ರಾಜರ್ಷಿ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮೈಸೂರಿನ ಒಡೆಯರ ಸಂಸ್ಥಾನದ ಪ್ರಸಿದ್ಧ ದೊರೆ. ಅವರು ಮೈಸೂರು ಸಂಸ್ಥಾನವನ್ನು ವಿಶ್ವಮಾನ್ಯವಾಗಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತರಾದವರು. ಆಧುನಿಕ ಮೈಸೂರಿನ ನಿರ್ಮಾಣಕ್ಕೆ ಹಾಗೂ ಕರುನಾಡ ಅಭಿವೃದ್ಧಿಗೆ ಒಡೆಯರ್ ಕೊಡುಗೆ ಅವಿಸ್ಮರಣೀಯ. ಇಂದು ಅವರು ಜಯಂತಿ.


ಪರಿಚಯ
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜೂನ್‌ 4, 1884ರಂದು ಮೈಸೂರು ಅರಮನೆಯಲ್ಲಿ ಜನಿಸಿದರು. ಇವರ ತಂದೆ ಚಾಮರಾಜ ಒಡೆಯರ್‌ ಹಾಗೂ ತಾಯಿ ಮಹಾರಾಣಿ ಕೆಂಪನಂಜಮ್ಮಣ್ಣಿ. ಕೃಷ್ಣರಾಜ ಒಡೆಯರ್ ಅವರ ಆರಂಭಿಕ ಶಿಕ್ಷಣವು ಲೋಕರಂಜನ್‌ ಅರಮನೆಯಲ್ಲಿ ಪಿ.ರಾಘವೇಂದ್ರರಾವ್‌ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಅವರಿಗೆ ಕನ್ನಡ, ಸಂಸ್ಕೃತ, ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತವನ್ನು ಕಲಿಸಿದರು. ನಂತರ ಮಹಾರಾಜರಿಗೆ ಬಾಂಬೆ ನಾಗರಿಕ ಸೇವಕ ಸ್ಟುವರ್ಟ್‌ ಫ್ರೇಸರ್‌ ಎಂಬುವರು ಆಡಳಿತ ತರಬೇತಿ ನೀಡಿದರು.


1894ರಲ್ಲಿ ತಂದೆ ಚಾಮರಾಜ ಒಡೆಯರು ಕೊಲ್ಕತ್ತಾ ಪ್ರವಾಸ ಕೈಗೊಂಡಿದ್ದ ಸಮಯದಲ್ಲಿ ಗಂಟಲು ನೋವಿನಿಂದ ಆಕಸ್ಮಿಕವಾಗಿ ಮರಣ ಹೊಂದಿದರು. ನಂತರ ಕೃಷ್ಣರಾಜ ಒಡೆಯರ್‌ ಅವರು 10ನೇ ವಯಸ್ಸಿನಲ್ಲಿ ರಾಜ್ಯಭಾರದ ಜವಾಬ್ದಾರಿ ವಹಿಸಿಕೊಳ್ಳಬೇಕಾಯಿತು.
ಫೆಬ್ರವರಿ 2, 1902 ರಂದು ಕೃಷ್ಣರಾಜ ಒಡೆಯರ್ ಅವರು ತಾಯಿಯಿಂದ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಅದೇ ವರ್ಷ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಆಗಿನ ಬ್ರಿಟೀಷ್ ವೈಸ್‍ರಾಯ್ ಲಾರ್ಡ್ ಕರ್ಜನ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಮೈಸೂರಿನ ಮಹಾರಾಜರೆಂದು ಘೋಷಿಸಿದರು.

ಆಡಳಿತ ಸುಧಾರಣೆ
ಕೃಷ್ಣರಾಜ ಒಡೆಯರ್‌ ಅವರ ಆಡಳಿತ ಅವಧಿಯಲ್ಲಿ ಎಲ್ಲಾ ಧರ್ಮಗಳನ್ನು ಸಮಾನಾಗಿ ಕಾಣುತ್ತಿದ್ದರು. ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕತೆ ಕಡೆ ಹೆಚ್ಚು ಗಮನಹರಿಸಿದರು. ಅವರ ಆಡಳಿತ ಅವಧಿಯಲ್ಲಿ ಅಸ್ಪೃಶ್ಯತೆ ಮತ್ತು ಬಾಲ್ಯ ವಿವಾಹವನ್ನು ನಿಷೇಧಿಸಿದರು. 1915ರಲ್ಲಿ ಸಮಾಜದ ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ಮೈಸೂರು ಸಾಮಾಜಿಕ ಪ್ರಗತಿ ಸಂಘವನ್ನು ರಚಿಸಿದರು. 1925ರಲ್ಲಿ ಅವರು ಗ್ರಾಮಸ್ಥರಿಗೆ ಸಹಾಯ ಮಾಡಲು ಸಹಕಾರ ಸಂಘವನ್ನು ಸ್ಥಾಪಿಸಿದರು. ಒಡೆಯರ್ ಅವರ ಮಾರ್ಗದರ್ಶನದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಯಿತು.


ಕೃಷ್ಣರಾಜ ಒಡೆಯರ ಕೊಡುಗೆಗಳು
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿಗೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳನ್ನು ರಚಿಸಿ, ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟವರು. ರಾಜ್ಯದ ಸಣ್ಣ-ಪುಟ್ಟ ಪಟ್ಟಣಗಳಲ್ಲಿ ಮುನಿಸಿಪಾಲಿಟಿಗಳನ್ನು ರಚನೆ ಮಾಡಿದರು. ಹಳ್ಳಿಗಳಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು. ಇವರ ಕಾಲದಲ್ಲಿ ಗ್ರಾಮ ನಿರ್ಮಲೀಕರಣ, ವೈದ್ಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳನ್ನು ರಚಿಸಿದರು. ಕೃಷ್ಣರಾಜ ಒಡೆಯವರು ಅವರು ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ನೀಡಿದವರು. 1907ರಲ್ಲಿ ‘ವಾಣೀವಿಲಾಸ ಸಾಗರ’ (ಮಾರಿ ಕಣಿವೆ) ಕಟ್ಟಿದ್ದರು. 1911ರಲ್ಲಿ ‘ಕೃಷ್ಣರಾಜ ಸಾಗರ’ ಆಗಿನ ಕಾಲದ ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯದ ನಿರ್ಮಾಣವನ್ನು ಆರಂಭಿಸಿದರು. 1914ರಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಸ್ಕೂಲನ್ನು ಪ್ರಾರಂಭಿಸಿದರು. ಭದ್ರಾವತಿಯ ಕಬ್ಬಿಣದ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದೆಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, 1934ರಂದು ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಂಪೆನಿ ಪ್ರಾರಂಭಿಸಿದ್ದು, 1936ರಲ್ಲಿ ಮೊಟ್ಟ ಮೊದಲ ಮೈಸೂರು ಪೇಪರ್ ಮಿಲ್ ಆರಂಭಿಸಿದರು. ಒಡೆಯರ್‌ ಅವರು ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳನ್ನು ನಿರ್ಮಿಸಿದರು.


ಜಾರಿ ಮಾಡಿದ ಸಾಮಾಜಿಕ ಕಾನೂನುಗಳು
ದೇವದಾಸಿ ಪದ್ಧತಿ ನಿಷೇಧ, ಗೆಜ್ಜೆಪೂಜೆ’ ಪದ್ಧತಿ ನಿರ್ಮೂಲನೆ, ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆ ಜಾರಿ, ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳುವ ಕಾಯ್ದೆಯ ಜಾರಿ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ, ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ ಇತ್ಯಾದಿ ಸಾಮಾಜಿಕ ಕಾನೂನುಗಳನ್ನು ಜಾರಿಗೆ ತಂದವರು.

ಕೃಷ್ಣರಾಜ ಒಡೆಯವರು ಆಗಸ್ಟ್‌ 3, 1940ರಂದು ತಮ್ಮ 56 ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.