ಇಂದು ಅವರ ಜಯಂತಿ
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಸಿದ್ಧ ಭಾರತೀಯ ರಾಜಕಾರಣಿ, ಈ ದೇಶ ಕಂಡ ಅಪ್ರತಿಮ ನಾಯಕ. ಇವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು. ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದವರು. ಇವರು ರಾಜಕೀಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಇಂದು ಅವರ ಜಯಂತಿ.


ಪರಿಚಯ
ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಅಕ್ಟೋಬರ್‌ 2, 1904ರಂದು ಮೊಘಲ್ಸರಾಯ್‌ನಲ್ಲಿ ಜನಿಸಿದರು. ಇವರ ತಂದೆ ಶರದ್ ಪ್ರಸಾದ್ ಶ್ರೀವಾಸ್ತವ ಹಾಗೂ ತಾಯಿ ರಾಮದುಲಾರಿ ದೇವಿ. ಈಸ್ಟ್ ಸೆಂಟ್ರಲ್ ರೈಲ್ವೆ ಇಂಟರ್ ಕಾಲೇಜಿನಲ್ಲಿ ಮೌಲ್ವಿ ಬುಧನ್ ಮಿಯಾನ್ ಅವರ ಮಾರ್ಗದರ್ಶನದಲ್ಲಿ ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದರು. ಲಾಲ್‌ ಬಹದ್ದುರ್‌ ಶಾಸ್ತ್ರಿ ಅವರು ಹರೀಶ್ ಚಂದ್ರ ಹೈಸ್ಕೂಲ್‌ನಲ್ಲಿ ಅಧ್ಯಯನ ಮಾಡಿದರು. ಆದರೆ ಅವರು ಮಹಾತ್ಮ ಗಾಂಧೀಜಿಯರ ಅಸಹಕಾರ ಚಳವಳಿ ಭಾಗವಹಿಸುವ ಸಲುವಾಗಿ ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. ನಂತರ ಅವರು ವಾರಣಾಸಿಯ ಕಾಶಿ ವಿದ್ಯಾಪೀಠವನ್ನು ಸೇರಿದರು.


ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ
ಮಹಾತ್ಮ ಗಾಂಧೀಜಿಯಿಂದ ಪ್ರಭಾವಿತರಾಗಿದ್ದ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರು ‌ ತಮ್ಮ ಗುರುಗಳಾದ ನಿಷ್ಕಾಮೇಶ್ವರ ಪ್ರಸಾದ್ ಮಿಶ್ರಾ ಎಂಬುವರ ಪ್ರೇರಣೆಯಿಂದ 1920ರಲ್ಲಿ ಭಾರತದ ಸ್ವಾತಂತ್ರ್ಯ ಚಳವಳಯಲ್ಲಿ ಭಾಗಿಯಾದರು. ಅಲ್ಲಿ ಅವರು ಲಾಲಾ ಲಜಪತ್‌ ರಾಯ್‌ ಸ್ಥಾಪಿಸಿದ ಸರ್ವೆಂಟ್ಸ್ ಆಫ್ ದಿ ಪೀಪಲ್ ಸೊಸೈಟಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಗಾಂಧಿಯವರ ನೇತೃತ್ವದಲ್ಲಿ ಮುಜಾಫರ್‌ಪುರದಲ್ಲಿ ಹರಿಜನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ಅವರು ಹರಿಜನರ ಸಂಘದ ಅಧ್ಯಕ್ಷರಾದರು.


ಬನಾರಸ್‌ ನಲ್ಲಿ ಗಾಂಧೀಜಿ ಮತ್ತು ಪಂಡಿತ್‌ ಮದನ್‌ ಮಾಳವೀಯ ಅವರು ನಡೆಸಿದ್ದಂತಹ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ನಂತರ ಅವರು ಕಾಂಗ್ರೆಸ್‌ ಪಕ್ಷದ ಸ್ವಯಂಸೇವಕರಾಗಿ, ಅಸಹಕಾರ ಚಳವಳಿಯಲ್ಲಿ ಭಾಗಿಯಾಗಿದ್ದರು.1928ರಲ್ಲಿ ಮಹಾತ್ಮಾ ಗಾಂಧಿಯವರ ಕರೆಯ ಮೇರೆಗೆ ಶಾಸ್ತ್ರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಕ್ರಿಯ ಸದಸ್ಯರಾದರು. ಅವರು ಸ್ವಾತಂತ್ರ್ಯ ಚಳವಳಿಗೆ ವೈಯಕ್ತಿಕ ಸತ್ಯಾಗ್ರಹ ಬೆಂಬಲವನ್ನು ನೀಡಿದ್ದಕ್ಕಾಗಿ ಅವರನ್ನು ಒಂದು ವರ್ಷ ಜೈಲಿಗೆ ಕಳುಹಿಸಲಾಯಿತು.


ಆಗಸ್ಟ್‌ 8, 1942 ರಂದು ಮಹಾತ್ಮ ಗಾಂಧಿಯವರು ಬಾಂಬೆಯ ಗೋವಾಲಿಯಾ ಟ್ಯಾಂಕ್‌ನಲ್ಲಿ ಕ್ವಿಟ್ ಇಂಡಿಯಾ ಭಾಷಣವನ್ನು ಮಾಡಿದರು. ಈ ವೇಳೆ ಅವರು ಬ್ರಿಟಿಷರು ಭಾರತವನ್ನು ತೊರೆಯಬೇಕೆಂದು ಒತ್ತಾಯಿಸಿದರು. ಒಂದು ವರ್ಷದ ಸೆರೆವಾಸದ ನಂತರ ಹೊರಬಂದ ಶಾಸ್ತ್ರಿ ಅಲಹಾಬಾದ್‌ ಗೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರು ಒಂದು ವಾರ ಕಾಲ ಜವಾಹರಲಾಲ್ ನೆಹರೂ ಅವರ ಮನೆ ಆನಂದ ಭವನದಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಸೂಚನೆಗಳನ್ನು ಕಳುಹಿಸಿದ್ದರು. ನಂತರ ಅವರು 1946ರಲ್ಲಿ ಯುನೈಟೆಡ್ ಪ್ರಾವಿನ್ಸ್ ಶಾಸಕಾಂಗಕ್ಕೆ ಆಯ್ಕೆಯಾದರು.


ರಾಜಕೀಯ ವೃತ್ತಿ
ಭಾರತ ಸ್ವಾತಂತ್ರ್ಯಪಡೆದ ನಂತರ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಉತ್ತರ ಪ್ರದೇಶದ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು. ನಂತರ ಕೇಂದ್ರ ಸಂಪುಟದಲ್ಲಿ ಕಾರ್ಯನಿರ್ವಹಿಸುವ ಕನಸು ಹೊತ್ತುಕೊಂಡಿದ್ದರು. ರಫಿ ಅಹ್ಮದ್ ಕಿದ್ವಾಯಿ ಅವರ ನಿರ್ಗಮನದ ನಂತರ ಆಗಸ್ಟ್ 15, 1947ರಂದು ಗೋವಿಂದ್ ಬಲ್ಲಭ್ ಪಂತ್ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದರು. ಇವರ ಕಾರ್ಯವೈಖರಿ ಸಮಯದ ವೇಳೆ ಮೊದಲ ಬಾರಿಗೆ ಮಹಿಳಾ ಕಂಡಕ್ಟರ್ ಗಳನ್ನು ನೇಮಿಸಿದರು. 1951ರಲ್ಲಿ ಜವಾಹರಲಾಲ್‌ ನೆಹರು ಪ್ರಧಾನ ಮಂತ್ರಿಯಾಗಿದ್ದಾಗ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರನ್ನ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 1952ರಲ್ಲಿ ಅವರು ಸೊರಾನ್ ಉತ್ತರ ಕಮ್ ಫುಲ್ಪುರ್ ಪಶ್ಚಿಮ ಕ್ಷೇತ್ರದಿಂದ ಯುಪಿ ವಿಧಾನಸಭಾಗೆ ಯಶಸ್ವಿಯಾಗಿ ಸ್ಪರ್ಧಿಸಿದರು. ಮೇ 13, 1952 ರಂದು ರಿಪಬ್ಲಿಕ್ ಆಫ್ ಇಂಡಿಯಾದ ಮೊದಲ ಕ್ಯಾಬಿನೆಟ್‌ನಲ್ಲಿ ರೈಲ್ವೇ ಮತ್ತು ಸಾರಿಗೆ ಸಚಿವರಾದರು.
1956ರಲ್ಲಿ ಸಂಭವಿಸಿದ್ದ ಮಹಬೂಬ್‌ನಗರ ರೈಲು ಅಪಘಾತದ ಕಾರಣದಿಂದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.1959ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಮತ್ತು 1961ರಲ್ಲಿ ಗೃಹ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು.


ಜವಾಹರಲಾಲ್ ನೆಹರು ಅವರು ಮೇ 27, 1964 ರಂದು ನಿಧನರಾದರು. ಆಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ. ಕಾಮರಾಜ್ ಅವರು ಜೂನ್ 9 ರಂದು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರನ್ನು ಪ್ರಧಾನಮಂತ್ರಿಯಾಗಿ ನೇಮಕ ಮಾಡಿದರು. ಭಾರತದ ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಎಂಬ ಘೋಷವಾಕ್ಯದ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಹೊಳಪು ನೀಡಿದರು.


ಸಾಧನೆಗಳು
ಲಾಲ್‌ ಬಹದ್ದೂರ್‌ ಶಾಸ್ತ್ರಿಗಳು ಪ್ರಧಾನಮಂತ್ರಿಯಾಗಿದ್ದ ಸಮಯದಲ್ಲಿ ಲಕ್ನೋದಲ್ಲಿ ಬಾಲ ವಿದ್ಯಾ ಮಂದಿರಕ್ಕೆ ಅಡಿಪಾಯ ಹಾಕಿದರು. ಚೆನ್ನೈನ ತರಮಣಿಯಲ್ಲಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ ಅನ್ನು ತೆರೆದರು. ಟುಟಿಕೋರಿನ್ ಬಂದರಿನ ನಿರ್ಮಾಣವನ್ನು ಪ್ರಾರಂಭಿಸಿದರು. ಗುಜರಾತ್ ರಾಜ್ಯದಲ್ಲಿ ಅವರು ಸೈನಿಕ ಶಾಲೆಯನ್ನು ಸ್ಥಾಪಿಸಿದರು. ಆ ಲಮಟ್ಟಿ ಅಣೆಕಟ್ಟಿಗೆ ಶಂಕುಸ್ಥಾಪನೆ ಮಾಡಿದ್ದು ಲಾಲ್‌ ಬಹದ್ಧೂರ್‌ ಶಾಸ್ತ್ರಿ.


ಪ್ರಶಸ್ತಿ
1965 ರಲ್ಲಿ ಯುಗೊಸ್ಲಾವಿಯನ್ ಸರ್ಕಾರವು ಶಾಸ್ತ್ರಿ ಅವರಿಗೆ ಬೆಲ್‌ಗ್ರೇಡ್‌ನ ಗೌರವ ಪೌರತ್ವವನ್ನು ನೀಡಿತು. 1966ರಲ್ಲಿ ಭಾರತ ಸರ್ಕಾರವು ಭಾರತೀಯ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಿ ಗೌರವಿಸಿದೆ.
ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಜನವರಿ 11,1966 ರಂದು ತಮ್ಮ 61ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.