ಮಂಗಳೂರು : ಸಾಹಿತ್ಯ ಮತ್ತು ವೈಚಾರಿಕ ವಲಯದಲ್ಲಿ ಮನ್ನಣೆ ಪಡೆದು ಕಳೆದ 5 ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಗೊಂಡ ಮಂಗಳೂರು ಲಿಟ್ ಫೆಸ್ಟ್ ಇದೀಗ 6 ನೇ ಅವೃತ್ತಿಯ ಹೊಸ್ತಿಲಲ್ಲಿದೆ. ಜ.19 ರಂದು ಟಿ.ಎಂ.ಎ.ಪೈ ಕನ್ವೆನ್ಷನಲ್ ಸೆಂಟರ್ ನಲ್ಲಿ ಉದ್ಘಾಟನೆಗೊಳ್ಳಲಿರುವ 6ನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ ಅನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಉದ್ಘಾಟಿಸಲಿದ್ದಾರೆ. ದೇಶದ ಮೇರು ಸಾಹಿತಿಗಳ ಮೂಲಕ ಸಂಗ್ರಹವಾದ ಲೇಖನಗಳನ್ನೊಳಗೊಂಡ ʼಐಡಿಯಾ ಆಫ್ ಭಾರತ್ʼ ಎಂಬ ಕೃತಿಯು ಉದ್ಘಾಟನಾ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಭಾರತ್ ಫೌಂಡೇಶನ್ ಟ್ರಸ್ಟಿ ಶ್ರೀರಾಜ್ ಗುಡಿ ಹೇಳಿದರು.
ಕಳೆದ 5 ಆವೃತ್ತಿಗಳ ಮೂಲಕ ಮಂಗಳೂರಿನ ಸಾಹಿತ್ಯ ಹಬ್ಬ ಜನರ ಹಬ್ಬವಾಗಿ ಬದಲಾಗಿದೆ. ಈ ಬಾರಿ ಎರಡೂವರೆ ದಿನಗಳ ಕಾಲ ವಿವಿಧ ವಿಚಾರಗಳ ಬಗ್ಗೆ ಚರ್ಚಾಗೋಷ್ಠಿ, ಸಂವಾದಗಳು ನಡೆಯುತ್ತವೆ. ಉದ್ಘಾಟನಾ ದಿನದಂದು ಭರತನಾಟ್ಯಂ ಕಲಾವಿದೆ ರಾಧೆ ಜಗ್ಗಿ ನಾಥ ಹರೇ ನೃತ್ಯರೂಪಕ ಪ್ರಸ್ತುತಪಡಿಸಲಿದ್ದಾರೆ. ಸಾಹಿತ್ಯ ಗೋಷ್ಠಿಯಲ್ಲಿ ಕೇಂದ್ರ ರಕ್ಷಣಾ ಸಲಹೆಗಾರರಾದ ವಿನೋದ್ ಖಂಡಾರೆ, ಸೇನೆಯ ಮೂವರು ಮಹಿಳಾ ಅಧಿಕಾರಿಗಳು ಲಿಟ್ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದರು.
ಇದರ ಜೊತೆಯಲ್ಲಿ ಆಧುನಿಕ ಕಾಲಘಟ್ಟದ ವೈಜ್ಞಾನಿಕ ಬೆಳೆವಣಿಗೆಯಾದ ಎಐ ತಂತ್ರಜ್ಞಾನದ ಕುರಿತು ಸಂವಾದ, ಚಿಣ್ಣರ ಅಂಗಳದ ಮೂಲಕ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ಕಾರ್ಯಕ್ರಮಗಳು, ಯಕ್ಷಗಾನದ ಬಗ್ಗೆ ಪರಿಚಯಾತ್ಮಕ ಪ್ರಯೋಗದ ನಿಟ್ಟಿನಲ್ಲಿ ಯಕ್ಷಗಾನದ ವಾದ್ಯಗಳು, ವೇಷಭೂಷಣಗಳ ಬಗ್ಗೆಯೂ ಪರಿಚಯವಿರಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತ್ ಫೌಂಡೆಶನ್ ಟ್ರಸ್ಟಿ ಸುನಿಲ್ ಕುಲಕರ್ಣಿ ಅವರು ಸುಮಾರು 90 ವರ್ಷಗಳಿಂದ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಾಕ್ಷಿಯಾದ- ವಿಧವೆ ಮತ್ತು ಬಾಲಕಿಯರ ಶಿಕ್ಷಣಕ್ಕೆ ಮಾದರಿಯಾದ ಧಾರವಾಡದ ವನಿತಾ ಸೇವಾ ಸಮಾಜ ಸಂಘಟನೆಗೆ ಈ ಬಾರಿಯ ಲಿಟ್ ಫೆಸ್ಟ್ ಮೂಲಕ ಗೌರವ ಪ್ರದಾನ ನಡೆಯಲಿದೆ ಎಂದು ಹೇಳಿದರು.
20 ರಂದು ಸಾಯಂಕಾಲ ಸಂದೀಪ್ ನಾರಾಯಣ್ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ಪ್ರಸ್ತುತಿ ನಡೆಯಲಿದೆ. ಲಿಟ್ ಫೆಸ್ಟ್ ಪ್ರಚಾರಾರ್ಥ ಈಗಾಗಲೇ ಬೀದಿ ನಾಟಕಗಳ ಪ್ರಸ್ತುತಿ ಮಂಗಳೂರು ನಗರದ ಹಲವಾರು ಪ್ರದೇಶಗಳಲ್ಲಿ ನಡೆದಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಾಹಿತ್ಯಗೋಷ್ಠಿಯಲ್ಲಿನ ವಿಶೇಷತೆಯು ಹೆಚ್ಚಿನ ಸಂಖ್ಯೆಯ ಸಾಹಿತ್ಯಾಸಕ್ತರನ್ನು ಆಕರ್ಷಿಸಲಿದೆ ಎಂದು ಹೇಳಿದರು. ವಿದ್ಯಾರ್ಥಿ ಕೇಂದ್ರಿತವಾಗಿರುವ ಕಾರ್ಯಕ್ರಮಗಳು ಸಾಹಿತ್ಯ ಗೋಷ್ಠಿಗೆ ಹೆಚ್ಚಿನ ಮೆರಗು ನೀಡಲಿದೆ ಎಂದು ಮಂಗಳೂರು ಲಿಟ್ ಫೆಸ್ಟ್ ತಂಡದ ಸದಸ್ಯೆ ದಿಶಾ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಲಿಟ್ ಫೆಸ್ಟ್ ತಂಡದ ಸದಸ್ಯರಾದ ಈಶ್ವರ್ ಶೆಟ್ಟಿ, ದುರ್ಗಾ ರಾಮದಾಸ್ ಕಟೀಲು, ಸುಜಿತ್ ಪ್ರಕಾಶ್ ಉಪಸ್ಥಿತರಿದ್ದರು.