
ಕೇಶವಕೃಪ, ಬೆಂಗಳೂರು, ಆಗಸ್ಟ್ 10, 2015: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ನ. ಕೃಷ್ಣಪ್ಪ (83 ವರ್ಷಗಳು) ಅವರು ಇಂದು ಬೆಳಿಗ್ಗೆ 10.55ಕ್ಕೆ ಬೆಂಗಳೂರಿನಲ್ಲಿರುವ ಆರೆಸ್ಸೆಸ್‌ನ ರಾಜ್ಯ ಕೇಂದ್ರ ಕಛೇರಿ ಕೇಶವಕೃಪದಲ್ಲಿ ಇಹಲೋಕ ತ್ಯಜಿಸಿದ್ದಾರೆ.
1954 ರಿಂದ 61 ವರ್ಷಗಳ ಕಾಲ ಸಂಘದ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದ ನ. ಕೃಷ್ಣಪ್ಪ ಅವರು, ಕೆಲ ತಿಂಗಳುಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಕೇಶವಕೃಪದಲ್ಲಿ ಮಧ್ಯಾಹ್ನ 12.30 ರಿಂದ 4.00 ಗಂಟೆಯ ತನಕ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರ ದೇಹವನ್ನು ಕಿಮ್ಸ್ ಮೆಡಿಕಲ್ ಕಾಲೇಜಿ (KIMS)ಗೆ ದಾನವಾಗಿ ನೀಡಲಾಗಿದೆ.
1932 ರ ಕೃಷ್ಣಜನ್ಮಾಷ್ಟಮಿಯಂದು ನರಸಿಂಹಯ್ಯ ಮತ್ತು ಸಾವಿತ್ರಿಯಮ್ಮ ದಂಪತಿಯ ಎರಡನೇ ಮಗನಾಗಿ ಮೈಸೂರಿನಲ್ಲಿ ಜನಿಸಿದ ನ. ಕೃಷ್ಣಪ್ಪನವರು ಸಂಸ್ಕೃತದಲ್ಲಿ ಪದವಿ (BA Honors) ಶಿಕ್ಷಣ ಪಡೆದಿದ್ದಾರೆ.
ಕಾಲೇಜು ದಿನಗಳಲ್ಲಿಯೇ ಸಂಘದ ಸ್ವಯಂಸೇವಕರಾಗಿದ್ದ ಅವರು 1954 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಹೊರಟ ಅವರು ಚಾಮರಾಜನಗರದ ತಾಲೂಕು ಪ್ರಚಾರಕರಾಗಿ ನಿಯುಕ್ತಿಗೊಂಡರು.
1955-56ರಲ್ಲಿ ನ. ಕೃಷ್ಣಪ್ಪ ಅವರು ಶಿವಮೊಗ್ಗ ಜಿಲ್ಲಾ ಪ್ರಚಾರಕರಾದರು.
1959ರಲ್ಲಿ ಅವರು ಮಂಗಳೂರು ಜಿಲ್ಲಾ ಪ್ರಚಾರಕರಾದರು.
1960 ರಿಂದ 1962 ರ ತನಕ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಚಾರಕರಾಗಿದ್ದರು.
1962 ರಲ್ಲಿ ತುಮಕೂರು ವಿಭಾಗ ಪ್ರಚಾರಕರಾದರು.
1966 ರಲ್ಲಿ ಮಂಗಳೂರು ವಿಭಾಗ ಪ್ರಚಾರಕರಾಗಿ ನಿಯುಕ್ತಿಗೊಂಡರು. ನಂತರ ಆಗಿದ್ದ ಮಂಗಳೂರು ವಿಭಾಗ ಬಳ್ಳಾರಿಯ ತನಕ ವಿಸ್ತಾರಗೊಂಡಿದ್ದ ಪ್ರದೇಶವಾಗಿತ್ತು.
1975 ರಲ್ಲಿ ಮಂಗಳೂರು ವಿಭಾಗದಾದ್ಯಂತ ತುರ್ತುಪರಿಸ್ಥಿತಿ ವಿರುದ್ಧದ ಚಳವಳಿಯ ನೇತೃತ್ವ ವಹಿಸಿದರು. ಈ ಚಳವಳಿ ದೇಶದ ಪ್ರಭಾವೀ ಚಳವಳಿಗಳಲ್ಲಿ ಒಂದಾಗಿತ್ತು. ಈ ಸಂದರ್ಭದಲ್ಲಿ ಅವರು ಮಂಗಳೂರಿನ ಜೈಲಿನಲ್ಲಿ ಸೆರೆಮನೆವಾಸ ಅನುಭವಿಸಿದರು.
1978ರಲ್ಲಿ ನ. ಕೃಷ್ಣಪ್ಪ ಅವರು ಪ್ರಾಂತ ಬೌದ್ಧಿಕ ಪ್ರಮುಖರಾಗಿ ನಿಯುಕ್ತಿಗೊಂಡರು.
1980ರಲ್ಲಿ ಕರ್ನಾಟಕ ಪ್ರಾಂತ ಪ್ರಚಾರಕರಾದರು.
1989 ರಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳನ್ನೊಳಗೊಂಡ ಕ್ಷೇತ್ರೀಯ ಪ್ರಚಾರಕರಾಗಿಯೂ ಬೆಂಗಳೂರು ಕೇಂದ್ರವಾಗಿರಿಸಿಕೊಂಡು ಕಾರ್ಯ ನಿರ್ವಹಿಸಿದರು.
2004 ರಿಂದ 2014 ರ ತನಕ ಅವರು ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾಗಿದ್ದರು ಇದೇ ವೇಳೆ ಪ್ರರಿವಾರ ಪ್ರಬೋಧನ್ ಅದರ ಅಖಿಲ ಬಾರತೀಯ ಸಂಯೋಜಕರಾಗಿ ದೇಶದಾದ್ಯಂತ ಪ್ರವಾಸ ಕೈಗೊಂಡಿದದ್ರು.
2014 ರ ಮಾರ್ಚ್‌ನಿಂದ ಆರೋಗ್ಯ ಹದಗೆಟ್ಟ ಕಾರಣದಿಂದ ಕೆಲ ತಿಂಗಳುಗಳ ಕಾಲ ಚಿಕಿತ್ಸೆ ಪಡೆದರು.
ನ. ಕೃಷ್ಣಪ್ಪ ಅವರು ಹಿಂದೂ ಕುಟುಂಬ ಪದ್ಧತಿಯಲ್ಲಿನ ವೈಯಕ್ತಿಕ ಮೌಲ್ಯಗಳ ಕುರಿತು ಶಿಕ್ಷಣ ನೀಡುವ ’ಕುಟುಂಬ ಪ್ರಬೋಧನ’ ಕಲ್ಪನೆಯ ಹರಿಕಾರರೆಂದೇ ಖ್ಯಾತರಾಗಿದ್ದರು.
ನ. ಕೃಷ್ಣಪ್ಪನವರು ಕರ್ನಾಟಕದಲ್ಲಿ ಪ್ರಾರಂಭಗೊಂಡ ಸಂಘದ ಅನೇಕ ಹೊಸ ಚಿಂತನೆಗಳಿಗೆ ಮಾರ್ಗದರ್ಶಕರಾಗಿದ್ದರು.
ಹಿಂದು ಕುಟುಂಬಪದ್ಧತಿಯ ಮೌಲ್ಯಗಳನ್ನು ತಿಳಿಸುವ ಮನೆಯೇ ಮಾಂಗಲ್ಯ ಪುಸ್ತಕ ರಚನೆಗೆ ಪ್ರೋತ್ಸಾಹ.
ವೇದವಿಜ್ಞಾನ ಗುರುಕುಲ, ಪ್ರಭೋದಿನಿ ಗುರುಕುಲ, ಮೈತ್ರೇಯಿ ಗುರುಕುಲ ಮುಂತಾದ ಸಂಘಟನೆಗಳ ಹಾಗೂ ಕನ್ನಡದ ಖ್ಯಾತ ಸಂಘಪ್ರೇರಿತ ಮಾಸ ಪತ್ರಿಕೆ ’ಅಸಿಮಾ’ ಮುಂತಾದ ಪತ್ರಿಕೆಗಳ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಒಬ್ಬ ಉತ್ಕೃಷ್ಟ ಓದುಗರಾಗಿದ್ದ ಅವರು ಪ್ರಚಲಿತ ವಿಷಯಗಳ ಬಗೆಗೂ ಕರಾರುವಕ್ಕಾಗಿ ಮಾತನಾಡಬಲ್ಲವರಾಗಿದ್ದರು. ಅವರು ವೇದ ಸಂಬಂಧಿತ ತತ್ತ್ವಶಾಸ್ತ್ರಗಳ ಬಗೆಗೆ ಆಳ ಜ್ಞಾನ ಹೊಂದಿದ್ದರು.
ಖ್ಯಾತ ವಿದ್ವಾಂಸ ಹಾಗೂ ಕಾದಂಬರಿಕಾರ ಎಸ್.ಎಲ್. ಭೈರಪ್ಪರು ಅವರು ನ. ಕೃಷ್ಣಪ್ಪ ಅವರ ಬಾಲ್ಯದ ಸ್ನೇಹಿತರಾಗಿದ್ದರು. ತಮ್ಮ ಮೊದಲ ಕಾದಂಬರಿ ’ಧರ್ಮಶ್ರೀ’ಯಲ್ಲಿ ಅವರು ’ಶಂಕರ’ ಎಂಬ ಹೆಸರಿನ ಮೂಲಕ ನ. ಕೃಷ್ಣಪ್ಪನವರ ವ್ಯಕ್ತಿತ್ವವನ್ನು ಪರಿಚಯಿಸಿದ್ದಾರೆ ಎಂಬುದು ಅನೇಕರ ಅಭಿಪ್ರಾಯ.
ನ .ಕೃಷ್ಣಪ್ಪ ಅವರು ದಕ್ಷಿಣ ಭಾರತದ ಆರೆಸ್ಸೆಸ್‌ನ ಸಾವಿರಾರು ಕಾರ್ಯಕರ್ತರನ್ನು ರೂಪಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ಸುರೇಶ್ ಭಯ್ಯಾಜಿ ಜೋಷಿ, ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಸಮಾಜದ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.



“ಶರಣರ ಸಾವು ಮರಣದಲ್ಲಿ ಕಾಣು” ಎಂಬ ಉಕ್ತಿ ಇದೆ. ಕರ್ಮಯೋಗಿ ಮಾನನೀಯ ಕೃಷ್ಣಪ್ಪನವರ ಅಂತಿಮ ಘಳಿಗೆ ಇದಕ್ಕೆ ನಿದರ್ಶನ. ಕೊನೆ ಉಸಿರಿನವರೆಗೂ ದೇಶಕ್ಕಾಗಿ, ತಾಯಿ ಭಾರತಮಾತೆಯ ಸೇವೆಗಾಗಿ ಜೀವನವನ್ನು ಶ್ರೀಗಂಧದಂತೆ ತೇಯ್ದರು. ಉಸಿರು ನಿಂತ ಬಳಿಕ ನೇತ್ರದಾನ ಮತ್ತು ದೇಹದಾನ ಮಾಡಿದರು. ಅವರ ದೇಹದ ಅಣು ಅಣುವಿನಲ್ಲಿಯೂ “ಪರೋಪಕಾರಾರ್ಥಂ ಇದಂ ಶರೀರಂ” ಎಂಬ ಸೂಕ್ತಿ ಪ್ರತಿಧ್ವನಿಸಿದೆ.