ಪ್ರಕೃತಿ ಕುವೆಂಪು ಅವರಿಗೆ ಒಂದು ಆರಾಧನೆ. ಅವರಿಗೆ ನಿಸರ್ಗನೇ ದೇವಾಲಯ, ಶಿವಮಂದಿರ. ದೈವಿಕ ಅನುಭವವಾಗಿ ಅವರ ಸಾಹಿತ್ಯದಲ್ಲಿ ಅದು ಮೂಡುತ್ತದೆ. ಅವರ ಕಾಲದ ದಟ್ಟಕಾಡು ಇಂದಿಲ್ಲ. ತೇಜಸ್ವಿ ಅವರಿಗೆ ಪ್ರಕೃತಿ ಒಂದು ಅನ್ವೇಷಣೆಯ ಮೂಲ. ಮಲೆನಾಡಿನ ಪ್ರಾಕೃತಿಕ ಪರಿಸರ ಅವರ ಬರವಣಿಗೆಯ ಒತ್ತಡವಾಗಿ ಬಂದಿದ್ದರೂ ಮನುಷ್ಯ ಬದುಕಿಗೆ ಈ ಪರಿಸರ ಎಷ್ಟು ಅನಿವಾರ್ಯ ಎಂಬ ಹುಡುಕಾಟವಿದೆ. ತೆಳುವಾಗುತ್ತಿರುವ ಕಾನನ,ನಶಿಸುತ್ತಿರುವ ವನ್ಯಜೀವಿ ಸಂಕುಲಗಳ ಬಗ್ಗೆ ವಿಷಾದವಿದೆ. ಮಹಾಕವಿ ಕುವೆಂಪು ಅವರ ಹುಟ್ಟುಹಬ್ಬ(ಡಿ-೨೯) ದ ಅಂಗವಾಗಿ ಅಪ್ಪ-ಮಗ ನೋಡಿದ ಮಲೆನಾಡಿನ ಸೌಂದರ್ಯದ ತುಲನಾತ್ಮಕ ನೋಟವನ್ನಿಲ್ಲಿ ನೀಡಲಾಗಿದೆ.

ಯಾವ ಗುಡಿ ಮಿಗಿಲು ಈ
ಭುವನ ದೇವಾಲಯಕೆ?
ಮೇಣಾವ ವಿಗ್ರಹಂ ಮೀರಿರುವುದೀ ಚೈತ್ರಪಂಚಮಿಯ
ಪುಣ್ಯ ಪ್ರಭಾತದಲಿ,ದೂರದಿ ದಿಗಂತದಿ
ಪ್ರತ್ಯಕ್ಷವಾಗಿರುವ ಭವ್ಯ ಸುಂದರ ದಿವ್ಯ
ಸರ‍್ಯ ದೇವನಿಗೆ?
ಮಹಾಕವಿ ಕುವೆಂಪು ಅವರಿಗೆ ದೇವಾಲಯವೆಂದರೆ ಅವರು ಹುಟ್ಟಿ ಬೆಳೆದ ಮಲೆನಾಡಿನ ಹಸುರಾವೃತ ಬೆಟ್ಟಗುಡ್ಡಗಳು. ಅವರಿಗೆ ಪ್ರಕೃತಿ “ಶಿವಮಂದಿರಸಮ ವನಸುಂದರ ಸುಮವಾಗಿ ಗೋಚರಿಸುತ್ತದೆ.ಚಿನ್ನದ ಚಂಡಿನಂತೆ ಮೂಡಿ ಹೊನ್ನಿನ ಹೊಳೆಯ ನೀರಿನಂತೆ ಹರಿಸುವ ಸೂರ್ಯಕಿರಣಗಳೂ ಸಹ ಇಡೀ ಸೃಷ್ಠಿಯ ಹೃದಯಕ್ಕೆ ಹರಿಯುವ ಪ್ರಾಣಾಗ್ನಿ. ಪ್ರಕೃತಿ ಸೌಂದರ್ಯವನ್ನು ನೋಡುತ್ತಾ,ಆನಂದಿಸುತ್ತಾ ಭಾವುಕರಾಗಿ,ಅನುಭಾವಕ್ಕೊಳಗಾಗಿ ಇಂದ್ರಿಯಾತೀತವಾದ ಹಂತಕ್ಕೆ ಬಂದು ನಿಲ್ಲುತ್ತಾರೆ. ಅವರಿಗೆ ಅತ್ತ,ಇತ್ತ,ಎತ್ತೆತ್ತಲ್ಲೂ ಹಸುರೇ ಕಾಣುತ್ತದೆ. ಹಾಗಾಗಿ

ಹಸುರೆತ್ತಲ್ ಹಸುರಿತ್ತಲ್ ಹಸುರತ್ತಲ್
ಕಡಲಿನಲಿ ಹಸರರ್ಟ್ಟಿತೊ ಕವಿಯಾತ್ಮ
ಹಸುರ್‌ನೆತ್ತರ್ ಒಡಲಿನಲಿ.
ಎಂದು ಅವರ ದೇಹ-ಮನಸ್ಸು ಹಸುರಾಗುವ ಅನುಭವಕ್ಕೆ ಒಳಗಾಗಿ ಬಿಡುತ್ತಾರೆ. ಪ್ರಕೃತಿ ಉಪಾಸನೆ ಎಂಬ ಕವನದಲ್ಲಿ ನಿಸರ್ಗದೊಡನೆ ಅವರು ಬೆರತು ಹೇಳುವ ಮಾತು.
ನಿನ್ನಮಲ ಹೃದಯದಲಿ
ನಾಳನಾಳಗಳಲಿ ನೆತ್ತರಾಡಲಿ ಚಿಮ್ಮಿ
ಬಿಸಿಯಾಗಿ, ಎದೆಯುಬ್ಬೆ ಶ್ವಾಸಕೋಶವ ತುಂಬಿ
ಹೊರಬರಲಿ ತಂಪಾದ ನಿರ್ಮಲ ಸಮೀಕರಣಂ,
ಕಿವಿಹೊಗಲಿ ಹಕ್ಕಿಯಲಿ,ಹೂಗಂಪು ಮೂಗಿನಲಿ
ಸಂಭೃತ ಸುವಾಸನೆಯ ನಾಕಮಂ ನಿರ್ಮಿಸಲಿ
ಕಣ್ಣಿಗಾಗಲಿ ದಿವ್ಯ ಸೌಂರ‍್ಯ ದರ್ಶನಂ.

ಹಸುರಿನ ಈ ಪ್ರೀತಿ,ನಿಸರ್ಗಾನುಭವ,ಅವರನ್ನದು ಮುಗ್ಧಗೊಳಿಸಿರುವ ರೀತಿ ಅವರ ಸಾಹಿತ್ಯದಲ್ಲಿ ಒತ್ತಡವಾಗಿ ಬಂದಿದೆ. ಹಸುರು ಅವರುನ್ನು ಉತ್ಕಟವಾದ ಆನಂದದ ನೆಲೆಗೆ ತಳ್ಳುತ್ತದೆ. ನಿಸರ್ಗ ಸೌಂದರ್ಯದಲ್ಲೇ ಮಿಂದು,ತೇಲಿ ಅದರಲ್ಲೆ ತನ್ಮಯರಾಗಿಬಿಡುತ್ತಾರೆ.

ಕವಿ ತಮ್ಮ ಕುಪ್ಪಳ್ಳಿಯ ಮಲೆನಾಡಿ ಮನೆಯನ್ನು ವಿವರಿಸುವಾಗಲೂ ಹೇಳುವುದು.
ತೀರ್ಥಹಳ್ಳಿಯ ಕಳೆದು,ತಾಯಿ ತುಂಗೆಯದಾಟಿ
ಒಂಭತ್ತು ಮೈಲಿಗಳ ದೂರದಲಿ,
ನಮ್ಮೂರು ಕುಪ್ಪಳ್ಳಿ,ಊರಲ್ಲ ನಮ್ಮ ಮನೆ. ನಮ್ಮ ಕಡೆ
ಊರೆಂದರೊಂದೆ ಮನೆ.ಪಡುವೆಟ್ಟಗಳ ನಾಡು;
ದಟ್ಟವಾದಡವಿಗಳು ಕಿಕ್ಕಿರಿದ ಮಲೆನಾಡು
ಸುತ್ತಲೂ ಎತ್ತರದ ಬೆಟ್ಟಗಳು,ಕಾಡುಗಳು;
ಎತ್ತ ನೋಡಿದರತ್ತ ಸಿರಿ ಹಸುರು.ಕಣ್ಣುಗಳಿ
ಗಾನಂದ;ಮೇಣಾತ್ಮಕೊಂದೊಸಗೆ

ಅವರ ವೃತ್ತಿ ಜೀವನ,ಬದುಕು ಮೈಸೂರಿನಲ್ಲೆ ಬಹ್ವಂಶ ಕಳೆದರೂ ಅವರ ಮನಸ್ಸು ಮಲೆನಾಡನ್ನೇ ನೆನೆಯುತ್ತಿತ್ತು. ನಗರ ಪರಿಸರದಲ್ಲಿದ್ದರೂ ಅದರೊಳಗೆ ಮಿಳಿತವಾಗದ ಕವಿ ಒಮ್ಮೆ
ಹೋಗುವೆನು ನಾ ಹೋಗುವೆನು ನಾ ನನ್ನ ಒಲುವೆಯ ಗೂಡಿಗೆ
ಮಲೆಯನಾಡಿಗೆ,ಮಳೆಯ ಬೀಡಿಗೆ,ಸಿರಿಯ ಚೆಲುವಿನ ರೂಢಿಗೆ
ಬೇಸರವಾಗಿದೆ ಬಯಲು,ಹೋಗುವೆ ಮಲೆಯ ಕಣಿವೆಯ ಕಾಡಿಗೆ
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ
ಎಂದು ಮಲೆನಾಡು,ಆ ಹಸುರಂಗಳವನ್ನು ಬಿಟ್ಟು ಬಯಲಿನಲ್ಲಿರುವುದಕ್ಕೆ ಅಸಾಧ್ಯವೆಂಬ ತೊಳಲಾಟಕ್ಕೊಳಗಾಗುತ್ತಾರೆ.

ನಿಸರ್ಗದ ಚೆಲುವನ್ನು ಗದ್ಯದಲ್ಲಿ ವಿವರಿಸುವಾಗಲೂ ಕುವೆಂಪು ಭಾವ ಪರವಶರಾಗುತ್ತಾರೆ. ಮಲೆನಾಡಿನ ಮಣ್ಣಿನ ರಸ್ತೆ ಅವರಿಗೆ ಧೂಳಗೆಂಪಿನ ರಸ್ತೆ,ಸಹ್ಯಾದ್ರಿಯ ಅರಣ್ಯದೇವಿಯ ಮಹಾಮಸ್ತಕದ ಸುದೀರ್ಘವಾದ ಬೈತಲೆಯ ಸರಳ ವಕ್ರನಿಮ್ನೋನ್ನತ ರೇಖಾ ವಿನ್ಯಾಸದಂತೆ ಕಾಣುತ್ತದೆ.

ಹೀಗೆ ಮಲೆನಾಡಿನ ಹಸುರು ಪತ್ತಲ,ಆದರೆ ಒಳಹೆಣಿಗೆಗಳಲ್ಲಿ ಅವಿತಿರುವ ಜನರ ಬದುಕು,ಆ ಮಹಾರಣ್ಯಗಳ ವೈಶಿಷ್ಠö್ಯತೆಗಳನ್ನು ಅತ್ಯಂತ ಹೃದಯಸ್ತವಾಗುವಂತೆ,ಆ ದಟ್ಟತೆ,ಹಸುರೊಡಲಿನ ಸೌಂದರ್ಯ,ಹಕ್ಕಿಗಳ ಕೂಜನ,ಬೇಟೆಯ ಹುಮ್ಮಸ್ಸು ಈ ರೀತಿ ೭-೮ ದಶಕಗಳ ಹಿಂದಿನ ಮಲೆನಾಡಿಗೆ ಕುವೆಂಪು ಕೃತಿಗಳು ಒಂದು ರೀತಿ ಭಾಷ್ಯವಿದ್ದಂತೆ. ಹುಲಿಯ ಕೂಗು,ಹುಲ್ಲೆಯ ಜಿಗಿತ,ನವಿಲಿನ ಕುಣಿತ,ಪಕ್ಷಿಗಳ ಕಲರವ ಎಲ್ಲವನ್ನೂ ತಮ್ಮ ಕವನ,ಗದ್ಯಬರಹಗಳಲ್ಲಿ ಕುವೆಂಪು ಕಟ್ಟಿಕೊಡುತ್ತಾ, ಅವರ ಮಹಾಕಾವ್ಯದ ಶ್ರೀರಾಮ ಸಹ ಪ್ರಕೃತಿ ಪ್ರಿಯನಾಗಿದ್ದಾನೆ. ವನವಾಸದ ಲ್ಲೊಮ್ಮೆ ಶ್ರೀರಾಮ ಹೇಳುವುದು-ದಾರಿದ್ಯಮಲ್ತೆ ಆನಾಗರಿಕ ಜೀವನಂ ಈ ವನ್ಯಸಂಸ್ಕೃತಿಯ ಮುಂದೆ ಎಂದು.

ಯುವ ಪೀಳಿಗೆ ಅಂದಿನ ದಟ್ಟ ಮಲೆನಾಡಿನ ಸೊಬಗನ್ನು ಅರ್ಥ ಮಾಡಿಕೊಳ್ಳಲು ಇಂದು ಆ ದಟ್ಟೈಸಿದ ಹಸುರಾವೃತ ಮಲೆನಾಡು ಉಳಿದಿಲ್ಲ. ಕುವೆಂಪು ಬರೆಹಗಳ ಮೂಲಕವೇ ಅದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಅಂದು ಮತ್ತು ಇಂದಿನ ಮಲೆನಾಡನ್ನು ಅರಿಯಲು ಎರಡು ಪ್ರಮುಖ ಮಾರ್ಗಗಳೆಂದರೆ ಕುವೆಂಪು ಮತ್ತು ತೇಜಸ್ವಿ. ಇಬ್ಬರೂ ಸಹ ಹಸುರಿನೊಳ ಹೊಕ್ಕು ಆದರ ಸ್ಥಿತಿಗತಿ ಅರಿತವರು. ಹಸುರು ಕುವೆಂಪು ಅವರಿಗೆ ಅವರನ್ನು ಭಾವವೇಶಕ್ಕೆ ತಳ್ಳಿ ಅದರೊಳಗೆ ಮಿಳಿತವಾಗಿ ಅನಂದದಲ್ಲಿ ಮೈಮರೆಯುವಂತೆ ಮಾಡಿದ್ದಲ್ಲ; ಅವರೇ ಕವನವೊಂದರಲ್ಲಿ ಹೇಳುವಂತೆ:-
ತಿರುಕನಂತೆ ತಿರುಪೆ ಬೇಡಿ
ತಿರುಗುತಿದ್ದೆನು
ಉರಿವ ಮರಳು ಕಾಡಿನಲ್ಲಿ
ಗಂಗೆ ಹುಟ್ಟಿ ಹರಿಯುವಂತೆ,
ಕಣ್ಣನಿರಿವ ಕತ್ತಲಲ್ಲಿ
ಮಿಂಚು ಮೂಡಿ ನಿಲ್ಲುವಂತೆ,
ಬಿಸಿಲಿನಿಂದ ಬೆಂದ ಎದೆಗೆ
ತಂಪು ಗಾಳಿ ಬೀಸುವಂತೆ
ಬಂದೆ ರಮಣಿಯೆ
ನಿನ್ನ ಸಂಗದಿಂದ ತಿರುಕ
ರಾಜನಾದನು.
ಹಾಗಾಗಿ ನಿಸರ್ಗದ ಚೆಲುವನ್ನು ನೋಡುತ್ತಾ ಆನಂದಿಸುತ್ತಿದ್ದ ಅವರಿಗೆ ಒಂದು ವ್ಯಕ್ತಿತ್ವ ಪ್ರಧಾನ ಮಾಡಿದ್ದು ಮಲೆನಾಡಿನ ಆ ಕಬ್ಬದಂಗನೆ.ಆಕೆ ಕಾಡಿನಲ್ಲಿ ಮುಗ್ಧ ಬಾಲಕನಂತೆ ಅಲೆಯುತ್ತಿದ್ದ ಕವಿಗೆ ಗೋಚರವಾಗದಂತೆ ಬೆನ್ನ ಹಿಂದೆ ಬಂದು ನಿಂತವಳು. ಅವರನ್ನು ಸಮಾಜ ಮಾನ್ಯ ಮಾಡಿಸಿದವಳು.

ಕುವೆಂಪು ಕಾವ್ಯ,ಮಹಾಕಾವ್ಯ,ಗದ್ಯ ಬರೆಹಗಳನ್ನು ನೋಡುತ್ತಾ ಹೋದರೆ ಎಲ್ಲೂ ಸಹ ಕಾಡು ತೆಳುವಾಗುತ್ತಿರುವ ಬಗ್ಗೆ ಕವಿ ವಿಷಾದದ ದನಿ ಹೊರಹಾಕಿರುವುದು ಕಂಡು ಬರುವುದಿಲ್ಲ. ಒಟ್ಟು ಪ್ರಕೃತಿಯನ್ನು ಪ್ರೀತಿಸುವ,ಆರಾಧಿಸುವ ಮಾತುಗಳೇ ಇವೆ. ಆ ಮಲೆನಾಡಿನ ನಿಸರ್ಗ ಅವರಿಗೆ ಸರ್ವೇಂದ್ರಿಯ ಸುಖನಿಧಿಯಾಗಿ,ಸರ್ವಾತ್ಮನ ಸನ್ನಿಧಿಯಾಗಿ ಕಾಣುತ್ತದೆ. ಅವರಿಗದು ಚೈತನ್ಯದ ಅಲೆ,ಸೆಲೆ. ಇದಕ್ಕೆ ಕಾರಣವೂ ಇದೆ. ಕುವೆಂಪು ಕುಪ್ಪಳ್ಳಿಯಲ್ಲಿದ್ದ ಕಾಲ ಆ ಅಪಾರ ವನರಾಶಿ ಅವರನ್ನು ಮಂತ್ರಮುಗ್ಧವಾಗಿಸಿತ್ತು. ಮೈಸೂರಿಗೆ ಬಂದ ನಂತರವೂ ಆ ದಟ್ಟತೆಯೇ ಅವರ ಪ್ರಜ್ಞೆಯಲ್ಲಿ ಸ್ಥಾಯಿಯಾಗಿ ಉಳಿದು ಬಿಟ್ಟಿತು. ಈ ಹಿನ್ನೆಲೆಯಲ್ಲಿ ಮಲೆನಾಡಿನ ಅಂದಿನ ಜೀವನ,ಉಕ್ಕಿ ಸೊಕ್ಕಿ ನಿಂತಿದ್ದ ಹಸುರು,ಅದರ ಒಳಹೆಣಿಗೆಗಳಲ್ಲಿ ಅಡಗಿದ್ದ ಜನರ ಬದುಕಿನ ಚಿತ್ರಣ,ಅಂದಿನ ರೀತಿ-ರಿವಾಜು,ಉಳ್ಳವರ,ಇಲ್ಲದವರ ಜೀವನದ ಸುಖ-ದುಃಖ ಇವೆಲ್ಲದಕ್ಕೆ ಕುವೆಂಪು ಕೃತಿಗಳೇ ಆಧಾರ. ಹಸುರಂಗಳದ ಗೌಡಿಕೆಯ ಗತ್ತನ್ನು ಹೇಳುತ್ತಲೇ, ಪುರೋಹಿತಶಾಹಿಯ ದಬ್ಬಾಳಿಕೆ,ಕೆಳವರ್ಗದ ಬವಣೆ ಇವೆಲ್ಲವನ್ನು ಅವರ ಸಾಹಿತ್ಯ ಒಟ್ಟು ಮೊತ್ತವಾಗಿ ನೀಡುತ್ತದಲ್ಲದೆ,ಮಲೆನಾಡ ಹಸುರಿನ ವೈವಿಧ್ಯತೆಯನ್ನು ಅಷ್ಟೊಂದು ಅರ್ಥವತ್ತಾಗಿ ಬೇರಾವ ಕವಿಯೂ ಹಿಡಿದಿಟ್ಟಿಲ್ಲ.

ಮಹಾಕವಿಯ ಕೃತಿಗಳನ್ನೋದುತ್ತಾ ಆ ಹಸುರಲ್ಲಿ ಮಿಂದೆದ್ದು,ಜನಜೀವನದ ಚಿತ್ರಣವನ್ನು ಕಣ್ತುಂಬಿಕೊAಡು ಬಂದು ಮತ್ತೆ ಆ ನಂತರದ ಮಲೆನಾಡನ್ನು ನೋಡಿದರೆ ವಿಷಾದವಾಗುತ್ತದೆ. ತೆಳುವಾದ ಹಸುರುಪತ್ತಲ,ಮಾಲಿನ್ಯದಿಂದ ಮಂಕಾದ ನದಿ,ಹಳ್ಳಕೊಳ್ಳಗಳು,ಪ್ರಾಣಿಪಕ್ಷಿಗಳ ವಿರಳತೆ,ಸಂಕಟಪಡುತ್ತಿರುವ ಸಹ್ಯಾದ್ರಿಯ ಶ್ರೇಣಿ ಕುವೆಂಪು ಕಾಲದ ಮಲೆನಾಡಿಗೆ ತದ್ವಿರುದ್ಧವಾದ ಚಿತ್ರಣವನ್ನೇ ನೀಡುತ್ತದೆ. ಅದಕ್ಕೆ ಕಾರಣ,ಮನುಷ್ಯನ ದುರಾಸೆ. ನಿಸರ್ಗಕ್ಕೂ ಬದುಕಿಗೂ ಇರುವ ಸಂಬಂಧ ಇವುಗಳನ್ನರಿಯಲು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬರೆಹಗಳಿಗೆ ಮುಖಾಮುಖಿಯಾಗುವುದು ಅನಿವಾರ್ಯವಾಗುತ್ತದೆ.

ತೇಜಸ್ವಿ ನಿಸರ್ಗಸೌಂದರ್ಯದ ಅಗಾಧತೆಯನ್ನು ಕಂಡು ಬೆರಗಾಗುವುದಿಲ್ಲ. ಅದರ ಸಂಕೀರ್ಣ ವ್ಯವಸ್ಥೆಗೆ ಮುಖಾಮುಖಿಯಾಗುತ್ತಾ ಹೋಗಿ ಅದೊಂದು ಹಲವು ನಿಗೂಢಗಳ ಗಣಿ ಎಂದು ಅರ್ಥ ಮಾಡಿಕೊಳ್ಳುತ್ತಾರೆ-ಎದುರಿಗೆ ಘನೀಭೂತ ವಾಸ್ತವದಂತೆ ಭೂತಾಕಾರದ ಮರದ ಕಾಂಡಗಳು;ಹಳ್ಳದ ಉದ್ದಕ್ಕೂ ಹಾಸಿದ ದೊಡ್ಡದೊಡ್ಡ ಕಲ್ಲುಬಂಡೆಗಳು; ಕಾಲ ಪ್ರವಾಹದಂತೆ ಸದ್ದಿಲ್ಲದೆ ಅರಿವಿಗೆ ಬರದಂತೆ ಹರಿಯುತ್ತಿದ್ದ ಹಳ್ಳದ ನೀರು; ತಲೆಯೊಳಗೆ ಯಾವುದೋ ಇತಿಹಾಸ ಪೂರ್ವ ಸೃಷ್ಠಿ ರಹಸ್ಯಗಳ ಬಗ್ಗೆಯೇ ನೂರಾರು ಕನಸುಗಳು; ಮರದ ಎತ್ತರದಲ್ಲೆಲ್ಲೋ ಬೀಳುತ್ತಿದ್ದ ಬಿಸಿಲು ಎಲ್ಲವೂ ಸೇರಿ ಮುಂಚಿನಿಂದಲ್ಲೂ ತಲೆಯೊಳಗೆ ಕುಳಿತ್ತಿದ್ದ ಗಲಿಬಿಲಿಯನ್ನು ದ್ವಿಗುಣಗೊಳಿಸಿದವು-ಈ ರೀತಿಯ ಉದ್ಗಾರಗಳು ನಿಸರ್ಗವನ್ನು ನೋಡಿದಾಗ ಅವರಿಂದ ಹೊರಬರುತ್ತದೆ. ನಿಸರ್ಗದ ವಿಸ್ಮಯಗಳು ಅವರನ್ನು ಮತ್ತಷ್ಟು ವೀಕ್ಷಣೆಗೆ ಪ್ರೇರೇಪಿಸುತ್ತದೆ. ಆ ನಿಗೂಢವನ್ನು ಭೇಧಿಸಲು ಮುಂದಾಗಿ,ಸುತ್ತಲ ಪರಿಸರ,ಜೀವಿಗಳ ಬದುಕು,ಮನುಷ್ಯನೆಂಬ ಜೀವಿಯ ಅತಿಯಾಸೆ,ಮೂರ್ಖತನದ ವರ್ತನೆ ಇವುಗಳನ್ನು ವಿಶ್ಲೇಷಿಸಿ,ಮನುಷ್ಯನ ಬದುಕಿಗೆ ಪೂರಕವಾದ ಇತರೆ ಜೀವಿ,ಸಸ್ಯಗಳು ಉಳಿದರೆ ಮಾತ್ರ ಈ ಭೂಮಿಯ ಉಳಿವೆಂಬ ಒಂದು ನಿರ್ಣಯಕ್ಕೆ ತೇಜಸ್ವಿ ಬರುತ್ತಾರೆ. ನಿಸರ್ಗದ ಸಂರಕ್ಷಣೆಗೆ ಅನಿವಾರ್ಯವಾದ ಹೋರಾಟಗಳಲ್ಲೂ ಅವರು ಭಾಗಿಯಾಗುತ್ತಾರೆ. ಅದಕ್ಕೆ ತಗುಲಿರುವ ಅಪಾಯಗಳ ನಿವಾರಣೆಗೆ ವ್ಯಕ್ತಿಗತವಾಗಿ ಹಾಗೂ ಬರವಣಿಗೆ ಮೂಲಕ ಮುಂದಡಿಯಿಡುತ್ತಾರೆ.

ವಸುಂಧರೆ ಕುವೆಂಪು ಅವರಿಗೆ ಮೃಣ್ಮಯಿ,ಚಿನ್ಮಯಿಯಾಗಿ ಕಂಡರೆ, ತೇಜಸ್ವಿ ಅವರು ಅದು ಅತ್ಯಂತ ದಯನೀಯ ಸ್ಥಿತಿಗೆ ಬಂದಿರುವುದನ್ನು ಅವರೆಲ್ಲಾ ಕೃತಿಗಳ ಮೂಲಕ ಧ್ವನಿಸುತ್ತಾರೆ. ಕ್ಷೀಣಿಸುತ್ತಿರುವ ಮಲೆನಾಡಿನ ನಿಸರ್ಗವನ್ನು ಭಿನ್ನ ನೆಲೆಯಲ್ಲಿ ನೋಡುತ್ತಾ ವಿಶ್ಲೇಷಿಸುತ್ತಾ,ಅದು ಅವರ ಸಂವೇದನೆಯ ಭಾಗವಾಗುತ್ತದೆ. ನಿಸರ್ಗದ ಸೌಂದರ್ಯಕ್ಕೆ ಮನಸೋಲದೆ,ಅದರ ಒಳಹೊಕ್ಕು ಆ ಗುಡ್ಡ-ಬೆಟ್ಟ,ಸಸ್ಯ ಸಮೃದ್ಧಿ,ಪಕ್ಷಿಗಳ ಕಲರವ,ಹರಿಯುವ ತೊರೆ,ಬೀಸುವ ಗಾಳಿ ಇವೆಲ್ಲದರ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುತ್ತಾ ಈ ಜೀವಜಾಲದ ತಂತುವೇ ಆಗಿರುವ ಮನುಷ್ಯನ ಬದುಕು ಎಷ್ಟರ ಮಟ್ಟಿಗೆ ನಿಸರ್ಗಾವಲಂಬಿಯಾಗಿದೆ ಎನ್ನುವುದು ಅವರ ಕೃತಿಗಳಲ್ಲಿ ಪ್ರಮುಖವಾಗಿ ಗೋಚರಿಸುತ್ತದೆ.

ಅವರ ಕೃತಿಯೊಂದರಲ್ಲಿ -ಕಾಡುಗಳು ಇವತ್ತು ಬಾಗಿಲು ತೆರೆದಿಟ್ಟ ಖಜಾನೆಗಳಾಗಿವೆ.ಈ ಕಾಡುಗಳ ಒಂದೊAದೇ ಮರ ಎರಡು ಮೂರು ಲಕ್ಷ ಬೆಲೆ ಬಾಳುತ್ತವೆ. ಕಲ್ಲು ಕಳ್ಳರಿಗೆ,ಮರಗಳ್ಳರಿಗೆ,ಗಂಧಚಕ್ಕೆ ಕಳ್ಳಸಾಗಣೆ ಮಾಡುವ ಖದೀಮರಿಗೆ,ಕಣ್ಣುಹರಿಸಿದಲ್ಲೆಲ್ಲಾ ಹಣದ ರಾಶಿ ಬಿದ್ದಿರುವಂತೆ ಕಾಣುತ್ತದೆ—-ಕಾಡು ಕಾಳದಂಧೆಗಳ ತವರು ಮನೆಯಾಗುತ್ತದೆ ಎಂಬ ವಿಷಾದದ ಧ್ವನಿ ಹೊರಬರುತ್ತದೆ.

ಅವರ ಮಹತ್ವದ ಕೃತಿ ಕರ್ವಾಲೊದಲ್ಲಿ ನಿಸರ್ಗದ ಆಂತರ್ಯವನ್ನು ಬಲ್ಲ ವೈಜ್ಞಾನಿಕವಾಗಿ ವಿಶ್ಲೇಷಿಸುವ ವಿಜ್ಞಾನಿ ಕರ್ವಾಲೊ ಜೊತೆಗೆ ಕಾನನದ ಆಂತರ್ಯದ ಅರಿವಿದ್ದರೂ,ಅದರ ಅರಿವಿಲ್ಲದವರಂತಿರುವ ಮಂದಣ್ಣ,ಕರಿಯ,ಹಾವುಗೊಲ್ಲರ ವೆಂಕ್ಟ ಈ ರೀತಿ ಪೂರಕ ಪಾತ್ರಗಳೂ ಪ್ರಾಮುಖ್ಯತೆ ಪಡೆದಿವೆ. ಮನುಷ್ಯ ಪ್ರವೇಶ ನಿಸರ್ಗವನ್ನು ಯಾವ ರೀತಿ ವಿನಾಶದಂಚಿಗೆ ಕೊಂಡೊಯ್ಯುತ್ತಿದೆ ಎಂಬುದು ಅವರ ಕೃತಿಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಮಲೆನಾಡು ತನ್ನ ದಟ್ಟತೆ ಕಳೆದುಕೊಳ್ಳುತ್ತಾ ಮನುಷ್ಯನ ಅತಿಯಾಸೆಗೆ ಬಲಿಯಾಗುತ್ತಿರುವ ಖಚಿತ ವಿವರಗಳು ಅವರ ಕೃತಿಯಲ್ಲಿದೆ.

ಮಹಾರಣ್ಯದ ಪ್ರತಿ ಸಣ್ಣ ಸಂಗತಿ ಸಹ ಮನುಷ್ಯ ಬದುಕಿಗೆ ಹೇಗೆ ಪೂರಕ ಎಂಬ ಆಲೋಚನೆಗೆ ಅಕ್ಷರ ರೂಪ ನೀಡಿ ಕತೆ ಕಾದಂಬರಿ,ಲೇಖನಗಳನ್ನು ಅವರು ಬರೆದರು. ಬೃಹತ್ ಚತುಷ್ಪಾದಿ ಆನೆಯಿಂದ ಹಿಡಿದು ಸಣ್ಣ ಕೀಟ,ಬೃಹತ್ ವೃಕ್ಷ ಸಮೂಹ,ಇವೆಲ್ಲವೂ ಒಂದು ಸಂಯೋಚಿತ ರೂಪವಾಗಿ ಅವರಿಗೆ ಕಾಣುತ್ತಿತ್ತು-ವಿಶ್ಲೇಷಿಸುತ್ತಾ,ವಿಭಜಿಸುತ್ತಾ ಬಹುದೂರ ಬಂದಿರುವ ನಮ್ಮ ವೈಜ್ಞಾನಿಕ ನಾಗರಿಕತೆಗೆ ಇಂದು ಪರಿಸರ ವಿಜ್ಞಾನ ಅಥವಾ ಇಕಾಲಜಿ ಸತ್ಯದ ಹೊಸಹೊಸ ಆವಿಷ್ಕಾರಗಳನ್ನು ಅರಿವಿನ ಸಂಶ್ಲೇಷಿತ ರೂಪಗಳನ್ನು ತೋರಿಸುತ್ತಾ ಇದೆ. ಅಮೆಜಾನಿನ ಕಾಡುಗಳಾಗಲಿ,ಆಫ್ರಿಕಾದ ನದಿಗಳಾಗಲಿ,ಮಧ್ಯಪ್ರಾಚ್ಯದ ಯುದ್ಧವಾಗಲಿ,ಚೆರ್ನೊಬೈಲನ್ ಅನಾಹುತಗಳಾಗಲಿ ಭೂಮ್ಯಂತರಿಕ್ಷಗಳ ಸಮಗ್ರತೆಯಲ್ಲಿ ಇಡೀ ಮನುಕುಲದ ಹಣೆಬರಹವನ್ನಾಗಿ ನೋಡಿದಾಗ ನಮಗೆ ಹೊಳೆಯುವ ಸತ್ಯಗಳು ಅದರಪ್ರತ್ಯೇಕತೆಯಲ್ಲಿ ಅನ್ನಿಸುವುದೇ ಇಲ್ಲ-ಈ ಮಾತು ನಿಸರ್ಗವನ್ನು ಅದರ ಒಟ್ಟಂದದಲ್ಲಿ,ಪ್ರಾಮುಖ್ಯತೆಯಲ್ಲಿ ಹಿಡಿದಿಡುವುದಕ್ಕೆ ಒಂದು ಅತ್ಯಂತ ಉತ್ತಮ ಉದಾಹರಣೆ.

ಅವರ ಎರಡು ಕಾದಂಬರಿಗಳಾದ ಕರ್ವಾಲೋ ಮತ್ತು ಚಿದಂಬರ ರಹಸ್ಯ ಪರಿಸರ ಸಂಬAಧಿ ಒಳನೋಟಗಳನ್ನು ಹೊಂದಿವೆ. ತೇಜಸ್ವಿ ಪಾತ್ರವೊಂದರ ಮೂಲಕ-ಒಂದು ಸಸ್ಯ ಅವನತಿ ಹಾದಿ ಹಿಡಿತೆನ್ನಿ,ಅದರಿಂದ ಬದುಕುತ್ತಿರುವ ಕೀಟಸ್ತೋಮ,ಅವುಗಳನ್ನೇ ಆಹಾರ ಮಾಡಿಕೊಂಡಿರುವ ಪಕ್ಷಿಗಳು,ಅವುಗಳಿಂದಲೇ ಬೀಜ ಪ್ರಸರಣ ವಾಗುತ್ತಿದ್ದ ವೃಕ್ಷ ಸಂಕುಲ,ಅದರ ಆಧಾರದ ಮೇಲೆ ಹೆಪ್ಪುಗಟ್ಟಿ ಮಳೆ ಸುರಿಸುವ ಮೋಡ ಮತ್ತು ಇವುಗಳೆಲ್ಲದರ ಆಧಾರದ ಮೇಲೆ ಬದುಕೊ ಮನುಷ್ಯ. ಇಡೀ ವಿಶ್ವ ಈ ತರಹ ಒಂದಕ್ಕೊAದಕ್ಕೆ ಬಿಗಿದು ಕೊಂಡಿರೊ ಸಮತೋಲನದಲ್ಲಿ ನಿಂತಿರೊ ಬಲೆ-ಈ ತರದ ವಿವರಣೆಯೊಂದಿಗೆ ಪರಿಸರದಲ್ಲಿ ಮನುಷ್ಯ ಜೀವಯೂ ಸೇರಿದಂತೆ ಸಮಸ್ತ ಜೀವಿಗಳು ನಿಸರ್ಗ ನಿರ್ಮಿತ ವ್ಯವಸ್ಥೆಯ ಪರಸ್ಪರಾವಲಂಬಿತ;ಆ ಸ್ಥಿತಿಯನ್ನು ಬಿಚ್ಚಿಡುತ್ತಾ,ಈ ವ್ಯವಸ್ಥೆ ಇಂದು ಬುಡಮೇಲಾಗುತ್ತಿದೆ ಎಂಬ ಎಚ್ಚರಿಕೆ ನೀಡುತ್ತಾರೆ. ಅವರ ಸ್ವಾನುಭವದ ಮೂಸೆಯಲ್ಲಿ ಪರಿಸರದ ಪರಸ್ಪರಾವಲಂಬನೆ,ಇAದು ಮನುಷ್ಯನ ತೀವ್ರ ಪ್ರವೇಶದಿಂದ ಆಗುತ್ತಿರುವ ಅನಾಹುತ ಇವೆಲ್ಲವೂ ಕಾದು,ಕುದ್ದು, ಹರಳು ಗಟ್ಟಿ ಹೊರಬರುತ್ತವೆ.

ಮನುಷ್ಯ ಪರಸರದೊಂದಿಗೆ ತನ್ನ ಸುಖ-ದುಃಖ ಹಂಚಿಕೊಳ್ಳುತ್ತಲೇ ಬದುಕಬೇಕು. ಅದನ್ನು ಮಣಿಸಿ,ನಾಶಮಾಡಿ ತಾನು ಬದುಕೋಕೆ ಸಾಧ್ಯ ಎಂಬುದನ್ನು ಒಂದು ಅವಿವೇಕ ಎಂದು ತೇಜಸ್ವಿ ಭಾವಿಸಿದ್ದರು. ಮನುಷ್ಯನ ವರ್ತನೆ,ಆಲೋಚನೆ,ಅವನ ಬದುಕಿನ ದಾರಿ ಈ ಪರಿಸರದೊಡನೆ ಬೆಸೆದುಕೊಂಡೇ ಬಂದಿದೆ. ಅಭಿವೃದ್ಧಿ ಅಥವಾ ಬೆಳವಣಿಗೆ ಎಂಬುದಕ್ಕೆ ಒಂದು ಹೊಸ ವ್ಯಾಖ್ಯಾನ ಹುಡುಕುವ ತುರ್ತಿದೆ. ಪರಿಸರವನ್ನು ಉಳಿಸಿ ತಾನೂ ಉಳಿದು ಬೆಳೆಯುವ ಹೊಸ ಹಾದಿಯ ಅನ್ವೇಷಣೆಯಾಗ ಬೇಕಾಗಿದೆ ಎಂಬ ಸ್ಪಷ್ಟ ಅಭಿಪ್ರಾಯ ಅವರದಾಗಿತ್ತು.

ಶಿಕಾರಿ ಮಲೆನಾಡಿನ ಬದುಕಿನ ಭಾಗವಾಗಿತ್ತು. ತೇಜಸ್ವಿ ಸಹ ಮೊದಲು ಶಿಕಾರಿಗೆ ಒಲಿದೇ ಕೋವಿ ಹಿಡಿದವರೆ; ಆದರೆ ಅದನ್ನು ಅವರು ಗೀಳಾಗಿಸಿಕೊಳ್ಳಲಿಲ್ಲ.ಅವರೇ ಒಮ್ಮೆ-ಶಿಕಾರಿ ನನಗೆ ಕಾಡಿನ ಬಗೆ,ಕಾಡುಪ್ರಾಣಿಗಳ ಬಗ್ಗೆ, ನಿಧಾನವಾಗಿ ಆತ್ಮೀಯತೆಯನ್ನು ಬೆಳೆಸಲು ಸಹಾಯವಾಯ್ತೆಂದು ಹೇಳಬಹುದು-ಎನ್ನುತ್ತಾರೆ. ಅದು ಅವರನ್ನು ಜೀವಿಕೇಂದ್ರಿತ ಚಿಂತನೆಗೆ ಹಚ್ಚಿತು.ಕೈಲಿ ಕೋವಿ ಹಿಡಿದು ಮಾಡುವ ಶಿಕಾರಿಗಿಂತ ಪ್ರತಿ ಸಸ್ಯ ಪ್ರಾಣಿಯನ್ನು ವೀಕ್ಷಿಸುತ್ತಾ ಅವುಗಳ ಬದುಕಿನ ರಹಸ್ಯಗಳನ್ನು ಮನಸ್ಸಿನಲ್ಲಿ ಶಿಕಾರಿ ಮಾಡಿ ಹೃದಯಸ್ತಗೊಳಿಸಿಕೊಂಡರು. ಹಾಗಾಗಿಯೇ ಅವರು -ಕಾಡುಗಳನ್ನು ನಾಶ ಮಾಡಿದಾಗ ಅಲ್ಲಿರುವ ಪ್ರಾಣಿಗಳನ್ನು,ಅವುಗಳ ಪರಿಸರವನ್ನೂ ಧ್ವಂಸ ಮಾಡಿದಾಗ ರಹಸ್ಯ,ಗೌಪ್ಯ,ಅದ್ಭುತಗಳ ನಿರಂತರ ನಿಧಿಯೊಂದನ್ನು ನಮ್ಮ ಕಿರಿಯ ಜನಾಂಗ ಕಳೆದುಕೊಂಡಂತಾಗಿ ಮನಸ್ಸು ಖಿನ್ನವಾಗುತ್ತದೆ ಎಂಬ ನಿರ್ಣಯಕ್ಕೆ ಬಂದರು. ಕಾಡಿನ ಜೀವಿಗಳ ಬದುಕಿನೊಳಗೆ ಮನುಷ್ಯ ಹೋದಷ್ಟು ಅವುಗಳಿಗೆ ಅಪಾಯವೇ ಹೊರತು ಉಳಿಗಾಲವಿಲ್ಲವೆಂದು ತೇಜಸ್ವಿ ಹೇಳುತ್ತಿದ್ದರು.

ಮಲೆನಾಡು ಹೇಗಿತ್ತು,ಹೇಗಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದರೆ ಕುವೆಂಪು ಕಂಡ ಅರಣ್ಯ ಮಹಾರಣ್ಯ,ಅವರೇ ಹೇಳುವಂತೆ ಬಿಸಿಲೂ ಸಹ ಮರಗಳ ನೆತ್ತಿಯ ಮೇಲಲ್ಲದೆ ಒಳಗೆ ಪ್ರವೇಶ ಮಾಡಲು ಅವಕಾಶವಿರದಷ್ಟು ದಟ್ಟೆöÊಸಿದ ಮೃಣ್ಮಯದ ಹೃದಯದಲ್ಲಿರುವ ಚಿನ್ಮಯ. ಆದರೆ ತೇಜಸ್ವಿ ಅವರಿಗೆ ಅದೊಂದು ಅನ್ವೇಷಣೆಯ ತಾಣ,ಆ ದಟ್ಟತೆ ನಶಿಸುತ್ತಾ ಬಂದಿದೆ. ಆ ನಾಶ ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಬದುಕೂ ಘಾಸಿಗೊಳ್ಳುತ್ತಿದೆ. ಶುದ್ಧ ಮಣ್ಣು,ನೀರು,ಗಾಳಿ ಎಲ್ಲವೂ ಮಲಿನವಾಗುತ್ತಿದೆ,ಸಮತೋಲನ ಕೈ ತಪ್ಪಿದೆ. ಇದು ನಶಿಸಿದರೆ ಬದುಕಿನ ಆಂತರ್ಯದ ನಾಶ ಖಚಿತವೆಂದು ಅರಿತು ಅಪಾಯದ ಗಂಟೆಯನ್ನು ತೇಜಸ್ವಿ ತಮ್ಮ ಬರಹ,ಹೋರಾಟ,ಹೇಳಿಕೆಗಳ ಮೂಲಕ ಬಾರಿಸುತ್ತಾರೆ.ಮನುಷ್ಯನ ಅತಿಯಾಸೆಗೆ ಅಂತ್ಯ ಹಾಡಿ ಅವಶ್ಯಕತೆಗಷ್ಟೇ ನಿಸರ್ಗದ ಬಳಕೆಯಾಗಲೆಂಬುದು ಅವರ ಆಶಯ. ಮಹಾಕವಿ ಕುವೆಂಪು ಅವರ ಹುಟ್ಟಿದ ದಿನದಂದು ಅಪ್ಪ ಕಂಡ ದಟ್ಟಕಾಡು,ಮಗ ಕಂಡ ಮಂಕಾಗುತ್ತಿರುವ ಪಶ್ಚಿಮ ಘಟ್ಟ, ಆ ಕ್ಷೀಣತೆ ಒಡ್ಡುತ್ತಿರುವ ಅಪಾಯಗಳ ಬಗ್ಗೆ ಅವರ ವಿಶ್ಲೇಷಣೆ,ಆತಂಕಗಳನ್ನು ಅರ್ಥೈಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.