ಲೇಖಕರು: ದು.ಗು. ಲಕ್ಷ್ಮಣ
“75 ವರ್ಷಗಳ ಹಿಂದೆ ನಾವಿಲ್ಲಿಗೆ ಸಾಯುವುದಕ್ಕಾಗಿಯೇ ಬಂದೆವು. ನಮಗೊಂದು ದೇಶ ಅನ್ನೋದೇ ಇರಲಿಲ್ಲ. ಸೈನ್ಯವಂತೂ ಇರಲೇ ಇಲ್ಲ. ಏಳು ದೇಶಗಳು ನಮ್ಮ ವಿರುದ್ಧ ತೊಡೆತಟ್ಟಿ ಯುದ್ಧ ಘೋಷಿಸಿದವು. ನಾವಿದ್ದಿದ್ದು ಬರೇ 65 ಸಾವಿರ ಮಂದಿ. ನಮ್ಮನ್ನು ಕಾಪಾಡಲು ಯಾರೊಬ್ಬರೂ ಇರಲಿಲ್ಲ. ನಿರಂತರವಾಗಿ ನಮ್ಮ ಮೇಲೆ ಆಕ್ರಮಣ ನಡೆಯುತ್ತಲೇ ಇತ್ತು. ಲೆಬನಾನ್, ಸಿರಿಯಾ, ಇರಾಕ್ , ಜೋರ್ಡಾನ್, ಈಜಿಪ್ಟ್, ಲಿಬಿಯಾ , ಸೌದಿ ಅರೇಬಿಯಾ ಮತ್ತಿತರ ದೇಶಗಳು ನಮ್ಮ ಮೇಲೆ ಯಾವ ಕರುಣೆಯನ್ನೂ ತೋರಲಿಲ್ಲ. ಪ್ರತಿಯೊಬ್ಬರೂ ನಮ್ಮನ್ನು ಕೊಚ್ಚಿ ಕೊಲ್ಲಲೆಂದೇ ಹವಣಿಸಿದ್ದರು. ಆದರೂ ನಾವು ಉಳಿದುಕೊಂಡೆವು.
ವಿಶ್ವಸಂಸ್ಥೆಯು ನಮಗೆ ತುಂಡುಭೂಮಿ ನೀಡಿ ದೇಶ ಕಟ್ಟಿಕೊಳ್ಳಿ ಎಂದಿತು. ಆದರೆ ಆ ತುಂಡುಭೂಮಿಯ ಶೇ. 65 ಭಾಗ ಮರಳುಗಾಡಾಗಿತ್ತು. ನಾವು ನಮ್ಮೆದೆಯ ಬಿಸಿರಕ್ತ ಬಸಿ ಬಸಿದು, ನೀರು ಮಾಡಿ ಅದಕ್ಕೆ ಹರಿಸಿದೆವು. ನಾವು ಅದನ್ನೇ ನಮ್ಮ ರಾಷ್ಟ್ರವೆಂದು ಸ್ವೀಕರಿಸಿದೆವು. ಏಕೆಂದರೆ ನಮಗೆ ಆ ತುಂಡುಭೂಮಿ ಸರ್ವಸ್ವವೂ ಆಗಿತ್ತು. ನಾವು ಯಾವುದನ್ನೂ ಮರೆತಿರಲಿಲ್ಲ . ಮರೆಯುವುದೂ ಇಲ್ಲ. ಪರೋಹ್ನಿಂದ ಬಚಾವಾದೆವು. ಗ್ರೀಸ್, ರೋಂನಿಂದ ಉಳಿದುಕೊಂಡೆವು. ಸ್ಪೇನ್ನಿಂದ ಪಾರಾದೆವು. ಹಿಟ್ಲರ್ ನಿಂದಲೂ ಬಚಾವಾದೆವು. ಅರಬ್ ರಾಷ್ಟ್ರಗಳು, ಸದ್ದಾಂ, ಗಡ್ಡಾಫಿ, ಹಮಾಸ್ ಶತ್ರುಗಳಿಂದಲೂ ನಮ್ಮನ್ನೇನೂ ಮಾಡಲಾಗಲಿಲ್ಲ. ಈಗ ಹಿಜಬುಲ್ಲಾ ಕೂಡ ನಮ್ಮನ್ನೇನೂ ಮಾಡಲಾಗದು. ಇರಾನ್ ನಮ್ಮ ಕೂದಲನ್ನೂ ಕೊಂಕಿಸಲಾಗದು.
ನಮ್ಮ ಜೆರುಸಲೇಂಗೆ 52 ಬಾರಿ ದಾಳಿ ನಡೆಯಿತು. 23 ಬಾರಿ ಮುತ್ತಿಗೆ ಹಾಕಲಾಯಿತು. 99 ಬಾರಿ ನಾಶಗೊಳಿಸಲಾಯಿತು. ಮೂರು ಬಾರಿ ಧ್ವಂಸಗೊಳಿಸಲಾಯಿತು. 44 ಬಾರಿ ವಶಪಡಿಸಿಕೊಳ್ಳಲಾಯಿತು. ಆದರೆ ನಾವೆಂದೂ ನಮ್ಮ ಪವಿತ್ರ ಜೆರೂಸಲೆಂ ಅನ್ನು ಮರೆಯಲಿಲ್ಲ. ಅದು ನಮ್ಮ ಹೃದಯದಲ್ಲಿದೆ. ಮನದಾಳದಲ್ಲಿದೆ. ನಾವಿರುವವರೆಗೂ ಅದು ನಮ್ಮ ಆತ್ಮದಲ್ಲೇ ಭದ್ರವಾಗಿರಲಿದೆ. ಜಗತ್ತು ನೆನಪಿಟ್ಟುಕೊಳ್ಳಲಿ- ನಮ್ಮನ್ನು ನಾಶ ಮಾಡಲೆಂದು ಹೊಂಚು ಹಾಕಿದವರು ಯಾರೂ ಉಳಿದಿಲ್ಲ. ಈಜಿಪ್ಟ್, ಲೆಬನಾನ್, ಬೆಬಿಲೋನ್, ಗ್ರೀಸ್, ರೋಂ- ಎಲ್ಲರೂ ಈಗ ಹೇಳ ಹೆಸರಿಲ್ಲದಂತಾಗಿವೆ. ನಾವು ಮಾತ್ರ ಈಗಲೂ ಉಳಿದುಕೊಂಡಿದ್ದೇವೆ.
ಅವರು (ಮೂಲಭೂತವಾದಿ ಮುಸ್ಲಿಮರು) ನಮ್ಮ ಸರ್ವನಾಶಕ್ಕೆ ಹವಣಿಸಿದ್ದಾರೆ. ನಮ್ಮ ಪದ್ಧತಿಗಳನ್ನು, ಪರಂಪರೆಯನ್ನು ಅಳಿಸಿ ಹಾಕಿದ್ದಾರೆ. ನಮ್ಮ ಅಧ್ಯಯನ, ಚಿಂತನೆಗಳಿಗೆ ಅಡ್ಡ ಬಂದಿದ್ದಾರೆ. ನಮ್ಮ ಪ್ರವಾದಿಗಳನ್ನು ಹೊಸಕಿಹಾಕಿದ್ದಾರೆ. ಅಬ್ರಹಾಂ ಎಂಬ ನಮ್ಮ ಹೆಸರನ್ನು ಇಬ್ರಾಹಿಂ ಎಂದು ಬದಲಿಸಿದ್ದಾರೆ. ಸಾಲೋಮನ್ ಎಂಬುದು ಅವರ ಕಬಂಧ ಹಿಡಿತಕ್ಕೆ ಸಿಲುಕಿ ಸುಲೇಮಾನ್ ಆಗಿದೆ. ನಮ್ಮ ಡೇವಿಡ್ ದಾವೂದ್ ಆಗಿದ್ದಾನೆ. ಮೋಸಸ್ ಮೂಸಾ ಆಗಿ ಬದಲಾಗಿದ್ದಾನೆ…… ಒಂದು ದಿನ ಅವರು ನಿಮ್ಮ ಪ್ರವಾದಿ ಬಂದಿದ್ದಾನೆಂದರು. ಆದರೆ ನಾವು ಅವರನ್ನು ಸ್ವೀಕರಿಸಲಿಲ್ಲ . ಹಾಗಾಗಿ ನಮ್ಮನ್ನು ಕೊಂದರು. ನಮ್ಮ ನಗರಗಳನ್ನು ವಶಪಡಿಸಿಕೊಂಡರು. ನಮ್ಮ ಯಾತ್ರಿಬ್ ನಗರ ಮದೀನಾ ಆಗಿ ಬದಲಾಯಿತು. ನಮ್ಮನ್ನು ಸಿಕ್ಕಿದಲ್ಲೆಲ್ಲ್ಲಾ ಕತ್ತರಿಸಿ ಹಾಕಲಾಯಿತು. ನಮ್ಮ ಜನರನ್ನು ಹೊರಗಟ್ಟಲಾಯಿತು. ಗಡೀಪಾರು ಮಾಡಲಾಯಿತು. ನೆಲೆ ಹುಡುಕಿಕೊಂಡು ಜಗತ್ತಿನೆಲ್ಲೆಡೆ ಅಂಡಲೆಯಬೇಕಾಯಿತು. ಇಷ್ಟೆಲ್ಲ ಆದರೂ ನಾವು ಮತ್ತೆ ಪುಟಿದೆದ್ದೆವು. ನಮ್ಮ ಗುರುತು, ಆಸ್ಮಿತೆ, ನಂಬಿಕೆ ಹಾಗೂ ಪರಂಪರೆಯನ್ನು ಮರುಸ್ಥಾಪಿಸಿದೆವು.
ಅವರು ನಮ್ಮನ್ನು ಜಗತ್ತಿನಿಂದಲೇ ಅಳಿಸಿ ಹಾಕಲೆತ್ನಿಸಿದರು. ನಮ್ಮನ್ನು ಜೀರ್ಣಿಸಿಕೊಳ್ಳಲು ಮುಂದಾದರು. ನಮ್ಮ ಸಂಸ್ಕೃತಿ, ಪರಂಪರೆ, ನಂಬಿಕೆ, ಇತಿಹಾಸ ಎಲ್ಲವನ್ನೂ ಹೊಸಗಿ ಹಾಕಲು ಹುನ್ನಾರ ನಡೆಸಿದರು. ಆದರೆ ಅಸಲಿಗೆ ನಾವು ಯಾರು ಎಂಬುದನ್ನು ನಾವೆಂದೂ ಮರೆಯಲಿಲ್ಲ. ನಮ್ಮ ಮಾತೃಭೂಮಿಯ ಬಗೆಗಿನ ಗೌರವವನ್ನು ಕಳೆದುಕೊಳ್ಳಲಿಲ್ಲ. ಜಗತ್ತಿನೆಲ್ಲೆಡೆ ಹರಿದು ಹಂಚಿ ಹೋಗಿದ್ದರೂ ಎಂದಾದರೊಂದು ದಿನ ಜೆರುಸಲೆಂಗೆ ಖಂಡಿತ ಮರಳಿ ಬರುತ್ತೇವೆ ಎಂಬ ನಂಬಿಕೆಯನ್ನು ಮರೆಯಲಿಲ್ಲ.
ನಾವು ನಮ್ಮ ಪುಟ್ಟ ರಾಷ್ಟ್ರವನ್ನು ನಮ್ಮದೇ ಕೈಗಳಿಂದ ಕಟ್ಟಿದ್ದೇವೆ. ಬೆವರು , ನೆತ್ತರು, ಕಣ್ಣೀರು ಹರಿಸಿದ್ದೇವೆ. ನಮ್ಮ ತ್ಯಾಗ, ಇಚ್ಛಾ ಶಕ್ತಿಗಳನ್ನು ಈ ಪುಟ್ಟ ದೇಶ ಕಟ್ಟಲು ಧಾರೆಯೆರೆದಿದ್ದೇವೆ. ಅದರ ಫಲವಾಗಿ ಮರುಭೂಮಿಯಾಗಿದ್ದ ನಮ್ಮ ನಾಡು ಸಸ್ಯ ಶ್ಯಾಮಲೆಯಾಗಿ ಜಲಭರಿತೆ ಫಲಭರಿತೆಯಾಗಿ ನಳನಳಿಸುತ್ತಿದೆ. ಅತ್ಯುತ್ತಮ ಪ್ರಜಾತಂತ್ರ ವ್ಯವಸ್ಥೆ ನಮ್ಮದಾಗಿದೆ. ವಿಜ್ಞಾನ, ತಂತ್ರಜ್ಞಾನಗಳಲ್ಲಿ ಮೇರು ಸಾಧನೆ ಮಾಡಿ, ಜಗತ್ತಿನಲ್ಲೇ ಅತ್ಯಂತ ಮುಂದುವರಿದ ದೇಶ ಎಂಬ ಕೀರ್ತಿಗೆ ಪಾತ್ರರಾಗಿದ್ದೇವೆ.
ಇಂದು ನಾವು ಬಲಶಾಲಿಯಾಗಿದ್ದೇವೆ. ಒಗ್ಗಟ್ಟಿನಿಂದಿದ್ದೇವೆ. ನಮ್ಮ ನೆಲ, ಜಲ, ಜನ, ನಮ್ಮ ಭವಿಷ್ಯ ಎಲ್ಲವನ್ನೂ ಎಲ್ಲರನ್ನೂ ರಕ್ಷಿಸಲು ಬದ್ಧರಾಗಿದ್ದೇವೆ. ನಮ್ಮ ಶತ್ರುಗಳು ನಮ್ಮನ್ನು ಸರ್ವನಾಶಗೊಳಿಸಲು ಮತ್ತೆ ಮತ್ತೆ ಯತ್ನಿಸಬಹುದು. ಆದರೆ ಅವರು ಹಿಂದಿನಂತೆಯೇ ಈಗಲೂ ತಮ್ಮ ಯತ್ನದಲ್ಲಿ ವಿಫಲರಾಗುತ್ತಾರೆ. ಭಯೋತ್ಪಾದನೆ ನಮ್ಮನ್ನು ಬಗ್ಗಿಸದು. ಬೆದರಿಕೆ, ಹಿಂಸಾಚಾರಗಳು ನಮ್ಮನೆಂದೂ ಮಣಿಸದು. ಹೆದರಿಕೆ, ಬೆದರಿಕೆಗೆ ಶರಣಾಗುವ ಜಾಯಮಾನದವರೇ ನಾವಲ್ಲ.
ಇಸ್ರೇಲ್ ಇರುವುದು ಯಹೂದಿಗಳು ವಾಸಿಸುವುದಕ್ಕಾಗಿ. ನಮ್ಮ ನಾಗರಿಕರನ್ನು, ನಮ್ಮ ಭೂಮಿಯನ್ನು, ನಮ್ಮ ಭವಿಷ್ಯವನ್ನು ಕಾಪಾಡಲು ನಾವು ಸದಾ ಕಟಿಬದ್ಧರಾಗಿದ್ದೇವೆ. ಸ್ವಾತಂತ್ರ್ಯ ನಮ್ಮುಸಿರು. ಗಡಿಗಳು ನಮ್ಮ ಕೋಟೆಯ ಹೆಬ್ಬಾಗಿಲುಗಳು. ನಾವು ಸದಾ ಶಾಂತಿಯನ್ನೇ ಬಯಸುತ್ತೇವೆ. ಆದರೆ ಆ ಶಾಂತಿ ಸ್ಥಾಪನೆಗಾಗಿ ನಮ್ಮ ಭದ್ರತೆಯನ್ನು, ನಮ್ಮ ಅಸ್ತಿತ್ವವನ್ನು ಬಲಿಕೊಡುವುದಕ್ಕೆ ನಾವು ಸುತಾರಂ ಸಿದ್ಧರಿಲ್ಲ.
ಯಹೂದಿ ಜನರು ಇಸ್ರೇಲ್ ತೊರೆದು ಎಲ್ಲಿಗೂ ಹೋಗಲಾರರು ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳಲಿ.ಇತಿಹಾಸದುದ್ದಕ್ಕೂ ನಾವು ಸಾಕಷ್ಟು ಕಠಿಣ ಸವಾಲುಗಳನ್ನು ನಿರ್ಭೀತಿಯಿಂದ ಎದುರಿಸಿದ್ದೇವೆ. ಮುಂದೆಯೂ ಎದುರಿಸುತ್ತೇವೆ. ಜೆರುಸಲೆಂ ಇಸ್ರೇಲ್ನ ಅಮರ ರಾಜಧಾನಿಯಾಗಿ ಸದಾ ಉಳಿಯಲಿದೆ. ಅದು ಎಲ್ಲರಿಗೂ ಶಾಂತಿಯ, ಸಹಬಾಳ್ವೆಯ ನೆಲೆವೀಡಾಗಲಿದೆ ಎಂಬ ಭರವಸೆ ನಮ್ಮದು.
“ನಾವು ಅಂತಿಂಥವರಲ್ಲ. ಶಕ್ತಿ, ಯುಕ್ತಿ, ಭರವಸೆಗಳ ಅಮರ ಪುತ್ರರು . ಕ್ಷಯವಿಲ್ಲದ ಕ್ಷಾತ್ರರು. ಮೃತ್ಯುಂಜಯ ಮಿತ್ರರು. ನಾವು ಪುಟಿದೇಳುತ್ತಲೇ ಇರುತ್ತೇವೆ. ಸಾವಿರಾರು ವರ್ಷಗಳಿಂದ ಪುಟಿದೇಳುತ್ತಲೇ ಇದ್ದೇವೆ. ನಾವು ಖಂಡಿತ ಉಳಿದು,ಬೆಳೆಯುತ್ತೇವೆ.ಏಕೆಂದರೆ ಇದೇ ನಮ್ಮ ಗಂತವ್ಯ. ಇದೇ ನಮ್ಮ ಮನೆ. ಈ ಮನೆಯನ್ನು ತೊರೆದು ನಾವೆಲ್ಲಿಗೂ ಹೋಗಲಾರೆವು.”
-ಇಸ್ರೇಲ್ ಎಂಬ ಜಗತ್ತಿನ ಭೂಪಟದಲ್ಲಿ ಕಣ್ಣಿಗೆ ಕಂಡೂ ಕಾಣದಂತಿರುವ ಪುಟ್ಟ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈಚೆಗೆ ತನ್ನ ದೇಶದ ಪ್ರಜೆಗಳನ್ನುದ್ದೇಶಿಸಿ ಮಾಡಿದ ಅಮೋಘ ಭಾಷಣದ ಸಾರ ಇದು. ಕೇವಲ 1.2 ಕೋಟಿಯಷ್ಟು ಯಹೂದಿಗಳಿರುವ ಪುಟ್ಟ ದೇಶ ಇಸ್ರೇಲ್. 56 ಮುಸ್ಲಿಂ ರಾಷ್ಟ್ರಗಳನ್ನು ಎದುರು ಹಾಕಿಕೊಂಡು ತಲೆಯೆತ್ತಿ ಸ್ವಾಭಿಮಾನದಿಂದ ಗರ್ಜಿಸುತ್ತಿರುವ ಪರಿ ಇದು. ತನ್ನೆದುರು ಗರ್ಜಿಸಿದ ಹಿಜಬುಲ್ಲಾ ಹುಲಿಗಳನ್ನು ಕ್ಷಣಮಾತ್ರದಲ್ಲಿ ಉರುಳಿಸಿ ಅವರ ನಾಯಕ ಸಂತತಿಗೇ ಗೋರಿ ತೋಡಿದ ಬಲಾಢ್ಯರ ಮಾತಿದು. ಇರಾನ್ನಂತಹ ತೈಲ ಸಂಪತ್ತಿನಿಂದ ಮೆರೆಯುತ್ತಿರುವ ಮೂಲಭೂತವಾದಿ ದೇಶಕ್ಕೆ ಮುಟ್ಟಿ ನೋಡಿಕೊಳ್ಳುವಂತಹ ತಪರಾಕಿ ನೀಡಿರುವುದು ಇದೇ ನೆತನ್ಯಾಹು ನೇತೃತ್ವದ ಇಸ್ರೇಲ್.
1.2 ಕೋಟಿಯಷ್ಟು ಹಿಡಿಯಷ್ಟು ಯಹೂದಿಗಳು ಎದುರು ಹಾಕಿಕೊಂಡಿರುವುದು 56 ಮುಸ್ಲಿಂ ದೇಶಗಳ 120 ಕೋಟಿ ಮುಸ್ಲಿಮರನ್ನು . ಆದರೂ ಯಹೂದಿಗಳು ಜಗ್ಗಿಲ್ಲ , ಬಗ್ಗಿಲ್ಲ , ಕುಗ್ಗಿಲ್ಲ .ಇಲ್ಲಿ ಭಾರತದಲ್ಲಿ 100 ಕೋಟಿ, ಉಳಿದ ದೇಶಗಳದ್ದು ಸೇರಿಸಿದರೆ ಒಟ್ಟು 120 ಕೋಟಿ ಹಿಂದುಗಳು ಇಡೀ ಜಗತ್ತಿನಲ್ಲಿ ನೆಲೆಸಿದ್ದಾರೆ. ಆದರೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಕೆನಡಾ ಸೇರಿದಂತೆ ಹಲವಡೆ ಹಿಂದುಗಳ ಮೇಲೆ ಇನ್ನಿಲ್ಲದ ದಾಳಿ, ಆಕ್ರಮಣ, ಅತ್ಯಾಚಾರ ಪ್ರಕರಣಗಳು ಘಟಿಸುತ್ತಿದ್ದರೂ ಹಿಂದೂ ಸಮುದಾಯಕ್ಕೇಕೆ ಇನ್ನೂ ಎಚ್ಚರವಾಗಿಲ್ಲ? ಕರ್ನಾಟಕ ಹಾಗೂ ಉಳಿದ ರಾಜ್ಯಗಳಲ್ಲಿ ಅನ್ನದಾತ ರೈತರ ಹೊಲ, ಮನೆಗಳು ವಕ್ಫ್ ಭೂತದ ಪಾಲಾಗುತ್ತಿದ್ದರೂ ರಾಜಕೀಯ ಮುಖಂಡರು, ಧಾರ್ಮಿಕ ನಾಯಕರು, ನೆಲ ಜಲ ರಕ್ಷಕರು ಸೊಲ್ಲೆತ್ತದೆ ಸದ್ದಿಲ್ಲದೆ ನಿದ್ದೆಗೆ ಜಾರಿರುವವರು ಇಸ್ರೇಲ್ ಪ್ರಧಾನಿ ನೆತನ್ಯಾಹು ಮಾತುಗಳನ್ನು ಅಗತ್ಯವಾಗಿ ಕೇಳಿಸಿಕೊಳ್ಳಲೇಬೇಕು. ಭಾರತದ ಹಳ್ಳಿ ಹಳ್ಳಿಗಳಲ್ಲಿ ನೆತನ್ಯಾಹು ನುಡಿಗಳು ಮೊಳಗಬೇಕು. ಅವರೇಕೆ ಹಾಗೆ? ನಾವೇಕೆ ಹೀಗೆ? ಎನ್ನುವ ಕುರಿತು ವಿಶ್ಲೇಷಣೆ ನಡೆಯಬೇಕು. ‘ಬಟೇಂಗೇ ತೋ ಕಟೇಂಗೇ ’ (ವಿಭಜನೆಯಿಂದ ವಿನಾಶ) ಎಂದು ಯೋಗಿ ಆದಿತ್ಯನಾಥ್ ಭಾಷಣ ಮಾಡಿದಾಗ ಇಂತಹ ಮಾತು ಆಡಬಾರದಿತ್ತೆಂದು ಮರುಗುವ ‘ಸರ್ವ ಜನಾಂಗದ ಶಾಂತಿಯ ತೋಟ’ದ ಮಾಲೀಕರು ತಾವೆಂದು ಬೀಗುವವರು ಒಮ್ಮೆಯಾದರೂ ನೆತನ್ಯಾಹು ನುಡಿಗಳನ್ನು ಆಲಿಸಬೇಕು. ‘ಏಕ್ ಹೈ ತೋ ಸೇಫ್ ಹೈ’ (ಒಂದಾಗಿದ್ದರೆ ಸುರಕ್ಷಿತ) ಎಂದು ಪ್ರಧಾನಿ ಮೋದಿ ಹೇಳಿದ್ದಕ್ಕೆ ಕುಂಯ್ಗುಡುವ ಡೊಂಕು ಬಾಲದ ನಾಯಕರು ಬಿಡುವಿನ ವೇಳೆ ನೆತನ್ಯಾಹು ನುಡಿಗಳನ್ನು ಕೇಳಿಸಿಕೊಳ್ಳಬೇಕು. ಪ್ರತಿಕೂಲ ಪರಿಸ್ಥಿತಿ, ಎಲ್ಲ ಬಗೆಯ ವೈರುಧ್ಯಗಳ ನಡುವೆಯೂ ದೇಶ ಕಟ್ಟುವುದು ಹೇಗೆಂದು ನಮ್ಮ ರಾಜಕೀಯ ನಾಯಕರು ನೆತಾನ್ಯಾಹು ನುಡಿಗಳಿಂದ ಕಲಿಯಬೇಕು.
“ಬಾಳಬಲ್ಲೆವು, ಆಳಬಲ್ಲೆವು, ಸೋಲನೊಲ್ಲೆವು ಒಲ್ಲೆವು. ವಿಶ್ವವೆಲ್ಲವು ಮುನಿದು ನಿಂತರೂ ನಾಡನುಳಿಸಲು ಬಲ್ಲೆವು” ಎಂಬ ನೆತನ್ಯಾಹು ಅವರ ಸಂದೇಶ ಭಾರತಕ್ಕೆ ರಣಮಂತ್ರವಾಗಬೇಕು.