ರಾಷ್ಟ್ರೋತ್ಥಾನ ಪರಿಷತ್ ನ ಕಾರ್ಯಕರ್ತರ ಅಭ್ಯಾಸ ವರ್ಗದಲ್ಲಿ ಮಂಗೇಶ್ ಭೇಂಡೆ.
ಡಾಕ್ಟರ್ ಹೆಡಗೆವಾರ್ ಅವರ ಚಿಂತನೆಯ ಫಲವಾಗಿ ಪ್ರಾರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದೀಗ 90 ವರ್ಷಗಳನ್ನು ಪೂರೈಸಿದೆ. ಸಂಘ ಪ್ರಾರಂಭದ ದಿನಗಳಲ್ಲಿ ನಮ್ಮ ದೇಶದ ನಾಯಕರು ನಮ್ಮೆಲ್ಲ ಸಮಸ್ಯೆಗಳಿಗೂ ಬ್ರಿಟಿಷರೇ ಕಾರಣ. ಅವರು ಹೊರಟುಹೋದರೆ ಈ ದೇಶ ರಾಮರಾಜ್ಯವಾಗುತ್ತದೆ ಎಂದು ತಿಳಿದಿದ್ದರು. ಆದರೆ ಡಾಕ್ಟರ್‌ಜೀ ಅವರ ಚಿಂತನೆ ಬೇರೆಯೇ ಆಗಿತ್ತು. ಬ್ರಿಟಿಷರು ಹೋದ ಮಾತ್ರಕ್ಕೆ ಸಮಸ್ಯೆಗಳೆಲ್ಲವೂ ಪರಿಹಾರವಾಗದು. ಯಾಕೆಂದರೆ ಸಮಸ್ಯೆಯ ಮೂಲವಿರುವುದು ಈ ಸಮಾಜದಲ್ಲಿಯೇ. ಹೀಗಾಗಿ ಈ ಸಮಾಜದಲ್ಲಿರುವ ಇಂತಹ ಗುಣದೋಷಗಳು ಬದಲಾಗಬೇಕು. ಅದು ವ್ಯಕ್ತಿನಿರ್ಮಾಣದಿಂದ ಮಾತ್ರ ಸಾಧ್ಯ. ವ್ಯಕ್ತಿನಿರ್ಮಾಣದಿಂದ ರಾಷ್ಟ್ರನಿರ್ಮಾಣ ಹಾಗೂ ವ್ಯಕ್ತಿನಿರ್ಮಾಣದಿಂದ ರಾಷ್ಟ್ರಪರಿವರ್ತನೆ ಎಂಬುದು ಡಾಕ್ಟರ್‌ಜೀ ಅವರ ದೃಢವಾದ ನಂಬಿಕೆಯಾಗಿತ್ತು. ಇದಕ್ಕಾಗಿ ವ್ಯಕ್ತಿನಿರ್ಮಾಣ ಮಾಡುವ ಸಂಘದ ಶಾಖೆಯನ್ನು ಜಾರಿಗೆ ತಂದರು. ಶಾಖೆಗೆ ಬಂದ ಸಾಮಾನ್ಯ ಮನುಷ್ಯನೂ ಅಸಾಮಾನ್ಯ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ; ಸಮಾಜದಲ್ಲಿ ಪರಿವರ್ತನೆ ತರಲು ಯೋಗ್ಯ ವ್ಯಕ್ತಿಯಾಗುತ್ತಾನೆ ಎಂಬ ಅವರ ನಂಬಿಕೆ ಇಂದು ಸಿದ್ಧವಾಗಿದೆ. ಸಾಮಾನ್ಯ ಮನುಷ್ಯ ಜಗತ್ತೇ ಆಶ್ಚರ್ಯಚಕಿತವಾಗಿ ನೋಡುವಂತೆ ಬೆಳೆದು ನಿಂತಿರುವುದನ್ನು ನಾವು ನೋಡುತ್ತಿದ್ದೇವೆ.
ಇಂಗ್ಲೆಂಡಿನ ಮ್ಯಾಕ್ ಡೊನಾಲ್ಡ್, ಆರೆಸ್ಸೆಸ್ ಕುರಿತು ಸಂಶೋಧನೆ ನಡೆಸಲು ನಾಗಪುರಕ್ಕೆ ಬಂದಿದ್ದರು. ಕೇವಲ ಚಡ್ಡಿ ಹಾಕಿ ಆಡೋದರಿಂದ ರಾಷ್ಟ್ರನಿರ್ಮಾಣವಾಗುವುದೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ ಸಂಘದ ಶಾಖೆಯ ಮೂಲಕ ವ್ಯಕ್ತಿಯ ಸುಪ್ತಶಕ್ತಿ ಜಾಗೃತವಾಗಿಸುವ ಮೂಲಕ ಅವನನ್ನು ಸಾಮಾಜಿಕ ಪರಿವರ್ತನೆಯ ಕಾರ್ಯಕ್ಕೆ ಮುಂದಾಗುವಂತೆ ಮಾಡುತ್ತದೆ. ಇದರ ಪರಿಣಾಮವಾಗಿ ಇಂದು ಸಂಘವು ಸಾಮಾಜಿಕ ಪರಿವರ್ತನೆಯ ಕಾರ್ಯದಲ್ಲಿ ಅಗ್ರಣಿಯಾಗಿದೆ. ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿನಂತೆ ಇಂದು ’ಸಂಘ ತಲಪದೇ ಇರುವ ಯಾವುದೇ ಕ್ಷೇತ್ರವಿಲ್ಲ’. ಉದಾಹರಣೆಗೆ 2015ರ ಫೆಬ್ರುವರಿ 1ರಿಂದ 5ರ ತನಕ Prior Christianity, (ಕ್ರೈಸ್ತಮತದ ಪೂರ್ವ), Prior Islam(ಇಸ್ಲಾಂ ಮತಕ್ಕಿಂತ ಪೂರ್ವ) ಜನಾಂಗಗಳ ಸುಮಾರು 3೦೦ ಪ್ರತಿನಿಧಿಗಳ ಸಮ್ಮೇಳನ ನಡೆಯಲಿದೆ. ಸೂರ್ಯ, ಅಗ್ನಿ, ಗಂಗೆಯ ಆರಾಧಕರಾದ ಅವರ ಸಂಸ್ಕೃತಿಗಳ ಮೂಲ ಭಾರತವೇ ಆಗಿದೆ. ಅವರನ್ನು ಒಟ್ಟುಗೂಡಿಸುವ ಕೆಲಸವನ್ನು ಸಂಘ ಮಾಡುತ್ತಿದೆ. ಹೀಗೆ ಪ್ರತಿ ಕ್ಷೇತ್ರದಲ್ಲೂ ಸಂಘ ಕೆಲಸ ಮಾಡುತ್ತಿದೆ.
ಸಂಘದ ಪರಿವಾರ ಸಂಘಟನೆಯಾದ ರಾಷ್ಟ್ರೋತ್ಥಾನ ಪರಿಷತ್ ಜನಶಿಕ್ಷಣ, ಜನಸೇವೆ, ಜನಜಾಗೃತಿ ಮೂಲಕ ಸಮಾಜದ ಪರಿವರ್ತನೆಯ ಕೆಲಸ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ನಮ್ಮ ಪ್ರಕಲ್ಪಗಳ ಕಾರ್ಯ ನಡೆಯುತ್ತಿದೆ. ನಮ್ಮ ಅಪೇಕ್ಷೆಯಂತೆ ನಮ್ಮ ಕಾರ್ಯ ಇನ್ನೂ ಆಗದಿರಬಹುದು. ಆ ಬಗ್ಗೆ ನಮಗೆ ಅಸಮಾಧಾನವಿರಬಹುದು. ಅದು ಒಳ್ಳೆಯದು ಕೂಡ. ಯಾಕೆಂದರೆ ಸಮಾಧಾನವಾಯಿತು ಎಂದರೆ ನಮ್ಮ ವಿಕಾಸ ಮುಗಿದು ಹೋಗುವ ಸಂಭವವಿರುತ್ತದೆ. ನಮಗೆ ಸದಾಕಾಲ ಮುಂದಕ್ಕೆ ಹೋಗಬೇಕೆಂಬ ಹಂಬಲವಿರಬೇಕು. ಸಂಯೋಗವಶಾತ್ ನಾವು ಆ ಕೆಲಸ ಮುಂದುವರಿಸುವ ಸಾಧನಗಳಾಗಿದ್ದೇವೆ.
ಕೆಲವರಿಗೆ ತಾವು ಏಕೆ ಹುಟ್ಟಿದ್ದೇವೆಂದೇ ಗೊತ್ತಿರೋದಿಲ್ಲ. ಸಾಮಾನ್ಯ ಮನುಷ್ಯನ ಜೀವನ ಹೇಗಿರುತ್ತೆ? ಎಂದರೆ ಕೇವಲ 40 ವರ್ಷ ಮಾತ್ರ ಮನುಷ್ಯನಂತೆ ಬದುಕುತ್ತಾನೆ. ಉಳಿದ ವರ್ಷಗಳನ್ನು ಎತ್ತು (20 ವರ್ಷ), ನಾಯಿ (20ವರ್ಷ) ಮತ್ತು ಗೂಬೆ (20ವರ್ಷ)ಯ ಆಯಸ್ಸನ್ನು ಸೇರಿಸಿಕೊಂಡು ಅವುಗಳಂತೆ ಬಾಳುತ್ತಿರುತ್ತಾರೆ ಎಂದು ಸಂತರೊಬ್ಬರ ಕಥೆಯ ಮೂಲಕ ತಿಳಿಸಿದರು.
ಸುದೈವದಿಂದ ನಾವು ಭಾಗ್ಯವಂತರಾಗಿದ್ದು, ನಮ್ಮ ಜೀವಮಾನಕ್ಕೊಂದು ಗುರಿ ಸಿಕ್ಕಿದೆ. ಮಳೆಯ ಹನಿ ಗಂಗೆಯ ಒಡಲಲ್ಲಿ ಬಿದ್ದಾಗ ಅದು ಪವಿತ್ರ. ಆದರೆ ಅದೇ ಹನಿ ಗಟಾರಕ್ಕೆ ಬಿದ್ದಾಗ ಅಪವಿತ್ರ. ಗಂಗೆಯ ಹನಿಯನ್ನು ಕಣ್ಣಿಗೊತ್ತಿಕೊಂಡು ಪೂಜ್ಯಭಾವ ತೋರುತ್ತಾರೆ; ನಾವುಗಳು ಗಂಗೆಗೆ ಬಿದ್ದ ಹನಿಗಳಾಗಿದ್ದೇವೆ.
ಕೇವಲ ಸಂಸಾರ ನಡೆಸುವುದು ಜೀವನವಲ್ಲ; ಅದು ಉಪ ಜೀವನ. ನಿಜವಾದ ಜೀವನ ಯಾರದು ಎಂದರೆ ಯಾರು ಇನ್ನೊಬ್ಬರ ಸಲುವಾಗಿ ಬದುಕುತ್ತಾನೋ ಅವನದ್ದು. ನಿಜವಾದ ಜೀವನದಲ್ಲಿ ಸಾರ್ಥಕತೆ ಇರುತ್ತದೆ ಮತ್ತು ಸಮಾಜ ಅವರನ್ನು ನೆನಪಿಸಿಕೊಳ್ಳುತ್ತಿರುತ್ತದೆ. ತಮ್ಮ ತಾತ-ಮುತ್ತಾತರುಗಳ ಬಗೆಗೆ ತಿಳಿದಿರದ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಧೀಜಿ, ವಿವೇಕಾನಂದ ಮೊದಲಾವರ ಹೆಸರು ತಿಳಿದಿದೆ. ಯಾಕೆಂದರೆ ತಮ್ಮ ಮನೆಗಾಗಿ ಬದುಕದೇ ಸಮಾಜಕ್ಕಾಗಿ ಬದುಕಿದರು. ಹೀಗೆ ಯಾರು ಸಮಾಜಕ್ಕಾಗಿ ಬದುಕುತ್ತಾರೋ ಅವರನ್ನು ಜನ ನೆನಪಿಡುತ್ತಾರೆ.
ಸಮಾಜಕ್ಕಾಗಿ ಕೆಲಸ ಮಾಡುವ ಒಂದು ಶ್ರೇಷ್ಠ ಕಾರ್ಯದ ಜೊತೆ ನಾವು ಜೋಡಿಸಿಕೊಂಡಿದ್ದೇವೆ. ನಮ್ಮ ಕಾರ್ಯದ ಮೂಲಕ ಸಮಾಜದಲ್ಲಿ ಪರಿವರ್ತನೆ ಆಗುತ್ತದೆ ಎಂಬ ನಂಬಿಕೆ-ವಿಶ್ವಾಸದಿಂದ ನಾವು ಕೆಲಸ ಮಾಡುತ್ತಿದ್ದೇವೆ. ನಾವು ತೆಗೆದುಕೊಂಡಿರುವ ಪ್ರತಿಯೊಂದು ಯೋಜನೆಗಳೂ ಸಮಾಜಕ್ಕೆ ಶಕ್ತಿಕೊಡುವಂಥ ಪ್ರಕ್ರಿಯೆಗಳಾಗಿವೆ. ಇಂತಹ ನಮ್ಮ ಚಟುವಟಿಕೆಗಳು ಪ್ರಭಾವಿ ಆಗಬೇಕು. ಸಮಾಜದಲ್ಲಿ ಅವು ರೋಲ್ ಮಾಡೆಲ್‌ಗಳಾಗಬೇಕು. ಉದಾ: ಬ್ಲಡ್ ಬ್ಯಾಂಕ್, ಯೋಗ ಇತ್ಯಾದಿ.
ಈ ಸiಯದಲ್ಲಿ ನಾವು ಎಚ್ಚರಿಕೆಯನ್ನೂ ತೆಗೆದುಕೊಳ್ಳಬೇಕಾಗುತ್ತೆ. ಚಟುವಟಿಕೆ ಪ್ರಭಾವಿಯಾದಾಗ ಅದು ನಮ್ಮಿಂದ ಆಗಿದೆ ಎಂಬ ಭಾವ ಬರುತ್ತದೆ. ಇದು ಅಪಾಯಕಾರಿ. ನಮ್ಮ ಪ್ರಕಲ್ಪವನ್ನು ನಮಗಿಂತ ಮುಂಚೆ ಅನೇಕರು ಪ್ರಯತ್ನ ಮಾಡಿ ಬೆಳೆಸಿದ್ದಾರೆ. ಅವರು ಹಾಕಿದ ಗಟ್ಟಿ ಅಡಿಪಾಯದ ಮೇಲೆ ನಾವು ಭವನ ಕಟ್ಟಿದ್ದೇವೆ. ಕೆಲವೊಮ್ಮೆ ಈ ಯಶಸ್ಸು ನಮ್ಮದೇ ಅನ್ನಿಸುತ್ತದೆ. ಆ ಭ್ರಮೆಗೆ ನಾವು ಬೀಳಬಾರದು. ಅದರಿಂದ ಪತನ ಶುರುವಾಗುತ್ತದೆ. ಬಂಡೆಗೆ 100ನೇ ಏಟನ್ನು ನಾವು ಹಾಕಿದಾಗ ಅದು ಒಡೆಯುತ್ತದೆ. ಹಾಗೆಂದು ೧೦೦ನೇ ಏಟಿನಿಂದ ಮಾತ್ರ ಬಂಡೆ ಒಡೆಯಿತು ಎಂಬ ಭ್ರಮೆಗೆ ಒಳಗಾಗಬಾರದು. ಅದರ ಹಿಂದೆ 99 ಏಟುಗಳ ಶ್ರಮವೂ ಇರುತ್ತದೆ. ಹುಬ್ಬಳ್ಳಿಯಲ್ಲಿರುವ ನಮ್ಮ ಶಾಲೆಯೊಂದರಲ್ಲಿ ಇಂದು ೫೫೦ ಮಕ್ಕಳಿದ್ದಾರೆ; ಚೆನ್ನಾಗಿ ನಡೆಯುತ್ತಿದೆ. ಆದರೆ ಅದರ ಪ್ರಾರಂಭದ ದಿನಗಳಲ್ಲಿ ಭಿಕ್ಷೆಬೇಡಿ ಅದನ್ನು ಬೆಳೆಸಬೇಕಾಗಿತ್ತು. ಅವರ ಪರಿಶ್ರಮವನ್ನು ಮರೆಯಬಾರದು.
ಅಹಂಕಾರದಿಂದ ನಮ್ಮ ಪತನವಾಗುತ್ತೆ. ಇದಕ್ಕೆ ಯಾರೂ ಹೊರತಲ್ಲ. ಪ್ರಾಂತ ಸಂಘಚಾಲಕರಿಗೆ ಮಾ|| ಯಾದವರಾವ್‌ಜೀ ಅವರು ಬರೆದ ಪತ್ರ ಓದಿದ ಗುರೂಜೀ ಅವರು ಅದರ ವಾಕ್ಯಗಳ ಬಗ್ಗೆ ಅಸಮ್ಮತಿ ಸೂಚಿಸಿ ಅದನ್ನು ಹರಿದುಹಾಕಿದಾಗ ಯಾದವರಾವ್‌ಜೀ ಅವರಿಗೆ ಅಸಮಾಧಾನವಾಯಿತು. ಆದರೆ ಕೆಲವೇ ಕ್ಷಣಗಳಲ್ಲಿ ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಯಶಸ್ಸು ಸಿಕ್ಕಾಗ ದಾರಿ ತಪ್ಪುವಂಥ ಅವಕಾಶವಿರುತ್ತೆ. ಅದರಿಂದ ಬಚಾವಾಗಬೇಕು.
ನಮ್ಮಲ್ಲಿ ಕೆಲವರಿಗೆ ಅನ್ನಿಸಬಹುದು – ತಮ್ಮನ್ನು ಮ್ಯಾನೇಜ್‌ಮೆಂಟ್ ಕಂಟ್ರೋಲ್ ಮಾಡುತ್ತಿದೆ, ನಿರ್ಣಯಗಳನ್ನು ಕೈಗೊಳ್ಳಲು ಬಿಡುವುದಿಲ್ಲ ಎಂದು. ಪ್ರಯೋಗಶೀಲತೆಗೆ ಎಲ್ಲರಿಗೂ ಅವಕಾಶವಿದೆ. ಆದರೆ ನಾವೆಷ್ಟೇ ಎತ್ತರಕ್ಕೆ ಹೋದರೂ ನಮ್ಮ ಮೂಲದ ಜೊತೆ ಸಂಬಂಧ ಇರಬೇಕು. ಗಾಳಿಪಟದ ಸೂತ್ರ ಹರಿದಾಗ ಅದಕ್ಕೆ ಅಸ್ತಿತ್ವವೇ ಇರುವುದಿಲ್ಲ. ಸೂತ್ರ ಬಂಧನ ಅನ್ನಿಸಬಾರದು.
ನಮಗೆ ಕೊಟ್ಟ ಕೆಲಸದಲ್ಲಿ ನಾವೀನ್ಯತೆ ತರುವ ಬಗ್ಗೆ ಯೋಚಿಸಬೇಕು. ಸಾಹಿತ್ಯಕ್ಕೆ ಮಹತ್ತ ಕಡಮೆಯಾಗಿದೆಯೆಂದು ಅನ್ನಿಸಿದಾಗ ಅದಕ್ಕೆ ಮಹತ್ವವನ್ನು ಹೆಚ್ಚು ಮಾಡುವ ಕೆಲಸ ನಮ್ಮದೇ ಆಗಿದೆ. ನಮ್ಮದಲ್ಲದ ಚಟುವಟಿಕೆಯಲ್ಲಿ ಕೊರತೆ ಕಂಡರೆ ಅದನ್ನು ಸರಿ ಮಾಡಲು ನಾವೇ ಕೈಹಾಕದೇ ಸಂಬಂಧಪಟ್ಟವರಿಗೆ ತಿಳಿಸಬೇಕು. ಹೊಸ ಯೋಜನೆಗೆ ಹೊಳೆದಾಗ ಸಲಹೆ ಕೊಡಬೇಕು. ಅದು ಆಗದಿದ್ದಾಗ ತಪ್ಪು ತಿಳಿಯಬಾರದು.
ರಾಷ್ಟ್ರೋತ್ಥಾನ ಪರಿಷತ್ ಸಂಘದ ಪ್ರೇರಣೆಯಿಂದ ಶುರುವಾದ ಸಂಸ್ಥೆ. ಇದರಲ್ಲಿ ಕೊರತೆಯಾದರೆ ಜನರು ಸಂಘವನ್ನು ಕಟಕಟೆಗೆ ನಿಲ್ಲಿಸುತ್ತಾರೆ. ಹೀಗಾಗಿ ನಮ್ಮ ಮೇಲಿನ ಜವಾಬ್ದಾರಿ ಜಾಸ್ತಿ ಇದೆ.
ಗುರೂಜೀ ಜನ್ಮಶತಾಬ್ದಿ ನಿಮಿತ್ತ ಸಾಧ್ವಿ ರಿತಂಬರಾ ಬೆಳಗಾವಿಗೆ ಬಂದಿದ್ದರು. ಅವರು ಅಲ್ಲಿಂದ ಗೋವಾಕ್ಕೆ ಹೊರಡುವ ಸಮಯಕ್ಕೆ ಮುನ್ನ ಕೆಲ ಕಾರ್ಯಕರ್ತರು ಅವರನ್ನು ನೋಡಲು ಬಂದರು. ಆಗ ಸಾಧ್ವಿ ಮೂರು ವಾಕ್ಯಗಳನ್ನು ಹೇಳಿದರು: ಹಮ್ ಕಿಸ್ ಗಾಡಿಮೇ ಬೈಟೇ ಹೈ ಯೇ ಆರೆಸ್ಸೆಸ್ ಕೀ ಗಾಡೀ ಹೈ (ನಾವು ಯಾವ ರೈಲಲ್ಲಿ ಕುಳಿತಿದ್ದೀವೋ ಅದು ಆರೆಸ್ಸೆಸ್‌ನದ್ದು), ಇಸ್ ಮೇ ದೇನಾ ಹಿ ದೇನಾ ಹೈ, ಕುಚ್ ನಹೀ ಮಿಲನೇ ವಾಲಾ (ಇಲ್ಲಿ ಕೊಡುವುದೊಂದೇ ಆಗಿದೆ, ಪ್ರತಿಯಾಗಿ ಏನೂ ಸಿಗುವುದಿಲ್ಲ) ಯೇ ಜೋ ಆರೆಸ್ಸೆಸ್ ಹೈನ ಯೇ ಸಫೇದ್ ಟವೆಲ್ ಹೈ (RSS ಒಂದು ಬಿಳಿ ಟವಲ್‌ನಂತೆ) ಇಸ್‌ಕೆ ಊಪರ್ ಛೋಟಾ ಭಿ ದಾಗ್ ಲಗೇಗಾ ಉಟಕ್‌ರ್ ದಿಖೇಗಾ (ಇದರ ಮೇಲೆ ಒಂದು ಚಿಕ್ಕ ಕಲೆ ಬಿದ್ದರೂ ಎದ್ದು ಕಾಣುತ್ತೆ) ಛೋಟಾ ಭೀ ದಾಗ್ ನಾ ಲಗೇ ಉಸ್‌ಕಿ ಚಿಂತಾ ಕರೋ (ಚಿಕ್ಕ ಕಲೆಯೂ ಬೀಳದಂತೆ ಎಚ್ಚರವಹಿಸಿ) ಎಂದಿದ್ದರು.
ಹೀಗಾಗಿ ಸಮಾಜ ನಮ್ಮ ಕಡೆ ನೋಡುವ ರೀತಿಯೇ ಬೇರೆಯಾಗಿದೆ. ಸಂಘದ್ದು ಎಂದರೆ ಅದು ಚೆನ್ನಾಗಿರಬೇಕು ಎಂದು ಯೋಚಿಸುತ್ತದೆ. ಈ ಕಾರ್ಯ ಚೆನ್ನಾಗಿ ನಡೆಯಲು ನಾವೇ ಆಧಾರವಾಗಿದ್ದೇವೆ. ಡಾ|| ಜೀ ತಮ್ಮ ಸ್ವಭಾವವನ್ನು ಬದಲಾಯಿಸಿಕೊಂಡು ಸಂಘದ ಶಾಖೆಗೆ ಬಂದ ಸಾವಿರಾರು ಜನರ ಮನ ಪರಿವರ್ತನೆ ಮಾಡಿದರು. ಅಂತೆಯೇ ನಮ್ಮಲ್ಲಿರುವ ಮನುಷ್ಯ ಸಹಜವಾದ ಗುಣಗಳು ನಮ್ಮ ಕಾರ್ಯಕ್ಕೆ ಅಡ್ಡಿಯಾಗುವಂತಿದ್ದರೆ, ಅವುಗಳನ್ನು ಬಿಡಲೂ ಸಿದ್ಧವಾಗಿರಬೇಕು. ಉದಾ:- ರಾತ್ರಿಯ ಹೊತ್ತು ನದಿ ದಾಟಲು ದೋಣಿ ಹತ್ತಿ ಕುಳಿತ ನಾಲ್ವರು ಬೆಳಗಿನವರೆಗೆ ಹುಟ್ಟು ಹಾಕಿದರೂ ಆಚೆ ದಡ ಸೇರಲಿಲ್ಲ. ಏಕೆಂದರೆ ದಡದಲ್ಲಿ ಗೂಟಕ್ಕೆ ಕಟ್ಟಿದ ದೋಣಿಯ ಹಗ್ಗವನ್ನು ಅವರು ಬಿಚ್ಚಿರಲಿಲ್ಲ. ಹೀಗೆ ನಮ್ಮ ಕೆಲವು ಗುಣಗಳನ್ನು ಕಟ್ಟಿಕೊಂಡಿದ್ದರೆ ನಾವು ಮುಂದೆ ಹೋಗಲು ಆಗುವುದಿಲ್ಲ. ಅದಕ್ಕಾಗಿ ವಸ್ತುನಿಷ್ಠ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸತ್ಯನಿಷ್ಠ ವಿಶ್ಲೇಷಣೆ ಮಾಡಿಕೊಳ್ಳಬೇಕು.
ಸಂಘ ಎಂದರೆ ಸಮಯಪಾಲನೆ, ಸರಳತೆ, ಮಾತು ಕೊಟ್ಟಂತೆ ನಡೆಯುವುದು. ಆ ರೀತಿ ನಾವಿದ್ದೇವಾ ಎಂಬ ಬಗ್ಗೆ ವಸ್ತುನಿಷ್ಠ ವಿಶ್ಲೇಷಣೆ ಮಾಡಿಕೊಳ್ಳಬೇಕಿದೆ. ನಾವು ನಮ್ಮ ಪ್ರಕಲ್ಪದ ಬಗ್ಗೆ ವಸ್ತುನಿಷ್ಠ ವಿಶ್ಲೇಷಣೆ ಮಾಡಿ, ಅದರ ಕೊರತೆಯನ್ನು ತುಂಬುತ್ತೇವೆ ಮತ್ತು ಮುಂದಕ್ಕೆ ಹೋಗುತ್ತೇವೆ ಎಂಬುದು ನಮ್ಮ ನಿಲವಾಗಬೇಕು. ಮನುಷ್ಯನ ಸ್ವಭಾವವಾದ, ದೋಷಗಳನ್ನು ಬೇರೆಯವರ ಮೇಲೆ ಹಾಕುವುದು ಸರಿಯಲ್ಲ. (ಉದಾ:- ಮಗುವೊಂದು ಅಮ್ಮನ ಬಳಿ ಬಂದು ತನ್ನ ಚಡ್ಡಿಯಲ್ಲಿ ಯಾರೋ ಉಚ್ಚೆ ಹೊಯ್ದಿದ್ದಾರೆ ಎಂದ ಹಾಗೆ.)
ನಮ್ಮ 34 ಶಾಲೆಗಳಲ್ಲಿ 12 ಸಾವಿರ ಮಕ್ಕಳಿದ್ದಾರೆ. ಅವರು ಯೋಗ್ಯವ್ಯಕ್ತಿಗಳಾಗಲು ಏನೇನು ಮಾಡಬೇಕೊ ಅದೆಲ್ಲವನ್ನೂ ಮಾಡಬೇಕು. ಇಂದಿನ ದೊಡ್ಡ crisis (ಸಂಕಟ) ಏನೆಂದರೆ ಮನೆಗಳಲ್ಲಿ ಮಕ್ಕಳಿಗೆ ಏನೂ ಕಲಿಸೋದಿಲ್ಲ. ಊಟ ಮಾಡುವುದನ್ನೂ ಕೂಡ. ಹೀಗಾಗಿ ಮಕ್ಕಳಿಗೆ ಸಣ್ಣಸಣ್ಣ ಸಂಗತಿಗಳನ್ನು ಕಲಿಸುವುದೂ ನಮ್ಮದೇ ಜವಾಬ್ದಾರಿ ಆಗಿದೆ. civiv sense (ನಾಗರಿಕ ಪ್ರಜ್ಞೆ) ನಮ್ಮ ದೇಶದಲ್ಲಿ ಶೂನ್ಯ. ಮಕ್ಕಳಲ್ಲಿ ಅದನ್ನು ಕಲಿಸಬೇಕಾದ ಅಗತ್ಯವಿದೆ. ಮಕ್ಕಳು 4-ವ8 ರ್ಷಗಳ ಕಾಲ ನಮ್ಮ ಬಳಿ ಇರ್ತಾರೆ. ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದು ನಮ್ಮದೇ ಜವಾಬ್ದಾರಿಯಾಗಿದೆ.
ಈ ವರ್ಷ ಮಾ|| ಯಾದವರಾವ್‌ಜೀ ಅವರ ಜನ್ಮಶತಾಬ್ದಿ ವರ್ಷ. ರಾಷ್ಟ್ರೋತ್ಥಾನ ಪರಿಷತ್ತಿಗೂ 5೦ನೇ ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಒಂದೊಂದು ಪ್ರಕಲ್ಪಗಳೂ ನಮ್ಮ ಕಲ್ಪನೆಯಂತೆ ಚೆನ್ನಾಗಿ ಕೆಲಸ ಮಾಡುವಂತಾಗಬೇಕು. ಯಾದವರಾವ್‌ಜೀಯವರ ವಿಶೇಷತೆಯೆಂದರೆ ಸಣ್ಣ ಸಣ್ಣ ಸಂಗತಿಗಳೂ ಆಗ್ರಹಪೂರ್ವಕ ಮಾಡಬೇಕೆಂಬ ಸ್ವಭಾವ. ಕವರ್‌ನ ಒಳಗಿನ ಕಾಗದಕ್ಕೆ ಅಂಟು ಅಂಟದ ಹಾಗೆ ಹೇಗೆ ಅಂಟು ಹಾಕಬೇಕು. ಕ್ಯಾಲೆಂಡರ್‌ನ ತಿಂಗಳುಗಳ ಹಾಳೆಯನ್ನು ಹೇಗೆ ಬದಲಿಸಬೇಕು – ಹೀಗೆ ಸಣ್ಣ ಸಂಗತಿಗಳ ಬಗ್ಗೆ ಅವರ ಆಗ್ರಹವಿತ್ತು. ಅವರ ಅನೇಕ ಮುಖಗಳ ಪರಿಚಯ ಮಾಡಿಕೊಳ್ಳುವುದಕ್ಕಾಗಿ ಯಾದವರಾವ್‌ಜೀ ಅವರ ವ್ಯಕ್ತಿಚಿತ್ರಣದ ’ಜನಮನ ಶಿಲ್ಪಿ’ ಕೃತಿಯನ್ನು ನೀವೆಲ್ಲ ಓದಬೇಕು.
ನಾವು ಈ ರೀತಿಯ ಗುಣಗಳನ್ನು ಬೆಳೆಸಿಕೊಳ್ಳುತ್ತಾ ರಾಷ್ಟ್ರೋತ್ಥಾನ ಪರಿಷತ್ತಿನ ಎಲ್ಲಾ ಚಟುವಟಿಕೆಗಳಿಗೆ ಶಕ್ತಿ ತುಂಬುವ ರೀತಿಯಲ್ಲಿ ಮತ್ತು ನಾವು ಮಾಡುವ ಒಂದೊಂದು ಚಟುವಟಿಕೆಯೂ ಒoಜeಟ (ಮಾದರಿ) ಆಗುವ ಥರದಲ್ಲಿ ನಮ್ಮನ್ನು ನಾವು ಬೆಳೆಸಿಕೊಳ್ಳುವ ಪ್ರಯತ್ನ ಮಾಡೋಣ.
(ಸಂದರ್ಭ : ರಾಷ್ಟ್ರೋತ್ಥಾನ ಪರಿಷತ್ ನ ಕಾರ್ಯಕರ್ತರ ಅಭ್ಯಾಸ ವರ್ಗ 9, 10 ಅಕ್ಟೋಬರ್ 2014, ಶ್ರೀ ಕ್ಷೇತ್ರ ಆದಿಚುಂಚನಗಿರಿ)
Dear admin
please make the provision for downloading the articles worth preserving for future needs.
I wish to down load this article. Please advise.