ಲೇಖನ: ದು.ಗು.ಲಕ್ಷ್ಮಣ್

ಅದೆಂಥ ಪುಣ್ಯದ ಸಾವು ಎಂದರು ಹಲವರು. ಅಂತಹ ಸಾವು ಸಿಗಬೇಕಿದ್ದರೆ ಪುಣ್ಯ ಮಾಡಿರಬೇಕೆಂದು ಇನ್ನು ಕೆಲವರು ಹೇಳಿದರು. ಯಾಕೆಂದರೆ ಭಾನುಪ್ರಕಾಶ್‌ ತಾನು ನಂಬಿದ ಧ್ಯೇಯ, ದೇಶ, ಆದರ್ಶಕ್ಕಾಗಿ ಕೆಲಸ ಮಾಡುತ್ತ ಮಾಡುತ್ತಲೇ ಸಾವಿಗೀಡಾಗಿದ್ದರು(ಪತತ್ವೇಶ ಕಾಯೋ ನಮಸ್ತೇ ನಮಸ್ತೇ ಎಂದು ಸಂಘದ ಪ್ರಾರ್ಥನೆಯೇ ಇದೆಯಲ್ಲ).ರಾಜ್ಯ ಸರ್ಕಾರದ ಅನಿರೀಕ್ಷಿತ ಬೆಲೆ ಏರಿಕೆ ಪ್ರತಿಭಟಿಸಿ, ಜನಪರ ಕಾರ್ಯದ ಭಾಗವಾಗಿ ಭಾಷಣ ಮಾಡಿ, ಭಜನೆ ಹೇಳಿಕೊಡುತ್ತಿರುವಾಗಲೇ ನಿತ್ರಾಣಗೊಂಡು ಕುಸಿದರು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮರಳಿ ಬಾರದ ಲೋಕಕ್ಕೆ ನಡೆದಿದ್ದರು.

ಭಾನುಪ್ರಕಾಶ್‌ ಹೀಗೆ ಸಾವಿಗೀಡಾದರೆಂಬ ಸುದ್ದಿ ತಿಳಿದಾಗ ನನಗೆ ತಕ್ಷಣ ನೆನಪಾಗಿದ್ದು ಅಂತಹುದೇ ಬಗೆಯಲ್ಲಿ ಸುಖ ಮರಣವಪ್ಪಿದ ನಮ್ಮ ಹಿಂದಿನ ರಾಷ್ಟ್ರಪತಿಗಳಾಗಿದ್ದ ಡಾ.ಅಬ್ದುಲ್‌ ಕಲಾಂ ಹಾಗೂ ಕರ್ನಾಟಕ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಡಾ.ವಿ.ಎಸ್. ಆಚಾರ್ಯ, ಅವರಿಬ್ಬರೂ ಹೀಗೇ ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಉಸಿರು ಚೆಲ್ಲಿದ್ದರು.‌

ಶರಣರ ಗುಣವನ್ನು ಮರಣದಲ್ಲಿ ನೋಡು ಎಂಬ ಮಾತಿದೆ. ಭಾನು ಅಕಾಲದಲ್ಲಿ ತೀರಿಕೊಂಡಾಗ ಆ ಮಾತು ಮತ್ತೆ ನೆನಪಾಯಿತು. ಭಾನು ತೀರಿಕೊಂಡರಂತೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ್ದೇ ತಡ, ಮತ್ತೂರು ಸುತ್ತುಮುತ್ತಲಿನ ಹಳ್ಳಿಗಳ ಜನರು, ಲಂಬಾಣಿ ತಾಂಡದವರು, ತೋಟ, ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಕೃಷಿ ಕಾರ್ಮಿಕರು, ರೈತರು ಕೆಲಸ ಅಲ್ಲಿಗೇ ನಿಲ್ಲಿಸಿ ಮತ್ತೂರಿನಲ್ಲಿದ್ದ ಭಾನು ಅವರ ಮನೆಗೆ ಓಡೋಡಿ ಬಂದರು. ಜಾತಿ ಸಂಕೋಲೆ ಮುರಿದು ಭಾನು ಮನೆಯೊಳಗೆ ಧಾವಿಸಿ ಪಾರ್ಥಿವಶರೀರ ಕಂಡು ಗದ್ಗದಿತರಾದರು. ಟಿವಿ ಮೂಲಕ ಸುದ್ದಿ ಕೇಳಿದ ಪರ ಊರ ನಿವಾಸಿಗಳು ಊರಿಗೆ ಫೋನ್‌ ಮಾಡಿ ಸುದ್ದಿ ಖಚಿತಪಡಿಸಿಕೊಂಡು ಫೋನ್‌ ಆಫ್‌ ಮಾಡದೆ ಅತ್ತವರೆಷ್ಟೋ ಮಂದಿ. ಶಿವಮೊಗ್ಗದ ಶಾಸಕ ಚನ್ನಬಸಪ್ಪ(ಚನ್ನಿ), ಮತ್ತೂರಿನ ಮಹೇಶ ಅವರಂತೂ ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ನೋಡಿದವರಿಗೂ ಕಣ್ಣೀರು ತರಿಸುವಂತಿತ್ತು. ಐದು ಸಾವಿರಕ್ಕೂ ಹೆಚ್ಚು ಜನರು ದುಃಖ, ದುಗುಡ ಮುಖದಲ್ಲಿ ತುಂಬಿಕೊಂಡು ತಮ್ಮ ಕುಟುಂಬದ ಯಜಮಾನನನ್ನೇ ಕಳೆದುಕೊಂಡಂತೆ ತಲ್ಲಣಗೊಂಡಿದ್ದರು.

ಮತ್ತೂರಿನ ಎಂ.ಬಿ.ಭಾನುಪ್ರಕಾಶ್‌ ಅವರ ವ್ಯಕ್ತಿತ್ವವೇ ಅಂತಹುದಾಗಿತ್ತು. ಸಂಘದ ನಿಷ್ಠಾವಂತ ಕಟಿಬದ್ಧ ಸ್ವಯಂಸೇವಕ; ಬಿಜೆಪಿಯ ಶಾಸಕನಾಗಿ ವಿವಿಧ ಉನ್ನತ ಹುದ್ದೆಗಳನ್ನು ನಿರ್ವಹಿಸಿದರೂ ರಾಜಕೀಯದ ಕೆಸರು ಅಂಟಿಸಿಕೊಳ್ಳದ ವಿರಳ, ಆದರ್ಶ ರಾಜಕೀಯ ಮುಖಂಡ. ಹಲವು ಕಾರ್ಯಕರ್ತರ ಪಾಲಿಗೆ ಮಾರ್ಗದರ್ಶಕ, ಸಂಕಟವಿಮೋಚಕ. ಎಂತಹುದೇ ಸಮಸ್ಯೆ ಇರಲಿ, ಪರಿಸ್ಥಿತಿ ಎಷ್ಟೇ ಬಿಗಡಾಯಿಸಿರಲಿ, ಭಾನು ಅಲ್ಲಿಗೆ ಬಂದರೆಂದರೆ ಆ ಸಮಸ್ಯೆ, ಪರಿಸ್ಥಿತಿ ತಿಳಿಯಾಗಿ ಪರಿಹಾರವಾಗುತ್ತಿತ್ತು. ಒಬ್ಬ ಜನನಾಯಕನಿಗಿರಬೇಕಾದ ಸದ್ಗುಣಗಳೆಲ್ಲವೂ ಭಾನು ಅವರಿಗಿತ್ತು ಎಂದರೆ ಅದು ಉತ್ಪ್ರೇಕ್ಷೆಯ ಮಾತಲ್ಲ.

ಎಪ್ಪತ್ತರ ದಶಕದಲ್ಲಿ ಮಡಿವಂತ ಊರೆನಿಸಿಕೊಂಡಿದ್ದ ಶಿವಮೊಗ್ಗ ಸಮೀಪದ ಮತ್ತೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಆರಂಭಿಸಲು ಅದೆಷ್ಟು ಪ್ರಯತ್ನಗಳಾದವು, ಅದೆಷ್ಟು ಹಿರಿಯರು ಶ್ರಮಿಸಿದರು ಎನ್ನುವುದೇ ಒಂದು ರೋಚಕ ಇತಿಹಾಸ. ಸಂಘಕಾರ್ಯಕ್ಕೆ ಕಬ್ಬಿಣದ ಕಡಲೆಯಾಗಿದ್ದ ಮತ್ತೂರು ಸಂಘಕಾರ್ಯದ ಶಕ್ತಿ ಕೇಂದ್ರವಾಗಿ ಮಾರ್ಪಾಡಾಗಿದ್ದು ಭಾನುವಿನಂತಹ ಹಲವು ತ್ಯಾಗಶೀಲ ,ಸಮರ್ಪಿತ ಕಾರ್ಯಕರ್ತರು ಹರಿಸಿದ ನಿರಂತರ ಬೆವರಹನಿಗಳಿಂದಾಗಿ. ಸಂಘದ ಜ್ಯೇಷ್ಠ ಪ್ರಚಾರಕರಾಗಿದ್ದ ಸ್ವರ್ಗೀಯ ನ.ಕೃಷ್ಣಪ್ಪನವರು ಆಗಾಗ ಹೇಳುತ್ತಿದ್ದುದುಂಟು – ʼನಮ್ಮ ಸಮಾಜದ ಎಲ್ಲ ಒಳ್ಳೆಯ ಸಂಗತಿಗಳನ್ನೂ ನಾವು ಜೋಪಾನವಾಗಿ ಉಳಿಸಬೇಕು, ಬೆಳೆಸಲೂ ಬೇಕು. ಅಂತೆಯೇ ಕೆಡುಕಿನ ಸಂಗತಿಗಳನ್ನು ಮುಲಾಜಿಲ್ಲದೆ ತ್ಯಜಿಸಬೇಕುʼ. ಕೃಷ್ಣಪ್ಪನವರ ಈ ಮಾತನ್ನು ತನ್ನ ಬದುಕಿನ ಮೂಲಕ ಕೃತಿಗಿಳಿಸಿದ ವ್ಯಕ್ತಿಗಳಲ್ಲಿ ಭಾನು ಅತಿಮುಖ್ಯರು. ಮಡಿವಂತಿಕೆ, ಅಸ್ಪೃಶ್ಯತಾಭಾವವನ್ನು ತನ್ನ ಸ್ನೇಹದ ನಡೆನುಡಿಗಳ ಮೂಲಕ ನಿವಾರಿಸಿ, ಸಾಮಾಜಿಕ ಸಾಮರಸ್ಯ ಎಲ್ಲೆಡೆ ಪಸರಿಸುವಂತೆ ಭಾನು ಶ್ರಮಿಸಿದರು. ಊರಲ್ಲಿ ನಡೆಯುತ್ತಿದ್ದ ರಥೋತ್ಸವ, ಮಾರಮ್ಮ ಜಾತ್ರೆ ಭಾನು ಅವರ ದೃಷ್ಟಿಯಲ್ಲಿ ಸಮಾನ ಶ್ರದ್ಧೆಯ ಉತ್ಸವಗಳಾಗಿದ್ದವು. ಅವೆರಡೂ ಅವ್ಯವಸ್ಥೆ ಇಲ್ಲದೆ ಚೆನ್ನಾಗಿ ನಡೆಯುವಂತೆ ಮುತುವರ್ಜಿ ವಹಿಸಿದ್ದರು.

ಮತ್ತೂರನ್ನು ಸಂಸ್ಕೃತ ಗ್ರಾಮವೆಂದು ಘೋಷಿಸಿದಾಗ ಭಾನು ಅವರ ಮಸ್ತಿಷ್ಕದಲ್ಲಿ ಹೊಳೆದಿದ್ದುದು – ಮತ್ತೂರು ವೇದವಿದ್ವಾಂಸರ ತವರೂರು ಆಗಬೇಕೆಂದಲ್ಲ. ಪ್ರಾಚೀನ ಶಾಸ್ತ್ರಗ್ರಂಥಗಳ ಅಧ್ಯಯನ, ವಿಮರ್ಶೆಯ ಕೇಂದ್ರವಾಗಬೇಕೆಂದಲ್ಲ. ಆದರೆ ಮತ್ತೂರಿನಲ್ಲಿ ಜಾತೀಯತೆ ಅಳಿಯಬೇಕು. ಜಾತಿ-ಜಾತಿಗಳ ನಡುವೆ ಜಗಳ ನಿಲ್ಲಬೇಕು. ಊರಿನ, ಕುಟುಂಬಗಳ ನಡುವಣ ಕಲಹಗಳು ಪೊಲೀಸ್‌ ಠಾಣೆಯ ಮೆಟ್ಟಿಲೇರಬಾರದು. ಊರಿನ ಹಿರಿಯರ ಸಮ್ಮುಖದಲ್ಲೇ ಪರಿಹಾರವಾಗಬೇಕು. ಗ್ರಾಮ ನೈರ್ಮಲ್ಯಕ್ಕೆ ಆದ್ಯತೆ ಇರಬೇಕು ಎಲ್ಲ ಜಾತಿಯ ಎಲ್ಲ ಉತ್ಸವಗಳಲ್ಲಿ ಎಲ್ಲರೂ ಭಾಗವಹಿಸಬೇಕು. ನದಿಯನೀರು, ನದಿಯ ದಡ ಎಲ್ಲವೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮೇಲು-ಕೀಳು ಭಾವನೆ ದೂರಗೊಳಿಸಿ, ಮರುಕಕ್ಕೆ ಪ್ರೇಮಕ್ಕೆ ಚಿರತೆರೆದ ಎದೆಯಾಗಿ ಇಡೀ ಊರು ಮಾನವೀಯತೆಯನ್ನು ಮೆರೆಯಬೇಕು. ಭಜನೆ, ಕೀರ್ತನೆ, ಸಂಗೀತ, ಹಾಡು ಹಸೆಗೆ ಎಲ್ಲೆಡೆ, ಎಲ್ಲ ಕೇರಿಗಳಲ್ಲೂ ಪ್ರೋತ್ಸಾಹ ನೀಡಬೇಕು. ಸಂಸ್ಕೃತ ಭಾಷೆಯ ಮೂಲಕ ಸಂಸ್ಕೃತಿಯನ್ನು ಪ್ರಚುರಪಡಿಸುವುದೆಂದರೆ ಇದೇ ಅಲ್ಲವೇ?

ಭಾನು ತನ್ನ ಆದರ್ಶದ ಪರಿಕಲ್ಪನೆಗಳನ್ನು ಬರಿದೇ ಹೇಳುತ್ತಿರಲಿಲ್ಲ. ಸ್ವತಃ ಆಚರಿಸಿ ತೋರಿಸಿದ್ದರು. ಉತ್ಸವ, ಮೆರವಣಿಗೆಗಳ ಸಂದರ್ಭದಲ್ಲಿ ತಮ್ಮ ಮನೆಮುಂದೆಯೇ ಪುಟ್ಟದೊಂದು ವೇದಿಕೆ ನಿರ್ಮಿಸಿ ಗ್ರಾಮ್ಯಸಾಹಿತ್ಯದ ಭಜನೆ ಹಾಡುವವರನ್ನು ಕರೆದು, ಭಜನೆ ಹಾಡಿಸಿ ಗೌರವಿಸುತ್ತಿದ್ದರು. ಯಾರಾದರೂ ಉದ್ದಿಶ್ಯಪೂರ್ವಕ ತಪ್ಪೆಸಗಿದ್ದರೆ ಮುಲಾಜಿಲ್ಲದೆ ಮುಖಕ್ಕೇ ಹೇಳಿ ಆತನನ್ನು ತಿದ್ದುತ್ತಿದ್ದರು. ತಪ್ಪೆಸಗಿದವನ ತಪ್ಪನ್ನೇ ವೈಭವೀಕರಿಸದೆ, ಆತನಲ್ಲಿರುವ ಇತರೆ ಸಮಾಜಮುಖಿ ಗುಣಗಳನ್ನು ಹೊರತೆಗೆಯುವ ಚಾಣಾಕ್ಷತೆಯನ್ನು ಭಾನು ರೂಢಿಸಿಕೊಂಡಿದ್ದರು. ಕಾರ್ಯಕ್ರಮ ಚಿಕ್ಕದಿರಲಿ, ದೊಡ್ಡದೇ ಆಗಿರಲಿ, ಅದು ಅಚ್ಚುಕಟ್ಟಾಗಿ, ಯೋಜನಾಬದ್ಧವಾಗಿ ನಡೆಯುವಂತೆ ತೆರೆಮರೆಯಲ್ಲೆ ನಿಂತು ನಿರ್ವಹಿಸಿ, ಕಾರ್ಯದ ಕೀರ್ತಿಯನ್ನು ಮಾತ್ರ ಇತರರಿಗೆ ನೀಡುವ ನಿಸ್ಪೃಹ ಸ್ವಭಾವ ಅವರದು. ಅವರೆಂದೂ ಕೀರ್ತಿಕಾಮಿಯಾಗಿರಲಿಲ್ಲ. ತಾನೊಬ್ಬನೇ ಎತ್ತರಕ್ಕೇರಬೇಕೆಂದು ಹತ್ತಿರವಿದ್ದವ ರನ್ನು ತುಳಿಯಲಿಲ್ಲ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಕಟಗೊಂಡ ನನ್ನ ʼಮೋದಿ ಇದ್ದರೆ ಎಲ್ಲವೂ ಸಾಧ್ಯʼ ಎಂಬ ಪುಸ್ತಕವನ್ನು ನನ್ನ ಹಲವು ಆಪ್ತರಿಗೆ, ಹಿರಿಯರಿಗೆ ಕಳಿಸಿದ್ದೆ. ಭಾನು ಅವರಿಗೂ ಕಳಿಸಿದ್ದೆ. ಒಂದಿಬ್ಬರು ʼಪುಸ್ತಕ ತಲಪಿದೆʼ ಎಂಬ ಮೆಸೇಜ್‌ ಹಾಕಿದ್ದರು. ಇನ್ನು ಕೆಲವರಿಗೆ ಪುಸ್ತಕ ತಲಪಿದ್ದರೂ ಏನೊಂದೂ ಪ್ರತಿಕ್ರಿಯಿಸಿರಲಿಲ್ಲ. ಆದರೆ ಭಾನು ಪುಸ್ತಕ ತಲಪಿದ ತಕ್ಷಣ ಅದನ್ನೋದಿ, ಅದರ ಬಗ್ಗೆ ಮೆಚ್ಚುಗೆ, ಒಂದು ಪುಟ್ಟ ವಿಶ್ಲೇಷಣಾತ್ಮಕ ಲೇಖನವನ್ನೇ ಬರೆದು ವಾಟ್ಸಾಪ್‌ನಲ್ಲಿ ಕಳಿಸಿದ್ದರು. ಸಕ್ರಿಯ ಕಾರ್ಯಕರ್ತನೊಬ್ಬನ ಸಹೃದಯವಂತಿಕೆಯ ಲಕ್ಷಣವೆಂದರೆ ಇದೇ ಅಲ್ಲವೆ?

ಭಾನು ಅವರಲ್ಲಿ ಪ್ರತಿಭೆ ಹಾಗೂ ನಾಯಕತ್ವದ ಗುಣ ಮೇಳೈಸಿತ್ತು. ಆತ ಒಬ್ಬ ಉತ್ತಮ ಹಾಡುಗಾರ. ಒಳ್ಳೆಯ ಭಾಷಣಕಾರ, ಉತ್ತಮ ಲೇಖಕ, ಅದಕ್ಕೂ ಮಿಗಿಲಾಗಿ ಉತ್ತಮ ಸಂಘಟಕ. ತಾರುಣ್ಯದಲ್ಲಿ ಕೆಲವು ಕಾಲ ಸಂಘದ ಪ್ರಚಾರಕನಾಗಿ ಶ್ರಮಿಸಿದ ಭಾನು, ತನ್ನ ಮಕ್ಕಳನ್ನೂ ಪ್ರಚಾರಕರಾಗಿ ಕೆಲಸ ಮಾಡುವಂತೆ ಪ್ರೇರೇಪಿಸಿದವರು. ಭಾನು ಅವರ ಕೊನೆಯ ಪುತ್ರ ಚಿನ್ಮಯಕೃಷ್ಣ ಪ್ರಸ್ತುತ ಬೆಂಗಳೂರು ಉತ್ತರ ವಿಭಾಗದ ಪ್ರಚಾರಕ್‌ ಆಗಿದ್ದಾರೆ.

ಮಗನಾಗಿ, ತಂದೆಯಾಗಿ, ಅಣ್ಣನಾಗಿ, ನಾಯಕನಾಗಿ, ಸ್ನೇಹಿತನಾಗಿ, ಬಂಧುವಾಗಿ, ಬುದ್ಧಿ ಹೇಳುವ ಮಾರ್ಗದರ್ಶಕನಾಗಿ ಹೇಗೆ ಹೇಗೆ ನೋಡಿದರೂ ಭಾನು ಬಾಳಿದ ಬದುಕು ಪ್ರಕಾಶಮಯ. ಭಾನುಪ್ರಕಾಶ ಅವರಿಗೆ ತಕ್ಕ ಹೆಸರು. ಈಗ ಮಾತ್ರ ಅವರ ನಿಧನ ನಿರ್ವೇದವನ್ನು ಸೃಷ್ಟಿಸಿದೆ, ಇನ್ನೊಬ್ಬ ಭಾನು ಈಗ ಮೇಲೆದ್ದು ಬರಬೇಕಾಗಿದೆ. ಹಾಗಾಗಲೆಂದು ಸಹೃದಯ ಮನಸುಗಳ ಹಾರೈಕೆ.

Leave a Reply

Your email address will not be published.

This site uses Akismet to reduce spam. Learn how your comment data is processed.