ಮಂಗಳೂರು: ಇತ್ತೀಚೆಗೆ, ದೇಶದಲ್ಲಿ ರಾಜಕೀಯ ಲಾಭಕ್ಕೋಸ್ಕರ, ಸಮಾಜದ ಸ್ವಾಸ್ಥ್ಯ ಕೆಡಿಸುವ ಸಲುವಾಗಿ ಮಹಾನ್ ದೇಶಭಕ್ತನಾಗಿದ್ದ ವಿನಾಯಕ್ ದಾಮೋದರ ಸಾವರ್ಕರ್ ಅವರನ್ನು ಹೇಡಿಯ ರೀತಿಯಲ್ಲಿ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿರುವುದು ಬಹಳ ಬೇಸರದ ಸಂಗತಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಬೌದ್ಧಿಕ್ ಪ್ರಮುಖ್ ರಾಜೇಶ್ ಹೇಳಿದರು.

ಮಂಥನ’ ವೈಚಾರಿಕ ವೇದಿಕೆಯ ಕಾವೂರು ನಗರದ ಐದನೇ ಆವೃತ್ತಿಯ ಕಾರ್ಯಕ್ರಮದಲ್ಲಿ ವೀರ ಸಾವರ್ಕರ್ ಜಯಂತಿಯ ಹಿನ್ನಲೆಯಲ್ಲಿ, ಸಾವರ್ಕರ್ ಅವರು ತಮ್ಮ ಇಡೀ ಬದುಕನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟರು ಎಂಬುದನ್ನು ವಿಸ್ತಾರವಾಗಿ ವಿವರಿಸಿದರು.

ಬಾಲ್ಯದಿಂದಲೇ ಶಿವಾಜಿ ಮಹಾರಾಜರ ಅದರ್ಶಗಳಿಂದ ಪ್ರೇರಣೆಗೊಂಡಿದ್ದ ವಿನಾಯಕ ದಾಮೋದರ ಸಾವರ್ಕರ್, ಬಾಲಗಂಗಾಧರ ತಿಲಕ್ ಅವರ ಪ್ರಭಾವದಿಂದಾಗಿ ‘ಅಭಿನವ ಭಾರತ’ ಎನ್ನುವ ಕ್ರಾಂತಿಕಾರಿಗಳ ಸಂಘಟನೆಯನ್ನು ಕಟ್ಟಿ, ಮೊದಲ ಬಾರಿಗೆ ವಿದೇಶಿ ವಸ್ತುಗಳನ್ನು ಸುಡುವ ಮತ್ತು ಸ್ವದೇಶಿ ಬಟ್ಟೆಗಳನ್ನು ಧರಿಸಬೇಕೆಂದು ಸಮಾಜದಲ್ಲಿ ಜಾಗೃತಿ ಮೂಡಿಸಿದ್ದರು. 1857ರಲ್ಲಿ ಬ್ರೀಟಿಷರು ‘ಸಿಪಾಯಿ ದಂಗೆ’ ಎಂದು ಕರೆಯುವ ಘಟನೆ, ನಿಜಕ್ಕೂ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಆಗಿತ್ತು ಎಂದು ತಮ್ಮ ಲೇಖನಗಳ ಮೂಲಕ ತಿಳಿಸಿ, ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಕೀರ್ತಿ ಸಾವರ್ಕರ್ ಅವರಿಗೆ ಸಲ್ಲುತ್ತದೆ ಎಂದರು.


ಮುಂದೆ ಇಂಗ್ಲೆಂಡಿನಲ್ಲಿ ಅನೇಕ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಪಾಲ್ಗೊಂಡ ಸಾವರ್ಕರ್ ಅವರು, 1910ರಲ್ಲಿ 25 ವರ್ಷಗಳ ಎರಡು ಅವಧಿಯ ಜೀವಾವಧಿ ಶಿಕ್ಷೆಗೆ ಒಳಗಾಗುತ್ತಾರೆ. ಹಡಗಿನಿಂದ ಜಿಗಿದು, ಸಮುದ್ರವನ್ನು ಈಜಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಾರೆ. ಅತ್ಯಂತ ಕಠಿಣವಾಗಿದ್ದ, ಕರಿನೀರ ಶಿಕ್ಷೆ ಗೆ(ಕಾಲಾಪಾನಿ) ಒಳಗಾದ ಸಾವರ್ಕರ್ ಅವರು ಧೈರ್ಯದಿಂದಲೇ ಶಿಕ್ಷೆಯನ್ನು ಅನುಭವಿಸುತ್ತಾರೆ. ತಾವು ಇರುವ ಅಂಡಮಾನ್ ಜೈಲಿನಲ್ಲಿ ನಡೆಯುತ್ತಿದ್ದ ಕೈದಿಗಳ ಮತಾಂತರ, ಜಾತಿ-ಧರ್ಮದ ತಾರತಮ್ಯ ತೊಲಗಿಸಿ, ಸಾವರಕರ್ ಕ್ರಾಂತಿಕಾರಿಯಷ್ಟೇ ಆಗಿರದೆ, ಸುಧಾರಣವಾದಿಯು ಸಹ ಆಗಿದ್ದರು ಎಂದು ಅಭಿಪ್ರಾಯಪಟ್ಟರು.

ತಮ್ಮ ಬಿಡುಗಡೆಯ ನಂತರ ರತ್ನಾಗಿರಿಯಲ್ಲಿ ‘ಪತಿತ ಪಾವನ ಮಂದಿರ’ ಸ್ಥಾಪನೆ, ಸಹಭೋಜನ, ಅರಿಶಿನ-ಕುಂಕುಮ ವಿತರಣೆ ಹೀಗೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದ ದಮನಿತ ವರ್ಗವನ್ನು ಮುಖ್ಯ ವಾಹಿನಿಗೆ ತಂದು, ಆ ಕಾಲಘಟ್ಟದಲ್ಲಿ ಅವ್ಯಾಹತ ವಾಗಿ ನಡೆಯುತ್ತಿದ್ದ ಮತಾಂತರಕ್ಕೆ ಕಡಿವಾಣ ಹಾಕಿ, ಹಿಂದೂಗಳನ್ನು ಸಂಘಟಿಸಿದರು. ಸಾವರ್ಕರ್ ಅವರ ಬದುಕಿನ ರೋಚಕತೆ, ಅವರ ಸಮರ್ಪಣಾ ಭಾವ, ಅವರ ದೇಶಭಕ್ತಿ ಮತ್ತು ಅವರ ದೂರದೃಷ್ಟಿತನ ಎಂಥದ್ದು ಎಂಬುದನ್ನು ನಿಜದರ್ಶನ ಮಾಡಿಸುವ ಅಗತ್ಯತೆ ಇದೆ. ಅವರ ಬದುಕಿನ ಕುರಿತು ಹೆಚ್ಚಿನ ಅಧ್ಯಯನಗಳನ್ನು ಮಾಡಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಹೆಚ್ಚೆಚ್ಚು ಆಗಬೇಕಾಗಿದೆ ಎಂದು ತಿಳಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.