ಮಂಗಳೂರು ಮೇ 7, 2016 : ರಾಷ್ಟೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಥಮ ವರ್ಷದ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭವು ಮಂಗಳೂರಿನ ತಲಪ್ಪಾಡಿಯ ಕಿನ್ಯಾದ ಶಾರದಾ ವಿದ್ಯಾನಿಕೇತನದಲ್ಲಿ ಮೇ 7ರ ಶನಿವಾರದಂದು ನಡೆಯಿತು. ಏಪ್ರಿಲ್ 17ರಂದು ಪ್ರಾರಂಭಗೊಂಡಿದ್ದ 20 ದಿನಗಳ ಈ ಪ್ರಶಿಕ್ಷಣ ವರ್ಗದಲ್ಲಿ ರಾಜ್ಯದ ಒಟ್ಟು ಆಯ್ದ 769 ಕಾರ್ಯಕರ್ತರು ಭಾಗವಹಿಸಿದ್ದರು.
ಮೇ 7 ರಂದು ಸಂಜೆ 5.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿಭಾಗ ಕಾರ್ಯವಾಹ ಶ್ರೀ ಪಿ.ಎಸ್. ಪ್ರಕಾಶ್ ಮುಖ್ಯ ಭಾಷಣ ಮಾಡಿದರು. ಖ್ಯಾತ ವೈದ್ಯ ಡಾ. ಆನಂದ್ ವೇಣುಗೋಪಾಲ್ ಅಧಕ್ಷತೆ ವಹಿಸಿದ್ದರು.
20 ದಿನಗಳಿಂದ ವರ್ಗ ನಡೆಯುತ್ತಿದೆ. ಇದೊಂದು ಪ್ರಮುಖ ವರ್ಗ, ಪ್ರತಿ ವರ್ಷ 20 ಸಾವಿರಕ್ಕೂ ಹೆಚ್ಚು ತರುಣರು ಸಂಘದ ಶಿಕ್ಷಣವನ್ನು ಪಡೆಯುತ್ತಾರೆ ಮತ್ತು ಕಾರ್ಯಕರ್ತರಾಗುತ್ತ್ತಿದ್ದಾರೆ. ಇವರಿಂದ 80 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಘದ ಚಟುವಟಿಕೆಗಳು ನಡೆಯುತ್ತಿವೆ. ಕಳೆದ 91 ವರ್ಷಗಳಲ್ಲಿ ಸಂಘವು ಸಮಾಜಕ್ಕೆ ಭರವಸೆ ನೀಡುತ್ತಿದೆ ಎಂದು ಪಿ.ಎಸ್. ಪ್ರಕಾಶ್ ಹೇಳಿದರು.
ಸಂಘದ ಉದ್ದೇಶ ಸ್ವಾಭಿಮಾನದ ಬದುಕನ್ನು, ಹಿಂದೂ ಸಂಘಟನೆಯ ಮೂಲಕ ಮೂಡಿಸುವುದು. ಹಿಂದುತ್ವವೇ ಇಲ್ಲಿನ ರಾಷ್ತ್ರೀಯತೆ. ಈ ದೇಶದ ಜನತೆಯೇ ಹಿಂದೂಗಳು. ಮತ, ಪಂಗಡ, ಆಚಾರಗಳ ಮೂಲಕ ಓರ್ವ ಹಿಂದೂವನ್ನು ಪ್ರತ್ಯೇಕವಾಗಿ ಗುರುತಿಸುವುಸುವುದು ತಪ್ಪು.ಈ ದೇಶದ ಸಾಮಾಜಿಕ ಸಮಸ್ಯೆ ಪರಿಹಾರವಾಗುವುದು ಸಾಂಸ್ಕೃತಿಕ ಏಕತೆಯಿಂದ ಮಾತ್ರ ಎಂದು ಪಿ.ಎಸ್. ಪ್ರಕಾಶ್ ಹೇಳಿದರು.
ಈ ಶಿಬಿರದಲ್ಲಿ ಶಿಕ್ಷಾರ್ಥಿಗಳು ತಮ್ಮ ತಾರುಣ್ಯದ ಹೊಸ್ತಿಲಲ್ಲಿ ಬದುಕಿಗೊಂದು ಹೊಸ ದೃಷ್ಟಿಕೋನ ಪಡೆಯುತ್ತಾರೆ. ರಾಷ್ಟ್ರೀಯ ಚಿಂತನೆಯನ್ನು ಮೈಗೂಡಿಸಿ ನನ್ನ ಜೀವನದಲ್ಲಿ ರಾಷ್ಟ್ರವೇ ಪ್ರಧಾನ ಎಂಬ ಸಂಕಲ್ಪ ತೊಡುತ್ತಾರೆ ಎಂದು ಪಿ.ಎಸ್. ಪ್ರಕಾಶ್ ಹೇಳಿದರು.
ಸಮಾಜವು ಸಂಕಷ್ಟಮಯ ಸ್ಥಿತಿಯನ್ನು ಎದುರಿಸಿದಾಗಲೆಲ್ಲ, ಬರ-ನೆರೆ-ಭೂಕಂಪ-ಅಪಘಾತ ಇತ್ಯಾದಿಗಳ ಸಂದರ್ಭಗಳಲ್ಲಿ ಸ್ವಯಂಸೇವಕರು ಸ್ವಯಂಸ್ಪೂರ್ತಿಯಿಂದ ಕೆಲಸಮಾಡಿದ್ದಾರೆ. ಸಂಘದ ಗುರಿ ರಾಷ್ಟ್ರದ ಪರಮ ವೈಭವ. ಜಗತ್ತಿಗೆ ಶಾಂತಿ ಮತ್ತು ನೆಮ್ಮದಿ ಭಾರತೀಯ ಸಂಸ್ಕೃತಿಯಿಂದ ಮಾತ್ರ ಸಾಧ್ಯ ಹೀಗಾಗಿ ಜಗತ್ತಿನ ಅನೇಕ ದೇಶಗಳು ಇಂದು ಭಾರತದ ಕಡೆಗೆ ನೋಡುತ್ತಿವೆ.
2025ಕ್ಕೆ ದೇಶದ ಎಲ್ಲ ಗ್ರಾಮಗಳಿಗೂ ತಲುಪುವುದು ನಮ್ಮ ಉದ್ದೇಶ. ಇದಕ್ಕಾಗಿ ಸಮಾಜದ ಸರ್ವರ ನೆರವನ್ನು ಸಂಘ ಅಪೇಕ್ಷಿಸುತ್ತಿದೆ ಎಂದು ಪಿ.ಎಸ್. ಪ್ರಕಾಶ್ ಮನವಿ ಮಾಡಿದರು.
ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಆರೆಸ್ಸೆಸ್‌ನ ಈ ‘ಸಂಘ ಶಿಕ್ಷಾವರ್ಗ’ ಪ್ರಶಿಕ್ಷಣ ಶಿಬಿರಗಳು ನಡೆಯುತ್ತವೆ. ಶಾರೀರಿಕ- ಬೌದ್ಧಿಕ ಪ್ರಶಿಕ್ಷಣಗಳ ಜೊತೆಗೆ ರಾಷ್ಟೀಯ ವಿಚಾರಗಳ ಕುರಿತ ಚರ್ಚೆ – ಪ್ರಶ್ನೋತ್ತರಗಳು, ಪರಿಸರ ಸಂರಕ್ಷಣೆ, ಸೇವೆ, ಸಾಮರಸ್ಯ, ಅನುಶಾಸನ ಇತ್ಯಾದಿ ವಿಷಯಗಳ ಕುರಿತು ತಜ್ಞರಿಂದ ಪ್ರಶಿಕ್ಷಣ ನೀಡಲಾಗುತ್ತಿದೆ. ಆರೆಸ್ಸೆಸ್ ಶಾಖೆಗಳ ಮೂಲಕ ಆರಿಸಲ್ಪಟ್ಟ ಆಯ್ದ ಕಾರ್ಯಕರ್ತರಿಗೆ ಮಾತ್ರ ಈ ಪ್ರಶಿಕ್ಷಣ ನೀಡಲಾಗುತ್ತಿದೆ.
ಆರೆಸ್ಸೆಸ್ ಸರಕಾರ್ಯವಾಹ ಸುರೇಶ ಭೈಯ್ಯಾಜಿ ಜೋಷಿ, ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್‌ನ ಅಖಿಲ ಭಾರತೀಯ ಪದಾಧಿಕಾರಿಗಳಾದ ಮಂಗೇಶ್ ಭೇಂಡೆ, ಮುಕುಂದ ಸಿ.ಆರ್, ಮುಂತಾದವರು ಈ ಶಿಬಿರಗಳಿಗೆ ಭೇಟಿ ನೀಡಿದ್ದಾರೆ.
> ಮೇ 7 ರಂದು ಸಂಜೆ 5.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿಭಾಗ ಕಾರ್ಯವಾಹ ಶ್ರೀ ಪಿ.ಎಸ್. ಪ್ರಕಾಶ್ ಮುಖ್ಯ
> ಭಾಷಣ ಮಾಡಿದರು.
“ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ” ಎನ್ನುವುದನ್ನು ತಿದ್ದಬೇಕು.