
ಬೆಂಗಳೂರು: ನಾವು ಸಾಂಸ್ಕೃತಿಕ ಹಿಂದುತ್ವದಿಂದ, ರಾಜಕೀಯ ಹಿಂದುತ್ವದ ಕಡೆಗೆ ಮುಖ ಮಾಡುತ್ತಿದ್ದೇವೆ. ಏಕೆಂದರೆ ಸಾಂಸ್ಕೃತಿಕವಾಗಿ ನಮ್ಮ ರಾಷ್ಟ್ರದೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳಬೇಕಾದವುಗಳನ್ನು ನಾವು ರಾಜಕೀಯ ಕಾರಣಕ್ಕೆ ನಿರ್ಲಕ್ಷಿಸುತ್ತಿದ್ದೇವೆ. ಈ ವಿಚಾರದ ಕುರಿತು ಲೋಹಿಯಾ ಅವರ ಚಿಂತನೆ ಅಮೋಘವಾದದ್ದು. ಅವರು ಸಮಾಜವಾದವನ್ನು ಭಾರತೀಯ ದೃಷ್ಟಿಕೋನಕ್ಕೆ ತಕ್ಕಂತೆ ಅನುಸರಿಸಿದ ಮಹಾನ್ ಚಿಂತಕ ಎಂದು ಚಿಂತಕ ಹಾಗೂ ಇತಿಹಾಸಕಾರ ಡಾ.ಜಿ.ಬಿ.ಹರೀಶ ಹೇಳಿದರು.
ಮಂಥನ ಕರ್ನಾಟಕದ ವತಿಯಿಂದ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಭಾರತೀಯ ಸಂಸ್ಕೃತಿ ಕಥನ ಚಿಂತನ ಸಂವಾದ ಕಾರ್ಯಕ್ರಮದ ಮೊದಲ ದಿನದ ಕಾರ್ಯಕ್ರಮ ಡಾ.ರಾಮ್ ಮನೋಹರ ಲೋಹಿಯಾ ಅವರ ವಿಚಾರಧಾರೆಯ ಕುರಿತು ಶನಿವಾರ ನಡೆಯಿತು.

ಚೀನಾ ಯಾವತ್ತಿಗೂ ನಮಗೆ ಸಮಸ್ಯೆಯೇ ಆಗಿದೆ. ಆದರೆ ಕೆಲವು ರಾಜಕೀಯ ಭಿನ್ನತೆಗಳು ಎದುರಾದರೂ ಭೂತಾನ್, ನೇಪಾಳ, ಟಿಬೆಟ್, ಮಯನ್ಮಾರ, ಶ್ರೀಲಂಕಾದ ಜೊತೆಗೆ ಒಳ್ಳೆಯ ಸಂಬಂಧವನ್ನು ಮುಂದುವರೆಸಬೇಕು ಎಂಬುದು ಲೋಹಿಯಾ ಅವರ ಸಾಂಸ್ಕೃತಿಕ ರಾಷ್ಟ್ರೀಯತೆಯಾಗಿತ್ತು. ಆದರೆ ಇಂದು ನಮ್ಮ ಸಾಂಸ್ಕೃತಿಕ ನೆನಪಿನಲ್ಲಿ ಭಾರತದಿಂದಲೇ ಬೇರೆಯಾದ ಈ ಯಾವ ದೇಶಗಳೂ ಉಳಿದಿಲ್ಲ. ಅಲ್ಲಿನ ಸಂಸ್ಕೃತಿಯನ್ನು ಅರಿಯುವ ಪ್ರಯತ್ನಗಳೂ ಆಗಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ನಮ್ಮ ದೇಶದ ಈಶಾನ್ಯ ರಾಜ್ಯಗಳೂ ನಮ್ಮವೇ ಎಂಬ ಭಾವಪ್ರಕಟವಾಗುತ್ತಿಲ್ಲ. ಅದಕ್ಕೆ ನಿದರ್ಶನವಾಗಿ ಕರ್ನಾಟದಲ್ಲಿ ಕೇರಳದ ಓಣಂ ಆಚರಿಸುವಂತೆ ಈಶಾನ್ಯ ರಾಜ್ಯಗಳ ಯಾವುದೇ ಹಬ್ಬವನ್ನು ನಾವು ಆಚರಿಸುವುದಿಲ್ಲ ಎಂದು ನುಡಿದರು.
ಲೋಹಿಯಾ ಅವರು ನಾವು ಯಾವ ಸ್ಥಾನಕ್ಕೆ ಹೋಗುವೆವೋ ಅಲ್ಲಿನ ಭಾಷೆಯನ್ನು ಕಲಿಯಬೇಕು ಎಂಬುದನ್ನು ಸ್ವತಃ ಪಾಲಿಸಿ, ಪ್ರತಿಪಾದಿಸಿದವರು. ಇಂಗ್ಲೀಷ್ ಸೇರಿದಂತೆ ಅನೇಕ ವಿದೇಶಿ ಭಾಷೆಗಳಲ್ಲಿ ಸ್ವತಃ ಪ್ರಾವೀಣ್ಯವಿದ್ದರೂ ನಮ್ಮ ಆಲೋಚನೆಯ ಭಾಷೆ ಭಾರತೀಯ ಭಾಷೆಯೇ ಆಗಿರಬೇಕು ಎಂದರು. ಇಂದಿನ ಭಾಷಾಪರ ಹೋರಾಟಗಾರರು ಲೋಹಿಯಾ ಅವರನ್ನು ವಿರೋಧಿಸುತ್ತಾರೆ ಏಕೆಂದರೆ ಅವರು ಇಂಗ್ಲೀಷ್ ನ ವಿರೋಧಿಯಾಗಿದ್ದರು. ನಮ್ಮಲ್ಲಿನ ಅನೇಕ ಭಾಷಾಪರ ಹೋರಾಟಗಾರರು ಹಿಂದಿಯನ್ನು ವಿರೋಧಿಸುವವರಿದ್ದಾರೆ ಆದರೆ ಇಂಗ್ಲೀಷನ್ನು ತಿರಸ್ಕರಿಸುವವರು ಯಾರೂ ಇಲ್ಲ ಎಂದು ಅಭಿಪ್ರಾಯಪಟ್ಟರು.

ಭಾರತೀಯ ದೇಶ ಎರಡು ಭಾಷೆಯನ್ನು ತುಂಬಾ ಚೆನ್ನಾಗಿ ಬಲ್ಲರು. ರಾಮಾಯಣದ ಭಾಷೆ ಮತ್ತು ಮಹಾಭಾರತದ ಭಾಷೆ ಎಂದಿದ್ದರು. ನಮ್ಮ ಪುರಾಣಗಳನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ರಾಮ, ಕೃಷ್ಣ, ಶಿವ ಈ ನಾಡಿನ ನಾಯಕರು. ಅವರುಗಳನ್ನು ಇತಿಹಾಸದ ನೆಲೆಗಟ್ಟಿನಲ್ಲಿ ನೋಡುತ್ತಾ ಹೋದರೆ ಪಾಶ್ಚತ್ಯರ ನೆಲೆಗಟ್ಟಿನಲ್ಲಿ ನಮ್ಮ ನಂಬಿಕೆಗಳನ್ನು ನೋಡಿದಂತಾಗುತ್ತದೆ ಎಂಬುದು ಲೋಹಿಯಾ ಅವರ ಅಭಿಪ್ರಾಯವಾಗಿತ್ತು. ನಮ್ಮ ಪುರಾಣಗಳು ಈ ದೇಶದ ಜನ ಕಟ್ಟಿಕೊಂಡಿರುವ ನಂಬಿಕೆ. ಅವುಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮನೋಭಾವ ಮೂಡಬೇಕು ಎಂದರು.
ಕಾರ್ಯಕ್ರಮದಲ್ಲಿ ಚಿಂತಕರು, ಲೇಖಕರು, ಉಪನ್ಯಾಸಕರು, ಪತ್ರಕರ್ತರು ಉಪಸ್ಥಿತರಿದ್ದರು.
