ಶಿವಮೊಗ್ಗ: ನಾರದಮುನಿ ಆದ್ಯ ಪತ್ರಕರ್ತ. ಭಾರತವನ್ನು ಕೀಳಾಗಿ ಕಾಣುತ್ತಿದ್ದ ಸಂದರ್ಭದಲ್ಲಿ ಸುಮಾರು 200 ವರ್ಷಗಳ ಹಿಂದೆ ಅಂದರೆ 1826 ನೇ ಸಂದರ್ಭದಲ್ಲಿ ಪಂಡಿತ್ ಜುಗಲ್ ಕಿಶೋರ್ ಶುಕ್ಲ ಭಾರತದ ಮೊಟ್ಟ ಮೊದಲ ಪತ್ರಿಕೆ ಉದ್ದಂಡ ಮಾರ್ತಾಂಡ ಪತ್ರಿಕೆಯ ಮೊದಲ ಸಂಚಿಕೆ ಮೊದಲ ಪುಟದಲ್ಲಿ ಆ ಸಂಚಿಕೆಯನ್ನು ದೇವರ್ಷಿ ನಾರದರಿಗೆ ಸಮರ್ಪಣೆ ಮಾಡುತ್ತಾರೆ. ಆದರೆ ಇಂದು ನಾರದಮುನಿಯನ್ನು ಅನೇಕ ವಿಷಯಗಳ ವಿದ್ವಾಂಸರಾಗಿ ಕಾಣುವ ಬದಲು, ನಾರದರನ್ನು ಒಬ್ಬ ವಿದೂಷಕನಾಗಿ ಕಲ್ಪನೆ ಕಟ್ಟಿಕೊಟ್ಟಿದ್ದು ದುರಂತ ಎಂದು ವಿಶ್ವ ಸಂವಾದ ಕೇಂದ್ರ ಕರ್ನಾಟಕದ ಟ್ರಸ್ಟಿ ರಾಜೇಶ್ ಪದ್ಮಾರ್ ಹೇಳಿದರು.

ಕಾರಣಗಿರಿ ಸಿದ್ಧಿವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗ ಕಾರಣಗಿರಿ ಮತ್ತು ಕಲಾದರ್ಶನ ಮಾಸಪತ್ರಿಕೆ ಏರ್ಪಡಿಸಿದ್ದ ಪ್ರಥಮ ಸುದ್ದಿವಾಹಕ ಮಹರ್ಷಿ ನಾರದರ ಸಂಸ್ಮರಣೆಯಲ್ಲಿ ನೀಡುವ ನಾರದ ಪುರಸ್ಕಾರ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪತ್ರಿಕೆಗಳು ಸಮಾಜಕ್ಕೆ ಮಾಹಿತಿಯ ಮೂಲ, ಜ್ಞಾನದ ವೃದ್ಧಿಗೆ ಸಹಕಾರಿ ಮತ್ತು ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವು ಪ್ರಪಂಚದಾದ್ಯಂತ ನಡೆಯುವ ಘಟನೆಗಳ ಬಗ್ಗೆ ತಿಳಿಸುತ್ತವೆ ಮತ್ತು ಜನರ ಜಾಗೃತಿ ಹೆಚ್ಚಿಸುತ್ತವೆ. ಈಗಾಗಲೇ ಹಲವು ರಾಜ್ಯಗಳಲ್ಲಿ ನಾರದರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುತ್ತಿರುವುದು ಒಳ್ಳೆ ಬೆಳವಣಿಗೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಿಕೆಯ ಪ್ರದಾನ ಸಂಪಾದಕ ಹಾದಿಗಲ್ಲು ಲಕ್ಷ್ಮೀನಾರಾಯಣ, ಪತ್ರಿಕೆಗಳು ಜನರಿಗೆ ಬಹಳ ಮುಖ್ಯವಾಗಿದೆ. ನಾವು ಪ್ರತಿದಿನ ಪತ್ರಿಕೆಯನ್ನು ಓದಿದರೆ, ಅದು ಓದುವುದಕ್ಕೆ ಹೆಚ್ಚು ಒಗ್ಗಿಕೊಳ್ಳಲು, ನಮ್ಮ ಜ್ಞಾನವನ್ನು ಹೆಚ್ಚಿಸಲು ಮತ್ತು ನಮ್ಮ ನಿರರ್ಗಳತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇಂದಿನ ಜಗತ್ತಿನಲ್ಲಿ, ಪತ್ರಿಕೆಯು ಮಾಹಿತಿದಾರರಿಗೆ ಒಂದು ಸಾಧನವಲ್ಲ; ಅದು ಎಲ್ಲಾ ವರ್ಗದ ಜನರಿಗೆ ಮನ್ನಣೆ ನೀಡಿದೆ ಎಂದು ಅವರು ಹೇಳಿದರು.


ಕಿನ್ನಿಗೋಳಿಯ ಅನಂತ ಪ್ರಕಾಶ ಪತ್ರಿಕೆ ಸಂಪಾದಕ ಸಚ್ಚಿದಾನಂದ ಉಡುಪ, ಟೈಮ್ಸ್ ಆಫ್ ಇಂಡಿಯಾ, ಪಿಟಿಐ ನ ಹಿರಿಯ ವರದಿಗಾರರಾಗಿದ್ದ ಶಿವಮೊಗ್ಗದ ಸಿ. ವಿ. ರಾಘವೇಂದ್ರ ರಾವ್, ಬೆಂಗಳೂರಿನ ಪತ್ರಕರ್ತ ಹಿರಿಯೂರು ರಾಘವೇಂದ್ರ, ಕಟೀಲಿನ ಯಕ್ಷಪ್ರಭಾ ಪತ್ರಿಕೆ ಉಪಸಂಪಾದಕ, ಯಕ್ಷಗಾನ ಕಲಾವಿದ ಶ್ರುತಕೀರ್ತಿರಾಜ, ಹೊಸನಗರದ ಹಿರಿಯ ಪತ್ರಕರ್ತರುಗಳಾದ ರಾಮಕೃಷ್ಣ ಮೂರ್ತಿ, ಸದಾನಂದ ಇವರುಗಳಿಗೆ ನಾರದ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳೀನಚಂದ್ರ ವೇದಿಕೆಯಲ್ಲಿದ್ದರು.

ನಿವೃತ್ತ ಸೈನಿಕ ಕೆ. ಪಿ. ಕೃಷ್ಣಮೂರ್ತಿ, ಡಾ|| ರಾಮಚಂದ್ರರಾವ್, ಅರೋಗ್ಯಭಾರತಿಯ ಶ್ರೀಧರ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.