, ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವುದು ಹೇಗೆ ಎಂಬುದನ್ನು ಇದರಲ್ಲಿ ಪ್ರಸ್ತುತಪಡಿಸಲಾಗಿದೆ ಎಂದು ನುಡಿದರು.

ಆದ್ಯ ಸರಸಂಘಚಾಲಕರಾದ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಅವರಿಂದ ಮೋಹಿತೆವಾಡದ ಶಾಖೆಯಿಂದ ಪ್ರಾರಂಭವಾದ ಸಂಘ ಕಾರ್ಯ ಇಂದು ರಾಷ್ಟ್ರವ್ಯಾಪಿಯಾಗಿದೆ. ಸ್ವಾಮಿ ವಿವೇಕಾನಂದರ ಹೇಳಿಕೆಯಂತೆ, ಯಾವುದೇ ಪವಿತ್ರವಾದ ಪ್ರಾಮಾಣಿಕ ಕೆಲಸವನ್ನು ಮೊದಲು ನಿರ್ಲಕ್ಷಿಸಲಾಗುತ್ತದೆ, ಅಪಹಾಸ್ಯ ಮಾಡಲಾಗುತ್ತದೆ, ವಿರೋಧಿಸಲಾಗುತ್ತದೆ ಮತ್ತು ನಂತರ ಒಪ್ಪಿಕೊಳ್ಳಲಾಗುತ್ತದೆ. ಹಾಗೆಯೇ ಆರಂಭದ ಅವಧಿಯಲ್ಲಿ ಸಂಘದ ಕಾರ್ಯವನ್ನು ಕಡೆಗಣಿಸಿ ಅಪಹಾಸ್ಯಕ್ಕೆ ಗುರಿಮಾಡಲಾಯಿತು. ಇಂದು ಸಂಘಕಾರ್ಯಕ್ಕೆ ಎಲ್ಲೆಡೆ ಮನ್ನಣೆ ಸಿಕ್ಕಿದೆ. ಇಂದು ಸಂಘಕಾರ್ಯವನ್ನು ಸಾರ್ವಜನಿಕವಾಗಿ ವಿರೋಧಿಸುವವರೂ ಖಾಸಗಿಯಾಗಿ ಪ್ರಶಂಸಿಸುತ್ತಾರೆ ಎಂದರು.
ಸಾಮಾಜಿಕ ಜಾಗೃತಿಯ ಪಂಚ ಪರಿವರ್ತನೆಯ ವಿಷಯವನ್ನು ಕಾರ್ಯಗತಗೊಳಿಸಲು ಸಾಮರ್ಥ್ಯ ಮತ್ತು ಪರಿಣತಿಯನ್ನು ಹೆಚ್ಚಿಸಬೇಕು ಇದರಿಂದ ರಾಷ್ಟ್ರ ನಿರ್ಮಾಣದ ಕೆಲಸವು ವೇಗವನ್ನು ಪಡೆಯುತ್ತದೆ ಎಂದು ನುಡಿದರು.

ಕಾರ್ಯಕರ್ತ ವಿಕಾಸ ವರ್ಗ ದ್ವಿತೀಯ (ವಿಶೇಷ) ಇದರ ಪದಾಧಿಕಾರಿಗಳು:
ಮಾನನೀಯ ಸರ್ವಾಧಿಕಾರಿ – ಹರದಯಾಳ್ ವರ್ಮಾ
ವರ್ಗ ಕಾರ್ಯವಾಹ – ಮನ್ಸುಖ್ ಲಾಲ್ ಸೇಥಿಯಾ
ವರ್ಗ ಪಾಲಕ – ರಾಜಕುಮಾರ ಮಟಾಲೆ
ವರ್ಗ ಮುಖ್ಯಶಿಕ್ಷಕ – ಸಂಜೀವನ್
ಸಹ ಮುಖ್ಯಶಿಕ್ಷಕ – ಸುನಿಲ್ ದೇಸಾಯಿ
ಬೌದ್ಧಿಕ್ ಪ್ರಮುಖ್ – ಅನಮ್ ಜಿ
ಸಹ ಬೌದ್ಧಿಕ್ ಪ್ರಮುಖ್ – ರಾಣಾ ಪ್ರತಾಪ್
ಸೇವಾ ಪ್ರಮುಖ – ರಾಜೇಶ್ ದೇಶ್ಕರ್
ವ್ಯವಸ್ಥಾ ಪ್ರಮುಖ್ – ಸತ್ಯವಾನ್ ಡಂಬರೆ
ಸಹ ವ್ಯವಸ್ಥಾ ಪ್ರಮುಖ್ – ಗಣಪತಿ ಗರ್ಕಾಟೆ