ಬೆಂಗಳೂರು: ಜಗತ್ತಿಗೆ ಭಾರತದ ಸಾಂಸ್ಕೃತಿಕ ಪರಂಪರೆಯ ಕೊಡುಗೆ ನಳಂದ ವಿಶ್ವವಿದ್ಯಾನಿಲಯ. ಅದು ವಿಶ್ವದ ಒಳಿತೆಲ್ಲಾ ಒಂದೆಡೆಗೆ ಹರಿದು ಬರಲಿ ಎಂಬ ಭಾರತದ ಮೌಲ್ಯದ ಪ್ರತಿರೂಪವಾಗಿತ್ತು. ಆದ್ದರಿಂದಲೇ ವಿದೇಶಿಗರ ದಾಳಿಗೆ ತುತ್ತಾಗಿ 800 ವರ್ಷಗಳೇ ಕಳೆದರೂ ನಳಂದ ನಮ್ಮ ಸ್ಮೃತಿಪಟಲದಲ್ಲಿ ಸ್ಥಾನ ಪಡೆದುಕೊಂಡಿದೆ ಎಂದು ನಳಂದ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ಸುನೈನಾ ಸಿಂಗ್ ಹೇಳಿದರು.
ದಿಶಾಭಾರತದ ‘ನನ್ನ ಭಾರತ’ ಯುವ ಅಭಿಯಾನದ ಅಂಗವಾಗಿ ಆಯೋಜಿಸಲಾಗಿರುವ ಆನ್ಲೈನ್ ಉಪನ್ಯಾಸ ಸರಣಿಯ ಮೊದಲ ದಿನ ‘Nalanda: A legacy of Indian Knowledge Ethos’ ಎಂಬ ವಿಷಯದ ಕುರಿತು ಅವರು ಮಂಗಳವಾರ ಮಾತನಾಡಿದರು.
ಜಗತ್ತಿನ ವಿದ್ಯಾರ್ಥಿಗಳನ್ನು ಆಹ್ವಾನಿಸಿದ ವಿಶ್ವದ ಮೊದಲ ವಿಶ್ವವಿದ್ಯಾನಿಲಯ ನಳಂದ. ಪ್ರಪಂಚದ ನಾನಾ ಭಾಗದ ಜ್ಞಾನಾರ್ಥಿಗಳನ್ನು ನಾಗರಿಕರನ್ನಾಗಿದ ಶ್ರೇಯಸ್ಸು ನಳಂದ ವಿಶ್ವವಿದ್ಯಾನಿಲಯಕ್ಕಿದೆ. ವಿಶಿಷ್ಟ ರೀತಿಯ ವಿದ್ಯಾದಾನವನ್ನು ನೀಡಿ ವೈಚಾರಿಕ ಸಂಸ್ಕೃತಿಯ ಉಗಮಕ್ಕೆ ನಳಂದ ಕಾರಣವಾಗಿತ್ತು. 1600 ವರ್ಷಗಳ ಹಿಂದೆಯೇ ನಾವು ಇಂದು ಮಾತನಾಡುತ್ತಿರುವ ಅಂತರ್ಶಿಸ್ತು ಮತ್ತು ಬಹುಶಿಸ್ತೀಯ ಶಿಕ್ಷಣದ ಮಾದರಿಯನ್ನು ನಳಂದ ಅಳವಡಿಸಿಕೊಂಡಿತ್ತು. ಅಲ್ಲಿನ ಶಿಕ್ಷಣ ಪದ್ಧತಿ, ಜ್ಞಾನಾರ್ಥಿಗಳ ಆಯ್ಕೆ ಮತ್ತು ಆತ್ಮಸಾಕ್ಷಾತ್ಕಾರಕ್ಕಾಗಿ ನಿರ್ಮಿಸಿದ್ದ ವಾತಾವರಣವೆಲ್ಲವೂ ಭಾರತೀಯ ಜ್ಞಾನ ಪರಂಪರೆಯನ್ನು ರಕ್ಷಿಸುವ ಧ್ಯೇಯವನ್ನು ಹೊಂದಿತ್ತು ಎಂದು ಅಭಿಪ್ರಾಯಪಟ್ಟರು.
ನಮ್ಮ ಸಂಸ್ಕೃತಿ, ಸಾಮರಸ್ಯ ಮತ್ತು ಶಾಂತಿಯ ಧ್ಯೇಯವನ್ನಿಟ್ಟುಕೊಂಡು ವಿಶ್ವವನ್ನು ಮುನ್ನಡೆಸುವಲ್ಲಿ ಭಾರತ ಮೊದಲಿನಿಂದಲೂ ನಿರಂತರತೆಯನ್ನು ಕಾಯ್ದುಕೊಂಡಿದೆ. ಇಂದು ನಳಂದದAತಹ ವಿಶ್ವವಿದ್ಯಾನಿಲಯಗಳ ಮೂಲಕ ಭಾರತ ಪುನಃ ಜ್ಞಾನದ ಸೇತುವೆಯಂತೆ ಅದೇ ಮೌಲ್ಯಕ್ಕಾಗಿ ಕಾರ್ಯನಿರ್ವಹಿಸಬೇಕಿದೆ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವುದು ಜ್ಞಾನಪರಂಪರೆಯ ಆಶಯವಾಗಿತ್ತು ಎನ್ನುವುದನ್ನು ಅರಿತು ಮನುಕುಲದ ಉಪಯುಕ್ತತೆಗಾಗಿ ಭಾರತದ ಅಭಿವೃದ್ಧಿಗೆ ನಾವೆಲ್ಲರೂ ಮುಂದಾಗೋಣ ಎಂದು ನುಡಿದರು.