ಇಂದು ಜನ್ಮದಿನ


ಕೆ.ಪಿ ಪುಟ್ಟಣ ಚೆಟ್ಟಿ ಅವರು ತಮ್ಮ ಇಡೀ ಜೀವನವನ್ನೇ ಸಮಾಜ ಸೇವೆಗಾಗಿಯೇ ಮುಡಿಪಾಗಿಟ್ಟವರು. ಅವರು ಬೆಂಗಳೂರಿನ್ನು ಕಾಸ್ಮೋಪಾಲಿಟನ್ ನಗರವಾಗಿ ಅಭಿವೃದ್ಧಿಪಡಿಸಲು ಶ್ರಮವಹಿಸಿದ್ದರು. ಇಂದು ಅವರು ಜನ್ಮದಿನ.


ಪರಿಚಯ
ಕೆ.ಪಿ ಪುಟ್ಟಣ ಚೆಟ್ಟಿ ಅವರು ಏಪ್ರಿಲ್‌ 29, 1856 ರಂದು ಬೆಂಗಳೂರಿನ ಕೃಷ್ಣರಾಜಪುರದಲ್ಲಿ ಜನಿಸಿದರು. ಇವರ ತಂದೆ ಯಲ್ಲಪ್ಪ ಶೆಟ್ಟಿ ಮತ್ತು ತಾಯಿ ಯಲ್ಲಮ್ಮ. ಪುಟ್ಟಣ್ಣ ಚೆಟ್ಟಿ ಅವರು ಪ್ರಾಥಮಿಕ ಶಿಕ್ಷಣವನ್ನು ಕೃಷ್ಣರಾಜಪುರದಲ್ಲಿ ಮುಗಿಸಿದರು. ಪ್ರೌಢಶಾಲೆಯನ್ನು ಬೆಂಗಳೂರಿನ ವೆಸ್ಲಿಯನ್‌ ವಿಷನ್‌ ಸ್ಕೂಲ್‌ ನಲ್ಲಿ ಅಧ್ಯಯನ ಮಾಡಿದರು. ನಂತರ ಅವರು ಸೆಂಟ್ರಲ್‌ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ಇವರಿಗೆ ಉನ್ನತ ಶಿಕ್ಷಣ ಪಡೆಯಬೇಕೆಂಬ ಬಯಕೆ ಇತ್ತು. ಆದರೆ ಆರ್ಥಿಕ ಸಮಸ್ಯೆಯ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಓದುವುದನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು.


ವೃತ್ತಿ ಜೀವನ
ಪುಟ್ಟಣ್ಣ ಚೆಟ್ಟಿರವರು 1876ರಲ್ಲಿ ರಾಜ್ಯ ರೈಲ್ವೆ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ವೃತ್ತಿಯನ್ನು ಪ್ರಾರಂಭಿಸಿದರು. 1884 ರಲ್ಲಿ ಮೈಸೂರು ರಾಜ್ಯ ರೈಲ್ವೆ ಇಲಾಖೆಯಲ್ಲಿ ಟ್ರಾಫಿಕ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದರು. 1898ರಲ್ಲಿ ಉಪ ಕಮೀಷನರ್ ಆಗಿ ಸೇವೆ ಸಲ್ಲಿಸಿದರು. 1906ರಲ್ಲಿ ಅವರು ಬೆಂಗಳೂರು ಸಿಟಿ ಕೌನ್ಸಿಲ್ ನ ಸದಸ್ಯರಾಗಿದ್ದರು. 1913ರಲ್ಲಿ, ಪುಟ್ಟಣ್ಣ ಚೆಟ್ಟಿ ಅವರು ಬೆಂಗಳೂರು ಪುರಸಭೆಯ ಅಧ್ಯಕ್ಷರಾಗಿ ಚುನಾಯಿತರಾದರು. ನಂತರ ಚೆಟ್ಟಿ ಅವರು ಸಾರ್ವಜನಿಕ ಸೇವೆಗಾಗಿ ದೇಣಿಗೆ ಸಂಗ್ರಹಿಸಲು ಪ್ರಾರಂಭಿಸಿದರು. 1915ರಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.


ಸಮಾಜ ಸೇವೆಗೆ ಕೊಡುಗೆ
1927ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದರು. 1938ರಲ್ಲಿ ಬೆಂಗಳೂರು ವೀರಶೈವ ವಿದ್ಯಾನಿಲಯವನ್ನು ಸ್ಥಾಪಿಸಿದರು. ಅನೇಕ ಧರ್ಮಸಂಸ್ಥೆಗಳಿಗೆ ನ್ಯಾಯಪಾಲಕರಾಗಿದ್ದರು. 1936ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪರಿಷತ್ತಿನ ಅಭಿವೃದ್ಧಿ ಕಾರ್ಯದಲ್ಲೂ ತೊಡಗಿಸಿಕೊಂಡರು. 1936ರಲ್ಲಿ ವಿಜಯನಗರ ಸ್ಮಾರಕೋತ್ಸವದ ಅಧ್ಯಕ್ಷತೆ ವಹಿಸಿದ್ದರು.


ಕೆ.ಪಿ.ಪುಟ್ಟಣ್ಣ ಚೆಟ್ಟಿಯವರು ವಿವಿಧ ಸಾರ್ವಜನಿಕ ಸಂಸ್ಥೆಗಳಲ್ಲಿಯೂ ಕಾರ್ಯನಿರ್ವಹಿಸಿದ್ದರು. ಪುರಭವನ ನಿರ್ಮಾಣಕ್ಕಾಗಿ 75,000 ರೂ, ವಿಕ್ಟೋರಿಯಾ ಆಸ್ಪತ್ರೆ ಹೊರರೋಗಿ ವಿಭಾಗ ನಿರ್ಮಾಣಕ್ಕೆ 25,000 ರೂ, ಮೈಸೂರು ವಿಶ್ವವಿದ್ಯಾಲಯಕ್ಕೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ 20,000 ರೂ, ದೂರದ ಹಳ್ಳಿಗಳಿಂದ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳಿಗಾಗಿ ಬಸವನಗುಡಿಯಲ್ಲಿ ವೀರಶೈವ ಉಚಿತ ವಿದ್ಯಾರ್ಥಿನಿಲಯ ಕಟ್ಟಿದ್ದಲ್ಲದೆ ಅದಕ್ಕೆ 85,000 ರೂ. ಗಳನ್ನು ಸಹಾಯಧನ ನೀಡಿದರು. ಚೆಟ್ಟಿ ಅವರು ನಗರಸಭೆ ಅಧ್ಯಕ್ಷರಾಗಿದ್ದಾಗ ಬಡಜನತೆಗಾಗಿ ವಸತಿ ಸೌಕರ್ಯವನ್ನ, ಅವರು ವಾಸಿಸುವ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆ ಮುಂತಾದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು.


ಪ್ರಶಸ್ತಿ
ಕೆ.ಪಿ ಪುಟ್ಟಣ್ಣ ಚೆಟ್ಟಿ ಅವರ ಸಮಾಜ ಸೇವೆಗೆ ಅನೇಕ ಪ್ರಶಸ್ತಿ ಮತ್ತು ಬಿರುದುಗಳು ಸಂದಿವೆ. 1911ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ‘ರಾಜ್ಯಸಭಾ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಬ್ರಿಟಿಷ್ ಸರ್ಕಾರದ ವತಿಯಿಂದ 1911ರಲ್ಲಿ ಚೆಟ್ಟಿ ಅವರಿಗೆ ‘ದಿವಾನ್ ಬಹದ್ದೂರ್’ ಪ್ರಶಸ್ತಿ ನೀಡಲಾಯಿತು. 1917ರಲ್ಲಿ ‘ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್’ ಮತ್ತು 1925ರಲ್ಲಿ ‘ಕೈಸರ್ ಹಿ ಹಿಂದ್’ ಪದಕವನ್ನು ನೀಡಲಾಯಿತು. ಜೊತೆಗೆ ಬ್ರಿಟಿಷ್‌ ಸರ್ಕಾರ ಅವರಿಗೆ ಸರ್‌ ಎಂಬ ಬಿರುದನ್ನು ಸಹ ನೀಡಿದೆ.


ಕೆ.ಪಿ ಪುಟ್ಟಣ್ಣ ಚೆಟ್ಟಿ ಅವರು ಜುಲೈ 23, 1938 ರಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.