ತೀರ್ಥಹಳ್ಳಿ, ಫೆ. 22: ’ತಲೆತಲಾಂತರದಿಂದ ಬಂದ ನಾಟೀ ವೈದ್ಯಪರಂಪರೆ ಭಾರತದ ಗ್ರಾಮೀಣ ಜನರ ಆರೋಗ್ಯ ಕಾಪಾಡುವಲ್ಲಿ ಇಂದಿಗೂ ಮಹತ್ವದ ಪಾತ್ರ ವಹಿಸುತ್ತಾ ಬಂದಿದೆ. ಪ್ರತಿಶತ ಮೂವತ್ತು ಜನರು ಅಲೋಪತಿ ಪದ್ದತಿಯನ್ನು ಬಳಸುತ್ತಿದ್ದರೆ ಪ್ರತಿಶತ ಎಪ್ಪತ್ತು ಜನ ಪರ್ಯಾಯ ಚಿಕಿತ್ಸಾ ಪದ್ದತಿಗಳಾದ ಆಯುರ್ವೇದ, ನಾಟೀ ವೈದ್ಯ, ಸಿದ್ದ, ಯುನಾನಿ, ಹೋಮಿಯೋಪತಿಗಳನ್ನು ಬಳಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ನಾಟೀ ವೈದ್ಯರು ಸೇವಾ ಮನೋಭಾವದಿಂದ ನಿ:ಶ್ಶುಲ್ಕವಾಗಿ ಈ ಕಾರ್ಯವನ್ನು ಕೈಗೊಂಡು ಬರುತ್ತಿದ್ದಾರೆ. ಇಂತಹ ವೈದ್ಯರನ್ನು, ಈ ಪರಂಪರೆಯನ್ನು ಗೌರವಿಸಿ, ಬಳಸಿ, ಬೆಳೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇಂದಿದೆ. ಇದನ್ನು ಮನಗಂಡು ಪಶ್ಚಿಮಘಟ್ಟ ಕಾರ್ಯಪಡೆ ’ಹಸಿರು ಆರೋಗ್ಯ ಅಭಿಯಾನ’ದ ಮೂಲಕ ಸಮಾಜದಲ್ಲಿ ಜಾಗೃತಿ ಕಾರ್ಯ ಮಾಡುತ್ತಿದೆ’, ಎಂದು ಕಾರ್ಯಪಡೆಯ ಸದಸ್ಯರಾದ ಪ್ರೊ. ಕುಮಾರಸ್ವಾಮಿ ಹೇಳಿದರು.
ಅವರು ಪಶ್ಚಮಘಟ್ಟ ಕಾರ್ಯಪಡೆ, ಅರಣ್ಯ ಇಲಾಖೆ ಹಾಗೂ ಪುರುಷೋತ್ತಮ ಸಾವಯವ ಕೃಷಿ ಪರಿವಾರ ಸಂಯುಕ್ತವಾಗಿ ಆಯೋಜಿಸಿದ್ದ ’ಹಸಿರು ಆರೋಗ್ಯ ಅಭಿಯಾನ’ವನ್ನು ಉದ್ಘಾಟಿಸುತ್ತಾ ಮಾತನಾಡುತ್ತಿದ್ದರು. ತೀರ್ಥಹಳ್ಳಿಯ ಕೃಷಿನಿವಾಸದಲ್ಲಿ ಫೆಬ್ರವರಿ ೨೨ರಂದು ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರುಷೋತ್ತಮ ಸಾವಯವ ಕೃಷಿ ಪರಿವಾರದ ಅಧ್ಯಕ್ಷರಾದ ಶ್ರೀ ಮರಗಳಲೆ ನರಸಿಂಹಮೂರ್ತಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮತ್ತು ಈ ಅಭಿಯಾನದ ಶಿವಮೊಗ್ಗ ಜಿಲ್ಲಾ ಸಂಯೋಜಕರಾದ ಶ್ರೀ ಬಿ ಎಚ್. ರಾಘವೇಂದ್ರರವರು ಪಶ್ಚಿಮಘಟ್ಟ ಕಾರ್ಯಪಡೆಯ ಚಟುವಟಿಕೆಗಳ ಕಿರುಪರಿಚಯವನ್ನು ಮಾಡಿಕೊಟ್ಟರು. ಪ್ರಾಸ್ತಾವಿಕವಾಗಿ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದ ನಿರ್ವಾಹಕ ವಿಶ್ವಸ್ತರಾದ ಶ್ರೀ ಅರುಣ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಯುರ್ವೇದ ವೈದ್ಯರಾದ ಡಾ|| ಗಣೇಶ್ ಕಾಮತ್ ಹಾಗೂ ಸಾಗರದ ಮೂಲಿಕಾ ತಜ್ಞರಾದ ಶ್ರೀ ಆನೆಗೊಳಿ ಸುಬ್ಬರಾವ್ ಭಾಗವಹಿಸಿದ್ದರು. ತೀರ್ಥಹಳ್ಳಿ ತಾಲೂಕಿನ ಪಾರಂಪರಿಕ ವೈದ್ಯ ಪರಿಷತ್‌ನ ಅಧ್ಯಕ್ಷರಾದ ಶ್ರೀ ರಾಮಪ್ಪ ಹೆಗಡೆ, ಕಾರ್ಯದರ್ಶಿಗಳಾದ ಶ್ರೀ ಕೃಷ್ಣಮೂರ್ತಿ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಭಾರತಿ ಹಿರೇಸರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾವಯವ ಕೃಷಿ ಪರಿವಾರದ ಕಾಂiiದರ್ಶಿ ಶ್ರೀ ಶ್ರೀದತ್ತ ಸರು ಸ್ವಾಗತಿಸಿದರು. ಆಗುಂಬೆ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಸುರೇಶ ವಂದಿಸಿದರು. ಸಂಚಾಲಕ ಮಹೇಶ ಬೇಡನಬೈಲು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ತಾಲೂಕಿನ ನಾಟೀ ವೈದ್ಯರು, ಸಾವಯವ ಕೃಷಿಕರು, ಮಂಡಗದ್ದೆ
ವಲಯ ಅರಣ್ಯಾದಿಕಾರಿಗಳಾದ ಶ್ರೀ ರವಿಕುಮಾರ್ ಮತ್ತು ಅರಣ್ಯ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.