ಬೆಂಗಳೂರು: ಭಾರತದ ಅತ್ಯಂತ ಜನಪ್ರಿಯ ಸಿನೆಮಾಗಳು ಬಾಲಿವುಡ್ ನದ್ದಾಗಿತ್ತು. ಆದರೆ ಬಾಲಿವುಡ್ ಸಿನೆಮಾಗಳ ಕಥಾವಸ್ತುವನ್ನು ಗಮನಿಸಿದಾಗ ಅವು ಪಾಶ್ಚಾತ್ಯ ನರೆಟಿವ್ ಗಳ ಚಿತ್ರರೂಪವಾಗಿದ್ದವು. ಆದ್ದರಿಂದ ‘ವುಡ್’ ಸಂಸ್ಕೃತಿಯಿಂದ ಹೊರಬಂದು ಅತ್ಯಂತ ಬೃಹತ್ ಮಾಧ್ಯಮವಾಗಿರುವ ಸಿನೆಮಾದ ಮೂಲಕ ಜನರಿಗೆ ದೇಶದಲ್ಲಿ ನಡೆಯುತ್ತಿರುವ ವಾಸ್ತವದ ಅಂಶಗಳನ್ನು ತಿಳಿಸಿ ಯುವಕರಲ್ಲಿ ಜಾಗೃತಿ ಮೂಡಿಸುವುದು ಪ್ರತಿ ನಿರ್ದೇಶಕನ ಕರ್ತವ್ಯವಾಗಿದೆ. ಅದಕ್ಕೆ ಬದ್ಧರಾಗಿ ವಿವೇಕ್ ರಂಜನ್ ಅಗ್ನಿಹೋತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಖ್ಯಾತ ಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಹೇಳಿದರು.

ದಿಶಾಭಾರತ್ ಸಂಸ್ಥೆಯು ‘ನನ್ನ ಭಾರತ’ ಅಭಿಯಾನದ ಅಂಗವಾಗಿ ಆಯೋಜಿಸಲಾದ ತಜ್ಞರಿಂದ ಆನ್‌ಲೈನ್ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆರನೇ ದಿನ ಮಾತನಾಡಿದ ಅವರು ‘MyBHARAT:Nationalism and Indic Thought’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಸಮಾಜದಲ್ಲಿ ಕ್ರಾಂತಿಯನ್ನು ತರಬೇಕಾದರೆ ಅದಕ್ಕೆ ಸಹಕಾರಿಯಾಗುವ ಅತ್ಯಂತ ಶಕ್ತಿಶಾಲಿ ಮಾಧ್ಯಮ ಇಂದು ಸಿನೆಮಾ. ಆದರೆ ಈ ಸಿನೆಮಾಗಳಲ್ಲಿ ನಮ್ಮ ಸಾಹಿತ್ಯದ ಸತ್ವ ಮತ್ತು ಸ್ವತ್ವವನ್ನು, ಭಾರತೀಯ ಚಿಂತನೆಗಳನ್ನು ಪ್ರತಿನಿಧಿಸುವ ಮತ್ತು ಭಾರತದ ಮೇಲಿನ ವಿಶ್ವದ ಸುಳ್ಳು ಆರೋಪಗಳನ್ನು ಬಟಾಬಯಲು ಮಾಡುವ ಭಾರತದ ಕಥನ (ನರೇಟಿವ್) ಆಧಾರಿತ ಸಿನೆಮಾಗಳು ಬರುವುದು ಬಹಳ ಕಡಿಮೆಯಾಗಿದೆ. ಭಾರತೀಯ ಕಥನದ ಸಿನೆಮಾಗಳ ಮೂಲಕ ಭಾರತದ ಜಾಗತಿಕ ಅಸ್ತಿತ್ವವನ್ನು ತಿಳಿಸುವುದಕ್ಕೆ, ಆರ್ಥಿಕತೆಗೆ ಸಹಕಾರಿಯಾಗುವಂತೆ, ಎಲ್ಲದಕ್ಕಿಂತ ಹೆಚ್ಚಾಗಿ ಸತ್ಯವನ್ನು ನುಡಿಯುವುದಕ್ಕೆ ಸಿನೆಮಾ ಸಹಕಾರಿಯಾಗುತ್ತದೆ. ಹೆಚ್ಚು ಜನರಿಗೆ ಭಾರತೀಯ ಮೌಲ್ಯಗಳನ್ನು ತಲುಪುವ ಮೂಲಕ ಭಾರತದ ಹಿರಿಮೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸಿನಿಮಾಕ್ಕಿಂತ ದೊಡ್ಡ ಪರಿಣಾಮಕಾರಿ ಮಾಧ್ಯಮ ಮತ್ತೊಂದಿಲ್ಲವೆಂದು ಎಂದು ನಂಬಿರುವ ವಿವೇಕ್ ಅಗ್ನಿಹೋತ್ರಿ ಅವರು ಭಾರತದ ಕಥನವನ್ನು, ಎಡಚರರು ಸಾರುತ್ತಿರುವ ಸತ್ಯಕ್ಕೆ ದೂರವಾದ ಸಂಗತಿಗಳನ್ನು, ಇದರಿಂದ ಉಂಟಾಗುತ್ತಿರುವ ಇಂದಿನ ಸಮಸ್ಯೆಗಳ ಕುರಿತು ದೇಶ-ವಿದೇಶಗಳಲ್ಲಿ ತಿಳಿಸುತ್ತಿದ್ದಾರೆ. ಜಗತ್ತಿನ ಅನೇಕ ಸಂಪ್ರದಾಯಗಳ ಕುರಿತು, ಜನಪದ ಕಲೆಗಳ ಕುರಿತು ಓದಿಕೊಂಡು, ತಿಳಿದಿರುವ ಅವರು ಭಾರತದ ಹಿರಿಮೆಯ ಕುರಿತು ತಿಳಿಸುವ ಕಾರ್ಯವನ್ನು ಸಿನೆಮಾಗಳ ಮೂಲಕ ಮಾಡುತ್ತೇನೆ ಎಂದರು. 70 ವರ್ಷಗಳಲ್ಲಿ ನಡೆದ ಘಟನೆಗಳು, ಇಂದು ನಡೆಯುತ್ತಿರುವ ಘಟನೆಗಳನ್ನು ಜನರ ಮುಂದೆ ಬಿಚ್ಚಿಡುವ ಮೂಲಕ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತೇನೆ ಎಂದು ನುಡಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.