ಇಂದು ಜಯಂತಿ
ಅಯ್ಯಂಕಾಳಿ ಅವರು ಭಾರತೀಯ ರಾಜಕಾರಣಿ, ಸಮಾಜ ಸುಧಾರಕ, ಶಿಕ್ಷಣತಜ್ಞ, ಅರ್ಥಶಾಸ್ತ್ರಜ್ಞ ಮತ್ತು ಕ್ರಾಂತಿಕಾರಿ ನಾಯಕರಾಗಿ ಹೊರಹೊಮ್ಮಿದವರು. ತಿರುವಾಂಕೂರು ರಾಜಪ್ರಭುತ್ವದಲ್ಲಿ ತುಳಿತಕ್ಕೊಳಗಾದ ಜನರ ಅಭಿವೃದ್ಧಿಗಾಗಿ ಅವರು ಹಗಲಿರುಳು ಶ್ರಮಿಸಿದರು. ಅವರ ಹೋರಾಟವು ಕೇರಳದ ಸಾಮಾಜಿಕ-ರಾಜಕೀಯ ರಚನೆಯನ್ನು ಸುಧಾರಿಸುವ ಮೂಲಕ ಅನೇಕ ಬದಲಾವಣೆಗಳಿಗೆ ಕಾರಣವಾಯಿತು. ಇಂದು ಅವರ ಜಯಂತಿ.


ಪರಿಚಯ
ಅಯ್ಯಂಕಾಳಿ ಅವರು ಆಗಸ್ಟ್‌ 28, 1863 ರಂದು ತಿರುವಾಂಕೂರಿನ ತಿರುವನಂತಪುರಂನ ವೆಂಗನೂರಿನಲ್ಲಿ ಜನಿಸಿದರು. ಇವರ ತಂದೆ ಅಯ್ಯನ್‌ ಹಾಗೂ ತಾಯಿ ಮಾಲಾ. ಬಾಲ್ಯದಿಂದಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು. ಅಯ್ಯಂಕಾಳಿ ಅವರು ಮೇಲ್ಜಾತಿಯವರೆಂದು ಕರೆಸಿಕೊಳ್ಳುತ್ತಿದ್ದವರಿಂದ ಅನೇಕ ತಾರತಮ್ಯ, ದಬ್ಬಾಳಿಕೆಗಳನ್ನು ಎದುರಿಸಿದರು. ಹೀಗಾಗಿ ಇಂತಹ ಅನ್ಯಾಯಗಳ ವಿರುದ್ಧ ಅವರು ಧ್ವನಿಯೆತ್ತಿದ್ದರು.


ಸಾರ್ವಜನಿಕ ರಸ್ತೆಯಲ್ಲಿ ಕೆಳಜಾತಿಗಳಿಗೆ ನಿಷೇಧ ಹೇರಿದ್ದರಿಂದ 1893ರಲ್ಲಿ ತಿರುವಾಂಕೂರು ಸಂಸ್ಥಾನದಲ್ಲಿ ಹಿಂಸಾತ್ಮಕ ಘರ್ಷಣೆಗಳು ಭುಗಿಲೆದ್ದಿತ್ತು. ಆದರೆ ಅಯ್ಯಂಕಾಳಿ ಅವರು ಇದನ್ನ ಲೆಕ್ಕಿಸದೆ ಎತ್ತಿನ ಗಾಡಿಯನ್ನು ಓಡಿಸಿಕೊಂಡು ಮೇಲ್ಜಾತಿಯ ನಾಯರ್ಗಳ ವಿರುದ್ಧ ಧಿಕ್ಕಾರ ಕೂಗಿದ್ದರು. ಈ ಹಿನ್ನೆಲೆಯಲ್ಲಿ ಅಯ್ಯಂಕಾಳಿ ವಿರುದ್ಧ ಗಲಭೆ ಎದ್ದಿತ್ತು. ಈ ನೆಲದಲ್ಲಿ ತಮ್ಮನ್ನು ತಾವು ಒಡೆಯರೆಂದು ಭಾವಿಸಿದ್ದ ಮೇಲ್ಜಾತಿಯ ನಾಯರ್‌ ಗಳ ಅಧಿಕಾರ ಮತ್ತು ಸವಲತ್ತುಗಳಿಗೆ ಅಯ್ಯಂಕಾಳಿ ಅವರು ಸವಾಲುಗಳನ್ನು ಒಡ್ಡಿದ್ದರು. ಇದ್ದರಿಂದ ಆಕ್ರೋಶಗೊಂಡ ನಾಯರ್‌ ಗಳು ಅಯ್ಯಂಕಾಳಿ ಅವರ ಎತ್ತಿನ ಗಾಡಿಯ ಮೇಲೆ ದಾಳಿ ನಡೆಸಿದರು. ಆದರೆ ಅಯ್ಯಂಕಾಳಿ ನಾಯರ್‌ ಅವರ ವಿರುದ್ಧ ಪ್ರತಿದಾಳಿ ನಡೆಸಿ ತನ್ನನ್ನು ರಕ್ಷಿಸಿಕೊಂಡರು. ಇದು ನಾಯರ್‌ ಮತ್ತು ದಲಿತರ ನಡುವೆ ನಡೆದ ಹಿಂಸಾಚಾರ ರಕ್ತಪಾತಕ್ಕೆ ಕಾರಣವಾಯಿತು.


ಈ ಗಲಭೆ ಸುಮಾರು ಒಂದು ವರ್ಷಗಳ ಕಾಲ ನಡೆದಿತ್ತು. ಇದರಲ್ಲಿ ಅನೇಕ ನಾಯರ್‌ ಗಳು ಮತ್ತು ಪುಲಯರ್‌ ಗಳು ಸಾವಿಗೆ ತುತ್ತಾದರು. ಈ ಗಲಭೆಯನ್ನು ನಿಯಂತ್ರಿಸಲು ತಿರುವಾಂಕೂರು ಸರ್ಕಾರವು ಪೊಲೀಸ್ ಮತ್ತು ಮಿಲಿಟರಿ ಪಡೆಗಳನ್ನು ನಿಯೋಜಿಸಿತ್ತು. ಆದರೆ ಇದು ಯಾವುದೇ ಪರಿಣಾಮಕಾರಿಯಾಗಲಿಲ್ಲ. ಈ ನಡುವೆ ಬ್ರಿಟಿಷ್‌ ಸರ್ಕಾರ ಮಧ್ಯಸ್ಥಿಕೆ ವಹಿಸಿ ಹಿಂಸಾಚಾರಕ್ಕೆ ಕಡಿವಾಣ ಹಾಕಿತು. ಇದರಿಂದಾಗಿ 1894ರಲ್ಲಿ ನಾಯರ್ ಮತ್ತು ದಲಿತರು ರಾಜಿಗೊಂಡು ಗಲಭೆಗಳು ಕೊನೆಗೊಂಡಿತ್ತು.


ಮಹಿಳಾ ಸಬಲೀಕರಣ
ಅಯ್ಯಂಕಾಳಿ ಅವರು ದಲಿತ ಮಹಿಳೆಯರಿಗೆ ಉಂಟಾಗುತ್ತಿರುವ ತಾರತಮ್ಯಗಳ ವಿರುದ್ಧ ಹೋರಾಡಿದರು. ಮೇಲ್ಜಾತಿಯವರಿಂದ ಮಹಿಳೆಯರು ಗುಲಾಮಗಿರಿಗಳಾಗಿ ಬದುಕುತ್ತಿದ್ದರು. ಇಂತಹ ಅಮಾನವೀಯ ಪದ್ಧತಿಗಳನ್ನು ಅಯ್ಯಂಕಾಳಿ ಅವರು ಕಂಡು ಜನಾಂದೋಲನವನ್ನು ನಡೆಸಿದರು.

ದಲಿತ ಮಹಿಳೆಯರು ಅಜ್ಞಾನ ಮತ್ತು ಶೋಷಣೆಯಿಂದ ಮುಕ್ತಿಗೊಳಿಸಲು ಶಿಕ್ಷಣ ಅತ್ಯವಶ್ಯಕವೆಂದು ಅಯ್ಯಂಕಾಳಿ ಅವರು ಭಾವಿಸಿದ್ದರು. ಈ ನಿಟ್ಟಿನಲ್ಲಿ ಅವರು ದಲಿತ ಮಹಿಳೆಯರಿಗಾಗಿ ಶಾಲೆಯನ್ನು ತೆರೆದರು. ನಂತರ ಸಾಮೂಹಿಕ ಸಭೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದರು. ಅವರು ತಮ್ಮ ಸಂಸ್ಥೆಯಾದ ಸಾಧು ಜನ ಪರಿಪಾಲನಾ ಸಂಘದ ರಾಜಕೀಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವರನ್ನು ಪ್ರೋತ್ಸಾಹಿಸಿದರು.

ರಾಜಕೀಯ ಕ್ಷೇತ್ರ
ಅಯ್ಯಂಕಾಳಿ ಅವರು ಸಾಮಾಜಿಕ ಕಾರ್ಯಕರ್ತ ಮಾತ್ರವಲ್ಲ ರಾಜಕೀಯ ನಾಯಕರೂ ಆಗಿದ್ದರು. ಅವರು 1905ರಲ್ಲಿ ಸಾಧು ಜನ ಪರಿಪಾಲನಾ ಸಂಘಂ (ಬಡವರ ರಕ್ಷಣೆಗಾಗಿ ಸಂಘ) ಅನ್ನು ಸ್ಥಾಪಿಸಿದರು. ನಂತರ ಅದನ್ನು ಪುಲಯ ಮಹಾಸಭಾ (ಪುಲಯ ಒಕ್ಕೂಟ) ಎಂದು ಮರುನಾಮಕರಣ ಮಾಡಲಾಯಿತು. ದಲಿತರಿಗೆ ಶಿಕ್ಷಣ, ಉದ್ಯೋಗ, ಭೂಮಿ ಮತ್ತು ಕಾನೂನು ನೆರವು ನೀಡುವ ಮೂಲಕ ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಗುರಿಯನ್ನು ಸಂಘ ಹೊಂದಿತ್ತು.

1910ರಲ್ಲಿ ತಿರುವಾಂಕೂರಿನ ವಿಧಾನ ಪರಿಷತ್ತಿನ ಶ್ರೀ ಮೂಲಂ ಪಾಪ್ಯುಲರ್‌ ಅಸೆಂಬ್ಲಿ(ಎಸ್‌ ಎಂಪಿಎ) ಸದಸ್ಯರಾದರು.
ಅವರು ಸಾರ್ವತ್ರಿಕ ಮತದಾನ ಮತ್ತು ಭೂ ಸುಧಾರಣೆಗಳನ್ನು ಪ್ರತಿಪಾದಿಸಿದರು. ಎಸ್.ಎಂ.ಪಿ.ಎ.ಯ ಅಸಮರ್ಥತೆ ಮತ್ತು ಭ್ರಷ್ಟಾಚಾರದಿಂದ ಭ್ರಮನಿರಸನಗೊಂಡ ನಂತರ ಅವರು 1921ರಲ್ಲಿ ರಾಜೀನಾಮೆ ನೀಡಿದರು.

ದೇವಾಲಯ ಪ್ರವೇಶ
ಅಯ್ಯಂಕಾಳಿ ಅವರ ಶತಮಾನದ ಹೋರಾಟ ಕೊನೆಗೂ ಫಲಿಸಿತು. ನವೆಂಬರ್ 12, 1936 ರಂದು ಮಹಾರಾಜ ಚಿತ್ತಿರ ತಿರುನಾಳ್ ಬಲರಾಮ ವರ್ಮಾ ದೇವಾಲಯಗಳಿಗೆ ಪ್ರವೇಶ ನೀಡುವುದಕ್ಕೆ ಮುಕ್ತವಾಗಿ ಅವಕಾಶ ನೀಡಿದ್ದರು. ಇದು ತಿರುವಾಂಕೂರು ಸಂಸ್ಥಾನದಲ್ಲಿ ಕೆಳಜಾತಿಯ ಜನರು ಅಥವಾ ಅವರ್ಣರು ಎಂದು ಕರೆಯಲ್ಪಡುವ ಹಿಂದೂ ದೇವಾಲಯಗಳಿಗೆ ಪ್ರವೇಶಿಸುವುದರ ಮೇಲಿನ ನಿಷೇಧವನ್ನು ರದ್ದುಗೊಳಿಸಿತು.ಇದ್ದರಿಂದ ಶತಮಾನದ ಜಾತಿ ಆಧಾರಿತ ತಾರತಮ್ಯ ಮತ್ತು ದಬ್ಬಾಳಿಕೆ ಅಂತ್ಯಗೊಂಡು ಸಮಾನತೆಯ ಸಮಾಜಕ್ಕೆ ದಾರಿ ಮಾಡಿಕೊಟ್ಟಿತ್ತು.


ಅಯ್ಯಂಕಾಳಿ ಜೂನ್ 18, 1941 ರಂದು ತಮ್ಮ 77 ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.