‘ಮನೆ ಮನಗಳ ಭೂಷಣ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಭಿಮತ

ಬೆಂಗಳೂರು: ಸ್ವರ್ಗೀಯ ನಾಗಭೂಷಣ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾದರಿ ಪ್ರಚಾರಕರು. ಸಂಘದ ಮೇಲೆ ಅನೇಕ ಆರೋಪಗಳು ಮತ್ತು ಸವಾಲುಗಳಿದ್ದ ಕ್ಲಿಷ್ಟಕರ ಸಂದರ್ಭದಲ್ಲಿ ಸಂಘಕಾರ್ಯಕ್ಕಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡವರು. ಸಂಘದ ಕರ್ನಾಟಕ ಪ್ರಾಂತ ಕಾರ್ಯಾಲಯ ಕೇಶವಕೃಪಾದ ಕಾರ್ಯಾಲಯ ಪ್ರಮುಖರಾಗಿ ಅನೇಕ ವರ್ಷಗಳ ಕಾಲ ಸೇವೆಸಲ್ಲಿಸಿದವರು, ತಮ್ಮ ವ್ಯಕ್ತಿತ್ವದ ಮೂಲಕ ಅದ್ಭುತವಾದ ಸಂಪರ್ಕದ ಜಾಲವನ್ನೇ ನಿರ್ಮಿಸಿಕೊಂಡಿದ್ದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ ಹೇಳಿದರು.

ವನವಾಸಿ ಕಲ್ಯಾಣ ಕರ್ನಾಟಕ ಮತ್ತು ಹಿಂದು ಸೇವಾ ಪ್ರತಿಷ್ಠಾನ ವತಿಯಿಂದ ಶಂಕರಪುರದ ರಂಗರಾವ್ ರಸ್ತೆಯ ಉತ್ತುಂಗದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸ್ವರ್ಗೀಯ ಶ್ರೀ ಕೆ. ಎಸ್.ನಾಗಭೂಷಣ ಅವರ ಸ್ಮರಣಾರ್ಥ ‘ಮನೆ ಮನಗಳ ಭೂಷಣ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಗಭೂಷಣ ಅವರು ತಮ್ಮ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರ ಕುರಿತೂ ಕಾಳಜಿ ವಹಿಸುತ್ತಿದ್ದರು. ತಮ್ಮ ಆತ್ಮೀಯತೆ ಮತ್ತು ಕಾರ್ಯವೈಖರಿಯ ಮೂಲಕ ಕೇಶವಕೃಪಾಗೆ ಒಮ್ಮೆ ಬಂದ ಕಾರ್ಯಕರ್ತರಿಗೆ ಮತ್ತೆ ಮತ್ತೆ ಬರಬೇಕು ಎನಿಸುವಂತೆ ಕಾರ್ಯಾಲಯವನ್ನು ವ್ಯವಸ್ಥಿತವಾಗಿಟ್ಟುಕೊಂಡು ಗೌರವಕ್ಕೆ ಪಾತ್ರರಾದವರು. ಪ್ರತಿಯೊಬ್ಬ ಸ್ವಯಂಸೇವಕನಿಗೂ ಮಾದರಿಯಾಗುವಂತಹ ಜೀವನ ಅವರದ್ದಾಗಿತ್ತು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಅವರು ನಾಗಭೂಷಣ ಅವರ ಪ್ರಭಾಮಂಡಲ ಬಹಳ ದೊಡ್ಡದು. ಅಯಸ್ಕಾಂತದಂತೆ ಎಲ್ಲರನ್ನೂ ಆತ್ಮೀಯತೆಯ ಮೂಲಕ ಸೆಳೆಯುವಂತಹ ವ್ಯಕ್ತಿತ್ವ ಅವರದ್ದು. ಅವರ ಪ್ರಭಾವಲಯಕ್ಕೆ ಬಂದ ಯಾರೂ ಅವರನ್ನು ಮರೆಯಲಿಲ್ಲ ಎನ್ನುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು ತಮ್ಮ ಅಮೋಘ ಮತ್ತು ಅನನ್ಯ ವ್ಯಕ್ತಿತ್ವದ ಮೂಲಕ ಸಾರಿದ ಸಂಘದ ಮೌಲ್ಯಗಳ ಮೂರ್ತರೂಪದಂತಿದ್ದವರು ನಾಗಭೂಷಣ್ ಅವರು ಎಂದು ಅಭಿಪ್ರಾಯಪಟ್ಟರು.

ಸಂಘಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ನಾಗಭೂಷಣ ಅವರು ಆದರ್ಶ ಸ್ವಯಂಸೇವಕ, ಆದರ್ಶ ಕಾರ್ಯಕರ್ತ, ಆದರ್ಶ ಪ್ರಚಾರಕ. ಅವರ ಸಾರ್ಥಕ ಜೀವನದ ಕುರಿತು ಕೃತಿಯೊಂದು ಮೂಡಿ ಬಂದಿರುವುದು ಸಂತಸದ ಸಂಗತಿ. ಅವರ ಮಾದರಿ ಜೀವನದ ಒಳದರ್ಶನಗಳ ಕುರಿತು ‘ಮನೆ ಮನಗಳಲ್ಲಿ ಭೂಷಣ’ ಕೃತಿಯ ಲೇಖನಗಳು ನೀಡುತ್ತವೆ. ಎಲ್ಲಾ ಸ್ವಯಂಸೇವಕರು ಮತ್ತು ಸಂಘ ಬಂಧುಗಳಿಗೆ ಪ್ರೇರಣೆ ನೀಡುವ ಕೃತಿ ಇದಾಗಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ವೈ.ಕೆ.ರಾಘವೇಂದ್ರ ಅವರು ಮಾತನಾಡಿ ನಾಗಭೂಷಣ ಅವರೊಂದಿಗಿನ ತಮ್ಮ ಬಾಂಧವ್ಯವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ.ಆರ್., ದಕ್ಷಿಣ ಮಧ್ಯಕ್ಷೇತ್ರದ ಕ್ಷೇತ್ರೀಯ ಪ್ರಚಾರಕ್ ಸುಧೀರ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.