ಅಮಿತ್, ಉತ್ತರ ಕನ್ನಡ

ಮಧ್ಯಮ ವರ್ಗ ಅಥವಾ ಬಡ ಕುಟುಂಬದಿಂದ ಬರುವ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಪಡೆಯಬೇಕೆಂಬ ಕನಸಿಗಿಂತ ಹೇಗೆ ತಾನು ತನ್ನ ಶಿಕ್ಷಣವನ್ನು ಪಡೆಯಲಿ? ಎಂಬ ಚಿಂತೆಯು ಸದಾ ಕಾಡುತ್ತಿರುತ್ತದೆ. ಬಡತನ, ಆರ್ಥಿಕ ಸಮಸ್ಯೆ, ಸಮಾಜದ ಟೀಕೆಗಳು, ಅವಕಾಶಗಳ ಕೊರತೆ, ಮನೆಯ ಪರಿಸ್ಥಿತಿ ಇತ್ಯಾದಿ ಕಾರಣಗಳು ಪರೋಕ್ಷವಾಗಿ ಆತನ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ. ಆದರೆ ಜೀವನದಲ್ಲಿ ಸಾಧಿಸಬೇಕು ಎಂಬ ಛಲವಿದ್ದರೆ ಸಾಕು, ಆಗ ಸಾಕ್ಷಾತ್ ಪರಮಾತ್ಮನೇ ಈ ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯವನ್ನು ಆತನಿಗೆ ನೀಡುತ್ತಾನೆ. ಅಂತಹ ಮಹಾನ್ ಛಲಗಾರರಲ್ಲಿ ಒಬ್ಬರಾಗಿದ್ದರು ಮೇಘನಾದ ಸಹಾ.

ಮೇಘನಾದ ಸಹಾ 6 ಅಕ್ಟೋಬರ್ 1893ರಲ್ಲಿ ಈಗಿನ ಬಾಂಗ್ಲಾದೇಶದ ಡಾಕಾ ಜಿಲ್ಲೆಯ ಶಿಯೋರೇಟೋಲಿ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಜಗನ್ನಾಥ ಸಹಾ ಮತ್ತು ತಾಯಿ ಭುವನೇಶ್ವರಿ ದೇವಿ. ಬಡ ಕುಟುಂಬದಲ್ಲಿ ಜನಿಸಿದ ಆತ ಅಸಾಧಾರಣ ಬುದ್ಧಿವಂತನಾಗಿದ್ದನು. ಅವರ ತಂದೆಗೆ ಅವನು ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡುವುದು ಇಷ್ಟವಿರಲಿಲ್ಲ ಆತನು ಅಂಗಡಿ ನಡೆಸುವುದರಲ್ಲಿ ತಮಗೆ ಸಹಾಯ ಮಾಡಬೇಕೆಂಬುದು ಅವರ ಆಶಯವಾಗಿತ್ತು. ತನ್ನ ತಮ್ಮ ತುಂಬಾ ಬುದ್ಧಿವಂತನಾಗಿದ್ದ ಎಂದು ಅಣ್ಣನಿಗೆ ಗೊತ್ತಿತ್ತು, ಆದ ಕಾರಣ ಮೇಘನಾದ ಸಹಾ ಅವರ ಅಣ್ಣ ಸ್ವತಹ ತಾವೇ ಶಾಲೆಯನ್ನು ಬಿಟ್ಟರು. ಹೀಗೆ ಅವರು ತನ್ನ ತಮ್ಮನಿಗೋಸ್ಕರ ತಮ್ಮ ಶಿಕ್ಷಣವನ್ನೇ ತ್ಯಾಗ ಮಾಡಿದರು. ಮುಂದೆ ಅಧ್ಯಾಪಕರ ಸಹಾಯದಿಂದ ಮೇಘನಾದನನ್ನು ಡಾಕಾ ಕಾಲೇಜಿಗೆ ಸೇರಿಸಿದರು. ತದನಂತರ ಬಿ.ಎಸ್ಸಿ. ಪದವಿಯನ್ನು ಪಡೆಯಲು ಅವರು ಪ್ರೆಸಿಡೆನ್ಸಿ ಕಾಲೇಜ್ ಸೇರಿಕೊಂಡರು. ಅಲ್ಲಿ ಅವರಿಗೆ ಜಗದೀಶ್ ಚಂದ್ರ ಬೋಸ್, ಪ್ರಫುಲ್ ಚಂದ್ರ ರಾಯ, ಡಿ.ಎನ್. ಮಲ್ಲಿಕ್ ರಂತಹ ಅಧ್ಯಾಪಕರು ಕಲಿಸಿದರು. ಪ್ರೆಸಿಡೆನ್ಸಿ ಕಾಲೇಜಿನಲ್ಲಿಯೇ ಇವರು ತಮ್ಮ ಎಂ.ಎಸ್ಸಿ. ಪದವಿಯನ್ನು ಗಣಿತಶಾಸ್ತ್ರದಲ್ಲಿ ಪಡೆದರು. ಆಶ್ಚರ್ಯ ಸಂಗತಿ ಎಂದರೆ, ಸಂಪೂರ್ಣ ಶಿಕ್ಷಣವನ್ನು ವಿದ್ಯಾರ್ಥಿ ವೇತನದಲ್ಲಿಯೇ ಪಡೆದರು.

ಕೇವಲ ಓದುವಿಕೆಯಲ್ಲಿ ಅಷ್ಟೇ ಅಲ್ಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಹ ತುಂಬಾ ಮುಂಚುಣಿಯಲ್ಲಿ ಇರುತ್ತಿದ್ದರು. ಮುಂದೆ ಮೇಘನಾದ ಸಹಾ ಮತ್ತು ಅವರ ಗೆಳೆಯರಾದ ಸತ್ಯೇಂದ್ರನಾಥ ಬೋಸ್ ಇಬ್ಬರಿಗೂ ‘ಯುನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್’ ಕಾಲೇಜಿನಲ್ಲಿ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ನೇಮಿಸಲಾಯಿತು. ಮೇಘನಾದ ಸಹಾ ವಿದ್ಯಾರ್ಥಿಗಳಿಗೆ ಕಲಿಸುವ ಒಟ್ಟಿಗೆ ಸಂಶೋಧನೆಯನ್ನು ಸಹ ಮಾಡುವ ಆಸಕ್ತಿಯನ್ನು ಹೊಂದಿದ್ದರು. ಆದರೆ ದುರಾದೃಷ್ಟಕರ ಸಂಗತಿ ಎಂದರೆ ಆ ಸಮಯದಲ್ಲಿ ಅವರ ಬಳಿ ಸಂಶೋಧನೆ ಮಾಡಲು ಬೇಕಾಗಿರುವ ವ್ಯವಸ್ಥೆಯೇ ಇರಲಿಲ್ಲ. ಅಲ್ಲದೆ ಹೊಸ ಸಂಶೋಧನಾ ಕೇಂದ್ರ ಸ್ಥಾಪಿಸಲು ಆರ್ಥಿಕ ನೆರವು ಸಹ ಇರಲಿಲ್ಲ. ಕಾರಣ ಅವರು ತಾವೇ ತಮ್ಮ ಹಣದಲ್ಲಿ ಯಾರ ಸಹಾಯವಿಲ್ಲದೆ ತಮ್ಮ ಸಂಶೋಧನೆಯನ್ನು ಮಾಡುತ್ತಿದ್ದರು. ಗಣಿತಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡಿದರು.

ಅವರಿಗೆ ಭೌತಶಾಸ್ತ್ರದಲ್ಲಿ ತುಂಬಾ ಆಸಕ್ತಿ ಇತ್ತು, ಕಾರಣ ಅವರು ಗಣಿತಶಾಸ್ತ್ರ ವಿಭಾಗದಿಂದ ಭೌತಶಾಸ್ತ್ರ ವಿಭಾಗಕ್ಕೆ ವರ್ಗಾವಣೆಗೊಂಡರು. ಅಲ್ಲಿ ಅವರು ವಿದ್ಯಾರ್ಥಿಗಳಿಗೆ ‘ಹೈಡ್ರೋ ಸ್ಟಾಟಿಕ್’,’ಸ್ಪೆಕ್ಟ್ರೋಸ್ಕೋಪಿ’, ‘ಥರ್ಮೋಡೈನಮಿಕ್ಸ್’ ವಿಷಯಗಳ ಮೇಲೆ ಬೋಧನೆ ಮಾಡಲು ಪ್ರಾರಂಭಿಸಿದರು. 1917ರಲ್ಲಿ ಅವರು ‘ಸೆಲೆಕ್ಟಿವ್ ರೇಡಿಯೇಶನ್ ಪ್ರೆಶರ್’ ಎಂಬ ವಿಷಯದ ಬಗ್ಗೆ ಸಂಶೋಧನೆ ಮಾಡಿ ಬರೆಯುತ್ತಾರೆ. ಆದರೆ ಮತ್ತೊಮ್ಮೆ ಹಣದ ಕೊರತೆಯಿಂದ ಈ ಪ್ರಬಂಧವು ಪ್ರಕಟಣೆ ಆಗಲಿಲ್ಲ. ಮೇಘನಾದ ಸಹಾ ಇಲ್ಲಿ ನಿಲ್ಲಲಿಲ್ಲ, ಅವರು ತಮ್ಮ ಮುಂದಿನ ಪ್ರಬಂಧವನ್ನು ‘ಹಾರ್ವರ್ಡ್ ಕ್ಲಾಸಿಫಿಕೇಶನ್ ಆಫ್ ಸ್ಟೆಲ್ಲರ್ ಸ್ಪೆಕ್ಟ್ರ’ವಿಷಯದ ಮೇಲೆ ಮಂಡಿಸಿದರು. ಈ ಪ್ರಬಂಧಕ್ಕೆ ಅವರಿಗೆ ಅನುದಾನವು ದೊರಕಿತು. 1919ರಲ್ಲಿ ಅವರಿಗೆ ಕಲ್ಕತ್ತಾ ವಿಶ್ವವಿದ್ಯಾಲಯವು ‘ಡಾಕ್ಟರ್ ಆಫ್ ಸೈನ್ಸ್’ ಪ್ರಶಸ್ತಿಯನ್ನು ನೀಡಿತು. ಇದಾದ ಬಳಿಕ ಅವರು ತಮ್ಮ ಸಂಶೋಧನೆಯನ್ನು ಇನ್ನು ತೀವ್ರ ಗತಿಯಲ್ಲಿ ಮುನ್ನಡೆಸಿದರು. ಅದರಲ್ಲೂ ಅವರಿಗೆ ಖಗೋಳ ಭೌತಶಾಸ್ತ್ರ ವಿಷಯದ ಬಗ್ಗೆ ತುಂಬಾ ಆಸಕ್ತಿ ಮೂಡಿತು. ಹಾಗೂ ಇದೇ ವಿಷಯದ ಮೇಲೆ ನಾಲ್ಕು ಪ್ರಬಂಧವನ್ನು ಸಹ ಮಂಡಿಸಿದರು. ಮುಂದೆ ಅವರಿಗೆ  ಗ್ರೀಫಿತ್  ಪ್ರಶಸ್ತಿಯು ದೊರಕಿತು.

ಎರಡು ವರ್ಷಗಳ ಕಾಲ ಸಂಶೋಧನೆಯನ್ನು ಮಾಡಲು ಯುರೋಪಿಗೆ ತೆರಳಿದರು. ಭಾರತಕ್ಕೆ ಮರಳಿದ ನಂತರ ಅವರು ಅಲಹಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಮೇಘನಾದ ಸಹಾ ‘ಬೆಳಕಿನ ಒತ್ತಡವನ್ನು’ ಅಳೆಯುವ ಸೂಕ್ಷ್ಮ ಉಪಕರಣವನ್ನು ಸೃಷ್ಟಿಸಿದರು. ವಿಜ್ಞಾನಿ ಐನ್ಸ್ಟೈನ್ ರವರ ‘ಬೆಳಕಿಗೂ ಬಾರವಿದೆ’ ಎಂಬ ವಿಷಯವನ್ನು ಪ್ರಯೋಗದಿಂದ ದೃಢೀಕರಿಸಿದ್ದರು. ನಕ್ಷತ್ರಗಳಲ್ಲಿರುವ ವಸ್ತುವನ್ನು ಪತ್ತೆಹಚ್ಚಲು ‘ಸೂರ್ಯನ ಶಾಖಕ್ಕೆ ಪರಮಾಣುಗಳು ಒಡೆಯುತ್ತವೆ’ ಎಂಬ ತತ್ವವನ್ನು ಪ್ರಯೋಗ ಮಾಡಿ ತೋರಿಸಿದರು. ಅಲಹಾಬಾದ್ ನಲ್ಲಿ ‘ರೇಡಿಯೋ ತರಂಗಗಳ’ ಬಗ್ಗೆ ಅಧ್ಯಯನ ನಡೆಸಿದರು. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಇದ್ದಾಗ ಅವರು “ಅ ಟ್ರೇಜರ್ ಆಫ್ ಹೀಟ್” ಎಂಬ ಪುಸ್ತಕವನ್ನು ಬರೆಯುತ್ತಾರೆ. ಮುಂದೆ ಅವರು ಭಾರತೀಯ ವಿಜ್ಞಾನ ಅಸೋಸಿಯೇಷನ್ (ಭೂತಶಾಸ್ತ್ರ ವಿಭಾಗ) ಅಧ್ಯಕ್ಷರಾಗುತ್ತಾರೆ. ತದನಂತರ ಸಹಾ ಕಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಳ್ಳುತ್ತಾರೆ ಮತ್ತು ಅವರು ಎಂ.ಎಸ್ಸಿ. ಪಠ್ಯಕ್ರಮದಲ್ಲಿ ‘ಪರಮಾಣು ಬಹುತಶಾಸ್ತ್ರ’ವನ್ನು ಸೇರಿಸುತ್ತಾರೆ ಇದು ದೇಶದಲ್ಲಿ ಮೊದಲ ಬಾರಿಗೆ ಜಾರಿಗೊಳಿಸಲಾಗಿತ್ತು. 1950 ರಲ್ಲಿ ಕಲ್ಕತ್ತಾದಲ್ಲಿ ‘ಸಹಾ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್’ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಲಾಯಿತು. ‘ಸೈನ್ಸ್ ಅಂಡ್ ಕಲ್ಚರ್’ ಎಂಬ ಪತ್ರಿಕೆಯನ್ನು ಸಹ ನಡೆಸಿದರು. 1952 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯನ್ನು ಗೆದ್ದು ಸಂಸದರಾದರು. 1956ರ ಫೆಬ್ರುವರಿ 6 ರಂದು ಅವರು ಹೃದಯಘಾತದಿಂದ ತೀರಿಹೋದರು.

ಭಾರತದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಮೇಘನಾದ ಸಹಾ ರವರ ಬದುಕು ನಿಸ್ಸಂಶಯವಾಗಿ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಬಡ ಕುಟುಂಬದಿಂದ ಬಂದು ಜೀವನದಲ್ಲಿ ಬಂದ ಎಲ್ಲಾ ಕಷ್ಟಗಳನ್ನು ಎದುರಿಸಿ, ಸಾಧಿಸುವ ಸಂಕಲ್ಪವನ್ನು ಮಾಡಿ, ಅದೆಷ್ಟೋ ಸಾಧನೆಗಳನ್ನು ಮಾಡಿದ ಮಹಾನ್ ವ್ಯಕ್ತಿತ್ವ ಮೇಘನಾದ ಸಹಾರವರದ್ದು. ಮೇಘನಾದರಿಗೆ ಕೇವಲ ವಿಜ್ಞಾನದಲ್ಲಿ ಆಸಕ್ತಿಯಲ್ಲದೆ ಹಿಂದೂ ಧರ್ಮ, ಭಾರತೀಯ ಸಂಸ್ಕೃತಿ, ಇತಿಹಾಸಗಳಲ್ಲಿ ಅಪಾರವಾದ ಆಸಕ್ತಿಯಿತ್ತು. ಹಾಗೆ ಭಾರತೀಯ ಸ್ವತಂತ್ರ ಸಂಗ್ರಾಮದಲ್ಲೂ ಸಹ ತುಂಬಾ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು. ಭಾರತೀಯ ವಿಜ್ಞಾನದ ಸ್ಥರವನ್ನು ಇನ್ನೂ ಎತ್ತರಕ್ಕೆ ಬೆಳೆಸಿದ, ಪ್ರತಿಯೊಬ್ಬನೂ ಸಹ ನಾನು ವಿಜ್ಞಾನಿ ಯಾಗಬಲ್ಲೆ ಎಂಬ ಕಲ್ಪನೆಯನ್ನು ಕಟ್ಟಿಸಿದ ಮಹಾನ್ ವಿಜ್ಞಾನಿ ಮೇಘನಾದ ಸಹಾರವರಿಗೆ ಶತಶತ ನಮನಗಳು.

ಜೈ ಹಿಂದ್,

ವಂದೇ ಮಾತರಂ.

Leave a Reply

Your email address will not be published.

This site uses Akismet to reduce spam. Learn how your comment data is processed.