ಮೈಸೂರು, ಸೆಪ್ಟೆಂಬರ್ 23: ಒಳ್ಳೆಯದನ್ನು ಮತ್ತು ಅಧರ್ಮವಲ್ಲದ್ದನ್ನು ಧರ್ಮ ಎನ್ನಲಾಗುತ್ತದೆ, ಹಿಂದೂ ಧರ್ಮ ಅಥವಾ ಹಿಂದುತ್ವ ಎನ್ನುವುದು ಒಂದು ಜೀವನ ವಿಧಾನ ಎಂದು ಸರ್ವೋಚ್ಛ ನ್ಯಾಯಾಲಯವೇ ಅನೇಕ ಬಾರಿ ಹೇಳಿದೆ. ಸನಾತನ ಧರ್ಮ ಎಂದು ನಾವು ಯಾವುದನ್ನು ಕರೆಯುತ್ತೇವೆಯೋ ಅದು ಹಿಂದುತ್ವವೇ ಆಗಿದೆ ಎಂದು ಖ್ಯಾತ ಚಿಂತಕರು ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಡಾ. ಅಜಕ್ಕಳ ಗಿರೀಶ್ ಭಟ್ ಅವರು ತಿಳಿಸಿದರು.
ಮಂಥನ ಮೈಸೂರು ವೇದಿಕೆಯ ವತಿಯಿಂದ ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಹಿಂದುತ್ವ-ಬಹುತ್ವ’ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕತೆ ಎನ್ನುವುದು ನಮ್ಮ ಜೀವನವನ್ನು ಏಕರೂಪಗೊಳಿಸುತ್ತಿದೆ. ಇದು ಸ್ಥಳೀಯ ಆಹಾರ, ಭಾಷೆ, ಸಂಸ್ಕೃತಿ ಇತ್ಯಾದಿಗಳಲ್ಲಿನ ಬಹುತ್ವವನ್ನು ನಾಶಗೊಳಿಸುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದರು.
ಸೃಷ್ಟಿಯ ಬಗ್ಗೆ ಇರುವ ವಿಶಿಷ್ಟ ದೃಷ್ಟಿಕೋನ ಮತ್ತು ದೇವರನ್ನು ಮನುಷ್ಯರಂತೆಯೇ ಪರಿಗಣಿಸುವುದು ಹಿಂದುಗಳ ವಿಶೇಷ ಪರಿಕಲ್ಪನೆಯಾಗಿದ್ದು, ಇದು ಇತರ ರಿಲಿಜನ್ ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇಲ್ಲಿ ಬಹುತ್ವ ಇರುವುದರಿಂದಲೇ ಎಲ್ಲ ಜಾತಿಯವರಿಗೂ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಮತ್ತು ಅದರಲ್ಲಿ ಸಾಧನೆ ಮಾಡುವ ಅವಕಾಶ ಮುಕ್ತವಾಗಿದೆ ಎಂದು ತಿಳಿಸಿದರು.
ಭಾರತದಲ್ಲಿ ಕಲೆಗಳು ಬಹು ವಿಧದಲ್ಲಿ ಬೆಳೆಯಲು ಪುರಾಣಗಳೇ ಮೂಲ ಆಧಾರವಾಗಿದ್ದು, ಹಿಂದುತ್ವದಲ್ಲಿ ಕಲೆಯೂ ಒಂದು ಆರಾಧನಾ ಪ್ರಕಾರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಉಪನ್ಯಾಸದ ನಂತರ ಸಭಿಕರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮ ನೆರವೇರಿತು.