ಬೆಂಗಳೂರು: ಬೆಂಗಳೂರಿನ ಪುಲಕೇಶಿನಗರ ಕ್ಷೇತ್ರದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯ ಇತ್ತೀಚಿನ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸತ್ಯಶೋಧನೆ ನಡೆಸಿದ್ದ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಶ್ರೀಕಾಂತ್ ಡಿ ಬಬಲಾದಿ ನೇತೃತ್ವದ ಸಿಟಿಜನ್ಸ್ ಫಾರ್ ಡೆಮಾಕ್ರಸಿಯ ಸತ್ಯಶೋಧನಾ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ. “ಗಲಭೆಗಳನ್ನು ಮೊದಲೇ ಯೋಜಿಸಲಾಗಿತ್ತು, ಸಂಘಟಿಸಲಾಗಿತ್ತು ಮತ್ತು ಜನಸಮೂಹವು ಈ ಪ್ರದೇಶದ ಕೆಲವು ಪ್ರಮುಖ ಹಿಂದೂಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ದೊಂಬಿ ನಡೆಸಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಮಿತಿಯ ಸದಸ್ಯರು ಶುಕ್ರವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಸತ್ಯಶೋಧನಾ ಸಮಿತಿ ವರದಿಯನ್ನು ಸಲ್ಲಿಸಿದರು. ಮುಖ್ಯಮಂತ್ರಿಗಳು ಗೃಹ ಸಚಿವರು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ನಗರದ ಇತರ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಮಿತಿ ಸದಸ್ಯರು ಹೇಳಿದ್ದಾರೆ.
ಸಂಪೂರ್ಣ ವರದಿಯನ್ನು ಇಲ್ಲಿ ಓದಬಹುದಾಗಿದೆ.
ಹಿಂಸಾಚಾರದ ವೇಳೆ ದುಷ್ಕರ್ಮಿಗಳು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಯನ್ನು ಸುಟ್ಟು ಹಾಕಿದ್ದಾರೆ. ಪೊಲೀಸ್ ಠಾಣೆಯ ಮೇಲೆ ದಾಳಿಯನ್ನು ನಡೆಸಿದ್ದಾರೆ. ಇದರ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಸರ್ಕಾರ ಆದೇಶಿಸಿದೆ.
49 ಪುಟಗಳ ವರದಿಯು “ಇಡೀ ಘಟನೆಯು ರಾಜ್ಯದ ಸಾಮಾನ್ಯ ಜನರ ನಂಬಿಕೆಯನ್ನು ಕುಗ್ಗಿಸಲು ಉದ್ದೇಶಪೂರ್ವಕವಾಗಿ, ಪೂರ್ವ ನಿಯೋಜಿತವಾಗಿ ಮಾಡಿದ ಹಿಂಸಾಚಾರ” ಎಂದು ಹೇಳಿದೆ. ದೇಗುಲವನ್ನು ರಕ್ಷಣೆ ಮಾಡುವಂತೆ ಮಾನವ ಸರಪಳಿ ರಚನೆ ಮಾಡಿದ್ದು, ಅವರನ್ನು ಅವರು ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ. ಮಾಧ್ಯಮಗಳಿಗೆ ತಮ್ಮ ಕಪಟ ಮಾನವೀಯತೆ ತೋರಿಸಲು ಮಾಡಿದ ಪ್ರಯತ್ನ ಎಂದಿದೆ.
ಸತ್ಯಶೋಧನಾ ಸಮಿತಿಯು ಹಲವಾರು ಸಂತ್ರಸ್ತರು, ಪೊಲೀಸರು ಮತ್ತು ಪ್ರದೇಶದ ಪ್ರಮುಖ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿ ಈ ವರದಿಯನ್ನು ಸಿದ್ಧಪಡಿಸಿದೆ. ನಿವೃತ್ತ ಅಧಿಕಾರಿಗಳು, ಪತ್ರಕರ್ತರು, ವಕೀಲರು, ಪ್ರಾಧ್ಯಾಪಕರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಈ ಸಮಿತಿಯು ಒಳಗೊಂಡಿದೆ.
ಎಫ್ಐಆರ್ ಮತ್ತು ಸಂತ್ರಸ್ತರ ಜೊತೆಗಿನ ಮಾತುಕತೆಯಿಂದ ಹಿಂಸಾಚಾರದಲ್ಲಿ ಸ್ಥಳೀಯ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ ಎಂದು ಹೇಳಿದೆ.
ಕೇವಲ ಸ್ಥಳೀಯರು ಹಿಂಸಾಚಾರವನ್ನು ಯೋಜಿಸುವುದರಲ್ಲಿ ಭಾಗಿಯಾಗಿದ್ದು ಮಾತ್ರವಲ್ಲದೆ, ಘಟನೆಯ ಸಂಪೂರ್ಣ ಮಾಹಿತಿಯನ್ನು ಮೊದಲೇ ತಿಳಿದುಕೊಂಡಿದ್ದರು. ಈ ಘಟನೆಯನ್ನು ರಾಜಕೀಯ ಪ್ರೇರಿತ ಎಂಬಂತೆ ಬಿಂಬಿಸಲು ಪ್ರಯತ್ನ ನಡೆಸಲಾಗುತ್ತಿದೆ, ಆದರೆ ಇದು ಕೋಮು ಪ್ರಚೋದನೆಯಿಂದ ಉಂಟಾದ ಘಟನೆ ಎಂದು ಸಮಿತಿ ಹೇಳಿದೆ.
ಪಿಎಫ್ಐ ಮತ್ತು ಎಸ್‌ಡಿಪಿಐ ಹಿಂಸಾಚಾರವನ್ನು ಯೋಜಿಸುವಲ್ಲಿ ಮತ್ತು ಅದನ್ನು ಕಾರ್ಯಗತಗೊಳಿಸುವಲ್ಲಿ ನೇರವಾಗಿ ಭಾಗಿಯಾಗಿದೆ ಎಂದು ಸಮಿತಿ ಆರೋಪಿಸಿದೆ.
ಶಿಫಾರಸ್ಸುಗಳು
- ಅವಲೋಕನಗಳ ಆಧಾರದ ಮೇಲೆ, ಗಲಭೆಕೋರರ ಆಸ್ತಿಯನ್ನು ಮುಟ್ಟುಗೋಲು ಹಾಕುವ ಮೂಲಕ ಆಸ್ತಿಪಾಸ್ತಿ ನಷ್ಟವನ್ನು ಭರಿಸಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.
- ಈ ಘಟನೆಯನ್ನು ಸಮಗ್ರವಾಗಿ ತನಿಖೆ ಮಾಡಬೇಕು ಮತ್ತು ಘಟನೆ ಸ್ಥಳೀಯವೆಂದು ಪರಿಗಣಿಸಬಾರದು.
- ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಮತ್ತು ಮತೀಯ ತೀವ್ರವಾದಿ ಸಂಘಟನೆಗಳಿಂದ ಹರಿದು ಬಂದ ಹಣವನ್ನು ಎನ್‌ಐಎ ತನಿಖೆ ಮೂಲಕ ಪತ್ತೆ ಹಚ್ಚಬೇಕು.
- ಯಾವುದೇ ಧರ್ಮ, ಜನಾಂಗ, ವರ್ಗ, ಪಂಥ ಇತ್ಯಾದಿಗಳ ವಿರುದ್ಧ ದ್ವೇಷ ಸಾಧಿಸಲು ಸಾಮಾಜಿಕ ಮಾಧ್ಯಮವನ್ನು ಬಳಸದಂತೆ ಖಚಿತಪಡಿಸಿಕೊಳ್ಳಲು ಸೈಬರ್ ಡೋಮ್ ಸ್ಥಾಪಿಸಬೇಕು.
- ಡ್ರಗ್ಸ್ ದಂಧೆಯನ್ನು ಸಂಪೂರ್ಣ ಮಟ್ಟ ಹಾಕಬೇಕು.
ಸಂಪೂರ್ಣ ವರದಿಯನ್ನು ಇಲ್ಲಿ ಓದಬಹುದಾಗಿದೆ.