ಇಂದು ಜಯಂತಿ
ಇವತ್ತು ಸಿಲಿಕಾನ್‌ ಸಿಟಿ ಎಂದೇ ಹೆಸರು ಪಡೆದ ಬೃಹತ್‌ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ. ಅವರು ಯಲಹಂಕ ನಾಡಪ್ರಭು ಸಾಮ್ರಾಜ್ಯದ ಪ್ರಖ್ಯಾತ ನಾಯಕರಾಗಿದ್ದರು. ಕೆಂಪೇಗೌಡರು ಯುವರಾಜರಾಗಿ ತನ್ನ ಭವಿಷ್ಯದ ಸಾಮ್ರಾಜ್ಯ ನಿರ್ಮಾಣ ಕುರಿತು ವಿಶೇಷವಾದ ದೂರದೃಷ್ಟಿಯನ್ನು ಹೊಂದಿದ್ದರು. ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ರಾಜ್ಯಪಾಲರಾಗಿದ್ದರು. ಅವರು 16 ನೇ ಶತಮಾನದಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅವಿಸ್ಮರಣೀಯ. ನಗರಕ್ಕೆ ಅವರು ಮಾಡಿರುವಂತಹ ಕೆಲಸ ಕಾರ್ಯಗಳು ಇಂದಿಗೂ ಜನರು ನೆನಪಿಸಿಕೊಳ್ಳುತ್ತಾರೆ. ಇಂದು ಅವರ ಜಯಂತಿ.


ಪರಿಚಯ
ನಾಡಪ್ರಭು ಕೆಂಪೇಗೌಡ ಅವರು ಜೂನ್‌ 27, 1510 ರಂದು ಬೆಂಗಳೂರಿನ ಯಲಹಂಕದಲ್ಲಿ ಜನಿಸಿದರು. ಇವರ ತಂದೆ ಕೆಂಪನಂಜೇಗೌಡ, ತಾಯಿ ಲಿಂಗಮ್ಮ. ಕೆಂಪೇಗೌಡರು ಬಾಲ್ಯದಿಂದಲೂ ತುಂಬಾ ಚುರುಕುತನದಿಂದ ಇದ್ದರು. ಚಿಂತಕರಾಗಿದ್ದ ಐಗಂಡಪುರದ ಮಾಧವಭಟ್ಟರ ಗುರುಕುಲಾಶ್ರಮದಲ್ಲಿ ವಿದ್ಯಾಭ್ಯಾಸ ಮಾಡಿದರು. ಗುರುಕುಲದಲ್ಲಿ ಶಿಕ್ಷಣದ ಜೊತೆಗೆ ಕತ್ತಿವರಸೆ, ಕುದುರೆ ಸವಾರಿ, ಮಲ್ಲಕಾಳಗವನ್ನು ಕಲಿತಿದ್ದರು.


ಆಳ್ವಿಕೆ
ಯುವಕರಾಗಿದ್ದ ಕೆಂಪೇಗೌಡರು ವಿಜಯದಶಮಿ ಉತ್ಸವದಲ್ಲಿ ಪಾಲ್ಗೊಂಡು ಮಲ್ಲಯುದ್ದ ಸ್ಪರ್ಧೆಯಲ್ಲಿ ಎದುರಾಳಿ ತಿರುಮಲರಾಯರನ್ನು ಸೋಲಿಸಿ ಶ್ರೀಕೃಷ್ಣ ದೇವರಾಯರಿಂದ ಮೆಚ್ಚುಗೆ ಗಳಿಸುತ್ತಾರೆ. ಅಲ್ಲಿಂದೀಚೆಗೆ ಕೆಂಪೇಗೌಡರ ಭುಜಬಲದ ಬಗ್ಗೆ ತಂದೆಯವರಿಗೆ ನಂಬಿಕೆ ಬಂದು ವಿಜಯನಗರದ ಅರಸರ ಪರವಾಗಿ ತಾವು ಭಾಗವಹಿಸುವ ಯುದ್ದಗಳಲ್ಲಿ ಮಗನನ್ನೂ ಕರೆದೊಯ್ಯುತ್ತಾರೆ. ವಿಜಯನಗರದ ಸಾರ್ವಭೌಮತೆಗೆ ಧಕ್ಕೆ ತರಲು ಹೊಂಚು ಹಾಕುತ್ತಿದ್ದ ಶತ್ರು ಸಾಮಂತರನ್ನು ಸದೆಬಡಿಯುತ್ತಾರೆ. ನಂತರ 1528ರಲ್ಲಿ ಕೆಂಪೇಗೌಡರಿಗೆ ಹಳೆ ಬೆಂಗಳೂರಿನ ಸೋದರಮಾವನ ಮಗಳಾದ ಚೆನ್ನಾಂಬೆಯವರೊಡನೆ ಮದುವೆಯಾಗುತ್ತದೆ. ಇದೇ ವೇಳೆ ಕೆಂಪೇಗೌಡರಿಗೆ ಯುವರಾಜ ಪಟ್ಟಾಭಿಷೇಕ ಕೂಡ ಮಾಡಲಾಗಿತ್ತು. ಈ ಸಮಾರಂಭಕ್ಕೆ ಶ್ರೀಕೃಷ್ಣದೇವರಾಯರ ಪ್ರತಿನಿಧಿಗಳಾದಿಯಾಗಿ ಚನ್ನಪಟ್ಟಣ, ಶಿರಾ, ಸೋಲೂರು, ಕೆಳದಿ, ಚಿತ್ರದುರ್ಗ ಮುಂತಾದ ಸಂಸ್ಥಾನಗಳ ಪಾಳೆಯಗಾರರು ಆಗಮಿಸಿದ್ದರು. 1529ರಲ್ಲಿ ವಿಜಯನಗರದ ಅರಸು ಶ್ರೀಕೃಷ್ಣದೇವರಾಯರ ನಿಧನದ ನಂತರ ಅನೇಕ ಸಾಮಂತರಾಜರುಗಳು ಸ್ವತಂತ್ರರಾದರು.
ಕೆಂಪನಂಜೇಗೌಡರು ಮಗನಿಗೆ ರಾಜ್ಯವಾಳುವ ಎಲ್ಲಾ ಅರ್ಹತೆಯಿದೆಯೆಂದು ತಿಳಿದು ಮಗ ಕೆಂಪೇಗೌಡರಿಗೆ ಯಲಹಂಕದ ಅಧಿಕಾರ ವಹಿಸುತ್ತಾರೆ. ಇವರು 46 ವರ್ಷಗಳ ಕಾಲ ಆಳ್ವಿಕೆ ನಡೆಸಿದರು.

ಬೆಂಗಳೂರು ನಿರ್ಮಾಣ
ಕೆಂಪೇಗೌಡರು ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಬೆಂಗಳೂರಿನಿಂದ 48 ಕಿಲೋಮೀಟರ್ ನಲ್ಲಿರುವ ಶಿವಗಂಗಾ ಸಂಸ್ಥಾನವನ್ನು ವಶಪಡಿಸಿಕೊಂಡರು. ನಂತರ ಅವರು ಬೆಂಗಳೂರಿನ ದೊಮ್ಮಲೂರನ್ನು ಸ್ವಾಧೀನಪಡಿಸಿಕೊಂಡರು. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು 1537ರಲ್ಲೇ ನಗರವನ್ನು ಕಟ್ಟಿದರು. ತದನಂತರ ಕೆಂಪೇಗೌಡರ ರಾಜಧಾನಿಯು ಯಲಹಂಕದಿಂದ ಬೆಂಗಳೂರಿಗೆ ಸ್ಥಳಾಂತರವಾಯಿತು. ಕೆಂಪೇಗೌಡರು ಎಂಟು ದ್ವಾರಗಳಿರುವ ಕೆಂಪು ಕೋಟೆಯ ಸುತ್ತಲೂ ಕಂದಕವನ್ನು ನಿರ್ಮಿಸಿದರು. ಕೋಟೆಯ ಒಳಗೆ ಎರಡು ಅಗಲವಾದ ರಸ್ತೆಗಳು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಸಾಗಿದವು. ಕೆಂಪೇಗೌಡರು ದೊಡ್ಡಪೇಟೆಯ ಕೇಂದ್ರ ಚೌಕದಲ್ಲಿ ದೊಡ್ಡಪೇಟೆ ಚಿಕ್ಕಪೇಟೆ ಜಂಕ್ಷನ್‌ನಲ್ಲಿ ಎತ್ತುಗಳನ್ನು ನೇಗಿಲಿಗೆ ಜೋಡಿಸಿ ನೆಲವನ್ನು ಉಳುಮೆ ಮಾಡಿ ನಾಲ್ಕು ದಿಕ್ಕುಗಳಲ್ಲಿ ಸಂಚರಿಸುವ ಕಾರ್ಯ ಮಾಡಿದರು.


ಬೆಂಗಳೂರು ಕೆಂಪೇಗೌಡರ ಕಾಲದಲ್ಲೂ ವಾಣಿಜ್ಯ ಕೇಂದ್ರವಾಗಿತ್ತು. ಅವರು 54 ಪೇಟೆಗಳು ನಿರ್ಮಿಸಿದ್ದರು ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ, ಗಾಣಿಗರಪೇಟೆ, ಗೊಲ್ಲರಪೇಟೆ, ಮಡಿವಾಳ ಪೇಟೆ, ಮಂಡಿ ಪೇಟೆ, ಬಳೇಪೇಟೆ, ಅಂಚೆಪೇಟೆ, ಹಳೇತರುಗುಪೇಟೆ, ಹೊಸತರುಗುಪೇಟೆ, ಸುಣಕಲ್‌ಪೇಟೆ, ಕುರುಬರಪೇಟೆ, ಕುಂಚಟಿಗರ ಪೇಟೆ, ಮುತ್ಯಾಲಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಹತ್ತಿಪೇಟೆ, ತಾರಾಮಂಡಲಪೇಟೆ, ದರ್ಜಿಪೇಟೆ, ಕಲಾರಪೇಟೆ, ಮೇದಾರಪೇಟೆ, ಹಳೆ ಪಟ್ನೂಲು ಪೇಟೆಗಳು ನಗರದ ಜೀವನಾಡಿಯಾಗಿದ್ದವು.


ಕೆರೆಗಳ ನಿರ್ಮಾಣ
ಕೆಂಪೇಗೌಡರ ಕಾಲದಲ್ಲಿ ಬೆಂಗಳೂರಿನಲ್ಲಿರುವ ಕೆರೆಗಳನ್ನು ನಿರ್ಮಿಸಿದ್ದರು. ಕೃಷಿ ಮತ್ತು ಕುಡಿಯುವ ನೀರಿಗಾಗಿ ಧರ್ಮಾಂಬುದಿ ಕೆರೆ, ಕೆಂಪಾಂಬುದಿ ಕೆರೆ, ಹಲಸೂರು, ಸಂಪಂಗಿ ಕೆರೆ, ಕಾರಂಜಿ ಕೆರೆ, ಸಿದ್ಧಿಕಟ್ಟೆ, ಕೆಂಪಾಪುರ ಅಗ್ರಹಾರ ಕೆರೆ, ಜಕ್ಕರಾಯನಕೆರೆ ಸೇರಿದಂತೆ ನೂರಾರು ಕೆರೆ-ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಇಂದು ಸಂಪಂಗಿ ಕೆರೆ ಜಾಗದಲ್ಲಿ ಕಂಠೀರವ ಕ್ರೀಡಾಂಗಣ, ಸಿದ್ಧಿಕಟ್ಟೆ ಇದ್ದ ಸ್ಥಳದಲ್ಲಿ ಕೆ.ಆರ್‌.ಮಾರುಕಟ್ಟೆ, ಧರ್ಮಾಂಬುದಿ ಕೆರೆ ಜಾಗದಲ್ಲಿ ಕೆಂಪೇಗೌಡ ಬಸ್‌ ನಿಲ್ದಾಣ ನಿರ್ಮಾಣವಾಗಿದೆ.


ನಾಡಪ್ರಭು ಕೆಂಪೇಗೌಡರು ಹಲವಾರು ದೇವಸ್ಥಾನಗಳನ್ನೂ ನಿರ್ಮಿಸಿದ್ದಾರೆ. ಹಲಸೂರಿನ ಸೋಮೇಶ್ವರ, ಗವಿಪುರದ ಗವಿಗಂಗಾಧರೇಶ್ವರ, ಕಾಡು ಮಲ್ಲೇಶ್ವರ, ದೊಡ್ಡ ಗಣಪತಿ, ಧರ್ಮರಾಯಸ್ವಾಮಿ ದೇವಾಲಯಗಳನ್ನು ನಿರ್ಮಿಸಿದರು.


ಗೌರವ
ಬೆಂಗಳೂರಿನ ನಗರದೆಲ್ಲೆಡೆ ಕೆಂಪೇಗೌಡರ ಪ್ರತಿಮೆಗಳನ್ನು ನಿರ್ಮಿಸಿ ಗೌರವ ಸೂಚಿಸಲಾಗಿದೆ. ನಗರದ ಮೆಟ್ರೋ ನಿಲ್ದಾಣ ಮತ್ತು ಬಸ್‌ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಿಗೆ ಕೆಂಪೇಗೌಡರ ಹೆಸರು ಇಡಲಾಗಿದೆ.
ನಾಡಪ್ರಭು ಕೆಂಪೇಗೌಡ ಅವರು 1569 ರಲ್ಲಿ ತಮ್ಮ 59ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.