ಇಂದು ಜಯಂತಿ

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರು ಇಂದಿಗೂ ಭಾರತೀಯರ ಹೃದಯದಲ್ಲಿ ಅಚ್ಚಳಿಯದೆ ಉಳಿದಿರುವ ವೀರಯೋಧ. ಮುಂಬೈನಲ್ಲಿ 26/11 ತಾಜ್‌ ಹೋಟೆಲ್‌ ದಾಳಿ ಸಮಯದಲ್ಲಿ ನಾಗರಿಕರನ್ನು ರಕ್ಷಿಸುವ ಸಲುವಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮಹಾನ್‌ ನಾಯಕ. ಅವರು ಹುತಾತ್ಮರಾಗಿ ಅನೇಕ ವರ್ಷಗಳು ಕಳೆದರೂ ಕೂಡ ಅವರ ತ್ಯಾಗ ಕರ್ನಾಟಕದ ಜನಮಾನಸದಲ್ಲಿ ಉಳಿದಿದೆ. ಇಂದು ಅವರ ಜಯಂತಿ.


ಪರಿಚಯ
ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಮಾರ್ಚ್‌ 15, 1977 ರಲ್ಲಿ ಕೇರಳದ ಕೋಯಿಕ್ಕೋಡ್‌ ಜಿಲ್ಲೆಯ ಚೆರುವಣ್ಣೂರಿನಲ್ಲಿ ಜನಿಸಿದರು. ನಂತರ ಅವರ ಕುಟುಂಬ ಬೆಂಗಳೂರಿಗೆ ಸ್ಥಳಾಂತರವಾಗಿತ್ತು. ಇವರ ತಂದೆ ಉನ್ನಿಕೃಷ್ಣನ್‌ ಮತ್ತು ತಾಯಿ ಧನಲಕ್ಷ್ಮಿ. ಇವರ ತಂದೆ ಇಸ್ರೋ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು. ಸಂದೀಪ್‌ ಅವರು ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಫ್ರಾಂಕ್‌ ಆಂಥೋನಿ ಪಬ್ಲಿಕ್‌ ಶಾಲೆಯಲ್ಲಿ ಮುಗಿಸಿದರು. ನಂತರ ಅವರು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದರು. ಅವರು ಬಾಲ್ಯದಿಂದ ಸೈನ್ಯಕ್ಕೆ ಸೇರುವ ಆಸಕ್ತಿಯನ್ನು ಹೊಂದಿದ್ದರು.


ವೃತ್ತಿ
ಸಂದೀಪ್‌ ಉನ್ನಿಕೃಷ್ಣನ್ ಅವರು 1995ರಲ್ಲಿ ಸೇನಾ ಪ್ರಯಾಣವನ್ನು ಶುರು ಮಾಡಿದರು. ನಂತರ ಅವರು ಮಹಾರಾಷ್ಟ್ರದ ಪುಣೆಯಲ್ಲಿರುವ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಗೆ ಸೇರಿದರು. ಜುಲೈ 12, 1999 ರಂದು ಭಾರತೀಯ ಸೇನೆಯಲ್ಲಿ ಸೇವೆ ಪ್ರಾರಂಭಿಸಿದ್ದರು. ನಂತರ ಅವರು ಬಿಹಾರ ರೆಜಿಮೆಂಟ್ (ಪದಾತಿದಳ) ದ 7ನೇ ಬೆಟಾಲಿಯನ್‌ಗೆ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಜಮ್ಮು ಮತ್ತು ಕಾಶ್ಮೀರ ಮತ್ತು ರಾಜಸ್ಥಾನದ ವಿವಿಧ ಸ್ಥಳಗಳಿಂದ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಿದರು. 2006 ರಲ್ಲಿ NSG (National Security Guard) ಕಮಾಂಡೋ ಆಗಿ ಸೇವೆ ಸಲ್ಲಿಸಿದರು.


ಮೇಜರ್ ಸಂದೀಪ್ ಉನ್ನಿಕೃಷ್ಣನ್  ಅವರು 1999ರಲ್ಲಿ ಪಾಕಿಸ್ತಾನಿ ಸೇನೆಯು ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ ಮಾರಣ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ನಡೆಸಿದ ಆಪರೇಷನ್ ವಿಜಯ್‌ನಲ್ಲಿ ಭಾಗವಹಿಸಿದ್ದರು.

12 ಜೂ‌ನ್ 2003ರಲ್ಲಿ ಕ್ಯಾಪ್ಟನ್ ಆಗಿ ವೃತ್ತಿಯಲ್ಲಿ ಭಡ್ತಿ ಪಡೆದರು. 2005ರಲ್ಲಿ ಮೇಜರ್ ಆಗಿ ನಿಯುಕ್ತಿಗೊಂಡರು. ನವೆಂಬರ್‌ 26, 2008 ರಲ್ಲಿ ಮುಂಬೈನ ತಾಜ್‌ ಹೋಟೆಲ್‌ ಗಳ ಮೇಲೆ ಉಗ್ರದಾಳಿ ನಡೆದಾಗ ಎನ್‌ ಎಸ್‌ ಜಿ ಕಮಾಂಡೋ ಆಗಿದ್ದ ಸಂದೀಪ್‌ ಉನ್ನಿಕೃಷ್ಣನ್ ಮತ್ತು ಅವರ ತಂಡ ಭಯೋತ್ಪಾದಕರೊಂದಿಗೆ ಸೆಣೆಸಾಟದಲ್ಲಿ ತೊಡಗಿದ್ದರು. ಉಗ್ರರು ಇದ್ದ ಹೋಟೆಲ್‌ ನ ಒಂದೊಂದೇ ಫ್ಲೋರ್ ಗಳನ್ನು ಎನ್ಎಸ್ ಜಿ ಕಮಾಂಡೋಗಳು ಸುತ್ತುವರಿಯುತ್ತ, ಒಳಗಿದ್ದ ಜನರನ್ನು ರಕ್ಷಣೆ ಮಾಡಲು ಮುಂದಾಗಿದ್ದರು. ಉಗ್ರರ ಹಿಡಿತಕ್ಕೆ ಸಿಲುಕಿದ್ದ ಹೋಟೆಲ್‌ ನಲ್ಲಿ ಭಾರತೀಯ ಯೋಧರು ಮತ್ತು ಭಯೋತ್ಪಾದಕರ ನಡುವೆ ಪೈಪೋಟಿ ಮುಂದುವರೆದಿತ್ತು.  Do not come up, I will handle them ಎಂದು ಭಯೋತ್ಪಾದಕರ ಹುಟ್ಟಡಗಿಸಲು ಮುಂದಾದ ಸಂದೀಪ್‌ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ರಾಷ್ಟ್ರದ ಜನತೆಯ ಪ್ರಾಣವನ್ನು ಕಾಪಾಡಿದರು.

ಅವರು ನವೆಂಬರ್‌ 28, 2008 ರಂದು ಹುತಾತ್ಮರಾದರು.

ಗೌರವ
ಜನವರಿ 26, 2009 ರಂದು ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್ ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.