ಬೆಂಗಳೂರು: ಜ್ಯೇಷ್ಠ ಕಾರ್ಯಕರ್ತ, ಈ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾಗಿ, ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಅಖಿಲ ಭಾರತೀಯ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಕೃ. ನರಹರಿ (93 ವರ್ಷಗಳು (1932ರ ಮೇ 25 – 2025ರ ಅಕ್ಟೋಬರ್ 8)) ಇಂದು ಬೆಳಗ್ಗೆ 4.30ಕ್ಕೆ ನಿಧನರಾಗಿದ್ದಾರೆ.

ಪರಿಚಯ: ಕೃ.ನರಹರಿಯವರು 1932ರ ಮೇ 25ರಂದು ಮೈಸೂರಿನಲ್ಲಿ ಜನಿಸಿದರು. 1951ರಲ್ಲಿ ಬಿಎಸ್ಸಿ ಪದವಿ ಮುಗಿಸಿ, 1953ರಲ್ಲಿ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸೇರ್ಪಡೆಗೊಂಡು, 1958ರಲ್ಲಿ ಬಿ.ಇ. ಪದವಿ ಪೂರ್ಣಗೊಳಿಸಿದರು. 24ವರ್ಷಗಳ ಕಾಲ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ ಅವರು, ಶಿಕ್ಷಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ಸ್ವಯಂನಿವೃತ್ತಿ (VRS) ಪಡೆದರು. ನಂತರ 18 ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಕರ ಬವಣೆಯನ್ನು ಪರಿಹರಿಸುವ ಕಾರ್ಯಕ್ಕೆ ಆದ್ಯತೆ ನೀಡಿದರು. ಸರ್ಕಾರಗಳ ನಿಯುಕ್ತಿಯ ಮೇರೆಗೆ ವಿವಿಧ ಸಮಿತಿಗಳ ಸದಸ್ಯರಾಗಿ ವಿಶ್ವದ ಅನೇಕ ರಾಷ್ಟ್ರಗಳ ಪ್ರವಾಸ ಮಾಡಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಮುಖ್ಯಶಿಕ್ಷಕ, ಶಾಖಾ ಕಾರ್ಯವಾಹ, ನಗರ ಕಾರ್ಯವಾಹ, ಭಾಗ ಕಾರ್ಯವಾಹ, ವಿಭಾಗ ಕಾರ್ಯವಾಹ, ಪ್ರಾಂತ ಕಾರ್ಯವಾಹ, ಕ್ಷೇತ್ರೀಯ ಕಾರ್ಯವಾಹ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಆರಂಭದಲ್ಲಿ ಕೊಡಗಿನಲ್ಲಿ ಎರಡು ವರ್ಷಗಳ ಕಾಲ ಪ್ರಚಾರಕರಾಗಿಯೂ ಕಾರ್ಯನಿರ್ವಹಿಸಿದ್ದರು. ಸಂಘದ ಸಹ ಸಂಘಸಂಸ್ಥೆಗಳಾದ ಭಾರತೀಯ ಶಿಕ್ಷಣ ಮಂಡಳ, ಮಾಧ್ಯಮಿಕ ಶಿಕ್ಷಕ ಸಂಘದಲ್ಲೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಅಷ್ಟೇ ಅಲ್ಲದೇ ರಾಷ್ಟ್ರೋತ್ಥಾನ ಪರಿಷತ್, ಮಿಥಿಕ್ ಸೊಸೈಟಿ, ಜನಸೇವಾ ವಿದ್ಯಾಕೇಂದ್ರ ಮುಂತಾದವುಗಳ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅಂತಿಮ ನಮನ: ಇಂದು ಬುಧವಾರ ಅಕ್ಟೋಬರ್ 08, 2025 ಮಧ್ಯಾಹ್ನ 2.30ರ ವರೆಗೆ ಶ್ರೀರಾಂಪುರದ ‘ಚೈತನ್ಯ’ ಸ್ವಗೃಹದಲ್ಲೇ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.
ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ್ ಗುರುಪ್ರಸಾದ್, ಜನಸೇವಾ ವಿದ್ಯಾಕೇಂದ್ರದ ನಿರ್ಮಲ್ ಕುಮಾರ್, ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ದಿ ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜ, ಶೈಕ್ಷಿಕ ಮಹಾಸಂಘದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಗುಂಟಾ.ಲಕ್ಷ್ಮಣ್, ಶಿಕ್ಷಣತಜ್ಞ ಡಾ.ಎಂ.ಕೆ.ಶ್ರೀಧರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್ ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಾಮಾಜಿಕ ಕಾರ್ಯಕರ್ತೆ ಡಾ|ತೇಜಸ್ವಿನಿ ಅನಂತ್ ಕುಮಾರ್, ರಾಜ್ಯಸಭಾ ಸದಸ್ಯ ಜಗ್ಗೇಶ್, ಮಾಜಿ ಮಂತ್ರಿಗಳಾದ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ, ಸುರೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ, ಬಸವನಗುಡಿಯ ಶಾಸಕ ರವಿಸುಬ್ರಹ್ಮಣ್ಯ ಸೇರಿದಂತೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಅಪರಾಹ್ನ 3.00 ಗಂಟೆಗೆ ಹರಿಶ್ಚಂದ್ರ ಘಾಟ್ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.
ಸಂತಾಪ ಸೂಚನೆ: ಕೃ ನರಹರಿ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸಹಸರಕಾರ್ಯವಾಹ ಮುಕುಂದ ಸಿ ಆರ್, ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ವಿ. ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.




ಶ್ರದ್ಧಾಂಜಲಿ ಸಂದೇಶ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರೂ, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರು ಹಾಗೂ ಪ್ರಸಿದ್ಧ ಶಿಕ್ಷಣ ತಜ್ಞರೂ ಆಗಿದ್ದ ಶ್ರೀ ಕೃ. ನರಹರಿಯವರ ನಿಧನದಿಂದಾಗಿ ಒಂದು ಸಮಾಜಸಮರ್ಪಿತ ಜೀವನ ಅಂತ್ಯಗೊಂಡಿದೆ.
ಸಂಘದ ಹಾಗೂ ಸಮಾಜ ಜೀವನದ ಹಲವು ರಂಗಗಳಲ್ಲಿ ನಿರಂತರ ಕ್ರಿಯಾಶೀಲರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಅಸಂಖ್ಯಾತ ಕಾರ್ಯಕರ್ತರಿಗೆ ಪ್ರೇರಣೆ ನೀಡಿದ ಹಿರಿಯ ಜೀವಿ ಶ್ರೀ ಕೃ. ನರಹರಿ ಅವರ ಸ್ಮೃತಿಗೆ ಭಾವಪೂರ್ಣ ನಮನಗಳು.
ಶಿಕ್ಷಣ ರಂಗಕ್ಕೆ ಅವರು ನೀಡಿದ ಕೊಡುಗೆಯಿಂದಾಗಿ ಅವರು ಸದಾ ನೆನಪುಳಿಯುತ್ತಾರೆ.
ಸಂಘ ಸ್ವಯಂಸೇವಕನ ಅನ್ವರ್ಥನಾಮದಂತೆ ಬದುಕಿದ ಅವರ ಬಾಳು ಸಾರ್ಥಕವಾದುದು.
ಅಗಲಿದ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ.
ದತ್ತಾತ್ರೇಯ ಹೊಸಬಾಳೆ
ಸರಕಾರ್ಯವಾಹ
ರಾಷ್ಟ್ರೀಯ ಸ್ವಯಂಸೇವಕ ಸಂಘ
ನವದೆಹಲಿ
08.10.2025

ಶೋಕಸಂದೇಶ
ಕೃ.ನರಹರಿ ಅವರ ನಿಧನ ವಾರ್ತೆ ತಿಳಿದು ಖೇದವಾಗಿದೆ. ತಮ್ಮ 93 ವರ್ಷದ ಜೀವನದಲ್ಲಿ ಬಹುಶ: 80 ವರ್ಷಕ್ಕೂ ಹೆಚ್ಚು ಕಾಲ ದೇಶದ ಹಿತಕ್ಕೆ, ಸಾಮಾಜಿಕ ಚಟುವಟಿಕೆಗಳಿಗೆ, ಜೀವನವನ್ನು ಮೀಸಲಿರಿಸಿ ಪ್ರಾಮಾಣಿಕ ಹಾಗೂ ಆದರ್ಶಮಯ ಜೀವನ ನಡೆಸಿದ ನರಹರಿಯವರು ನಮ್ಮ ಗುರುಗಳಾದ ಪೇಜಾವರ ಶ್ರೀ ವಿಶ್ವೇಶತೀರ್ಥರಿಗೂ ಮತ್ತು ನಮಗೂ ಅತ್ಯಂತ ಪ್ರೀತಿ ಪಾತ್ರರಾಗಿದ್ದವರು. ಅವರ ಎಲ್ಲ ಚಟುವಟಿಕೆಗಳನ್ನು ನಾವು ಹತ್ತಿರದಿಂದ ಬಲ್ಲೆವು. ಅವರ ಸಹೋದರ, ಸಹೋದರಿ ಕೂಡಾ ದೇಶ ಸೇವೆಗೆ ಇಡೀ ಜೀವನವನ್ನೇ ಮುಡಿಪು ಇಟ್ಟವರು. ಶೈಕ್ಷಣಿಕ ಕ್ಷೇತ್ರದಲ್ಲಿ ಇವರ ಸಾಧನೆ ಅಪ್ರತಿಮ. ವಿಧಾನ ಪರಿಷತ್ ಸದಸ್ಯರಾಗಿ ಇವರು ಪ್ರತಿಪಾದಿಸಿದ ವಿಚಾರಗಳು ಸರ್ವ ವೇದ್ಯ. ಶ್ರೀ ಕೃಷ್ಣ ಮುಖ್ಯ ಪ್ರಾಣರು ಅವರಿಗೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸಿದ್ದೇವೆ.
– ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು
ಪೇಜಾವರ ಮಠ



