ಆಧುನಿಕ ಭಾರತೀಯ ಕಲೆಯ ಪಿತಾಮಹ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿರುವ ನಂದಲಾಲ್ ಬೋಸ್ ಅವರು ವರ್ಣಚಿತ್ರಗಾರರಾಗಿ ಹೆಚ್ಚು ಪ್ರಸಿದ್ಧಿ ಪಡೆದವರು. ಇವರು ಆಗಿನ ಕಾಲಘಟ್ಟದಲ್ಲಿ ಚಿತ್ರಕಲೆಯಲ್ಲಿ ಪ್ರಖ್ಯಾತಿ ಹೊಂದಿದ್ದ ಅಬನೀಂದ್ರನಾಥ್ ಟ್ಯಾಗೋರ್ ಅವರ ಶಿಷ್ಯರಾಗಿದ್ದರು. ಭಾರತೀಯ ಕಲೆಗೆ ನಂದಲಾಲ್ ಬೋಸ್ ಅವರು ನೀಡಿದ ಕೊಡುಗೆ ಅಪಾರ. ಇವರು ಜಾನಪದ ಕಲೆಯ ಕುರಿತು ಚಿತ್ರಗಳ ಮೂಲಕ ಜನರಿಗೆ ಮಾಹಿತಿ ನೀಡುತ್ತಿದ್ದರು. ಇಂದು ಅವರ ಪುಣ್ಯಸ್ಮರಣೆ.
ಪರಿಚಯ
ನಂದಲಾಲ್ ಬೋಸ್ ಅವರು ಡಿಸೆಂಬರ್ 3, 1882 ರಂದು ಬಿಹಾರದ ಮುಂಗೇರ್ ಜಿಲ್ಲೆಯ ಹವೇಲಿ ಖರಗ್ ಪುರದಲ್ಲಿ ಜನಿಸಿದರು. ಇವರ ತಂದೆ ಪೂರ್ಣಚಂದ್ರ ಬೋಸ್ ಮತ್ತು ತಾಯಿ ಕ್ಷೇತ್ರಮೋನಿದೇವಿ. ತಂದೆ ಬಿಹಾರದ ರಾಜ ಮನೆತನದ ದರ್ಭಾಂಗದ ರಾಜನ ಅಡಿಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ನಂದಲಾಲ್ ಅವರಿಗೆ ಬ್ಯಾಲದಿಂದಲೂ ವರ್ಷಚಿತ್ರ ರಚನೆಯ ಕಡೆಗೆ ಹೆಚ್ಚು ಒಲವು ಹೊಂದಿದ್ದರು.
ನಂದಲಾಲ್ ಬೋಸ್ ಅವರು ಸೆಂಟ್ರಲ್ ಕಾಲೇಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ಕೊಲ್ಕತ್ತಾ ಕಾಲೇಜಿಗೆ ಸೇರಿದ್ದರು. 1905 ರಲ್ಲಿ ಬೋಸ್ ಅವರು ವಾಣಿಜ್ಯಶಾಸ್ತ್ರದಲ್ಲಿ ಪದವಿ ಪಡೆದರು. ತಮ್ಮ ಶಿಕ್ಷಣದ ಜೊತೆಗೆ ಮಾಡಲ್ ಪೇಂಟಿಂಗ್, ಸಾಸ್ ಪೇಂಟಿಂಗ್ ಹಾಗೂ ವಿವಿಧ ಚಿತ್ರಕಲೆಗಳ ರಚನೆಯನ್ನೂ ಕಲಿತರು.
ಒಮ್ಮೆ ಇಂಡಿಯನ್ ಸೊಸೈಟಿ ಆಫ್ ಓರಿಯೆಂಟಲ್ ಆರ್ಟ್ ವತಿಯಿಂದ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದರು. ಇದರಲ್ಲಿ ನಂದಲಾಲ್ ಅವರಿಗೆ ಚಿತ್ರಕಲೆ ಪ್ರದರ್ಶಿಸಲು ಅವಕಾಶ ಸಿಕ್ಕಿತ್ತು. ಅವರು ಶಿವ ಮತ್ತು ಸತಿ ಎಂಬ ತಮ್ಮ ಎರಡು ಚಿತ್ರಕಲಾಕೃತಿಯನ್ನು ಪ್ರದರ್ಶಿಸಿದರು. ಇವರ ಪ್ರತಿಭೆಯನ್ನು ಕಂಡು ಸೊಸೈಟಿ ವತಿಯಿಂದ 500 ರೂಪಾಯಿ ನಗದು ಬಹುಮಾನವಾಗಿ ನೀಡಿದ್ದರು.
ಅವರು ಪ್ರವಾಸದ ಸಮಯದಲ್ಲಿ ಅನೇಕ ಚಿತ್ರಗಳನ್ನು ಬಿಡಿಸಿ, 25 ಪೈಸೆಗೆ ಮಾರಾಟ ಮಾಡುತ್ತಿದ್ದರು. 1930 ರಲ್ಲಿ ಬ್ರಿಟಿಷರು ಉಪ್ಪಿನ ಮೇಲೆ ತೆರಿಗೆ ವಿಧಿಸಿದ್ದರ ವಿರುದ್ಧದ ಪ್ರತಿಭಟನೆಯಿಂದ ಪ್ರೇರಿತರಾಗಿ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ರಚಿಸಿದರು. ರಾಷ್ಟ್ರವ್ಯಾಪಿ ಸ್ವಾತಂತ್ರ್ಯ ಚಳುವಳಿಯೂ ಅವರ ಕಲಾಕೃತಿಯ ಮೇಲೆ ಪ್ರಭಾವ ಬೀರಿತು. ಅವರು ತಮ್ಮ ಸುಪ್ರಸಿದ್ಧ ವೃತ್ತಿಜೀವನದ ಅವಧಿಯಲ್ಲಿ 7000 ಕ್ಕೂ ಹೆಚ್ಚು ಚಿತ್ರಗಳನ್ನು ರಚಿಸಿದ್ದಾರೆ.
ನಂದಲಾಲ್ ಅವರ ಗುರು ಅಬನೀಂದ್ರನಾಥ್ ಅವರ ಬುದ್ಧ ಮತ್ತು ಸುಜಾತಾ ಹಾಗೂ ಬಾಜ್ರಾ ಮುಕುತ್ ವರ್ಣಚಿತ್ರಗಳಿಂದ ಬೋಸ್ ಅವರು ಪ್ರಭಾವಿತರಾಗಿದ್ದರು. ಬೋಸ್ ಅವರು ತಾವು ಬಿಡಿಸಿದ ಚಿತ್ರಗಳನ್ನು ತೆಗೆದುಕೊಂಡು ಅಬನೀಂದ್ರನಾಥ್ ಟ್ಯಾಗೋರ್ ಬಳಿ ಹೋಗಿದ್ದರು. ಅಲ್ಲಿ ಅವರು ಮಾತ್ರವಲ್ಲದೆ ಪ್ರಸಿದ್ಧ ಕಲಾಚಿಂತಕರಾಗಿದ್ದ ಇ.ಬಿ. ಹ್ಯಾವೆಲ್ ಕೂಡ ಇವರು ಬಿಡಿಸಿದ ಚಿತ್ರಗಳನ್ನು ನೋಡಿ ಆಶ್ಚರ್ಯಚಕಿತರಾದರು.
ನಂದಲಾಲ್ ಬೋಸ್ ಅವರು ರಚಿಸುತ್ತಿದ್ದ ವರ್ಣಚಿತ್ರಗಳು ಜನಸಾಮಾನ್ಯರಿಗೆ ಇಷ್ಟವಾಗುತ್ತಿತ್ತು. ಏಕೆಂದರೆ ಹಳ್ಳಿ ಜನರ ದೈನಂದಿನ ಜೀವನ ಕುರಿತು ಚಿತ್ರಗಳನ್ನು ರಚಿಸುತ್ತಿದ್ದರು. ನಂದಲಾಲ್ ಬೋಸ್ ಅವರ ಕೃತಿಗಳನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ಪ್ರದರ್ಶಿಸಲಾಯಿತು.
ಪ್ರಶಸ್ತಿ
1907 ರಲ್ಲಿ ಸ್ಥಾಪನೆಗೊಂಡ ಇಂಡಿಯನ್ ಸೊಸೈಟಿ ಆಫ್ ಓರಿಯೆಂಟಲ್ ಆರ್ಟ್ ನೀಡುವ ವಿದ್ಯಾರ್ಥಿವೇತನವನ್ನು ಪಡೆದ ಮೊದಲ ವ್ಯಕ್ತಿ ನಂದಲಾಲ್. 1954 ರಲ್ಲಿ ಭಾರತದ ರಾಷ್ಟ್ರೀಯ ಕಲಾ ಅಕಾಡೆಮಿಯಾದ ಲಲಿತ ಕಲಾ ಅಕಾಡೆಮಿಯ ಫೆಲೋ ಆಗಿ ಆಯ್ಕೆಯಾದ ಮೊದಲ ಕಲಾವಿದರು ಎಂಬ ಹೆಗ್ಗಳಿಕೆ ಇವರಿಗಿದೆ. 1954 ರಲ್ಲಿ, ನಂದಲಾಲ್ ಬೋಸ್ ಅವರಿಗೆ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಕಲ್ಕತ್ತಾ ವಿಶ್ವವಿದ್ಯಾನಿಲಯವು ಇವರಿಗೆ 1957 ರಲ್ಲಿ ಗೌರವ ಡಿ.ಲಿಟ್ ನೀಡಿತು. ಹಾಗೆಯೇ ವಿಶ್ವಭಾರತಿ ವಿಶ್ವವಿದ್ಯಾಲಯವು ಅವರಿಗೆ ‘ದೇಶಿಕೋತ್ತಮ’ ಎಂಬ ಬಿರುದನ್ನು ನೀಡಿ ಗೌರವಿಸಿತು. ನಂದಲಾಲ್ ಅವರಿಗೆ ಕಲ್ಕತ್ತಾದ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ರಜತ ಮಹೋತ್ಸವದ ಪದಕ ನೀಡಿ ಗೌರವಿಸಿದೆ. ಟ್ಯಾಗೋರ್ ಜನ್ಮ ಶತಮಾನೋತ್ಸವದ ಪದಕವನ್ನು 1965 ರಲ್ಲಿ ಏಷ್ಯಾಟಿಕ್ ಸೊಸೈಟಿ ಆಫ್ ಬಂಗಾಳದಿಂದ ನಂದಲಾಲ್ ಬೋಸ್ ಅವರಿಗೆ ನೀಡಲಾಯಿತು.
ಇವರು ನಿಧರಾದ ಮರುವರ್ಷ 1967ರಲ್ಲಿ ಇವರಿಗೆ ಗೌರವಾರ್ಥವಾಗಿ ಅಂಚೆ ಚೀಟಿಯನ್ನೂ ಸರ್ಕಾರದಿಂದ ಬಿಡುಗಡೆ ಮಾಡಲಾಯಿತು. ‘ಆಚಾರ್ಯ ನಂದಲಾಲ್’ ಎಂಬ ಸಾಕ್ಷ್ಯಚಿತ್ರವನ್ನು 1984 ರಲ್ಲಿ ಹರಿಸಧನ್ ದಾಸ್ಗುಪ್ತ ಅವರು ನಿರ್ಮಿಸಿದರು.
ನಂದಲಾಲ್ ಬೋಸ್ ಅವರು ಏಪ್ರಿಲ್ 16, 1966 ರಂದು ನಿಧನರಾದರು.