ಬೆಂಗಳೂರು: ಭಾರತ ತನ್ನ ಮೌಲ್ಯಗಳನ್ನು ಉಳಿಸಿಕೊಂಡೇ ಜಾಗತಿಕ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಕೋವಿಡ್ ಸಂದರ್ಭದಲ್ಲಿ ಭಾರತ ವಹಿಸಿದ ನಾಯಕತ್ವದ ಶೈಲಿಯೇ ಇದಕ್ಕೆ ಉತ್ತಮ ಉದಾಹರಣೆ ಎಂದು ಲೇಖಕ ಹಾಗೂ ಚಿಂತಕ ರಜತ್ ಸೇಥಿ ನುಡಿದರು.
ದಿಶಾ ಭಾರತ್ ಸಂಸ್ಥೆಯ ವತಿಯಿಂದ ನನ್ನ ಭಾರತ ಅಭಿಯಾನದ ಭಾಗವಾಗಿ ಆಯೋಜಿಸಲಾಗಿರುವ ಸರಣಿ ಉಪನ್ಯಾಸದ ಹನ್ನೊಂದನೇ ದಿನ ಅವರು ಭಾರತದ ಮುಂದಿನ ಸವಾಲುಗಳು ಎಂಬ ವಿಷಯದ ಕುರಿತು ಮಾತನಾಡಿದರು.
ಭಾರತ ಪ್ರಸ್ತುತ ಜಗತ್ತಿನ ಪ್ರಮುಖ ಯುವರಾಷ್ಟ್ರ. ಆದರೆ ಯಾವುದೇ ರಾಷ್ಟ್ರದ ಯೌವನ ಸುದೀರ್ಘ ಕಾಲ ಉಳಿಯುವುದಿಲ್ಲ. ತನ್ನ ಯೌವನವನ್ನು ಕಳೆದುಕೊಳ್ಳುವ ಮುನ್ನ ಜಗತ್ತಿನ ಆರ್ಥಿಕ ಶಕ್ತಿಯಾಗಿ ಬೆಳೆದುನಿಲ್ಲಬೇಕಾಗಿರುವುದು ಪ್ರತಿ ರಾಷ್ಟ್ರದ ಕರ್ತವ್ಯ. ಅದೇ ಹಾದಿಯಲ್ಲಿ ಭಾರತ ಮುನ್ನುಗ್ಗುತ್ತಿದೆ. ಆದರೆ ಈ ಗುರಿಯನ್ನು ತಲುಪುವ ಹಾದಿಯಲ್ಲಿ ಭಾರತ ಹಲವು ಅಡಚಣೆಗಳನ್ನು ಕಾಣುತ್ತಿದೆ ಎಂದು ನುಡಿದರು.
ಅಮೃತಕಾಲದಲ್ಲಿರುವ ಭಾರತ ಎಲ್ಲರೂ ರಾಷ್ಟ್ರದ ಆರ್ಥಿಕತೆಗೆ ಕೊಡುಗೆ ನೀಡುವಂತೆ ವ್ಯವಸ್ಥೆಯನ್ನು ರೂಪಿಸಿ ಅಭಿವೃದ್ಧಿಯ ಪಥದತ್ತ ಸಾಗಬೇಕಿದೆ. ಯುವಶಕ್ತಿಯ ಸಾಮರ್ಥ್ಯವನ್ನು ಅರಿತು, ಪರಿಸರಕ್ಕೆ ಮಹತ್ವವನ್ನು ಕೊಟ್ಟು, ಮೂಲಭೂತ ಸೌಕರ್ಯಗಳ ಲಭ್ಯತೆಗೆ ಗಮನವಹಿಸಿ 2047 ಕ್ಕೆ ಅಂದುಕೊಂಡ ಗುರಿಯನ್ನು ಸಾಧಿಸುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಜಾಗತಿಕವಾಗಿ ಮುಂಚೂಣಿಗೆ ಬರುತ್ತಿರುವ ಭಾರತಕ್ಕೆ ಸಹಜವಾಗಿಯೇ ಅಡೆಚಣೆಗಳಿವೆ. ಚುನಾವಣೆಗಾಗಿ ರಾಜಕೀಯ ಪ್ರೇರಿತ ಹಲವು ಘಟನೆಗಳು, ಭಾರತವನ್ನು ಹಳಿಯುವ ವಿದೇಶಿ ಕೈವಾಡವಿರುವ ಸೂಚ್ಯಾಂಕ ಪಟ್ಟಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಾಗುತ್ತಿರುವ ವೈಪರಿತ್ಯಗಳು, ಜಾತಿಬೇಧ, ಉತ್ತರ ಭಾರತ-ದಕ್ಷಿಣ ಭಾರತವನ್ನು ಪ್ರತ್ಯೇಕವಾಗಿ ಬಿಂಬಿಸುತ್ತಿರುವ ಪ್ರಯತ್ನಗಳು,ಕೋಮುವಾದ, ನಮ್ಮ ಆರ್ಥಿಕ ಗುರಿಯನ್ನು ತಲುಪದಂತೆ ಮಾಡುವ ಹುನ್ನಾರಗಳೆಲ್ಲವೂ ಅಭಿವೃದ್ಧಿಯ ವೇಗವನ್ನು, ನಾಡಿನ ಶಾಂತಿಯನ್ನು ಕುಂಟಿತಗೊಳಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳಿಗೆ ಪ್ರತಿಯಾಗಿ ರಾಷ್ಟ್ರದ ಯುವಕರು ವಿನೂತನ ಆಲೋಚನೆಗಳಿಂದ ರಾಷ್ಟ್ರವನ್ನು ಕಟ್ಟುವ ಕಾಯಕಕ್ಕೆ ಮುಂದಾಗಬೇಕು. ನಮ್ಮ ವೈಚಾರಿಕ ವಲಯ ಭಾರತದ ವಿರೋಧವಾಗಿ ಕೇಳಿ ಬರುವ ಸಂಗತಿಗಳಿಗೆ ಸಮರ್ಥವಾಗಿ ಉತ್ತರಿಸಬೇಕು. ಎಲ್ಲದಕಿಂತ ಮುಖ್ಯವಾಗಿ ಹಿಂದೂಗಳು ಸಂಘಟಿತರಾಗಿದ್ದರೆ ಹಲವು ಸಮಸ್ಯೆಗಳು ತನ್ನಿಂದ ತಾನೇ ಶಮನಗೊಳ್ಳುತ್ತವೆ ಎಂದು ತಿಳಿಸಿದರು.