ಬೆಂಗಳೂರು: ಒಂದು ರಾಷ್ಟ್ರ ಹೇಗೆ ಯೋಚಿಸುತ್ತದೆ ಎನ್ನುವುದು ಅಲ್ಲಿನ ಯುವಕರು ಹೇಗೆ ಚಿಂತಿಸುತ್ತಾರೆ ಎನುವುದರ ಆಧಾರ ಮೇಲೆ ನಿರ್ಧರಿತವಾಗುತ್ತದೆ. ಯುವಕರ ಆಲೋಚನೆಗಳನ್ನು ವಿಕಸನಗೊಳಿಸುವುದಕ್ಕೆ ಪ್ರಬಂಧಗಳಂತಹ ಸ್ಪರ್ಧೆಗಳು ಮತ್ತು ಅದಕ್ಕಾಗಿ ಮಾಡುವ ಅಧ್ಯಯನ ಸಹಕಾರಿ ಎಂದು ಉತ್ಥಾನ ಮಾಸಪತ್ರಿಕೆಯ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ ಹೇಳಿದರು.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ದಯಾನಂದ ಸಾಗರ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನಲ್ಲಿ ಶನಿವಾರ ನಡೆದ ದಿಶಾ ಭಾರತ್ ಸಂಸ್ಥೆ ‘ನನ್ನ ಭಾರತ’ MyBHARAT ಪ್ರಯುಕ್ತ ಆಯೋಜಿಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಬಂಧ ಬರೆಯುವ ಪ್ರಕ್ರಿಯೆ ಸಮಾಜವನ್ನು ಹೇಗೆ ನೋಡಬೇಕು ಎನ್ನುವುದನ್ನು ತಿಳಿಸುತ್ತದೆ. ಪುಸ್ತಕದ ಓದು ನಮ್ಮ ವಿಚಾರಗಳಿಗೆ ವಿಸ್ತಾರವನ್ನು ನೀಡುವುದಲ್ಲದೇ, ನಮ್ಮ ಜೀವನಕ್ಕೆ ನೂತನ ಅನುಭವಗಳನ್ನು ಮತ್ತು ಹೊಸ ದಿಕ್ಕನ್ನು ನೀಡುತ್ತದೆ. ಹಾಗೆಯೇ ನಮ್ಮ ಭಾಷಾ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಕರಿಸುತ್ತದೆ. ಇವೆಲ್ಲವೂ ನಮ್ಮ ಜೀವನದ ಗುರಿಯನ್ನು ತಲುಪುವುದಕ್ಕೆ ಬೆಂಬಲಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಣತಜ್ಞ ಡಾ. ಹೆಚ್. ಎಸ್. ಗಣೇಶ ಭಟ್ಟ ಅವರು ಭಾರತದಲ್ಲಿ ಯುವಕರಿಗೆ ಬರ ಇಲ್ಲ. ಜಗತ್ತಿನ ಅತ್ಯಂತ ವೈವಿಧ್ಯಮಯ ಯುವಸಮೂಹ ನಮ್ಮ ರಾಷ್ಟ್ರದಲ್ಲಿದೆ. ಯುವಕರು ತಾವು ಓದಿದ ವಿಷಯಗಳನ್ನು ಅಭಿವ್ಯಕ್ತಿಸುವ ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳಬೇಕು. ಯುವಸಮೂಹ ಪರಸ್ಪರರನ್ನು ಅರ್ಥ ಮಾಡಿಕೊಂಡು ಜೊತೆಯಾಗಿ ರಾಷ್ಟ್ರದ ಏಳಿಗೆಗೆ ಶ್ರಮಿಸಬೇಕು. ತಮ್ಮ ಅಂತಃಸತ್ವದಲ್ಲಿ ಸಾಧಿಸುವ ಕಿಚ್ಚನ್ನು ಹಚ್ಚಿಕೊಂಡು ಸಾಧನೆಗೈಯುವತ್ತ ಕಾರ್ಯಪ್ರವೃತ್ತರಾಗಬೇಕು.
ಆಧುನಿಕತೆಯಲ್ಲಿ ಯುವಕರು ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಆಗುಹೋಗುಗಳ ಕುರಿತು ಅವರಲ್ಲಿ ನಿರ್ಲಿಪ್ತತೆ ಮೂಡಿದಂತೆ ಭಾಸವಾಗುತ್ತಿದೆ. ಸಮಾಜದ ಆಗುಹೋಗುಗಳಿಗೆ ನಾನು ಜವಾಬ್ದಾರಿಯುತ ಎನ್ನುವ ಪ್ರಜ್ಞೆಯನ್ನು ಜಾಗೃತಗೊಳಿಸಿ, ಅವುಗಳನ್ನು ಅಭಿವ್ಯಕ್ತಿಸುವುದಕ್ಕೆ ಪ್ರಬಂಧ ಸ್ಪರ್ಧೆಗಳು, ಪತ್ರಿಕೆಗಳು ಮಾಧ್ಯಮವನ್ನು ಒದಗಿಸುತ್ತವೆ. ತೆರೆದ ಮನಸ್ಸಿನಿಂದ ಸಮಾಜವನ್ನು ನೋಡಬೇಕು ಎನ್ನುವ ಜವಾಬ್ದಾರಿಯನ್ನು ನಮ್ಮಲ್ಲಿ ಮೂಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಹಾಸನದ ಹುಣಸಿನಕೆರೆಯ ಎ ಸೂಬಿಯ ಮೆಹಕ್ ಪ್ರಥಮ ಸ್ಥಾನವನ್ನು, ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ದ್ವಿತೀಯ ಸ್ಥಾನವನ್ನು, ಬೆಳಗಾವಿಯ ವಕ್ಕುಂದದ ಪ್ರತೀಕ್ಷಾ ಅಶೋಕ ಜಂತಿ ತೃತೀಯ ಸ್ಥಾನವನ್ನು ಪಡೆದುಕೊಂಡರು. ಜೊತೆಗೆ ದಕ್ಷಿಣ ಕನ್ನಡದ ರಮಾ ಭಾಗೀರಥೀ, ಬಾಗಲಕೋಟೆಯ ಅಕ್ಷತಾ ಎಸ್ ಹತ್ತಳ್ಳಿ, ಹಾಸನ ಜಿಲ್ಲೆಯ ಶ್ರೇಯ ಕೆ ಆರ್, ಬಳ್ಳಾರಿಯ ಭವಾನಿ ಎಸ್, ಬೆಂಗಳೂರಿನ ಗಿರೀಶ್ ಆರ್, ಮಂಡ್ಯದ ಚಿತ್ತಾರ ಪಟೇಲ್ ಎಸ್ ಪಿ, ಮೈಸೂರಿನ ಕುಸುಮ ಸಿ ಎಂ, ವಿಜಯಪುರದ ರವಿಕುಮಾರ ಎಸ್ ದೊಡಮನಿ, ಉತ್ತರ ಕನ್ನಡದ ಅಶ್ವಿನಿ ಗಜಾನನ ಹೆಗಡೆ, ಉಡುಪಿ ರಕ್ಷಿತ ಹೆಚ್ ಒಟ್ಟು ಹತ್ತು ಮಂದಿ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನಗಳು ಲಭಿಸಿವೆ.
ವೇದಿಕೆಯಲ್ಲಿ ದಿಶಾ ಭಾರತ್ ಸಂಸ್ಥೆಯ ಸಂಸ್ಥಾಪಕಿ ರೇಖಾ ರಾಮಚಂದ್ರನ್, ದಯಾನಂದ ಸಾಗರ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನ ಪ್ರಾಂಶುಪಾಲ ಡಾ. ಎಂ. ಹೇಮಂತ್ ಉಪಸ್ಥಿತರಿದ್ದರು.