ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ‘ಉತ್ತುಂಗ’ ಕಾರ್ಯಾಲಯದ ಲೋಕಾರ್ಪಣೆಗೊಂಡಿತು. ಈ ನಿಮಿತ್ತ ಬೌದ್ಧಿಕ್ ಕಾರ್ಯಕ್ರಮವು ಮಾರ್ಚ್ 29 ರಂದು ಸಂಜೆ ಸಾಯಿರಂಗ ಮೈದಾನದಲ್ಲಿ ನಡೆಯಿತು. ಅಖಿಲ ಭಾರತ ವ್ಯವಸ್ಥಾ ಪ್ರಮುಖರಾದ ಶ್ರೀ ಮಂಗೇಶ ಭೇಂಡೆಯವರು ಬೌದ್ಧಿಕ್ ನಡೆಸಿಕೊಟ್ಟರು.
“ಸಂಘದ ಕಾರ್ಯಾಲಯ ಕೇವಲ ಕಚೇರಿಯಲ್ಲ. ಬದಲಾಗಿ ದೇಶಕ್ಕಾಗಿ ಕೆಲಸ ಮಾಡಬೇಕೆನ್ನುವವರಿಗೆ ದಿಕ್ಕನ್ನು ನೀಡುವ ಪ್ರೇರಣಾ ಕೇಂದ್ರ. ಸುಸಂಸ್ಕೃತ ವ್ಯಕ್ತಿಗಳನ್ನು ನಿರ್ಮಿಸಿ, ಸಮಾಜ ಕಾರ್ಯಕ್ಕಾಗಿ ಕಾರ್ಯಪ್ರವೃತ್ತರಾಗುವಂತೆ ಮಾಡುವ ಸಂಸ್ಕಾರ ಕೇಂದ್ರ” ಎಂದು ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ ಹೇಳಿದರು.
“ಸಂಘ ಪ್ರಾರಂಭವಾಗಿ 98 ವರ್ಷಗಳಲ್ಲಿ ಬೃಹತ್ ಆಗಿ ಬೆಳೆದಿದೆ. ಇಂದು ಸಂಘ ಹೇಳಿದ್ದನ್ನು ಸ್ವೀಕಾರ ಮಾಡುವ, ಸಂಘವನ್ನು ಉಪಸ್ಥಿತಿಯನ್ನು ತಮ್ಮ ಗ್ರಾಮದಲ್ಲಿ ಅಪೇಕ್ಷಿಸುವ ಮನಸ್ಥಿತಿ ಸಮಾಜದಲ್ಲಿ ಬೆಳೆದಿದೆ. ಸಮಾಜದ ಅಪೇಕ್ಷೆ ಹೆಚ್ಚಿರುವಾಗ ಸ್ವಯಂಸೇವಕರ ಜವಾಬ್ದಾರಿಯೂ ಹೆಚ್ಚಿದೆ” ಎಂದು ನುಡಿದರು.
ಅವರು ಮಾತನಾಡುತ್ತಾ , “ಸಂಘದ ಶತಾಬ್ದಿ ವರ್ಷ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಸಂಘ ಸ್ವಯಂಸೇವಕರು ಐದು ಪ್ರಮುಖ ಜವಾಬ್ದಾರಿಗಳಲ್ಲಿ ಕಾರ್ಯಪ್ರವೃತ್ತರಾಗಲು ಅಪೇಕ್ಷಿಸುತ್ತಿದೆ. ಸಂಘದ ಕಾರ್ಯವಿಸ್ತಾರ, ಸಮಾಜದ ಎಲ್ಲಾ ಜಾತಿಯವರನ್ನೂ ಸಂಘದ ಸಂಪರ್ಕಕ್ಕೆ ತರುವುದು, ಶಾಖೆಯ ಗುಣಾತ್ಮಕತೆಯನ್ನು ಹೆಚ್ಚಿಸುವುದು, ಯಾರಿಗೂ ಅಪಮಾನಿಸಲು ಧೈರ್ಯ ಬಾರದಂತಹ ಉತ್ಕೃಷ್ಟತೆಗೆ ಹಿಂದೂ ವಿಚಾರದ ಪ್ರಭಾವವನ್ನು ಹೆಚ್ಚಿಸುವುದು, ಇವುಗಳ ಮೂಲಕ ನಿರೋಗ ಸಮಾಜ ನಿರ್ಮಾಣವನ್ನು ಮಾಡುವುದು” ಎಂದು ತಿಳಿಸಿದರು.
“ಕಾರ್ಯವಿಸ್ತಾರದ ದೃಷ್ಟಿಯಿಂದ ಸಂಘ ತನ್ನ ಶತಮಾನೋತ್ಸವವನ್ನು ಆಚರಿಸುವ ಮುನ್ನ ರಾಷ್ಟ್ರದ ಆರೂವರೆ ಲಕ್ಷ ಗ್ರಾಮಗಳಲ್ಲಿ ಕನಿಷ್ಠ ಒಂದು ಲಕ್ಷ ಗ್ರಾಮಗಳನ್ನಾದರೂ ತಲುಪಬೇಕು. ಪ್ರಸ್ತುತ 68000 ಸಂಘದ ಶಾಖೆಗಳಿವೆ. ಆದ್ದರಿಂದ ಈಗ ಮಾಡುತ್ತಿರುವ ಎರಡು ಪಟ್ಟು ಕೆಲಸ ಮಾಡಬೇಕಿದೆ” ಎಂದು ಅಭಿಪ್ರಾಯಪಟ್ಟರು.
“ಹಿಂದೂ ಸಂಘಟನೆ ಎಂದ ಮೇಲೆ ಅದರಲ್ಲಿ ಎಲ್ಲಾ ಜಾತಿ, ಸಮುದಾಯಗಳ ಜನರ ಉಪಸ್ಥಿತಿ ಇರಬೇಕು. ಜನರ ಅಂತರಂಗದಲ್ಲಿ ಜಾಗೃತಿ ಮೂಡಿಸಿ ಸರ್ವರನ್ನೂ ಸಂಘದ ಸಂಪರ್ಕಕ್ಕೆ ತರುವಂತಾಗಬೇಕು. ಆಗ ಮಾತ್ರ ನಮ್ಮದು ಪರಿಪೂರ್ಣ ಹಿಂದೂ ಸಂಘಟನೆಯಾಗುತ್ತದೆ” ಎಂದರು.
“ಸಂಘವೆಂದರೆ ಶಾಖೆ, ಶಾಖೆ ಎಂದರೆ ಕಾರ್ಯಕ್ರಮ. ಸಂಘದ ಆತ್ಮವೇ ಆದ ಶಾಖೆಯ ಗುಣಾತ್ಮಕತೆಯನ್ನು ಹೆಚ್ಚಿಸುವತ್ತ ಪ್ರತಿ ಸ್ವಯಂಸೇವಕರೂ ಗಮನಕೊಡಬೇಕಾಗಿದೆ. ಅದಕ್ಕಾಗಿ ನಿತ್ಯ ಶಾಖೆಗೆ ಹೋಗುವುದು, ಶಾಖೆ ಇಲ್ಲದ ಕಡೆ ಶಾಖೆ ಪ್ರಾರಂಭಿಸುವುದು, ವರ್ಷಕ್ಕೆ ಮೂರು ಜನ ಹೊಸಬರನ್ನು ಸಂಘಕ್ಕೆ ಕರೆತರುವ ಕೆಲಸವನು ಮಾಡಬೇಕಿದೆ. ಈ ಮೂರು ಕರ್ತವ್ಯವನ್ನು ಸ್ವಯಂಸೇವಕರು ತಾವಿರುವ ಗ್ರಾಮಗಳಿಂದಲೇ ಮಾಡಬೇಕಿದೆ” ಎಂದು ನುಡಿದರು.
“ಸ್ವಯಂಸೇವಕರನ್ನು ಬಾಹ್ಯ ಚಿಹ್ನೆಗಳಿಂದ ಗುರುತಿಸುವಂತಾಗದೇ, ಅವರ ನಡವಳಿಕೆಯ ಮೂಲಕ ಗುರುತಿಸುವಂತಾಗಬೇಕು. ಅವನ ನಡವಳಿಕೆಯ ಮೂಲಕವೇ ಸಂಘದ ವಿಚಾರ ಪಸರಿಸಬೇಕು. ಅದರ ಮೂಲಕ ಹಿಂದೂ ಚಿಂತನೆಗಳನ್ನು ಯಾರೂ ಕೂಡ ಅವಮಾನಿಸಲು ಧೈರ್ಯ ತೋರದಂತಹ ಸದೃಢ ವಾತಾವರಣವನ್ನು ನಿರ್ಮಿಸಬೇಕಿದೆ” ಎಂದು ಅಭಿಪ್ರಾಯಪಟ್ಟರು.
“ಸಂಘ ಸ್ಥಾಪನೆಯ ಉದ್ದೇಶವೇ ನಿರೋಗ ಹಿಂದೂ ಸಮಾಜವನ್ನು ರೂಪಿಸುವುದು. ಅದರ ಆಧಾರದ ಮೇಲೆಯೇ ರಾಷ್ಟ್ರನಿರ್ಮಾಣವನ್ನು ಮಾಡುವುದು. ಈ ಕಾರ್ಯ ವ್ಯಕ್ತಿನಿರ್ಮಾಣದ ಮೂಲಕ ಪ್ರಾರಂಭಬೇಕು. ಈ ನಿಟ್ಟಿನಲ್ಲಿ ಪ್ರತಿ ಶಾಖೆ ಕಾರ್ಯನಿರ್ವಹಿಸಬೇಕು. ಶಾಖೆಯ ಪ್ರತಿ ಸ್ವಯಂಸೇವಕ ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಬೇಕು, ಪ್ರತಿ ಸ್ವಯಂಸೇವಕನ ಮನೆಯೂ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಿ ಅದರ ಧನಾತ್ಮಕತೆಯ ಪ್ರಭೆಯ ಮೂಲಕ ಸಾಮಾಜದಲ್ಲಿ ಬದಲಾವಣೆ ತರಲು ಸಕ್ರಿಯವಾಗಬೇಕು. ಏಕೆಂದರೆ ದುಷ್ಟರ ಸಕ್ರಿಯತೆಗಿಂತ ಸಜ್ಜನರ ನಿಷ್ಕ್ರಿಯತೆ ಸಮಾಜಕ್ಕೆ ಮಾರಕ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಕ್ಷೇತ್ರೀಯ ಸಂಘಚಾಲಕರಾದ ವಿ.ನಾಗರಾಜರವರು ಉಪಸ್ಥಿತರಿದ್ದು, ಸಭೆಯಲ್ಲಿ ಸಹಸರಕಾರ್ಯವಾಹ ಶ್ರೀ ಮುಕುಂದ, ಕ್ಷೇತ್ರೀಯ ಪ್ರಚಾರಕರಾದ ಶ್ರೀ ಸುಧೀರ್, ಅನೇಕ ಹಿರಿಯ ಸ್ವಯಂಸೇವಕರು,ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.